ಯಶವಂತಪುರ-ತುಮಕೂರು ರೈಲ್ವೆ ಮಾರ್ಗ ವಿದ್ಯುದ್ದೀಕರಣ, ಸುರಕ್ಷತಾ ತಪಾಸಣೆಗೆ ಸಿದ್ಧ.

kannada t-shirts

ಬೆಂಗಳೂರು, ಅಕ್ಟೋಬರ್ 22, 2021 (www.justkannada.in): ರೈಲ್ವೆ ಸುರಕ್ಷತಾ ಆಯುಕ್ತರು ಶೀಘ್ರದಲ್ಲೇ ಯಶವಂತಪುರ-ತುಮಕೂರು ನಡುವಿನ ರೈಲ್ವೆ ಮಾರ್ಗದ ವಿದ್ಯುದ್ದೀಕರಣ ಕಾಮಗಾರಿಯನ್ನು ತಪಾಸಣೆ ಮಾಡಲಿದ್ದಾರೆ.

ಆದರೂ ಸಹ ಈ ರೈಲು ಮಾರ್ಗದ ಮೂಲಕ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಲು ಬೆಂಗಳೂರಿಗರು ಇನ್ನೂ ಸ್ವಲ್ಪ ಸಮಯದವರೆಗೂ ಕಾಯಬೇಕಿದೆ. ಏಕೆಂದರೆ ಚಿಕ್ಕಬಳ್ಳಾಪುರ ಮಾರ್ಗದ ಯಲಹಂಕ-ದೇವನಹಳ್ಳಿ ವಿಭಾಗದ ರೈಲ್ವೆ ವಿದ್ಯುದ್ದೀಕರಣ ಯೋಜನೆ ಆರು ತಿಂಗಳವರೆಗೆ ವಿಳಂಬವಾಗಿದೆ.

ಕಳೆದ ಒಂದು ತಿಂಗಳಿಂದ ವಿದ್ಯುದ್ದೀಕೃತ ರೈಲ್ವೆ ಇಂಜಿನ್‌ ನ ಓಡಾಟದ ಪ್ರಯೋಗವನ್ನು ನಡೆಸಿದ ನಂತರ ನೈಋತ್ಯ ರೈಲ್ವೆ (ಎಸ್‌ಡಬ್ಲ್ಯುಆರ್) ಯಶವಂತಪುರ-ತುಮಕೂರು ನಡುವಿನ ರೈಲ್ವೆ ಮಾರ್ಗದ ವಿದ್ಯುದ್ದೀಕರಣವನ್ನು ರೈಲ್ವೆ ಸುರಕ್ಷತಾ ಪರಿವೀಕ್ಷಕರು (ಸಿಆರ್‌ಎಸ್) ತಪಾಸಣೆ ನಡೆಸುವುದಕ್ಕಾಗಿ ಕಾಯುತ್ತಿದೆ. “ನಾವು ಸಿಆರ್‌ ಎಸ್ ಅವರಿಗೆ ಇತ್ತೀಚೆಗೆ ಸಂಬಂಧಪಟ್ಟ ದಾಖಲೆಗಳನ್ನು ಕಳುಹಿಸಿದ್ದು, ಅವರಿಂದ ಮಾಹಿತಿಯನ್ನು ಎದುರು ನೋಡುತ್ತಿದ್ದೇವೆ. ತುಮಕೂರು ಹಾಗೂ ಹಿರೆಹಳ್ಳಿ ನಡುವಿನ ಒಂದು ಭಾಗವನ್ನು ಸಿಆರ್‌ಎಸ್ ಅವರು ಈಗಾಗಲೇ ತಪಾಸಣೆ ಮಾಡಿದ್ದು, ಕೆಲವು ಅವಲೋಕನಗಳನ್ನು ಒದಗಿಸಿದ್ದಾರೆ. ನಾವು ಆ ಅವುಗಳನ್ನು ಪಾಲಿಸಿದ್ದು, ಖಾಯಂ ಅನುಮತಿಯನ್ನು ಕೋರಿ ಉತ್ತರ ನೀಡಿದ್ದೇವೆ,” ಎಂದು ನೈಋತ್ಯ ರೈಲ್ವೆ ವಿಭಾಗದ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅನೀಶ್ ಹೆಗ್ಡೆ ಅವರು ತಿಳಿಸಿದ್ದಾರೆ.

ಮುಂದಿನ ತಿಂಗಳೊಳಗೆ ಸಿಆರ್‌ಎಸ್ ಅವರಿಂದ ಸಂಪೂರ್ಣ ೬೯.೪೭ ಕಿ.ಮೀ. ಉದ್ದದ ರೈಲ್ವೆ ಮಾರ್ಗದ ತಪಾಸಣೆ ಪೂರ್ಣಗೊಳ್ಳುತ್ತದೆ ಎಂದು ನೈಋತ್ಯ ರೈಲ್ವೆ ನಿರೀಕ್ಷಿಸಿದೆ. ಸುರಕ್ಷತಾ ಪರಿವೀಕ್ಷಕರಿಂದ ಹಸಿರು ನಿಶಾನೆ ಬಂದರೆ ಹೆಚ್ಚಿನ ಸಂಖ್ಯೆಯ ರೈಲುಗಳು, ವಿಶೇಷವಾಗಿ ಮೆಮು ರೈಲುಗಳ ಓಡಾಟ ಆರಂಭವಾಗಲಿದೆ. ಅದರಿಂದ ಬೆಂಗಳೂರು ಹಾಗೂ ತುಮಕೂರಿನ ನಡುವೆ ಹೆಚ್ಚಿನ ಜನರು ಓಡಾಡಲು ನೆರವಾಗುತ್ತದೆ.

ಹೈಟೆನ್ಷನ್ ಲೈನ್‌ ಗಳು

ಅಕ್ಟೋಬರ್ ತಿಂಗಳೊಳಗೆ ಪೂರ್ಣಗೊಳ್ಳಬೇಕಿದ್ದ ಯಲಹಂಕ-ದೇವನಹಳ್ಳಿ ವಿಭಾಗದ ನಡುವಿನ ವಿದ್ಯುದ್ದೀಕರಣ ಕಾಮಗಾರಿಗಳು ಆರು ತಿಂಗಳು ವಿಳಂಬವಾಗುವ ಸಂಭವವಿದೆ. “ಕರ್ನಾಟಕ ವಿದ್ಯುತ್ ನಿಗಮ ನಿಯಮಿತದ (ಕೆಪಿಟಿಸಿಎಲ್) ವಿದ್ಯುತ್ ಮಾರ್ಗಗಳು ಈ ಮಾರ್ಗದಲ್ಲಿ ಅಡ್ಡ ಹಾದು ಹೋಗಿರುವುದು ಈ ವಿಳಂಬಕ್ಕೆ ಕಾರಣವಾಗಿದೆ. ವಿದ್ಯುದ್ದೀಕರಣದ ಮೂಲಭೂತಸೌಕರ್ಯ ಲಭ್ಯವಿದ್ದರೂ ಸಹ ಕೆಪಿಟಿಸಿಎಲ್‌ ನ ಹೈಟೆನ್ಷೆನ್ ವಿದ್ಯುತ್ ಮಾರ್ಗ ವರ್ಗಾಯಿಸದ ಹೊರತು ಮುಂದುವರೆಸಲಾಗುವುದಿಲ್ಲ,” ಎಂದು ಮತ್ತೋರ್ವ ಅಧಿಕಾರಿ ತಿಳಿಸಿದರು.

“ನೈಋತ್ಯ ರೈಲ್ವೆ ಈ ವಿಷಯಕ್ಕೆ ಸಂಬಂಧಪಟ್ಟಂತೆ ಕೆಪಿಟಿಸಿಎಲ್ ಅನ್ನು ಸಂಪರ್ಕಿಸಿದ್ದು, ಆ ನಿಟ್ಟಿನಲ್ಲಿ ಕೆಲಸ ನಿರ್ವಹಿಸುತ್ತಿದ್ದೇವೆ. ಇತ್ತೀಚೆಗೆ ಆ ಹೈಟೆನ್ಷೆನ್ ಟವರ್‌ಗಳನ್ನು ಸ್ಥಳಾಂತರಿಸಲು ಸೂಕ್ತ ಸ್ಥಳಕ್ಕಾಗಿ ಸಮೀಕ್ಷೆಯನ್ನು ನಡೆಸಲಾಯಿತು. ಇದರಲ್ಲಿ ಭೂಮಿಯನ್ನು ವಶಪಡಿಸಿಕೊಳ್ಳುವುದು ಹಾಗೂ ವಿವಿಧ ಇಲಾಖೆಗಳಿಂದ ಸಹಕಾರ ಪಡೆಯಬೇಕಾಗಿರುವಂತಹ ಕೆಲಸಗಳು ಇರುವುದರಿಂದ ಸ್ವಲ್ಪ ಸಮಯ ಬೇಕಾಗುತ್ತದೆ,” ಎಂದು ವಿವರಿಸಿದರು.

ನಗರ ಸಾರಿಗೆ ಕಾರ್ಯಕರ್ತ ಸಂಜೀವ್ ದ್ಯಾಮಣ್ಣನವರ್ ಅವರು ಈ ಕುರಿತು ಮಾತನಾಡಿ ರೈಲ್ವೆ ಇಲಾಖೆಯು ಸಾಂಕ್ರಾಮಿಕದ ಅವಧಿಯಲ್ಲಿ ಸ್ಥಗಿತಗೊಳಿಸಿದ್ದಂತಹ ಎಲ್ಲಾ ಪ್ರಯಾಣಿಕ ರೈಲುಗಳನ್ನು ಪುನರಾರಂಭಿಸಬೇಕು. “ಕೇವಲ ಮೂಲಭೂತಸೌಕರ್ಯ ಹಾಗೂ ಅದರ ಸಾಮರ್ಥ್ಯವನ್ನು ಹೆಚ್ಚಿಸುವುದರಿಂದ ಪ್ರಯಾಣಿಕರಿಗೆ ಯಾವುದೇ ಪ್ರಯೋಜನವಾಗುವುದಿಲ್ಲ. ರೈಲ್ವೆ ಇಲಾಖೆಯು ಸಾಧ್ಯವಾದಷ್ಟು ಬೇಗ ರೈಲುಗಳ ಕಾರ್ಯಾಚರಣೆಯನ್ನು ಮೊದಲಿನಂತೆ ಮಾಡಬೇಕು ಹಾಗೂ ತಮ್ಮ ಗಮನವನ್ನು ಗೂಡ್ಸ್ ರೈಲುಗಳಿಂದ ಪ್ರಯಾಣಿಕ ರೈಲುಗಳ ಕಡೆ ಹೊರಳಿಸಬೇಕು,” ಎಂದು ಅಭಿಪ್ರಾಯಪಟ್ಟಿದ್ದಾರೆ.

ಕಡಿಮೆ ಸಂಖ್ಯೆಯ ಪ್ರಯಾಣಿಕರಿದ್ದ ಕಾರಣದಿಂದಾಗಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಯಿತು. ಈ ಮಾರ್ಗದಲ್ಲಿ ರೈಲು ಸೇವೆ ಆರಂಭಿಸಿದ ನಾಲ್ಕು ತಿಂಗಳಲ್ಲಿ ಕೇವಲ ೨,೦೯೮ ಜನರು ಮಾತ್ರ ಅದರ ಉಪಯೋಗ ಪಡೆದುಕೊಂಡಿದ್ದರು.

“ಸಾಕಷ್ಟು ಜನರು ಅದರ ಉಪಯೋಗ ಪಡೆಯದಿರಲು ರೈಲುಗಳ ಓಡಾಟದ ಸಮಯ ಹಾಗೂ ಸಾಂಕ್ರಾಮಿಕವೇ ಕಾರಣಗಳು. ಯಾವುದೇ ಒಂದು ರೈಲು ಓಡಾಟ ಆರಂಭಿಸಿದ ನಂತರ ಜನರಿಗೆ ಆ ಬಗ್ಗೆ ಮಾಹಿತಿ ಲಭಿಸಿ, ಹೆಚ್ಚಿನ ಜನರು ಅದರ ಸೇವೆಯನ್ನು ಉಪಯೋಗಿಸಿಕೊಳ್ಳಲು ಸ್ವಲ್ಪ ಸಮಯ ಬೇಕಾಗುತ್ತದೆ, ಅಲ್ಲಿಯವರೆಗೂ ರೈಲ್ವೆ ಇಲಾಖೆಯವರು ಕಾಯಬೇಕು. ಇಲಾಖೆಗೆ ಸ್ವಲ್ಪ ನಷ್ಟವಾದರೂ ಬಡವರಿಗೆ ಸಾರಿಗೆ ಸೌಕರ್ಯವನ್ನು ಒದಗಿಸಲು ಇರುವ ಸೌಕರ್ಯಗಳ ಗರಿಷ್ಠ ಬಳಕೆ ಅಗತ್ಯ. ಇಂತಹ ಕಾರ್ಯಾಚರಣೆಗಳಿಂದ ಲಾಭಗಳೂ ಲಭಿಸುತ್ತವೆ,” ಎಂದು ವಿವರಿಸಿದರು.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words: Electrification – Yashwantpur-Tumkur –railway- line-  Ready – safety inspection.

website developers in mysore