ಸುಧಾಕರ ಹೊಸಳ್ಳಿ ವಿರುದ್ಧ ಸಿಎಂಗೆ ಡಾ.ಕೆ.ಮಹದೇವ್ ದೂರು

ಮೈಸೂರು, ಮಾರ್ಚ್ 04, 2023 (www.justkannada.in): ಸುಧಾಕರ ಹೊಸಳ್ಳಿ ಅಸಲಿ ವಿಷಯ  ಮುಚ್ಚಿಟ್ಟು ಕರ್ನಾಟಕ ಸರಕಾರದ ಸಮಾಜ ಕಲ್ಯಾಣ ಇಲಾಖೆಯಡಿ ಬರುವ ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ(KTDCL)ದ ಅಧಿಕಾರಿಯಾಗಿ ನಿಯೋಜನೆ ಮೇಲೆ ವರದಿ ಮಾಡಿಕೊಳ್ಳುತ್ತಿದ್ದಾರೆ. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮೈಸೂರು ವಿವಿ ಮಾಜಿ ಸಿಂಡಿಕೇಟ್ ಸದಸ್ಯ ಡಾ.ಕೆ.ಮಹದೇವ್ ದೂರು ಸಲ್ಲಿಸಿದ್ದಾರೆ.

ಡಾ.ಸುಧಾಕರ್ ಹೊಸಹಳ್ಳಿ ರಾಜ್ಯಪಾಲರ ಆದೇಶದಂತೆ ಸೇವೆಯಿಂದ ವಜಾಗಿಳಿಸಬೇಕಾದ ತಾತ್ಕಾಲಿಕ ನೌಕರ. ಈತನನ್ನು ಸರ್ಕಾರದ ಉನ್ನತ ಹುದ್ದೆಗೆ ನಿಯೋಜನೆಗೆ ಸಹಕರಿಸುತ್ತಿರುವ ಮೈಸೂರು ಕರಾಮುವಿಯ  ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕಿದೆ ಎಂದು ಸಿಎಂ ಹಾಗೂ ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ.ರಾಜೀವ್ ಅವರಿಗೆ  ಡಾ.ಕೆ.ಮಹದೇವ್ ದೂರು ಸಲ್ಲಿಸಿದ್ದಾರೆ.

ಮೈಸೂರಿನ ಪತ್ರಕರ್ತರ ಸಂಘದಲ್ಲಿ ಗೂಂಡಾಗಿರಿ ಮಾಡಿದ್ದ ಆರೋಪದಡಿ ಕೃಷ್ಣರಾಜ ಠಾಣೆಯಲ್ಲಿ ಸುಧಾಕರ ಹೊಸಳ್ಳಿ ವಿರುದ್ಧ ಪ್ರಕರಣ ದಾಖಲಾಗಿದೆ. ಸೇವೆಯಿಂದ ವಜಾಗೊಳ್ಳಬೇಕಾದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ  ಪ್ರಾದೇಶಿಕ ಕೇಂದ್ರಗಳ ತಾತ್ಕಾಲಿಕ ಗುತ್ತಿಗೆ ಆಧಾರಿತ   ನಿರ್ದೇಶಕರಲ್ಲಿ ಈತನೂ ಒಬ್ಬ. ಅಸಲಿ ವಿಷಯ ಮುಚ್ಚಿಟ್ಟು ಇದೀಗ ಹೊಸ ಹುದ್ದೆ ಪಡೆದಿದ್ದಾರೆ ಎಂದು ದೂರಿನಲ್ಲಿ ತಿಳಿಸಿ್ದ್ದಾರೆ.

ಸರಕಾರಕ್ಕೆ ಅಸಲಿ ವಿಷಯ  ಮುಚ್ಚಿಟ್ಟು ನಿಯೋಜನೆ ಮೇಲೆ ಸರ್ಕಾರದ ಹುದ್ದೆ ಗಿಟ್ಟಿಸಿಕೊಳ್ಳಲಾಗಿದೆ. ಸೇವೆಯಿಂದ ವಜಾಗಿಳಿಸಬೇಕಾದ ತಾತ್ಕಾಲಿಕ ನೌಕರನನ್ನು ಸರ್ಕಾರದ ಉನ್ನತ ಹುದ್ದೆಗೆ ನಿಯೋಜನೆಗೆ ಸಹಕರಿಸುತ್ತಿರುವ ಮೈಸೂರು ಕರಾಮುವಿಯ   ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕಿದೆ ಎಂದು ಮನವಿ ಮಾಡಿದ್ದಾರೆ.