ತಾಲ್ಲೂಕು ಕೇಂದ್ರಗಳಲ್ಲಿ ಕ್ರೀಡಾಂಗಣಕ್ಕೆ ನಿವೇಶನ ಗುರುತಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರುಗಳಿಗೆ ಸಚಿವ ಡಾ. ನಾರಾಯಣಗೌಡ ಮನವಿ.

kannada t-shirts

ಬೆಂಗಳೂರು ಜೂನ್. 18,2021(www.justkannada.in): ಪ್ರತಿಯೊಂದು ತಾಲ್ಲೂಕು ಕೇಂದ್ರಗಳಲ್ಲೂ ವ್ಯವಸ್ಥಿತವಾದ ಕ್ರೀಡಾಂಗಣ ಇರಬೇಕು. ಗ್ರಾಮೀಣ ಭಾಗದ ಕ್ರೀಡಾ ಪ್ರತಿಭೆ ಬೆಳಕಿಗೆ ಬರಲು ಇದು ನೆರವಾಗುತ್ತದೆ. ಆದರೆ ರಾಜ್ಯದ 68 ತಾಲ್ಲೂಕು ಕೇಂದ್ರಗಳಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ನಿವೇಶನದ ಕೊರತೆ ಇದೆ. ಆದ್ದರಿಂದ ತಕ್ಷಣವೇ ಕ್ರೀಡಾಂಗಣ ನಿರ್ಮಾಣಕ್ಕೆ ನಿವೇಶನಗಳನ್ನು ಗುರುತಿಸುವಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ. ನಾರಾಯಣಗೌಡ ಎಲ್ಲಾ ಜಿಲ್ಲಾ ಉಸ್ತುವಾರಿ ಸಚಿವರಿಗೆ ಪತ್ರ ಬರೆದಿದ್ದಾರೆ.jk

ನಿಮ್ಮ ಜಿಲ್ಲೆಯ ಕೆಲ ತಾಲ್ಲೂಕು ಕೇಂದ್ರಗಳಲ್ಲಿ ನಿವೇಶನದ ಕೊರತೆಯಿಂದ ಕ್ರೀಡಾಂಗಣ ಇಲ್ಲ. ಹಾಗಾಗಿ ಕನಿಷ್ಟ 6 ರಿಂದ 8 ಎಕರೆ ಜಾಗವನ್ನು ಗುರುತಿಸಿ ಮಾಹಿತಿ ನೀಡುವಂತೆ ಜಿಲ್ಲಾ ಉಸ್ತುವಾರಿಗಳಲ್ಲಿ ಸಚಿವ ಡಾ. ನಾರಾಯಣಗೌಡ ಪತ್ರ ಮುಖೇನ ಮನವಿ ಮಾಡಿದ್ದಾರೆ. ಗುರುತಿಸಿದ ಜಾಗದಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಕಾನೂನು ತೊಡಕಿದ್ದರು ಅಥವಾ ಬೇರೆ ಇಲಾಖೆಯ ಪರವಾನಿಗೆ ಅವಶ್ಯವಿದ್ದರು ಆಯಾ ಜಿಲ್ಲಾಧಿಕಾರಿಗಳ ಮೂಲಕ ಸಮಸ್ಯೆ ಪರಿಹರಿಸಿ ಕೊಡುವಂತೆಯು ಮನವಿ ಮಾಡಲಾಗಿದೆ. ಕ್ರೀಡೆಗೆ ತಳಮಟ್ಟದಿಂದಲೇ ಮೂಲ ಸೌಕರ್ಯ ನೀಡಬೇಕು.

ಬೆಂಗಳೂರಿನಲ್ಲಿ ಕಂಠೀರವ ಕ್ರೀಡಾಂಗಣವನ್ನು ಹೈಟೆಕ್ ಮಾಡಲಾಗುತ್ತಿದೆ. ಜಿಲ್ಲಾ ಕೇಂದ್ರಗಳಲ್ಲಿ ಇರುವ ಕ್ರೀಡಾಂಗಣವನ್ನೂ ಉನ್ನತೀಕರಿಸಲಾಗುತ್ತಿದೆ. ಪ್ರತಿಜಿಲ್ಲೆಯಲ್ಲಿ ಖೇಲೋ ಇಂಡಿಯಾ ಕೇಂದ್ರ ತೆರೆಯಲಾಗುತ್ತಿದೆ. ಆದರೆ ಗ್ರಾಮೀಣ ಪ್ರದೇಶದ ಕ್ರೀಡಾಪಟುಗಳಿಗೆ ಸುಸಜ್ಜಿತ ಕ್ರೀಡಾಂಗಣದ ವ್ಯವಸ್ಥೆಯೇ ಇಲ್ಲದಿದ್ದರೆ, ರಾಜ್ಯ ಮಟ್ಟದಲ್ಲಿ ಹೈಟೆಕ್ ಕ್ರೀಡಾಂಗಣ ನಿರ್ಮಿಸಿದರೂ ಪ್ರಯೋಜನವಿಲ್ಲ. ಹಾಗಾಗಿ ತಳಮಟ್ಟದಿಂದಲೇ ಕ್ರೀಡೆಗೆ ಕ್ರೀಡಾಪಟುಗಳಿಗೆ ನೀಡಬೇಕಾದ ಎಲ್ಲ ಸೌಲಭ್ಯವನ್ನು ಒದಗಿರುವ ಪ್ರಯತ್ನವನ್ನು ಮಾಡಲಾಗುತ್ತಿದೆ ಎಂದು ಸಚಿವ ನಾರಾಯಣಗೌಡ ತಿಳಿಸಿದ್ದಾರೆ.

ಯಾವ ಜಿಲ್ಲೆಯ ಎಷ್ಟು ತಾಲ್ಲೂಕುಗಳಲ್ಲಿ ಇಲ್ಲ ಕ್ರೀಡಾಂಗಣ

ರಾಜ್ಯದ 27 ಜಿಲ್ಲೆಗಳ 68 ತಾಲ್ಲೂಕು ಕೇಂದ್ರದಲ್ಲಿ ಇಲ್ಲ ಕ್ರೀಡಾಂಗಣ. ವಿಜಯಪುರ ಹಾಗೂ ಬೆಳಗಾವಿ ಜಿಲ್ಲೆಯ 6 ತಾಲ್ಲೂಕು ಕೇಂದ್ರಗಳಲ್ಲಿ ಕ್ರೀಡಾಂಗಣಕ್ಕೆ ನಿವೇಶನವಿಲ್ಲ. ಬಾಗಲಕೋಟೆ, ಚಿಕ್ಕಮಗಳೂರು, ಬೀದರ್‌ ಹಾಗೂ ಕಲಬುರಗಿಯ ತಲಾ 4 ತಾಲ್ಲೂಕುಗಳಲ್ಲಿ ಕ್ರೀಡಾಂಗಣಕ್ಕೆ ನಿವೇಶನ ಬೇಕಾಗಿದೆ. ದಕ್ಷಿಣ ಕನ್ನಡ, ವಿಜಯನಗರ, ಧಾರವಾಡ, ಕೊಪ್ಪಳ, ರಾಯಚೂರು ಹಾಗೂ ಉತ್ತರ ಕನ್ನಡ ಜಿಲ್ಲೆಯ ತಲಾ 3 ತಾಲ್ಲೂಕುಗಳಲ್ಲಿ ಮತ್ತು ಬಳ್ಳಾರಿ, ಚಿಕ್ಕಬಳ್ಳಾಪುರ, ಗದಗ, ಕೊಡಗು, ಮೈಸೂರಿನ ತಲಾ ಎರಡು ತಾಲ್ಲೂಕು ಕೇಂದ್ರಗಳಲ್ಲಿ ಕ್ರೀಡಾಂಗಣಕ್ಕಾಗಿ ನಿವೇಶನ ಅಗತ್ಯವಿದೆ. ಬೆಂಗಳೂರು, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ, ಹಾವೇರಿ, ಕೋಲಾರ, ರಾಮನಗರ, ಶಿವಮೊಗ್ಗ ಹಾಗೂ ತುಮಕೂರು ಜಿಲ್ಲೆಯ ಒಂದೊಂದು ತಾಲ್ಲೂಕು ಕೇಂದ್ರಗಳಲ್ಲಿ, ನಿವೇಶನ ಇಲ್ಲದ ಕಾರಣ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣವಾಗಿಲ್ಲ.

ಕ್ರೀಡಾಂಗಣಗಳ ಅಭಿವೃದ್ಧಿಗೆ ಕೇಂದ್ರಕ್ಕೆ ರೂ. 238 ಕೋಟಿ ಪ್ರಸ್ತಾವನೆ

ಖೇಲೊ ಇಂಡಿಯಾ ಅಡಿಯಲ್ಲಿ ರಾಜ್ಯದಲ್ಲಿ ಹಾಲಿ ಇರುವ  ಕ್ರೀಡಾಂಗಣಗಳ ಅಭಿವೃದ್ಧಿಗಾಗಿ ರೂ. 238 ಕೋಟಿ ಪ್ರಸ್ತಾವನೆಯನ್ನು ಈಗಾಗಲೆ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಕೇಂದ್ರದಿಂದ ಹಣ ಮಂಜೂರಾದ ತಕ್ಷಣ ಕ್ರೀಡಾಂಗಣಗಳ ಅಭಿವೃದ್ಧಿ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುವುದು. ಅಲ್ಲದೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರಿಗು ಸಹ  ಪ್ರಸಕ್ತ ಸಾಲಿನಲ್ಲಿ ಕ್ರೀಡಾಂಗಣಗಳ ಅಭಿವೃದ್ಧಿಗೆ ಹೆಚ್ಚುವರಿಯಾ ರೂ. 80 ಕೋಟಿ ಅನುದಾನ ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ‌ ಶೀಘ್ರದಲ್ಲೆ ಅನುದಾನ ಮಂಜೂರಾಗಲಿದ್ದು, ರಾಜ್ಯದಾದ್ಯಂತ ಕ್ರೀಡಾಂಗಣಗಳ ಅಭಿವೃದ್ಧಿ ಕಾರ್ಯ ಮಾಡಲು ತೀರ್ಮಾನಿಸಲಾಗಿದೆ.

ಉಸ್ತುವಾರಿ ಸಚಿವರಿಗೆ ಜವಾಬ್ದಾರಿ

ಕ್ರೀಡಾಂಗಣ ನಿರ್ಮಾಣಕ್ಕೆ ಕ್ರೀಡಾ ಇಲಾಖೆ ಸಿದ್ಧವಾಗಿದೆ. ಅಗತ್ಯವಿರುವ ಅನುದಾನ ನೀಡುವುದಕ್ಕೂ ಸಿದ್ಧವಿದೆ. ಆದರೆ ಆಯಾ ತಾಲ್ಲೂಕು ಕೇಂದ್ರಗಳಲ್ಲಿ ಸೂಕ್ತ ನಿವೇಶನ ಗುರುತಿಸಿ ಮಾಹಿತಿ ನೀಡುವ ಕಾರ್ಯವನ್ನು ಜಿಲ್ಲಾ ಉಸ್ತುವಾರಿ ಸಚಿವರುಗಳು ಮಾಡಬೇಕಿದೆ. ಆಯಾ ಕ್ಷೇತ್ರದ ಶಾಸಕರು ಸಹ ಮುತುವರ್ಜಿ ವಹಿಸಿ ಕ್ರೀಡಾಂಗಣಕ್ಕೆ ಸ್ಥಳ ಗುರುತಿಸುವ ಕಾರ್ಯ ಮಾಡಬೇಕಿದೆ. ಆ ಮೂಲಕ ಕ್ರೀಡೆಗೆ ಹಾಗೂ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಬೇಕು ಎಂದು ಸಚಿವ ಡಾ. ನಾರಾಯಣಗೌಡ ಮನವಿ ಮಾಡಿದ್ದಾರೆ.

Key words: district -in charge -identifying -location – stadium -taluk centers – minister  – Narayana Gowda.

website developers in mysore