ಪೋಷಣ ಅಭಿಯಾನಕ್ಕೆ ರಾಜ್ಯದಲ್ಲಿ ಗ್ರಹಣ

ಬೆಂಗಳೂರು:ಜೂ-29: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ‘ಪೋಷಣ -ಅಭಿಯಾನ’ವನ್ನು ರಾಜ್ಯ ಸರ್ಕಾರ ಸಂಪೂರ್ಣ ನಿರ್ಲಕ್ಷಿಸಿದ್ದು, ಅನುದಾನವನ್ನೂ ಬಳಕೆ ಮಾಡಿಕೊಂಡಿಲ್ಲ!

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 2017ರಲ್ಲಿ ಯುನಿಸೆಫ್ ಸಹಯೋಗದಲ್ಲಿ ಯೋಜನೆ ಪರಿಚಯಿಸಿದೆ. ಇದಕ್ಕಾಗಿ ಕೇಂದ್ರದಿಂದ ಶೇ.60 ಹಾಗೂ ರಾಜ್ಯದಿಂದ ಶೇ.40 ಅನುದಾನ ಒದಗಿಸಲಾಗುತ್ತದೆ. ಕಳೆದ ವರ್ಷ ಸೆ.25ರಂದು ಯೋಜನೆಗೆ ರಾಜ್ಯದಲ್ಲಿ ಸಿಎಂ ಕುಮಾರಸ್ವಾಮಿ ಚಾಲನೆ ನೀಡಿದ್ದರು. ಯೋಜನೆಯಡಿ ರಾಜ್ಯದ 19 ಜಿಲ್ಲೆಗಳನ್ನು ಕೇಂದ್ರ ಆಯ್ಕೆ ಮಾಡಿತ್ತು. ಒಟ್ಟಾರೆ 132.21 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಶುಕ್ರವಾರ ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದ್ದು, ರಾಜ್ಯದ ಸಮ್ಮಿಶ್ರ ಸರ್ಕಾರ ಕಳೆದ ಎರಡು ವರ್ಷಗಳಲ್ಲಿ ನಯಾ ಪೈಸೆ ಹಣ ಬಳಕೆ ಮಾಡಿಲ್ಲ ಎಂದು ತಿಳಿಸಿದ್ದಾರೆ.

ಕಳೆದ ವರ್ಷ ಯೋಜನೆ ಚಾಲನೆ ಮುನ್ನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಜಯಮಾಲಾ ಸುದ್ದಿಗೋಷ್ಠಿ ನಡೆಸಿ, ಈಗಾಗಲೇ ವಿವಿಧ ಕಾರ್ಯಕ್ರಮ ನಡೆಯುತ್ತಿದೆ. ಯೋಜನೆ ಇನ್ನಷ್ಟು ಬಲಿಷ್ಠಗೊಳಿಸಲು ಎಲ್ಲ ಇಲಾಖೆಗಳನ್ನು ಒಂದೇ ಸೂರಿನಡಿ ತಂದು ಯಶಸ್ವಿಗೆ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಹೇಳಿದ್ದರು. ಈಗ ಕೇಂದ್ರದ ಅನುದಾನ ಬಳಸಿಕೊಂಡಿಲ್ಲ ಎಂದು ಉತ್ತರಿಸಿರುವುದು ಪ್ರಶ್ನಾರ್ಹವಾಗಿದೆ.

ಏನಿದು ಯೋಜನೆ?: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಗಳಲ್ಲಿ ಪ್ರತ್ಯೇಕವಾಗಿ ಕೈಗೊಂಡಿದ್ದ ಯೋಜನೆಗಳನ್ನು ಒಟ್ಟುಗೂಡಿಸಿ ಪೋಷಣ ಅಭಿಯಾನವು ಪೌಷ್ಟಿಕ ಕರ್ನಾಟಕ ಎಂಬ ಹೆಸರಿನಡಿ ಒಂದೇ ಯೋಜನೆಯಾಗಿ ರಾಜ್ಯದಲ್ಲಿ ಜಾರಿಯಾಗಿದೆ.

ಗರ್ಭಿಣಿಯರಿಗೆ ಸೀಮಂತ, ಮಾತೃತ್ವದ ಅರಿವು, ಮಕ್ಕಳ ಬೆಳವಣಿಗೆ ಜಾಗೃತಿ, ಮಕ್ಕಳಿಗೆ ತಿನಿಸುವ ಆಹಾರದ ಪ್ರಮಾಣ, ಬಳಕೆ ಹಾಗೂ ಪೌಷ್ಟಿಕಾಂಶದ ಆಹಾರಗಳ ಬಗ್ಗೆ ಅರಿವು ಮೂಡಿಸಲಿದ್ದೇವೆ. ಸ್ತ್ರೀಯರಿಗೆ ಹಾಗೂ ಮಕ್ಕಳಿಗೆ ಉತ್ತಮ ಆರೋಗ್ಯ ನೀಡಿ, ಸ್ವಾಸ್ಥ್ಯ ಸಮಾಜ ಕಟ್ಟುವುದು ಉದ್ದೇಶವಾಗಿದೆ. ಗರ್ಭಿಣಿಯರಿಗೆ ಪ್ರತಿನಿತ್ಯ ಪೌಷ್ಟಿಕ ಊಟ ನೀಡುವುದು ಈ ಯೋಜನೆಯ ಪ್ರಮುಖ ಕಾರ್ಯಕ್ರಮ.

ಗೋವಾದಲ್ಲೂ ಬಳಕೆಯಾಗಿಲ್ಲ

ಬಿಜೆಪಿ ಆಡಳಿತ ಇರುವ ಗೋವಾದಲ್ಲೂ ಯೋಜನೆಗೆ ಕೇಂದ್ರದ ಹಣ ವಿನಿಯೋಗವಾಗಿಲ್ಲ. ಗೋವಾ ರಾಜ್ಯಕ್ಕೆ ಎರಡು ವರ್ಷಗಳಲ್ಲಿ ಒಟ್ಟು 435.85 ಲಕ್ಷ ರೂ. ಬಿಡುಗಡೆಯಾಗಿದೆ. 151.72 ಕೋಟಿ ರೂ. ಅನುದಾನ ಪಡೆದಿರುವ ಒಡಿಶಾ ಮತ್ತು ಅತಿ ಹೆಚ್ಚು ಅನುದಾನ 248.40 ಕೋಟಿ ರೂ. ಪಡೆದಿರುವ ಪಶ್ಚಿಮ ಬಂಗಾಳ ರಾಜ್ಯದಲ್ಲಿ ಈ ಯೋಜನೆ ಇನ್ನೂ ಅನುಷ್ಠಾನಗೊಂಡಿಲ್ಲ.
ಕೃಪೆ:ವಿಜಯವಾಣಿ

ಪೋಷಣ ಅಭಿಯಾನಕ್ಕೆ ರಾಜ್ಯದಲ್ಲಿ ಗ್ರಹಣ
eclipse-in-the-state-for-poshan-abhiyaan