ಮೈಸೂರು ದಸರಾ ಮಹೋತ್ಸವವನ್ನು ಬಿಜೆಪಿಯವರು ಮೋದಿ ಉತ್ಸವವಾಗಿ ಮಾರ್ಪಾಡು ಮಾಡ್ತಿದ್ದಾರೆ: ಮಾಜಿ ಶಾಸಕ ಸೋಮಶೇಖರ್ ಟೀಕೆ

ಮೈಸೂರು, ಅಕ್ಟೋಬರ್ 10, 2021 (www.justkannada.in): ಈ ಬಾರಿಯ ದಸರಾ ಮಹೋತ್ಸವವನ್ನು ಪ್ರಧಾನಿ ಮೋದಿ ಹೊಗಳಿಕೆಗಾಗಿ ಮಾಡಲಾಗ್ತಿದೆ. ಉದ್ಘಾಟನಾ ಸಮಾರಂಭದಲ್ಲೂ ಪ್ರಧಾನಿಯನ್ನು ಹಾಡಿ ಹೊಗಳಲಾಯಿತು. ಆ ಮೂಲಕ ಶಿಷ್ಟಾಚಾರದ ಉಲ್ಲಂಘನೆ ಮಾಡಲಾಗಿದೆ ಎಂದು ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಟೀಕಿಸಿದರು.

ಕೆ ಆರ್ ಕ್ಷೇತ್ರದಲ್ಲೂ ಪ್ರಧಾನಿ ಮೋದಿ ಮತ್ತು ಶಾಸಕ ರಾಮದಾಸ್ ರ ಮಾದರಿಯಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಮೋದಿ ಯುಗ ಉತ್ಸವ್ ಹೆಸರಿನಲ್ಲಿ ವಿದ್ಯಾರಣ್ಯಪುರಂನಲ್ಲಿರುವ ಉದ್ಯಾನವನವನ್ನು ಹಾಳುಗೆಡವಲಾಗಿದೆ. ನಾನು ಶಾಸಕನಾಗಿದ್ದ ಅವಧಿಯಲ್ಲಿ ಅನುಷ್ಠಾನಕ್ಕೆ ತಂದಿದ್ದ ಯೋಜನೆಗಳನ್ನು ಶಾಸಕ ರಾಮದಾಸ್ ಅವರದೆಂದು ಬಿಂಬಿಸಿಕೊಂಡಿದ್ದಾರೆ ಎಂದು ದೂರಿದ್ದಾರೆ.

ಈಗ ಮನೆಗಳನ್ನು ನೀಡಲು ಸಾಧ್ಯವೇ ಇಲ್ಲ. ಆದರೂ ನನ್ನ ಅವಧಿಯಲ್ಲಿ ಮಂಜೂರಾಗಿದ್ದ ಮನೆಗಳ ಹಕ್ಕುಪತ್ರವನ್ನು ಶಾಸಕ ರಾಮದಾಸ್ ವಿತರಣೆ ಮಾಡಿದ್ದಾರೆ. ಶಾಸಕ ರಾಮದಾಸ್ ಬರೀ ಸುಳ್ಳು ಆಶ್ವಾಸನೆಗಳನ್ನು ನೀಡುತ್ತಿದ್ದಾರೆ ಎಂದು ಮಾಜಿ ಶಾಸಕ ಎಂ ಕೆ ಸೋಮಶೇಖರ್ ವಾಗ್ದಾಳಿ ನಡೆಸಿದ್ದಾರೆ.

ಕೇಂದ್ರ ಸರ್ಕಾರದ ವೈಫಲ್ಯದ ಪರಿಣಾಮ ಇಂಧನ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದೆ. ಪೆಟ್ರೋಲ್ ಡೀಸೆಲ್ ಅಡುಗೆ ಅನಿಲ ದರ ಪ್ರತಿನಿತ್ಯ ಹೆಚ್ಚಳವಾಗುತ್ತಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರು ಜೀವನ ಮಾಡಲಾಗದ ಪರಿಸ್ಥಿತಿ ನಿರ್ಮಾಣ ಆಗಿದೆ. ಜನರ ಸಂಕಷ್ಟಗಳಿಗೆ ಕೇಂದ್ರ ಸರ್ಕಾರವೇ ಕಾರಣವಾಗಿದೆ ಎಂದು ಮಾಜಿ ಶಾಸಕ ಎಂ ಕೆ ಸೋಮಶೇಖರ್ ಮೈಸೂರಿನಲ್ಲಿ ಆರೋಪಿಸಿದ್ದಾರೆ.

key words: ex mla somashekar talk about modi and dasara