ಅಂತ್ಯ ಕಾಣದ ಅತಿಥಿ ಉಪನ್ಯಾಸಕರ ಪ್ರತಿಭಟನೆ.

ಬೆಂಗಳೂರು, ಜನವರಿ 5, 2022 (www.justkannada.in): ಕರ್ನಾಟಕದ ೪೩೦ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರು, ಉದ್ಯೋಗ ಅಭದ್ರತೆ ಹಾಗೂ ಅನುಚಿತ ವೇತನ ಪಾವತಿಯ ವಿರುದ್ಧ ಕಳೆದ ೨೫ ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಅನೇಕ ಅತಿಥಿ ಉಪನ್ಯಾಸಕರು ಖಿನ್ನತೆ ಹಾಗೂ ಇನ್ನಿತರೆ ಸಾಮಾಜಿಕ-ಮಾನಸಿಕ ಮತ್ತು ಆರೋಗ್ಯ ಸಮಸ್ಯೆಗಳಿಗೆ ಒಳಗಾಗಿ ಸಾವನ್ನಪ್ಪಿರುವುದಾಗಿ ಅತಿಥಿ ಉಪನ್ಯಾಸಕರ ಸಂಘ ಆರೋಪಿಸಿದೆ. ತೀರ್ಥಹಳ್ಳಿಯ ಶ್ರೀಹರ್ಷ ಶ್ಯಾನುಭಾಗ್ ಎಂಬ ಹೆಸರಿನ ಪ್ರತಿಭಟನಾನಿರತ ಅತಿಥಿ ಉಪನ್ಯಾಸಕರು ಇತ್ತೀಚೆಗಷ್ಟೇ ಆತ್ಮಹತ್ಯೆ ಮಾಡಿಕೊಂಡರು. ನೇಮಕವಾಗಿರುವ ೧೪,೫೬೪ ಪ್ರತಿಭಟನಾನಿರತ ಉಪನ್ಯಾಸಕರ ಪೈಕಿ ಈಗಾಗಲೇ ವಿವಿಧ ಕಾರಣಗಳಿಂದಾಗಿ ಸುಮಾರು ೭೫ ಜನರು ಮೃತಪಟ್ಟಿದ್ದಾರೆ.

ಈ ಪ್ರತಿಭಟನಾನಿರತ ಅತಿಥಿ ಉಪನ್ಯಾಸಕರು ಹೇಳುವ ಪ್ರಕಾರ ಕರ್ನಾಟಕ ಸರ್ಕಾರ ಇತರೆ ರಾಜ್ಯಗಳ ಹೋಲಿಕೆಯಲ್ಲಿ ಬಹಳ ಕಡಿಮೆ ವೇತನ ಪಾವತಿಸುತ್ತಿದೆ. ಎಸ್‌ಎಲ್‌ ಇಟಿ/ ಎನ್‌ ಇಟಿ ಉತ್ತೀರ್ಣರಾಗಿರುವ ಹಾಗೂ ಪಿಹೆಚ್.ಡಿ ಪದವಿ ಹೊಂದಿರುವ ಉಪನ್ಯಾಸಕರಿಗೆ ಮಾಸಿಕ ರೂ.೧೩,೦೦೦ ಹಾಗೂ ಇತರೆ ವಿದ್ಯಾರ್ಹತೆ ಉಳ್ಳ ಉಪನ್ಯಾಸಕರಿಗೆ ಕೇವಲ ರೂ.೧೧,೦೦೦ ವೇತನ ನೀಡಲಾಗುತ್ತಿದೆ. ಆದರೆ ಇತರೆ ರಾಜ್ಯಗಳಲ್ಲಿ ಅತಿಥಿ ಉಪನ್ಯಾಸಕರಿಗೆ ರೂ.೨೬,೦೦೦ ದಿಂದ ರೂ.೩೦,೦೦೦ದವರೆಗೆ ವೇತನ ನೀಡಲಾಗುತ್ತಿದೆ, ಎಂದಿದ್ದಾರೆ.

ಈ ಹಿಂದೆ ವಿಶ್ವವಿದ್ಯಾಲಯಗಳ ಅನುದಾನ ಆಯೋಗ (ಯುಜಿಸಿ) ಅತಿಥಿ ಉಪನ್ಯಾಸಕರಿಗೆ ರೂ.೪೮,೦೦೦ ವೇತನವನ್ನು ನೀಡುವಂತೆ ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ಅತಿಥಿ ಉಪನ್ಯಾಸಕರು ಡಿಸೆಂಬರ್ ೧೨, ೨೦೨೧ರಿಂದ ಕೆಲಸವನ್ನು ಬಹಿಷ್ಕರಿಸಿದರು, ಮತ್ತು ಡಿಸೆಂಬರ್ ೧೪, ೨೦೨೧ರಿಂದ ರಾಜ್ಯದಾದ್ಯಂತ ಪ್ರತಿಭಟನೆಯನ್ನು ಕೈಗೊಂಡರು.

ಈ ಪೈಕಿ ಹಲವರು ಈಗ ತಮ್ಮ ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ. ಬಹುಪಾಲು ಅತಿಥಿ ಉಪನ್ಯಾಸಕರಿಗೆ ಮನೆ ಬಾಡಿಗೆಯನ್ನೂ ಪಾವತಿಸುವುದು ಸಾಧ್ಯವಾಗುತ್ತಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿಯನ್ನು ನಿಲ್ಲಿಸಿ, ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟ ಶ್ರೀಹರ್ಷ ಶ್ಯಾನುಭಾಗ್ ಅವರ ಕುಟುಂಬಸ್ಥರಿಗೆ ರೂ.೨೫ ಲಕ್ಷ ಪರಿಹಾರ ಒದಗಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಕರ್ನಾಟಕ ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ಹನುಮಂತೇಗೌಡ ಆರ್. ಕಲ್ಮಣಿ ಅವರು ಮಾತನಾಡಿ: “ನಾವು ಒಂದು ವರ್ಷದಲ್ಲಿ ೧೨ ತಿಂಗಳ ವೇತನಕ್ಕೆ ಒತ್ತಾಯಿಸುತ್ತಿದ್ದೇವೆ. ನಮ್ಮನ್ನು ಮೆರಿಟ್ ಮೇಲೆ ಆಯ್ಕೆ ಮಾಡಲಾಗಿದೆ. ಆದರೆ ಘೋಷಣೆಯಾದ ೧೫ ದಿನಗಳ ನಂತರ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ನಾವು ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿಗೆ ಒಂದು ಪತ್ರವನ್ನು ಸಲ್ಲಿಸಿದ್ದೇವೆ. ನಾವು ಪರೀಕ್ಷೆಗಳು, ಎನ್‌ಎಎಸಿ ಸಂಬಂಧಿತ ಕೆಲಸ ಹಾಗೂ ಇನ್ನಿತರೆ ಕೆಲಸಗಳನ್ನು ಮಾಡುತ್ತೇವೆ. ಇಷ್ಟೆಲ್ಲಾ ಆದರೂ ಸಹ ನಮಗೆ ಕೇವಲ ಆರು ತಿಂಗಳ ವೇತನವನ್ನು ಮಾತ್ರ ನೀಡಲಾಗುತ್ತಿದೆ, ಅದೂ ಸಹ ಕ್ರಮಬದ್ಧವಾಗಿ ನೀಡುತ್ತಿಲ್ಲ,” ಎಂದು ಆರೋಪಿಸಿದರು.

ಸರ್ಕಾರಿ ಪ್ರಥಮ ದರ್ಜೆ ಉಪನ್ಯಾಸಕರ ಸಂಘದ ರಾಜ್ಯ ಸಂಯೋಜನಾ ಸಮಿತಿಯ ಮಾಧ್ಯಮ ವಕ್ತಾರರಾದ ಡಾ. ರವೀಂದ್ರ ಜೆ.ಸಿ. ಅವರು ಈ ಕುರಿತು ಮಾತನಾಡಿ: “ಕೆಸಿಎಸ್ ನಿಯಮಾವಳಿ ಕಲಂ ೧೩೨, ೧೯೭೭ರ ಪ್ರಕಾರ, ಶಾಸಕಾಂಗಕ್ಕೆ ತಾತ್ಕಾಲಿಕ ಉದ್ಯೋಗಿಗಳನ್ನು ಖಾಯಂಗೊಳಿಸುವ ಅಧಿಕಾರವಿದೆ. ಹಾಲಿ ಇರುವ ಎಲ್ಲಾ ಅತಿಥಿ ಉಪನ್ಯಾಸಕರನ್ನೂ ಸಹ ಖಾಯಂಗೊಳಿಸುವಂತೆ ನಾವು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದೇವೆ. ಜೊತೆಗೆ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಯನ್ನು ಕೂಡಲೇ ಸ್ಥಗಿತಗೊಳಿಸಬೇಕೆಂದು ಕೋರುತ್ತಿದ್ದೇವೆ. ನಮಗೆ ನ್ಯಾಯ ದೊರೆಯುವವರೆಗೂ ನಮ್ಮ ಹೋರಾಟವನ್ನು ನಾವು ನಿಲ್ಲಿಸಲ್ಲ,” ಎಂದರು.

ಸುದ್ದಿ ಮೂಲ: ಬೆಂಗಳೂರ್ ಮಿರರ್

Key words: endless -guest lecturers-protest