ಲಿಂಗಾಬುದ್ದಿ ಕೆರೆ ಸಂರಕ್ಷಣೆ : ಸೋಮವಾರ ಸಚಿವರ ಪತ್ರ, ಮಂಗಳವಾರ ಅಧಿಕಾರಿಗಳ ತಂಡ ಕೆರೆ ಹತ್ರ..!

 

ಮೈಸೂರು, ಮೇ 07, 2019 : (www.justkannada.in news) : ನಗರದ ಲಿಂಗಾಬುದ್ದಿ ಕೆರೆ ದುರಸ್ತಿ ಹಾಗೂ ಸಂರಕ್ಷಣೆ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳು ಮಂಗಳವಾರ ಸ್ಥಳ ಪರಿಶೀಲನೆ ನಡೆಸಿದರು.

ಮಳೆ ಅಭಾವ ಹಾಗೂ ಬಿಸಿಲಿನ ತಾಪದಿಂದ ಲಿಂಗಬುದ್ದಿ ಕೆರೆ ಸಂಪೂರ್ಣ ಬತ್ತಿ ಹೋಗಿದೆ. ಪರಿಣಾಮ ಕೆರೆ ಹಾಗೂ ಸುತ್ತಮುತ್ತಲಿನ ವಾತಾವರಣದಲ್ಲಿದ್ದ ನೂರಾರು ಜೀವರಾಶಿಗಳು ಆಶ್ರಯ ತಾಣವಿಲ್ಲದೆ ಪರಿತಪಿಸುವಂತಾಗಿದೆ. ಈ ಹಿನ್ನೆಲೆಯಲ್ಲಿ ಸುತ್ತಮುತ್ತಲ ಪ್ರದೇಶಗಳ ನೈಸರ್ಗಿಕ ಸಮತೋಲನ ಕಾಪಾಡುವ ಮೂಲಕ ಕೆರೆಯ ಅಂತರ್ಜಲ ಮಟ್ಟ ಹೆಚ್ಚಿಸುವತ್ತ ಗಮನ ಹರಿಸುವ ಸಲುವಾಗಿ ಅರಣ್ಯ ಇಲಾಖೆ ಅಧಿಕಾರಿಗಳ ಈ ಭೇಟಿ ಮಹತ್ವ ಪಡೆದುಕೊಂಡಿದೆ.

ಡಿಸಿಎಫ್ ಪ್ರಶಾಂತ್ ಕುಮಾರ್ ನೇತೃತ್ವದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದರು. ಈ ವೇಳೆ ಸ್ಥಳದಲ್ಲಿದ್ದ ಮೈಸೂರು ವಿಶ್ವವಿದ್ಯಾನಿಲಯ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ನಾಣಯ್ಯ ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ಲಿಂಬಾಬುದ್ದಿ ಕೆರೆ ತುಂಬಿತ್ತು. ಆದರೆ ಕಳೆದ ವರ್ಷ ಕೆರೆ ನೀರನ್ನು ಹೊರ ಹರಿಸುವ ಸಲುವಾಗಿ ಏರಿಗಳನ್ನು ಹೊಡೆದು ಹಾಕಿದ ಪರಿಣಾಮ ಈ ವರ್ಷ ಕೆರೆ ಬತ್ತಿದೆ ಎಂದು ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದರು. ಮುಂದುವರೆದು, ಕೂಡಲೇ ಈ ಲೋಪ ಸರಿಪಡಿಸಬೇಕು. ಜತೆಗೆ ಇದೇ ಅವಕಾಶ ಬಳಸಿಕೊಂಡು ಮಳೆಗಾಲಕ್ಕೂ ಮುನ್ನವೇ ಕೆರೆ ಹೂಳೆತ್ತಬೇಕು. ಇದರಿಂದ ಕೆರೆಯಲ್ಲಿ ನೀರು ಸಂಗ್ರಹಕ್ಕೆ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಮುಂದೆ ಇದನ್ನು ಪ್ರವಾಸಿ ತಾಣವನ್ನಾಗಿಯೂ ಅಭಿವೃದ್ಧಿ ಪಡಿಸಬಹುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸಲಹೆ ನೀಡಿದರು.

ನಿವಾಸಿಗಳ ಸಲಹೆ, ಸೂಚನೆ ಆಲಿಸಿದ ಡಿಸಿಎಫ್ ಪ್ರಶಾಂತ್ ಕುಮಾರ್, ಕೆರೆ ಹೂಳೆತ್ತುವುದು ಸೇರಿದಂತೆ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಗೊಳ್ಳುವ ಸಂಬಂಧ ಜಿಲ್ಲಾಡಳಿತದ ಜತೆ ಚರ್ಚೆ ನಡೆಸಿ ಅಂತಿಮ ತೀರ್ಮಾನಕ್ಕೆ ಬರಲಾಗುವುದು ಎಂದು ಆಶ್ವಾಸನೆ ನೀಡಿದರು.
ಈ ವೇಳೆ ಬಡಾವಣೆ ನಿವಾಸಿಗಳ ಸಂಘದ ಡಾ. ನಾರಾಯಣ ಹೆಗ್ಡೆ, ಡಾ.ಗೋವಿಂದರಾಜು, ಶ್ರೀನಿವಾಸ್, ಕಿರಣ್ ದೇವೇಗೌಡ, ದಿನೇಶ್ ಹಾಗೂ ಬಂಗಾರಪ್ಪ ಹಾಜರಿದ್ದರು.

ಪತ್ರಕ್ಕೆ ಸ್ಪಂಧಿಸಿದ ಸಚಿವ ಜಿಟಿಡಿ :

ಇದಕ್ಕೂ ಮೊದಲು ಕೆರೆ ಸಂರಕ್ಷಣೆಗೆ ಸಂಬಂಧಿಸಿದಂತೆ ಅಗತ್ಯ ಕ್ರಮ ಜರುಗಿಸುವಂತೆ ಕೋರಿ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅವರಿಗೆ ಮೈಸೂರು ವಿಶ್ವವಿದ್ಯಾನಿಲಯ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ನಾಣಯ್ಯ ಪತ್ರ ಬರೆದು ಮನವಿ ಮಾಡಿದ್ದರು.

ಈ ಮನವಿಗೆ ಸ್ಪಂಧಿಸಿದ ಸಚಿವ ಜಿ.ಟಿ.ದೇವೇಗೌಡ, ಈ ಕೂಡಲೇ ಬಡಾವಣೆ ನಿವಾಸಿಗಳ ಮನವಿ ಪರಿಗಣಿಸಿ ಕೆರೆ ಅಭಿವೃದ್ದಿಗೊಳಿಸಬೇಕು ಜತೆಗೆ ಈ ಬಗ್ಗೆ ಕೈಗೊಂಡ ಕ್ರಮದ ಬಗ್ಗೆ ನನ್ನ ಕಚೇರಿಗೆ ಮತ್ತು ಅರ್ಜಿದಾರರಿಗೆ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಇಂದು ಡಿಸಿಎಫ್ ಪ್ರಶಾಂತ್ ಕುಮಾರ್ ನೇತೃತ್ವದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದರು.

Today morning the dryed up LINGABUDI LAKE near LINGABUDI PALLYA was inspected by D C F of Mysore Mr.PRASHANTKUMAR