ಯಾವುದೇ ಸಂಸ್ಕೃತಿಯನ್ನು ಬಲವಂತದಿಂದ ತಡೆಯುವುದು ತಪ್ಪು: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ

ಬೆಂಗಳೂರು, ಫೆಬ್ರವರಿ 20, 2022 (www.justkannaa.in): ಸಿಂಧೂರ ಆಗಲಿ-ಹಿಜಾಬ್ ಆಗಲಿ ಎರಡು ನಮ್ಮ ನಮ್ಮ ಸಂಸ್ಕøತಿ ಮತ್ತು ನಂಬಿಕೆ. ಕುಂಕುಮ ಇಡುವುದರಿಂದ-ಹಿಜಾಬ್ ಹಾಕುವುದರಿಂದ ಯಾರಿಗೂ ತೊಂದರೆ ಇಲ್ಲ. ಯಾವುದೇ ಸಂಸ್ಕøತಿಯನ್ನು ಬಲವಂತದಿಂದ ತಡೆಯುವುದು ತಪ್ಪು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಹೇಳಿದರು.

ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು :

ಹಣೆಗೆ ಕುಂಕುಮ ಇಡುವ ಮಕ್ಕಳನ್ನು ಕಾಲೇಜುಗಳಿಗೆ ಪ್ರವೇಶ ನಿರಾಕರಿಸುತ್ತಿರುವ ಮತ್ತು ಸಿಂಧೂರ ವಿವಾದದ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿ, ಸಿಂಧೂರ ಇಡುವುದರಿಂದ ಯಾರಿಗೂ ತೊಂದರೆ ಇಲ್ಲ. ಹಾಗೆಯೇ ಹಿಜಾಬ್ ಧರಿಸುವುದರಿಂದಲೂ ಯಾರಿಗೂ ತೊಂದರೆ ಇಲ್ಲ. ಹಿಂದಿನಿಂದ ನಡೆದುಕೊಂಡು ಬಂದಿರುವ ನಂಬಿಕೆ, ಆಚರಣೆ, ಪರಂಪರೆಗೆ ತಕ್ಕಂತೆ ನಡೆದುಕೊಳ್ಳುವುದು ಯಾರಿಗೂ ತೊಂದರೆ ಇಲ್ಲ.

ಹಿಜಾಬನ್ನು ಹಿಂದಿನಿಂದಲೂ ಧರಿಸಿಕೊಂಡು ಬರುತ್ತಿದ್ದರು. ಕೇಸರಿ ಶಾಲು ಹಿಂದಿನಿಂದ ಯಾರೂ ಹಾಕುತ್ತಿರಲಿಲ್ಲ. ಹಿಜಾಬ್ ಅನ್ನು ವಿರೋಧಿಸುವುದಕ್ಕೋಸ್ಕರವೇ ಕೇಸರು ಶಾಲು ಹಾಕಿಸುವುದು ಅತ್ಯಂತ ಸಣ್ಣ ತನ. ಇದು ಕೇಸರಿ ಶಾಲಿಗೂ ಮಾಡುವ ಅವಮನ.

ಕೇಸರಿ ಶಾಲನ್ನು ಅಮಾನವೀಯ, ಅನಾಗರಿಕ ಕಾರಣಗಳಿಗೆ ಬಳಸಬಾರದು.
ಬಿಜೆಪಿ ಯವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದರೆ, ಅವರು ನಮ್ಮ ರಾಷ್ಟ್ರ ಧ್ವಜವನ್ನು ಹಿಡಿದು ಬ್ರಿಟಿಷರ ವಿರುದ್ಧ ಹೋರಾಡಿದ್ದರೆ ಅವರಿಗೆ ನಮ್ಮ ರಾಷ್ಟ್ರ ಧ್ವಜ ಮತ್ತು ರಾಷ್ಟ್ರೀಯ ಲಾಂಛನಗಳ ಬಗ್ಗೆ ನಿಜವಾದ ಗೌರವ-ಭಕ್ತಿ ಇರುತ್ತಿತ್ತು.

ಇವರು ಸ್ವಾತಂತ್ರ್ಯ ಹೋರಾಟದಲ್ಲೂ ಭಾಗವಹಿಸಲಿಲ್ಲ. ರಾಷ್ಟ್ರ ಧ್ವಜವನ್ನೂ ಬ್ರಿಟಿಷರ ವಿರುದ್ಧ ಹಿಡಿಯಲಿಲ್ಲ. ಹೀಗಾಗಿ ಇವರ ಮನಸ್ಥಿತಿಯೇ ರಾಷ್ಟ್ರ ಧ್ವಜದ ವಿರುದ್ಧ ಇದೆ. ರಾಷ್ಟ್ರಧ್ವಜ ಮತ್ತು ಈಶ್ವರಪ್ಪ ಅವರ ಸಚಿವ ಸ್ಥಾನ ಇವೆರಡರಲ್ಲಿ ನಿಮಗೆ ಯಾವುದು ಮುಖ್ಯ ಎನ್ನುವ ಪ್ರಶ್ನೆಯನ್ನು ನಾವು ಬಿಜೆಪಿ ಮುಂದಿಟ್ಟೆವು.

ಬಿಜೆಪಿ ರಾಷ್ಟ್ರ ಧ್ವಜಕ್ಕಿಂತ ಸಚಿವ ಸ್ಥಾನವೇ ಮುಖ್ಯ ಎಂದು ಹಠ ಹಿಡಿದು ಕುಳಿದಿದೆ. ರಾಷ್ಟ್ರೀಯ ಲಾಂಛನಗಳಿಗೆ ಅವಮಾನ ಮಾಡುವುದು ರಾಷ್ಟ್ರದ್ರೋಹ ಮತ್ತು ಸ್ಪಷ್ಟ ಕಾನೂನಿನ ಉಲ್ಲಂಘನೆ. “ನಾವು ರಾಷ್ಟ್ರ ಧ್ವಜಕ್ಕಾದರೂ ಅವಮಾನ ಮಡುತ್ತೀವಿ, ಕಾನೂನನ್ನೂ ಉಲ್ಲಂಘಿಸುತ್ತೀವಿ. ಯಾರೂ ಪ್ರಶ್ನಿಸಬಾರದು’ ಎನ್ನುವ ಬಿಜೆಪಿ ಧೋರಣೆಯನ್ನು ನಾವು ಪ್ರತಿಭಟಿಸುತ್ತಿದ್ದೀವಿ.

ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡುವುದು ಬಿಜೆಪಿಯವರಿಗೆ ಸಣ್ಣ ವಿಷಯ ಇರಬಹುದು. ಆದರೆ ನಮಗೆ ಇದು ಬಹಳ ಗಂಭೀರವಾದ ಸಂಗತಿ. ರಾಷ್ಟ್ರಧ್ವಜ ಹಿಡಿದು ಲಕ್ಷಾಂತರ ಮಂದಿ ಪ್ರಾಣ ತ್ಯಾಗ ಮಾಡಿದ್ದಾರೆ. ಸ್ವಾತಂತ್ರ್ಯ ಹೋರಾಟದ ಮೌಲ್ಯ ಬಿಜೆಪಿಯವರಿಗೆ ಗೊತ್ತಿಲ್ಲವಾದ್ದರಿಂದ ಅವರಿಗೆ ಹುತಾತ್ಮರ ಬೆಲೆ ಕೂಡ ಗೊತ್ತಿಲ್ಲ. ಹುತಾತ್ಮರು ಹಿಡಿದ ರಾಷ್ಟ್ರ ಧ್ವಜದ ಬೆಲೆಯೂ ಗೊತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿರೋಧ ಪಕ್ಷಕ್ಕೆ ನೈತಿಕತೆ ಇಲ್ಲ ಎನ್ನುವ ಮುಖ್ಯಮಂತ್ರಿ ಬೊಮ್ಮಾಯಿ ಅವರ ಮಾತಿಗೆ ಪ್ರತಿಕ್ರಿಯಿಸಿ, ನಮಗೆ ಬೊಮ್ಮಾಯಿ ಅವರಿಗಿಂತ ಹೆಚ್ಚು ಹೋರಾಟದ ಅನುಭವವಿದೆ. ಸ್ವಾತಂತ್ರ್ಯ ಹೋರಾಟದ ತ್ಯಾಗ ಬಲಿದಾನ ನಮಗೆ ಗೊತ್ತಿದೆ. ಅವರಿಗೇನು ಗೊತ್ತಿದೆ‌ ಇದೆಲ್ಲಾ.

ಹೀಗಾಗಿ ರಾಷ್ಟ್ರ ಧ್ವಜಕ್ಕೆ ಮಾಡಿದ ಅವಮಾನವನ್ನು ಸಹಿಸಿಕೊಳ್ಳಿ ಎಂದು ಅವರು ಹೇಳಿದರೆ ನಾವು ಸಹಿಸಿಕೊಳ್ಳಲು ಸಿದ್ದರಿಲ್ಲ. ಸದನದ ಒಳಗೆ ಮತ್ತು ಹೊರಗೆ ಹೋರಾಟ ಮಾಡುತ್ತೇವೆ.

ಬರಲಿರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಚರ್ಚಿಸುವ ಉದ್ದೇಶದಿಂದ ಮುಂಬರುವ 25 ಕ್ಕೆ ಹೈಕಮಾಂಡ್ ನನ್ನನ್ನು ಕರೆದಿದೆ. ಅದಕ್ಕೆ ದೆಹಲಿಗೆ ಹೋಗುತ್ತಿದ್ದೇನೆ. ಎಐಸಿಸಿ ವರಿಷ್ಠರಾದ ರಾಹುಲ್ ಗಾಂಧಿಯವರ ಸಾರಥ್ಯದಲ್ಲಿ ಸಭೆ ನಡೆಯಲಿದೆ ಎಂದು ಸಿದ್ದರಾಮಯ್ಯ ಅವರು ತಿಳಿಸಿದರು.