ಇಡಿ ತನಿಖೆ ಮೂಲಕ ನಮ್ಮ ನಾಯಕರ ಆತ್ಮಸ್ಥೈರ್ಯ ಕುಗ್ಗಿಸಲು ಷಡ್ಯಂತ್ರ:  ನಾವು ಹೆದರಲ್ಲ- ಮಾಜಿ ಸಿಎಂ ಸಿದ್ಧರಾಮಯ್ಯ ವಾಗ್ದಾಳಿ

ಬೆಂಗಳೂರು,ಜುಲೈ,21,2022(www.justkannada.in):  ಸ್ವಾಯತ್ತ ತನಿಖಾ ಸಂಸ್ಥೆ ಬಳಸಿಕೊಂಡು ಕಾಂಗ್ರೆಸ್ ನಾಯಕರನ್ನ ಹೆದರಿಸುವ ಕೆಲಸ ಮಾಡಲಾಗುತ್ತಿದೆ. ಇಡಿ ತನಿಖೆ ಮೂಲಕ  ಕೇಂದ್ರ ಸರ್ಕಾರ ನಮ್ಮ ನಾಯಕರ ಆತ್ಮಸ್ಥೈರ್ಯ ಕುಗ್ಗಿಸಲು ಷಡ್ಯಂತ್ರ ಮಾಡಿದೆ. ಆದರೆ ನಾವು ಹೆದರಲ್ಲ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್‌ ನಾಯಕರಾದ ಸೋನಿಯಾ ಗಾಂಧಿ ಅವರಿಗೆ ಇ.ಡಿ ವಿಚಾರಣೆ ನೆಪದಲ್ಲಿ ಕಿರುಕುಳ ನೀಡುತ್ತಿರುವುದನ್ನು ಖಂಡಿಸಿ, ಕಾಂಗ್ರೆಸ್‌ ಪಕ್ಷ ಇಂದು ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಿಷ್ಟು..

ಕಳೆದ ತಿಂಗಳು ರಾಹುಲ್‌ ಗಾಂಧಿ ಅವರನ್ನು ಇ.ಡಿ ವಿಚಾರಣೆಗೆ ಕರೆದಾಗ ಇಡಿ ಕಚೇರಿ ವರೆಗೆ ಪ್ರತಿಭಟನೆ ಇಟ್ಟುಕೊಂಡು, ಅದಕ್ಕೆ ಮುತ್ತಿಗೆ ಹಾಕುವ ಕೆಲಸವನ್ನು ಮಾಡಿದ್ದೆವು. ಈಗ ಮತ್ತೆ ಸೋನಿಯಾ ಗಾಂಧಿ ಅವರನ್ನು ಇಡಿ ಕರೆಸಿಕೊಂಡು ವಿಚಾರಣೆ ಮಾಡುತ್ತಿದೆ. ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿ ಅವರನ್ನು ವಿಚಾರಣೆಗೆ ಕರೆದರೆ ಕಾಂಗ್ರೆಸ್‌ ಯಾಕೆ ಹೆದರಿಕೊಳ್ಳಬೇಕು ಎಂದು ಭಾರತೀಯ ಜನತಾ ಪಕ್ಷದವರು ದೇಶದ ಜನರನ್ನು ತಪ್ಪು ದಾರಿಗೆ ಎಳೆಯುವ ಕೆಲಸ ಮಾಡುತ್ತಿದ್ದಾರೆ.

ನಾವ್ಯಾರು ದೇಶದ ಕಾನೂನಿಗಿಂತ ದೊಡ್ಡವರಲ್ಲ. ಆದರೆ ಮೋದಿ ಅವರು ಅಧಿಕಾರಕ್ಕೆ ಬಂದ ಮೇಲೆ ಸ್ವಾಯತ್ತ ತನಿಖಾ ಸಂಸ್ಥೆಗಳಾದ ಸಿಬಿಐ, ಇಡಿ, ಐಟಿ ಗಳನ್ನು ದುರುಪಯೋಗ ಮಾಡಿಕೊಂಡು ಕಾಂಗ್ರೆಸ್‌ ಪಕ್ಷದ ನಾಯಕರನ್ನು ಹೆದರಿಸುವ ಕೆಲಸ ಮಾಡುತ್ತಿದ್ದಾರೆ. ದೇಶದಲ್ಲಿ ಇರುವುದು ಎರಡೇ ರಾಷ್ಟ್ರೀಯ ಪಕ್ಷಗಳು. ಕಮ್ಯುನಿಷ್ಟ್‌ ಪಕ್ಷ ರಾಷ್ಟ್ರೀಯ ಪಕ್ಷವಾದರೂ ತಮ್ಮನ್ನು ಚುನಾವಣೆಯಲ್ಲಿ ಸೋಲಿಸುವ ಶಕ್ತಿ ಇರುವುದು ಕಾಂಗ್ರೆಸ್‌ ಗೆ ಮಾತ್ರ ಎಂಬುದು ಬಿಜೆಪಿ ಅವರಿಗೆ ಗೊತ್ತಾಗಿದೆ. ಅದಕ್ಕೋಸ್ಕರವಾಗಿ ಕಾಂಗ್ರೆಸ್‌ ಪಕ್ಷವನ್ನು ನಿರ್ನಾಮ ಮಾಡಬೇಕು ಎಂದು ಹೊರಟಿದ್ದಾರೆ. ಮೋದಿ, ಅಮಿತ್‌ ಶಾ ಅವರೇ ಭಾರತವನ್ನು ಕಾಂಗ್ರೆಸ್‌ ಮುಕ್ತ ಮಾಡುತ್ತೇವೆ ಎಂದು ಹಲವು ಬಾರಿ ಹೇಳಿದ್ದಾರೆ. ಇಡಿ ತನಿಖೆ ಮೂಲಕ ನಮ್ಮ ಪಕ್ಷದ ನಾಯಕರ ಮತ್ತು ಕಾರ್ಯಕರ್ತರ ಆತ್ಮಸ್ಥೈರ್ಯವನ್ನು ಕುಗ್ಗಿಸಲು ಷಡ್ಯಂತ್ರ ಮಾಡಿದ್ದಾರೆ.

ರಾಹುಲ್‌ ಗಾಂಧಿ, ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆಯವರನ್ನು ಇಡಿ ಅವರು ತನಿಖೆ ಮಾಡುವಂತಹ ಯಾವುದೇ ಪ್ರಕರಣ ಇಲ್ಲ. ಅಕ್ರಮ ಹಣದ ವರ್ಗಾವಣೆ ಎಲ್ಲಿ ಆಗಿದೆ? ಎಲ್ಲಿ ಕ್ರಿಮಿನಲ್‌ ಚಟುವಟಿಕೆ ನಡೆದಿದೆ? ಇಲ್ಲಿ ಎಫ್.ಐ.ಆರ್‌ ಕೂಡ ದಾಖಲಾಗಿಲ್ಲ. ಎಫ್.ಐ.ಆರ್‌ ಆಗದೆ ಯಾವುದೇ ತನಿಖಾ ಸಂಸ್ಥೆ ವಾರಂಟ್‌ ಕೊಡುವಂತಿಲ್ಲ. ಕಾನೂನು ತಿಳಿದ ಎಲ್ಲರಿಗೂ ಇದು ಗೊತ್ತಿರುವ ವಿಚಾರ. ನಾಡಿನ ವಕೀಲರು ಸರ್ಕಾರದ ಈ ಸುಳ್ಳು ಕೇಸ್‌ ಅನ್ನು ತಿಳಿಸಿ ಹೇಳುವ ಮೂಲಕ ಸರ್ಕಾರದ ಈ ದುರುದ್ದೇಶವನ್ನು ಬಯಲು ಮಾಡುವ ಕೆಲಸ ಮಾಡಬೇಕು ಎಂದು ವಕೀಲ ಬಂದುಗಳಲ್ಲಿ ಮನವಿ ಮಾಡುತ್ತೇನೆ.

ಕಿರುಕುಳ ನೀಡುವ ಉದ್ದೇಶದಿಂದ ವಿಚಾರಣೆ ಮಾಡುತ್ತಿರುವ ಕಾರಣಕ್ಕೆ ನಾವು ಪ್ರತಿಭಟಿಸುತ್ತಿದ್ದೇವೆ. ನಾವು ಈ ದೇಶದ ಕಾನೂನಿಗೆ ವಿರುದ್ಧವಾಗಿಲ್ಲ. ಕಾಂಗ್ರೆಸ್‌ ಪಕ್ಷ ಮಾತ್ರ ದೇಶದ ಸಂವಿಧಾನದ ಬಗ್ಗೆ ಗೌರವ ಇಟ್ಟಿರುವುದು. ಬಿಜೆಪಿ ಸರ್ವಾಧಿಕಾರ ಮತ್ತು ವರ್ಣಾಶ್ರಮದಲ್ಲಿ ನಂಬಿಕೆ ಇಟ್ಟವರು. ಇದಕ್ಕಾಗಿಯೇ ಆರ್.ಎಸ್.ಎಸ್‌ ನಾಯಕರು ಹಿಟ್ಲರ್‌ ಅನ್ನು ಹಾಡಿ ಹೊಗಳಿದ್ದನ್ನು ಚರಿತ್ರೆಯಲ್ಲಿ ನಾವು ಕಾಣಬಹುದು. ಇವರು ಒಬ್ಬ ನಾಯಕ, ಒಂದು ಸಿದ್ಧಾಂತ ಮತ್ತು ಒಂದು ಚಿಹ್ನೆಯಲ್ಲಿ ನಂಬಿಕೆಯಿಟ್ಟವರು. ಅಸಮಾನತೆ ಮೂಲಕ ಶೋಷಣೆ ಮಾಡುವ ಚಿಂತನೆ ಬಿಜೆಪಿಯದು. ಪ್ರಜಾಪ್ರಭುತ್ವ ಮತ್ತು ಸಮಾನತೆ ಇರುವ ಕಡೆ ಬಡವರು, ದಲಿತರು, ಅಲ್ಪಸಂಖ್ಯಾತರನ್ನು ಶೋಷಣೆ ಮಾಡಲು ಸಾಧ್ಯವಿಲ್ಲ, ಇದಕ್ಕಾಗಿಯೇ ಬಿಜೆಪಿಯವರು ಸಂವಿಧಾನವನ್ನು ವಿರೋಧಿಸುವುದು.

ಹೆಡ್ಗೆವಾರ್‌ ಅವರಿಂದ 1925ರಲ್ಲಿ ಸ್ಥಾಪನೆಯಾದ ಆರ್‌,ಎಸ್‌,ಎಸ್‌ ಯಾವತ್ತಾದರೂ ಒಂದು ದಿನ ಸ್ವಾತಂತ್ರ್ಯ ಹೋರಾದಲ್ಲಿ ಭಾಗವಹಿಸಿದ ಉದಾಹರಣೆ ಇದೆಯಾ? ಸಾವರ್ಕರ್‌ ಒಬ್ಬ ಮಹಾನ್‌ ರಾಷ್ಟ್ರಭಕ್ತ ಎಂದು ಹೇಳುತ್ತಾರೆ, ಸಾವರ್ಕರ್‌ ಬ್ರಿಟೀಷರಿಗೆ ಮುಚ್ಚಳಿಕೆ ಪತ್ರ ಬರೆದುಕೊಟ್ಟು ನನ್ನನ್ನು ಜೈಲಿನಿಂದ ಬಿಡುಗಡೆ ಮಾಡಿ ಎಂದು ಪರಿಪರಿಯಾಗಿ ಮನವಿ ಮಾಡಿದ್ದರು. ನರೇಂದ್ರ ಮೋದಿ ಅವರೇ ಇದು ನಿಮ್ಮ ಇತಿಹಾಸ. ಹೀಗಿರುವಾಗ ನಿಮಗೆ ನಾಚಿಕೆ, ಮಾನ ಮರ್ಯಾದಿ ಇದೆಯಾ? ಕಾಂಗ್ರೆಸ್‌ ನ ಅನ್ವರ್ಥನಾಮವೇ ತ್ಯಾಗ, ಬಲಿದಾನ ಮತ್ತು ಜೈಲುವಾಸ.

97 ವರ್ಷಗಳ ಆರ್‌,ಎಸ್‌,ಎಸ್‌ ಇತಿಹಾಸದಲ್ಲಿ ಒಂದು ಮೇಲ್ಜಾತಿಯವರನ್ನು ಬಿಟ್ಟರೆ ಬೇರೆ ಯಾರಾದರೂ ಸರಸಂಘಚಾಲಕರಾಗಿದ್ದಾರ? ಹಿಂದುಳಿದ ಜಾತಿಯ, ಅಲ್ಪಸಂಖ್ಯಾತ, ದಲಿತರನ್ನು ಈ ಉನ್ನತ ಹುದ್ದೆಗಳಲ್ಲಿ ಕೂರಿಸಿದ್ದೀರ? ಎಲ್ಲಿದೆ ಸಬ್‌ ಕ ಸಾಥ್‌ ಸಬ್‌ ಕ ವಿಕಾಸ್? ಬಿಜೆಪಿಯವರು ಜನರ ವಿಶ್ವಾಸ ದ್ರೋಹಿಗಳು. ಇಂಥವರು ದೇಶದ ಆಡಳಿತ ಚುಕ್ಕಾಣಿ ಹಿಡಿದು ಕೂತಿದ್ದಾರೆ. ನೆಹರು ಕುಟುಂಬ ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ, ಬಲಿದಾನ ಮಾಡಿದೆ?

ಸೋನಿಯಾ ಗಾಂಧಿ ಅವರು ಒಂದು ಪೈಸೆ ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ್ದಾರ? 90 ಕೋಟಿ ಹಣ ನೀಡಿದ್ದು ಕಾಂಗ್ರೆಸ್‌ ಪಕ್ಷ. ಆ ಶೇರ್‌ ಗಳು ಕನ್ವರ್ಟ್‌ ಆದಮೇಲೆ ಅದರಲ್ಲಿ ಒಂದು ರೂಪಾಯಿಯನ್ನೂ ಯಾರೂ ಮುಟ್ಟುವ ಹಾಗಿಲ್ಲ. ಹಣ ಕಾಂಗ್ರೆಸ್‌ ಪಕ್ಷದ್ದು, ತೆರಿಗೆ ಕಟ್ಟದಿದ್ದರೆ ಅಕ್ರಮ ವರ್ಗಾವಣೆ ಆಗುತ್ತೆ, ಎಲ್ಲಿ ಈ ರೀತಿ ಅಕ್ರಮ ಆಗಿದೆ? ಇದು ಸುಳ್ಳು ಕೇಸ್‌ ಅಲ್ಲವೇ? ಬಿಜೆಪಿಯವರು ಕಾಂಗ್ರೆಸ್‌ ಪಕ್ಷವನ್ನು ನಿರ್ನಾಮ ಮಾಡಲು ಹೊರಟಿದ್ದಾರೆ, ಇದಕ್ಕಾಗಿ ನಮ್ಮ ಪಕ್ಷದ ಎಲ್ಲರೂ ಜನರಿಗೆ ಸತ್ಯವನ್ನು ತಿಳಿಸುವ ಕೆಲಸ ಮಾಡಬೇಕು. ಪ್ರಜಾಪ್ರಭುತ್ವ ಉಳಿಸುವ ಕೆಲಸವನ್ನು ಕಾಂಗ್ರೆಸ್‌ ಮಾಡುತ್ತಿದೆ, ಇದನ್ನು ಬಿಜೆಪಿ ಅವರಿಗೆ ಸಹಿಸಲು ಆಗುತ್ತಿಲ್ಲ.

ಸಂಸದೀಯ ವ್ಯವಸ್ಥೆಯಲ್ಲಿ ಬಿಜೆಪಿಗೆ ನಂಬಿಕೆ ಇಲ್ಲ. ಹಿಟ್ಲರ್‌ ಹೇಗೆ ತನ್ನ ವಿರೋಧಿಗಳನ್ನು ಸಂಹಾರ ಮಾಡಿದ ಅದೇ ರೀತಿ ಕೆಳ ಸಮುದಾಯದ ಜನರನ್ನು ದಾಸ್ಯಕ್ಕೆ ತಳ್ಳಿ, ದೇಶದಲ್ಲಿ ದರ್ಬಾರ್‌ ಮಾಡಲು ಹೊರಟಿದ್ದಾರೆ. ರಾಜ್ಯ ಮಟ್ಟದಲ್ಲಿ ನಡೆಯುತ್ತಿರುವ ಈ ಚಳುವಳಿ ನಾಳೆಯಿಂದ ಜಿಲ್ಲಾ ಮಟ್ಟದಲ್ಲೂ ನಡೆಯಲಿದೆ, ಇದು ನಿರಂತರವಾಗಬೇಕು. ನಮ್ಮ ಹೋರಾಟವನ್ನು ಹತ್ತಿಕ್ಕುವ ಕೆಲಸವನ್ನು ಬಿಜೆಪಿ ಮಾಡುತ್ತದೆ, ಪ್ರಕರಣಗಳನ್ನು ದಾಖಲಿಸಿ, ಬಿಜೆಪಿ ಸೇರಿಕೋ ನಿನ್ನ ಮೇಲಿರುವ ಎಲ್ಲಾ ಕೇಸ್‌ ಗಳನ್ನು ವಜಾ ಮಾಡುತ್ತೇವೆ ಎಂಬ ಆಮಿಷವನ್ನು ಒಡ್ಡುತ್ತಾರೆ. ಇದೆಲ್ಲ ಸಹಜವಾಗಿ ನಡೆಯಲಿದೆ. ಡಿ.ಕೆ ಶಿವಕುಮಾರ್‌ ಅವರಿಗೆ ಈ ಅನುಭವ ಆಗಿದೆ. ಇದನ್ನೇ ಹಿಟ್ಲರ್‌ ತನ್ನ ಕಾಲದಲ್ಲಿ ಮಾಡುತ್ತಿದ್ದದ್ದು. ಹೀಗಾದರೆ ದೇಶ ಉಳಿಯುತ್ತದಾ? ಇದಕ್ಕಾಗಿಯಾ ಸ್ವಾತಂತ್ರ್ಯ ತಂದುಕೊಟ್ಟದ್ದು, ದೇಶಕ್ಕಾಗಿ ತ್ಯಾಗ ಬಲಿದಾನ ಮಾಡಿದ್ದು?

ಯಾರಾದರೂ ತ್ಯಾಗ ಬಲಿದಾನ ಮಾಡಿದವರಿದ್ದರೆ ಅದು ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿ ಅವರು. ಪ್ರಧಾನಿ ಪಟ್ಟವನ್ನು ಯಾರಾದರೂ ಬೇರೆಯವರಿಗೆ ಬಿಟ್ಟುಕೊಡ್ತಾರ? ಈಗಿನ ಕಾಲದಲ್ಲಿ ಪಂಚಾಯತಿಯ ಅಧ್ಯಕ್ಷ ಸ್ಥಾನವನ್ನೇ ಬಿಡಲ್ಲ. ಆದರೆ ಸೋನಿಯಾ ಗಾಂಧಿ ಅವರು ಮನೆಬಾಗಿಲಿಗೆ ಬಂದಿದ್ದ ಪ್ರಧಾನಿ ಸ್ಥಾನವನ್ನು ತ್ಯಾಗ ಮಾಡಿ, ದೇಶ ಕಂಡ ಶ್ರೇಷ್ಠ ಆರ್ಥಿಕ ತಜ್ಞ ಮನಮೋಹನ್‌ ಸಿಂಗ್‌ ಅವರನ್ನು ಪ್ರಧಾನಿ ಮಾಡಿದರು. ರಾಹುಲ್‌ ಗಾಂಧಿ ಅವರು ಮನಸು ಮಾಡಿದ್ದರೆ ಪ್ರಧಾನಿಯಾಗಲು ಸಾಧ್ಯವಾಗುತ್ತಿತ್ತು. ಮನಮೋಹನ್‌ ಸಿಂಗ್‌ ಅವರು ಬಿಟ್ಟುಕೊಡಲ್ಲ ಎನ್ನುತ್ತಿದ್ದರಾ? ತ್ಯಾಗ ಮಾಡುವುದು ಸುಲಭದ ಮಾತಲ್ಲ. ಎಲ್ಲರಿಂದಲೂ ಇದು ಸಾಧ್ಯವಿಲ್ಲ.

ದೇಶಕ್ಕಾಗಿ ಗಾಂಧೀಜಿ, ನೆಹರು, ಜಯಪ್ರಕಾಶ್, ರಾಹುಲ್‌ ಗಾಂಧಿ ಅವರು ತ್ಯಾಗ ಮಾಡಿದ್ದಾರೆ. ನರೇಂದ್ರ ಮೋದಿ ಅವರನ್ನು ಹೀಗೆಯೇ ಅಧಿಕಾರದಲ್ಲಿ ಮುಂದುವರೆಯಲು ಬಿಟ್ಟರೆ ಈ ದೇಶ ಮುಂದೊಂದು ದಿನ ಇಂದು ಶ್ರೀಲಂಕಾ ಎದುರಿಸುತ್ತಿರುವ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ಬಡವರು ತಿನ್ನುವ ಅಕ್ಕಿ, ಗೋದಿ, ಹಾಲು, ಮೊಸರು ಇವುಗಳ ಮೇಲೆ ತೆರಿಗೆ ಹಾಕಿದ್ದಾರೆ. ಸರ್ಕಾರ ಸಾಮಾನ್ಯ ಜನರ ರಕ್ತ ಹೀರುತ್ತಿದೆ. ಮನಮೋಹನ್‌ ಸಿಂಗ್‌ ಅವಧಿಯಲ್ಲಿ ಕಾರ್ಪೋರೇಟ್‌ ಬಾಡಿಗಳ ಮೇಲಿದ್ದ 30% ತೆರಿಗೆಯನ್ನು ಮೋದಿ ಅವರು ಪ್ರಧಾನಿಯಾದ ಮೇಲೆ 22% ಗೆ ಇಳಿಸಿದ್ದಾರೆ. ನೀವು ಯಾರ ಪರವಾಗಿದ್ದೀರ ಮೋದಿಜೀ? ಅಂಬಾನಿ, ಅದಾನಿ ಪರವಾಗಿಯೋ? ಜನರಿಗೆ ಸುಳ್ಳು ಹೇಳಿ, ಭ್ರಮಾ ಲೋಕವನ್ನು ಸೃಷ್ಟಿ ಮಾಡಿ ಅಧಿಕಾರಕ್ಕೆ ಬಂದು ಬಡವರ ರಕ್ತ ಹೀರುತ್ತಿದ್ದೀರಲ್ಲ ನಿಮಗೆ ನಾಚಿಕೆಯಾಗಲ್ವಾ?

ದೇಶದ ಸಾಮಾನ್ಯ ಜನರ ಪರವಾಗಿರುವ ಪಕ್ಷ ಎಂದರೆ ಕಾಂಗ್ರೆಸ್‌ ಮಾತ್ರ. ಬಡವರು, ಶೋಷಿತರಿಗೆ ನ್ಯಾಯ ಕೊಡಿಸಬೇಕಾದರೆ ನರೇಂದ್ರ ಮೋದಿ ಮತ್ತು ರಾಜ್ಯದ ಬಿಜೆಪಿ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಲೇಬೇಕು. 2008 ರಲ್ಲಿ ಯಡಿಯೂರಪ್ಪ ಅವರು ಆರಂಭ ಮಾಡಿದ ಆಪರೇಷನ್‌ ಕಮಲ ಇಂದು ಎಲ್ಲಾ ರಾಜ್ಯಗಳಿಗೆ ಹಬ್ಬಿದೆ. ಬಹುಮತ ಪಡೆದು ಗೆದ್ದು ಬಂದ ಶಾಸಕರನ್ನು ದುಡ್ಡು ಕೊಟ್ಟು ಖರೀದಿಸಿ, ಸರ್ಕಾರ ಬೀಳಿಸುವುದು ಪ್ರಜಾಪ್ರಭುತ್ವದ ಆಶಯವೇ?

ನಾವು ಅಧಿಕಾರಕ್ಕೆ ಬಂದ ಮೇಲೆ ಪಕ್ಷಾಂತರ ಕಾಯ್ದೆಯನ್ನು ಬಲಪಡಿಸುವ ಕೆಲಸವನ್ನು ಮಾಡುತ್ತೇವೆ ಮತ್ತು ಇಡಿ, ಐಟಿ ಮುಂತಾದ ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳದಂತೆ ತಿದ್ದುಪಡಿ ತರುತ್ತೇವೆ. ಇಲ್ಲದಿದ್ದರೆ ದೇಶದ ಪ್ರಜಾಪ್ರಭುತ್ವ ಮತ್ತು ಸಂವಿಧಾನ ಉಳಿಯಲ್ಲ. ಸಂವಿಧಾನವನ್ನೂ ತಿದ್ದುಪಡಿ ಮಾಡುತ್ತಿದ್ದರೇನೋ, ಆದರೆ ಸಂಸತ್ತಿನಿಂದ ಇದನ್ನು ಮಾಡಲು ಸಾಧ್ಯವಿಲ್ಲ ಎಂದು ಸುಮ್ಮನಿದ್ದಾರೆ. ಒಂದು ವೇಳೆ ಸಂವಿಧಾನದ ಮುಕ್ಕಾಲು ಭಾಗವನ್ನು ಬದಲಾವಣೆ ಮಾಡುವುದಾದರೆ ಅದು ಕೇವಲ ಸಂವಿಧಾನತ್ಮಕ ಸಮಿತಿಯಿಂದ ಮಾತ್ರ ಮಾಡಬೇಕು ಎಂದು ಸಂವಿಧಾನವೇ ಸ್ಪಷ್ಟವಾಗಿ ಹೇಳಿದೆ. ಇಲ್ಲದಿದ್ದರೆ ಇಷ್ಟೊತ್ತಿಗೆ ದೇಶದಲ್ಲಿ ಸರ್ವಾಧಿಕಾರ ಜಾರಿಗೆ ತಂದು, ನಮ್ಮನ್ನು ಗುಲಾಮರನ್ನಾಗಿ ಮಾಡಿರೋರು. ಸಂವಿಧಾನ ಉಳಿದರೆ ಮಾತ್ರ ದೇಶದ ಬಡವರು, ದಲಿತರು, ಅಲ್ಪಸಂಖ್ಯಾತರು ಉಳಿಯಲು ಸಾಧ್ಯ. ಹೀಗಾಗಿ ನಾವು ಹೋರಾಟದ ಮೂಲಕ ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತರುವ ಕೆಲಸ ಮಾಡಬೇಕು.

ನಮ್ಮ ಈ ಪ್ರತಿಭಟನೆ ನಿರಂತರವಾಗಿ ನಡೆಸಬೇಕು. ಈ ಮನುವಾದಿ ಜನರು ಸುಮ್ಮನಿರೋರಲ್ಲ, ದೇಶವನ್ನು ಹಾಳು ಮಾಡುವವರು. ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿ ಅವರನ್ನು ಮಾನಸಿಕವಾಗಿ ಕುಗ್ಗಿಸಿದ್ರೆ ಪಕ್ಷದ ಕಾರ್ಯಕರ್ತರು ಹೆದರುತ್ತಾರೆ ಎಂದು ಅಂದುಕೊಂಡಿದ್ದಾರೆ. ಇದೊಂದು ಸುಳ್ಳು ಪ್ರಕರಣ, ಹಾಗಾಗಿ ಇದರಿಂದ ಏನೂ ಮಾಡಲಾಗಲ್ಲ ಎಂಬುದು ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿ ಅವರಿಗೂ ಗೊತ್ತಿದೆ. ನಮ್ಮ ಕಾರ್ಯಕರ್ತರು ಯಾರೂ ಭಯ ಪಡಬೇಕಾದ ಅಗತ್ಯವಿಲ್ಲ. ಕಾಂಗ್ರೆಸ್‌ ಪಕ್ಷ ಬ್ರಿಟೀಷರ ಕೋವಿಗಳಿಗೆ ಧೈರ್ಯದಿಂದ ಎದೆಕೊಟ್ಟು ನಿಂತ ಪಕ್ಷ, ನಿಮ್ಮ ಈ ಷಡ್ಯಂತ್ರಗಳಿಗೆ ಹೆದರುವವರು ನಾವಲ್ಲ ಎಂಬುದನ್ನು ನರೇಂದ್ರ ಮೋದಿ ಅವರಿಗೆ ತಿಳಿಸಲು ಬಯಸುತ್ತೇನೆ ಎಂದರು.

Key words: ED –investigation-sonia gandhi- Former CM- Siddaramaiah