ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ: ಬಿಜೆಪಿಯಿಂದ ಏಳು ಮಂದಿಯ ಹೆಸರು ಪ್ರಸ್ತಾಪ- ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಶ್ವಥ್ ನಾರಾಯಣ್.

ಮೈಸೂರು,ಅಕ್ಟೋಬರ್,12,2021(www.justkannada.in): ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಗೆ ಇಂದಿನ ಸಭೆಯಲ್ಲಿ ಬಿಜೆಪಿಯಿಂದ ಏಳು ಮಂದಿಯ ಹೆಸರು ಪ್ರಸ್ತಾಪವಾಗಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಶ್ವಥ್ ನಾರಾಯಣ್ ಮಾಹಿತಿ ನೀಡಿದರು.

ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ ಹಿನ್ನೆಲೆ, ಬಿಜೆಪಿಯಿಂದ ಅಭಿಪ್ರಾಯ ಸಂಗ್ರಹಕ್ಕೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಮಾಜಿ ಎಂಎಲ್ಸಿ ಅಶ್ವತ್ ನಾರಾಯಣ್, ಎಸ್.ವಿ.ಸಂಕನೂರು ವೈ.ಎ.ನಾರಾಯಣ ಸ್ವಾಮಿ, ಹಣಮಂತ ನಿರಾಣಿ ಅವರನ್ನ ನೇಮಕ ಮಾಡಲಾಗಿದೆ.

ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಶ್ವಥ್ ನಾರಾಯಣ್, ದಕ್ಷಿಣ ಪದವೀಧರ ಕ್ಷೇತ್ರ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿದೆ. ಮುಂಬರುವ ವಿಧಾನ ಪರಿಷತ್ ಚುನಾವಣೆ ಸಂಬಂಧ ಮೈಸೂರಿನಲ್ಲಿಂದು ಕೋರ್ ಕಮಿಟಿ ಸಭೆ ನಡೆಸಲಾಗಿದೆ. ಚುನಾವಣೆ ಹಿನ್ನೆಲೆಯಲ್ಲಿ ಪ್ರತಿ ಜಿಲ್ಲೆಗೆ ಇಬ್ಬರು ಸಂಚಾಲಕರು, ಪ್ರತಿ ಮಂಡಲಕ್ಕೆ ಇಬ್ಬರು ಸಂಚಾಲಕರನ್ನು ನೇಮಕ ಮಾಡಲಾಗುವುದು. ಪದವೀಧರ ಮತದಾರರರ ನೋಂದಣಿ ಸಂಬಂಧ ಅಕ್ಟೋಬರ್ 16, 17,18ರಂದು ಕಾರ್ಯಾಗಾರ ಹಮ್ಮಿಕೊಳ್ಳಲಾಗುವುದು. ನಂತರ ಜಿಲ್ಲಾವಾರು ಸಭೆಗಳನ್ನು ನಡೆಸಲಾಗುವುದು ಎಂದರು.

ಇಂದು ನಡೆದ ಸಭೆಯಲ್ಲಿ ದಕ್ಷಿಣ ಪದವೀಧರ ಕ್ಷೇತ್ರಕ್ಕೆ ಏಳು ಮಂದಿ ಹೆಸರು ಪ್ರಸ್ತಾಪವಾಗಿದೆ. ಮೈ.ವಿ.ರವಿಶಂಕರ್, ಫಣೀಶ್, ಗೋ ಮಧುಸೂದನ್, ಡಾ ಚಂದ್ರಶೇಖರ್, ಇ ಸಿ ನಿಂಗರಾಜಗೌಡ, ಯೋಗೇಂದ್ರ, ಯಮುನಾ ಅವರ ಹೆಸರುಗಳು ಪ್ರಸ್ತಾಪವಾಗಿವೆ. ಇವರ ಹೆಸರನ್ನು ಶಿಫಾರಸ್ಸು ಮಾಡಿ ಹೈಕಮಾಂಡ್ ಗೆ ಕಳುಹಿಸಿಕೊಡಲಾಗುವುದು ಎಂದು ಅಶ್ವಥ್ ನಾರಾಯಣ್  ಹೇಳಿದರು.

ಉತ್ತರ ಪ್ರದೇಶದಲ್ಲಿ ನಡೆದಿರುವ ಅಹಿತಕರ ಘಟನೆ ಪ್ರಕರಣವನ್ನು ಕಾಂಗ್ರೆಸ್ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ. ಬಿಜೆಪಿ ವಿರುದ್ದ ಕಾಂಗ್ರೆಸ್  ಅಪಪ್ರಚಾರ ಮಾಡುತ್ತಿದೆ. ಕಾಂಗ್ರೆಸ್ ಆಡಳಿತಲ್ಲಿರುವ ರಾಜಸ್ಥಾನದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ಪಂಜಾಬ್ ನಲ್ಲಿ ಅರಾಜಕತೆ ಉಂಟಾಗಿದೆ. ಈ ಬಗ್ಗೆ ಮಾತನಾಡದ ಕಾಂಗ್ರೆಸ್ ನಾಯಕರು ಉತ್ತರ ಪ್ರದೇಶ ಘಟನೆಯನ್ನು ಮುಂದಿಟ್ಟುಕೊಂಡು ಬಿಜೆಪಿ ಬಗ್ಗೆ ಜನರಲ್ಲಿ ತಪ್ಪು ಅಭಿಪ್ರಾಯ ಮೂಡಿಸುತ್ತಿದ್ದಾರೆ ಎಂದು ಕಿಡಿಕಾರಿದರು.

Key words:  election – Southern Graduate constituency-Seven – BJP-  State BJP General Secretary -Ashwath Narayan.