ಆತ್ಮಹತ್ಯೆಗೆ ಶರಣಾದ ರೈತ ಸುರೇಶ್ ಮನೆಗೆ ಭೇಟಿ: 5 ಲಕ್ಷ ರೂ.ಗಳ ಪರಿಹಾರಧನದ ಚೆಕ್ ವಿತರಿಸಿದ ಸಿಎಂ ಹೆಚ್.ಡಿ ಕುಮಾರಸ್ವಾಮಿ…

ಮಂಡ್ಯ,ಜೂ,18,2019(www.justkannada.in):  ವಿಡಿಯೋ ಮಾಡಿಟ್ಟು ಆತ್ಮಹತ್ಯೆಗೆ ಶರಣಾದ ರೈತ ಸುರೇಶ್ ಮನೆಗೆ ಸಿಎಂ ಹೆಚ್.ಡಿ ಕುಮಾರಸ್ವಾಮಿ ಇಂದು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು.

ಮಂಡ್ಯ ಜಿಲ್ಲೆ, ಕೆ.ಆರ್ ಪೇಟೆ ತಾಲ್ಲೂಕಿನ ಅಘಲಯ ಗ್ರಾಮದ ರೈತ ಸುರೇಶ್ ಸಾಲಬಾಧೆ ತಾಳಲಾರದೆ ವಿಡಿಯೋ ಮಾಡಿಟ್ಟು ಆತ್ಮಹತ್ಯೆಗೆ ಶರಣಾಗಿದ್ದರು. ವಿಡಿಯೋದಲ್ಲಿ ಸಂತೇಬಾಚಹಳ್ಳಿ ಹೋಬಳಿಯ ಎಲ್ಲ ಕೆರೆಗಳಿಗೆ ನೀರುತುಂಬಿಸಿ, ರೈತರನ್ನು ಕಾಪಾಡಿ ಎಂದು ಸರ್ಕಾರಕ್ಕೆ ಮನವಿ ಮಾಡಿದ್ದರು.  ಅಲ್ಲದೆ ಅಂತ್ಯಕ್ರಿಯೆಗೆ ಕುಮಾರಸ್ವಾಮಿಯನ್ನು ಆಹ್ವಾನಿಸಿದ್ದರು.

ಈ ಸಂಬಂಧ  ಇದೀಗ ಮೃತ ರೈತ ಸುರೇಶ್ ಮನೆಗೆ ಸಿಎಂ ಹೆಚ್.ಡಿ ಕುಮಾರಸ್ವಾಮಿ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ್ದಾರೆ.  ಜತೆಗೆ ಅಘಲಯ ಗ್ರಾಮದ ಕೆರೆಯನ್ನ ವೀಕ್ಷಣೆ ಮಾಡಿದರು. ಈ ವೇಳೆ ಸಚಿವ ಸಿ.ಎಸ್ ಪುಟ್ಟರಾಜು ಶಾಸಕ ನಾರಾಯಣ ಸ್ವಾಮಿ ಉಪಸ್ಥಿತರಿದ್ದರು.

ಆತ್ಮಹತ್ಯೆಗೆ ಶರಣಾದ ರೈತ  ಸುರೇಶ್ ಅವರ ಕುಟುಂಬಕ್ಕೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು 5 ಲಕ್ಷ ರೂ.ಗಳ ಪರಿಹಾರಧನದ  ಚೆಕ್ ವಿತರಿಸಿ, ಸಾಂತ್ವನ ಹೇಳಿದರು.

ಈ ವೇಳೆ ಮೃತ ಸುರೇಶ್ ಅವರ ಪುತ್ರಿ ಸುವರ್ಣ ಮಾಧ್ಯಮಗಳ ಜತೆ ಮಾತನಾಡಿ, ಸಾಲ ಇರುವ ಬಗ್ಗೆ ನಮ್ಮ ಬಳಿ ಅಪ್ಪ ಎಂದೂ ಹೇಳಿಕೊಂಡಿರಲಿಲ್ಲ. ಸಾಲ ಇರುವ ಬಗ್ಗೆ ಗೊತ್ತಿದ್ದರೇ ನಾನೇ ಸಾಲ ತೀರಿಸುತ್ತಿದ್ದೆ.  ಅಪ್ಪ ಬಿಟ್ರೆ ನಮಗೆ ಬೇರೆ ಯಾರು ಇಲ್ಲ. ನಮ್ಮ ಅಪ್ಪನ ಆಸೆಯಂತೆ ಸಂತೇಬಾಚಹಳ್ಳಿ ಹೋಬಳಿಯ ಎಲ್ಲಾ ಕೆರೆಗಳಿಗೆ ನೀರು ತುಂಬಿಸಿ. ನಮ್ಮ ಅಣ್ಣನಿಗೆ ಕೆಲಸ ಕೊಡಿಸಿ ಎಂದು ಸಿಎಂ ಹೆಚ್.ಡಿ ಕುಮಾರಸ್ವಾಮಿ ಬಳಿ ಮನವಿ ಮಾಡಿದ್ದಾರೆ.

Key words:  farmer – suicide- visits -CM HD Kumaraswamy- issued – compensation -check