ಡ್ಯಾಂಗಳಿಂದ ಹಳ್ಳಿ-ಹಳ್ಳಿಗಳಿಗೂ ಕುಡಿವ ನೀರು

kannada t-shirts

ಬೆಂಗಳೂರು:ಮೇ-18: ಬರಗಾಲದಲ್ಲೂ ಕುಡಿಯುವ ನೀರಿಗೆ ತೊಂದರೆಯಾಗದಂತೆ ಶಾಶ್ವತ ಪರಿಹಾರ ಕಲ್ಪಿಸಲು ಜಲಾಶಯಗಳಿಂದ ನೇರವಾಗಿ ಪ್ರತ್ಯೇಕ ಪೈಪ್‌ಲೈನ್‌ ಮೂಲಕ ಗ್ರಾಮ ಹಾಗೂ ನಗರ -ಪಟ್ಟಣಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವ ಯೋಜನೆ ರೂಪಿಸಲು ರಾಜ್ಯ ಸರ್ಕಾರ ಮುಂದಾಗಿದೆ.

ಕುಡಿಯಲು ಪೂರೈಕೆ ಮಾಡಲು ಜಲಾಶಯಗಳಿಂದ ಕಾಲುವೆಗಳಿಗೆ ಹರಿಸುವ ನೀರು ವ್ಯವಸಾಯ ಸೇರಿ ಇತರೆ ಬಳಕೆ ಹಾಗೂ ಅಕ್ರಮವಾಗಿ ನೀರು ಪಂಪ್‌ ಮಾಡಿ ಪಡೆಯುವುದು ತಪ್ಪಿಸುವುದು. ಕುಡಿಯುವ ನೀರಿಗೆ ಬೇಸಿಗೆಯಲ್ಲೂ ಹಾಹಾಕಾರ ಉಂಟಾ ಗದಂತೆ ನೋಡಿಕೊಳ್ಳುವುದು ಇದರ ಉದ್ದೇಶ.

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ‘ಜಲಧಾರೆ’ ಬಹುಗ್ರಾಮ ಕುಡಿಯುವ ನೀರು ಪೂರೈಕೆ ಯೋಜನೆಗೆ ಜಲಾಶಯಗಳಿಂದ ಪ್ರತ್ಯೇಕ ಕೊಳವೆ ಮೂಲಕ ಗ್ರಾಮಗಳಿಗೆ ಹರಿಸುವುದು. ಒಂದೊಮ್ಮೆ ನಗರ-ಪಟ್ಟಣಗಳಿಗೆ ನೇರವಾಗಿ ಪೈಪ್‌ಲೈನ್‌ ಮೂಲಕ ಸರಬರಾಜು ಮಾಡಲು ಸಾಧ್ಯವಾಗದೆ ಇದ್ದರೆ ಕೆರೆ ಹಾಗೂ ಓವರ್‌ಹೆಡ್‌ ಟ್ಯಾಂಕ್‌, ಜಲ ಸಂಗ್ರಹಾಗಾರಗಳಿಗೆ ಜಲಾಶಯಗಳಿಂದ ನೇರವಾಗಿ ಪೈಪ್‌ಲೈನ್‌ನಲ್ಲಿ ನೀರು ಪೂರೈಕೆ ಮಾಡುವುದು ಯೋಜನೆಯಲ್ಲಿ ಸೇರಿದೆ.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಇತ್ತೀಚೆಗೆ ನಡೆಸಿದ ಅಧಿಕಾರಿಗಳ ಸಭೆಯಲ್ಲಿ ರಾಜ್ಯದಲ್ಲಿ ಶಾಶ್ವತವಾಗಿ ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಜಲಾಶಯಗಳಿಂದ ನೇರವಾಗಿ ಪ್ರತ್ಯೇಕ ಪೈಪ್‌ಲೈನ್‌ ಮೂಲಕ ನೀರು ಪೂರೈಕೆ ಮಾಡುವ ಸಮಗ್ರ ಯೋಜನೆ ರೂಪಿಸಲು ಸೂಚನೆ ನೀಡಿದ್ದಾರೆ.

ಅದರಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌, ನಗರಾಭಿವೃದ್ಧಿ, ಪೌರಾಡಳಿತ, ಗ್ರಾಮೀಣ ಹಾಗೂ ನಗರ ನೀರು ಸರಬರಾಜು ಮಂಡಳಿಗಳು ಜತೆಗೂಡಿ ಕ್ರಿಯಾ ಯೋಜನೆ ಸಿದ್ಧಪಡಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದು ಜುಲೈ ಅಂತ್ಯದ ವೇಳೆಗೆ ನೀಲನಕ್ಷೆ ಸಿದ್ಧಗೊಳ್ಳಲಿದೆ.

ಜಲಧಾರೆ ಯೋಜನೆಯಡಿ ಬಹುಗ್ರಾಮ ಕುಡಿಯುವ ನೀರು ಪೂರೈಕೆ ಯೋಜನೆಯಡಿಯೇ ಪೂರಕವಾಗಿ ಕ್ರಿಯಾ ಯೋಜನೆ ರೂಪಿಸಲು ತೀರ್ಮಾನಿಸಲಾಗಿದೆ. ಆಗಸ್ಟ್‌ ಅಥವಾ ಸೆಪ್ಟೆಂಬರ್‌ನಲ್ಲಿ ಯೋಜನೆಗೆ ಸ್ಪಷ್ಟ ರೂಪ ಸಿಗಲಿದ್ದು ಆ ನಂತರ ಮುಂದಿನ ಪ್ರಕ್ರಿಯೆಗಳಿಗೆ ವೇಗ ಸಿಗಲಿದೆ ಎಂದು ಜಲಸಂಪನ್ಮೂಲ ಇಲಾಖೆ ಮೂಲಗಳು ತಿಳಿಸಿವೆ.ಬಹುತೇಕ ಈಗಾಗಲೇ ನೀರು ಹರಿಸಲು ಇರುವ ಕಾಲುವೆಗಳ ಪಕ್ಕದಲ್ಲೇ ಪೈಪ್‌ಲೈನ್‌ ಅಳವಡಿಕೆ ಮಾಡುವ ಸಾಧ್ಯತೆಯಿದೆ.

ಕೃಷ್ಣಾ , ಕಾವೇರಿ ಕೊಳ್ಳ ಸೇರಿದಂತೆ ರಾಜ್ಯದಲ್ಲಿರುವ ಎಲ್ಲ ಜಲಾಶಯಗಳಲ್ಲಿನ ನೀರಿನ ಸಂಗ್ರಹ ಸಾಮರ್ಥ್ಯ, ಪ್ರತ್ಯೇಕ ಪೈಪ್‌ಲೈನ್‌ ಮೂಲಕ ನೀರು ಸರಬರಾಜು ಮಾಡಲು ಅಗತ್ಯವಾದರೆ ಜಮೀನು ಸ್ವಾಧೀನ ಮತ್ತಿತರ ಅಂಶಗಳ ಬಗ್ಗೆಯೂ ತಜ್ಞರಿಂದ ವರದಿ ಪಡೆಯಲು ಸಹ ಸೂಚನೆ ನೀಡಲಾಗಿದೆ ಎಂದು ತಿಳಿದು ಬಂದಿದೆ.

ಸೌರ ವಿದ್ಯುತ್‌ ಉತ್ಪಾದನೆ: ಜಲಾಶಯಗಳಿಂದ ನೀರು ಹರಿಯುವ ಕಾಲುವೆಗಳ ಮೇಲೆ ಸೌರವಿದ್ಯುತ್‌ ಉತ್ಪಾದನೆ ಮಾಡುವ ಯೋಜನೆಗೂ ಸದ್ಯದಲ್ಲೇ ಚಾಲನೆ ಸಿಗಲಿದೆ. ಕೃಷ್ಣಾ ಹಾಗೂ ಕಾವೇರಿ ಕೊಳ್ಳದ ಭಾಗದಲ್ಲಿ ಇದಕ್ಕಾಗಿ ಯೋಜನೆ ರೂಪಿಸಲಾಗಿದೆ. ಕಾಲುವೆಗಳ ಮೇಲೆ ಸೌರ ವಿದ್ಯುತ್‌ ಘಟಕ ಸ್ಥಾಪನೆ ಮಾಡುವುದರಿಂದ ಅಕ್ರಮವಾಗಿ ಕಾಲುವೆಗಳಿಂದ ನೀರು ಪಡೆಯುವುದನ್ನು ತಡೆಗಟ್ಟಬಹುದು . ಜಲಾಶಯಗಳಿಂದ ಮೋಟಾರ್‌ ಪಂಪ್‌ ಮೂಲಕ ಆಕ್ರಮವಾಗಿ ನೀರು ಬಳಕೆ ಮಾಡುತ್ತಿರುವುದು ತಡೆಯುವುದೇ ದೊಡ್ಡ ಸವಾಲು ಆಗಿದೆ. ರೈತರ ವಿರುದ್ಧ ಪ್ರಕರಣ ದಾಖಲಿಸುವಂತೆಯೂ ಇಲ್ಲ, ಸುಮ್ಮನಿರುವಂತೆಯೂ ಇಲ್ಲ. ಒಂದು ಟಿಎಂಸಿ ನೀರು ಜಲಾಶಯದಿಂದ ಹೊರಗೆ ಬಿಟ್ಟರೆ ಅದು ತಲುಪಬೇಕಾದ ಸ್ಥಳಕ್ಕೆ ಹೋಗುವ ವೇಳೆಗೆ ಅರ್ಧ ಟಿಎಂಸಿಗೆ ಇಳಿದಿರುತ್ತದೆ. ಹೀಗಾಗಿ, ನಿತ್ಯ ಸಂಘರ್ಷ ಉಂಟಾಗುತ್ತಿದೆ ಎಂದು ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

ಜೂನ್‌ ಅಂತ್ಯದವರೆಗೂ ಸಮಸ್ಯೆಯಾಗದು
ರಾಜ್ಯದಲ್ಲಿ ಪ್ರಸ್ತುತ ಜಲಾಶಯಗಳಲ್ಲಿರುವ ನೀರು ಜೂನ್‌ ಅಂತ್ಯದವರೆಗೂ ಕುಡಿಯಲು ಪೂರೈಕೆ ಮಾಡಲು ತೊಂದರೆಯಿಲ್ಲ. ಸೌರ ವಿದ್ಯುತ್‌ ನಿರೀಕ್ಷೆಗಿಂತ ಹೆಚ್ಚಾಗಿ ಲಭ್ಯವಾಗುತ್ತಿರುವುದರಿಂದ ಜಲವಿದ್ಯುತ್‌ ಉತ್ಪಾದನೆಯ ಪ್ರಮಾಣವೂ ಕಡಿಮೆಯಾಗಿರುವುದರಿಂದ ಜಲಾಶಯಗಳಲ್ಲಿ ನೀರಿನ ಲಭ್ಯತೆ ಇದೆ. ತೀರಾ ಅನಿವಾರ್ಯ ಎಂದಾದರೆ ಜುಲೈ 15 ರವರೆಗೂ ಯಾವುದೇ ಸಮಸ್ಯೆ ಎದುರಾಗದು ಎಂದು ಜಲಸಂಪನ್ಮೂಲ ಇಲಾಖೆ ಮೂಲಗಳು ತಿಳಿಸಿವೆ.
ಕೃಪೆ:ಉದಯವಾಣಿ

ಡ್ಯಾಂಗಳಿಂದ ಹಳ್ಳಿ-ಹಳ್ಳಿಗಳಿಗೂ ಕುಡಿವ ನೀರು

drinking-water-from-villages-to-dam

website developers in mysore