ಬಂಡೀಪುರ ಅರಣ್ಯದ ಮೌಲ್ಯಮಾಪನ

ಚಾಮರಾಜನಗರ:ಆ-19: ಜಿಲ್ಲೆಯ ಬಂಡೀಪುರ ಹುಲಿ ರಕ್ಷಿತ ಅರಣ್ಯದಲ್ಲಿ ತಕ್ಷಣ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು, ಲಂಟಾನ ತೆರವುಗೊಳಿಸಬೇಕು, ಬಿದಿರು ಬೆಳೆಯಲು ಕ್ರಮ ಕೈಗೊಳ್ಳಬೇಕು, ಪರಿಸರ ಅಭಿವೃದ್ಧಿ ಸಮಿತಿಗಳನ್ನು ರಚಿಸಬೇಕು, ಪ್ರವಾಸಿಗರ ಒತ್ತಡ ಕಡಿಮೆ ಮಾಡಬೇಕೆಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ತನ್ನ ಮೌಲ್ಯಮಾಪನದಲ್ಲಿ ಸೂಚಿಸಿದೆ.

ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಮತ್ತು ಭಾರತೀಯ ವನ್ಯಜೀವಿ ಸಂಸ್ಥೆ ನಡೆಸಿದ ದೇಶದ ಹುಲಿ ಸಂರಕ್ಷಿತ ಅರಣ್ಯಗಳ ಪರಿಣಾಮಕಾರಿ ನಿರ್ವಹಣಾ ಮೌಲ್ಯ ಮಾಪನದಲ್ಲಿ ರಾಜ್ಯದ ಹುಲಿ ರಕ್ಷಿತ ಅರಣ್ಯಗಳ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಗುರುತಿಸಲಾಗಿದೆ. ಸಾಮರ್ಥ್ಯಗಳನ್ನು ಪ್ರಶಂಸಿಸಿರುವ ಮೌಲ್ಯಮಾಪನ ತಂಡ, ದೌರ್ಬಲ್ಯಗಳನ್ನು ಸಹ ಬೊಟ್ಟು ಮಾಡಿ ತೋರಿಸಿ, ಇವುಗಳ ನಿವಾರಣೆಗೆ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಎಚ್ಚರಿಕೆ ನೀಡಿದೆ.

ಬಂಡೀಪುರ ಹುಲಿ ರಕ್ಷಿತ ಅರಣ್ಯದ ಉತ್ತರ ಗಡಿಯಲ್ಲಿ 150 ಹಳ್ಳಿಗಳಿದ್ದು, ಇವುಗಳಲ್ಲಿ 112 ಹಳ್ಳಿಗಳು ಬಫ‌ರ್‌ ವಲಯ (ಊರು ಮತ್ತು ಕಾಡಿನ ನಡುವಿನ ಇರುವ ಪ್ರದೇಶ)ದಲ್ಲಿವೆ. ಇಲ್ಲಿ 1.50 ಲಕ್ಷ ಜನಸಂಖ್ಯೆಯಿದ್ದು, 1 ಲಕ್ಷ ಜಾನುವಾರುಗಳಿವೆ. ಇದರಿಂದ ಜನ ಮತ್ತು ಜಾನುವಾರುಗಳು ಅರಣ್ಯದೊಳಕ್ಕೆ ಪ್ರವೇಶಿಸುವ ಸಾಧ್ಯತೆಗಳಿವೆ. 2016-17ನೇ ಸಾಲಿನಲ್ಲಿ ಮಾನವ ಮತ್ತು ವನ್ಯಜೀವಿ ಸಂಘರ್ಷದಿಂದ, ಆನೆ, ಹುಲಿ, ಕಾಡುಹಂದಿ, ಚಿರತೆ ದಾಳಿಯಿಂದ ನಾಲ್ವರು ಮೃತಪಟ್ಟಿದ್ದಾರೆ.

298 ಜಾನುವಾರುಗಳು ಮೃತಪಟ್ಟಿವೆ ಎಂದು ವರದಿ ತಿಳಿಸಿದೆ. ಅರಣ್ಯದಂಚಿನ ಗ್ರಾಮಗಳ ಜನರಿಗೆ ಅರಣ್ಯದ ಉಳಿವಿನ ಬಗ್ಗೆ ಅರಿವು ಮೂಡಿಸುವ, ಸಿಬ್ಬಂದಿಯೊಡನೆ ಸ್ನೇಹಮಯ ವಾತಾವರಣ ಸೃಷ್ಟಿಸುವ ಉದ್ದೇಶದಿಂದ 112 ಹಳ್ಳಿಗಳಿಗೆ ಪರಿಸರ ಅಭಿವೃದ್ಧಿ ಸಮಿತಿ ರಚಿಸಬೇಕು. ಆದರೆ ಈಗ ಕೇವಲ 22 ಅರಣ್ಯ ಅಭಿವೃದ್ಧಿ ಸಮಿತಿಗಳು ಮಾತ್ರ ಇವೆ. ಇವುಗಳು ಸಾಲುವುದಿಲ್ಲ.

ಅರಣ್ಯದಲ್ಲಿ ಶೇ.50ರಿಂದ 60ರಷ್ಟು ಲಂಟಾನ ಕಳೆ ಆವರಿಸಿದೆ. ಬಿದಿರು ನಾಶವಾಗಿದೆ, ಇದರಿಂದ ಆನೆಗಳಿಗೆ ಆಹಾರದ ಕೊರತೆ ಉಂಟಾಗಿದೆ. ಅರಣ್ಯದ ಮಧ್ಯದಲ್ಲಿ ಎರಡು ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗಿದ್ದು, ಇದರಿಂದ ವಾಹನ ದಟ್ಟಣೆ ಹೆಚ್ಚಾಗಿದೆ.

ಅರಣ್ಯ ಸಿಬ್ಬಂದಿಗೆ ತರಬೇತಿ ಅಗತ್ಯ: ಅರಣ್ಯ ಇಲಾಖೆಯಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿಗೆ ವನ್ಯಜೀವಿ ನಿರ್ವಹಣೆಯಲ್ಲಿ ಸಮರ್ಪಕ ತರಬೇತಿ ಪಡೆಯುವ ಅಗತ್ಯವಿದೆ. ಬಂಡೀಪುರ ಅರಣ್ಯದಲ್ಲಿ ಸಾಕಷ್ಟು ಹುದ್ದೆಗಳು ಖಾಲಿಯಿವೆ ಎಂದು ವರದಿ ಲೋಪದೋಷ (ದೌರ್ಬಲ್ಯ) ಗಳನ್ನು ಬೊಟ್ಟು ಮಾಡಿ ತೋರಿಸಿದೆ.

ತಕ್ಷಣ ಕೈಗೊಳ್ಳಬೇಕಾದ ಕ್ರಮಗಳು
-ಪರಿಸರ ಅಭಿವೃದ್ಧಿ ಸಮಿತಿಗಳನ್ನು ರಚಿಸಬೇಕು. ಪ್ರತಿ ಸಮಿತಿಗೂ 50 ಸಾವಿರ ರೂ.ಅನುದಾನ ನೀಡಬೇಕು.

-ಅರಣ್ಯ ಸಿಬ್ಬಂದಿಗೆ ಮಾನವ ಸಂಪನ್ಮೂಲ ಯೋಜನೆಯಲ್ಲಿ ತರಬೇತಿ ನೀಡಬೇಕು. ವನ್ಯಜೀವಿ ಕಾಯ್ದೆ, ಅರಣ್ಯ ಸಂರಕ್ಷಣೆ ಬಗ್ಗೆ ತರಬೇತಿ ನೀಡಬೇಕು.

-ಡಿಆರ್‌ಎಫ್ಒ ಹುದ್ದೆಗಳನ್ನು ಶೇ.50ರಷ್ಟು, ಫಾರೆಸ್ಟ್‌ ಗಾರ್ಡ್‌ಗಳ ಹುದ್ದೆಯನ್ನು ಶೇ.33ರಷ್ಟು, ವಾಚರ್‌ ಹುದ್ದೆಗಳನ್ನು ಶೇ.36ರಷ್ಟು ಕೂಡಲೇ ಭರ್ತಿ ಮಾಡಬೇಕು.

-ಲಂಟಾನ ತೆರವಿಗಾಗಿ ಕೈಗೊಳ್ಳಬೇಕಾದ ಎರಡು ಸಂಶೋಧನಾ ವರದಿಗಳನ್ನು ಜಾರಿಗೊಳಿಸಬೇಕು.

-ಬಂಡೀಪುರ ಅರಣ್ಯದಲ್ಲಿ ಹುಲಿ, ಆನೆಗಳ ಬಗ್ಗೆ ಮಾತ್ರ ಸಮೀಕ್ಷೆ ನಡೆಸಲಾಗುತ್ತಿದೆ. ಇದರ ಜೊತೆಗೆ ಅಳಿವಿನಂಚಿನಲ್ಲಿರುವ ಪ್ರಭೇದಗಳ ಬಗ್ಗೆ ಸಮೀಕ್ಷೆ ನಡೆಸಬೇಕು.

-ಬಂಡೀಪುರ ಅರಣ್ಯದ ಸಫಾರಿ ವೀಕ್ಷಿಸಲು ಬರುವ ಪ್ರವಾಸಿಗರಿಗೆ ವಾಹನಗಳಲ್ಲಿ ತರಬೇತಿ ಪಡೆದ ಗೈಡುಗಳನ್ನು ನೇಮಿಸಬೇಕು.

ಬಂಡೀಪುರ ಹುಲಿ ರಕ್ಷಿತ ಅರಣ್ಯದಲ್ಲಿ ಪರಿಸರ ಅಭಿವೃದ್ಧಿ ಸಮಿತಿಗಳಿಗಾಗಿ 45 ಲಕ್ಷ ರೂ.ಗಳನ್ನು ತೆಗೆದಿಡಲಾಗಿದೆ. ಅರಣ್ಯ ಸಿಬ್ಬಂದಿ ನೇಮಕಕ್ಕೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಡಿಆರ್‌ಎಫ್ಓ, ಫಾರೆಸ್ಟ್‌ ಗಾರ್ಡ್‌ಗಳ ಸಾಕಷ್ಟು ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಕಾಡಿನಲ್ಲಿ ಬಿದಿರು ಬೆಳೆಸಲು 5 ಟನ್‌ ಬಿದಿರು ಬೀಜ ತರಿಸಲಾಗಿದೆ. ಮಳೆ ಬಿದ್ದ ಕಡೆ ಬಿತ್ತನೆ ಮಾಡಿದ್ದೇವೆ. ಅರಣ್ಯದಲ್ಲಿ ಜನವಸತಿಯ ಒತ್ತಡವನ್ನು ಕಡಿಮೆ ಮಾಡಲು ಸಫಾರಿ ಕೌಂಟರನ್ನು ಅರಣ್ಯದ ಹೊರಗಡೆ ವರ್ಗಾವಣೆ ಮಾಡಲಾಗಿದೆ.
-ಬಾಲಚಂದ್ರ, ನಿರ್ದೇಶಕ, ಹುಲಿಯೋಜನೆ
ಕೃಪೆ:ಉದಯವಾಣಿ

ಬಂಡೀಪುರ ಅರಣ್ಯದ ಮೌಲ್ಯಮಾಪನ

evaluation-of-bandipur-forest