ಕೊಳ್ಳೇಗಾಲದಲ್ಲಿ ಮೈಸೂರು ವಿವಿ ಕುಲಪತಿ ಹೇಮಂತ್ ಕುಮಾರ್ ಅವರಿಂದ ಆಹಾರ, ಮೆಡಿಕಲ್ ಕಿಟ್ ವಿತರಣೆ

ಮೈಸೂರು, ಜೂನ್ 18, 2021 (www.justkannada.in): ಮೈಸೂರು ವಿಶ್ವವಿದ್ಯಾಲಯ ದತ್ತು ತೆಗೆದುಕೊಂಡಿರುವ ಗ್ರಾಮಗಳಲ್ಲಿರುವ ಆಶ್ರಮ ಶಾಲೆಗಳ  ಶಿಕ್ಷಕರು, ಸಿಬ್ಬಂದಿ, ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ ಆಹಾರ ಮತ್ತು ಮೆಡಿಕಲ್ ಕಿಟ್ ಅನ್ನು ವಿತರಿಸಲಾಯಿತು.

ಕೊಳ್ಳೇಗಾದ ಸರಕಾರಿ ಬುಡಕಟ್ಟು ಬಾಲಕಿಯರ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೈಸೂರು ವಿವಿ ಕುಲಪತಿ ಪ್ರೊ.ಹೇಮಂತ್ ಕುಮಾರ್ ಅವರು ಆಹಾರ ಕಿಟ್ ವಿತರಿಸಿ ಮಾತನಾಡಿದರು.

ಕೊರೊನಾ 2ನೇ ಅಲೆ ಲಕ್ಷಾಂತರ ಜನರ ಜೀವ ಬಲಿ ಪಡೆದಿದೆ. ಅದರಲ್ಲೂ ಕಾಡಂಚಿನಲ್ಲಿರುವ ಬುಡಕಟ್ಟು ಜನರಿಗೂ ಕೊರೊನಾ ಸೋಂಕು ತಗುಲಿರುವುದು ದುರಾದೃಷ್ಟಕರ. ಇಂತಹ ಸಂಕಷ್ಟದ ಸಮಯದಲ್ಲಿ ನೆರವಾಗಬೇಕು ಎನ್ನುವ ನಿರ್ಧಾರವನ್ನು ಮೈಸೂರು ವಿವಿ ಮಾಡಿದೆ. ಭಾರತ ಸರಕಾರದ ಮಹತ್ವಾಂಕ್ಷೆಯ ಯೋಜನೆಗಳಾದ ಉನ್ನತ ಭಾರತ ಅಭಯಾನ ಯೋಜನೆ ಹಾಗೂ ಸ್ಮಾರ್ಟ್ ವಿಲೇಜ್ ಯೋಜನೆಯಡಿ ಹನೂರು ತಾಲೂಕಿನ ಆರು ಗ್ರಾಮ ಪಂಚಾಯಿತಿಗಳ ಹಳ್ಳಿ ಹಳ್ಳಿಗಳನ್ನು ದತ್ತು ತೆಗೆದುಕೊಂಡು ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದರು.

ಇಲ್ಲಿರುವ ಆಶ್ರಮ ಶಾಲೆ ಶಿಕ್ಷಕರು ಹಾಗೂ ಇತರೆ ಸಿಬ್ಬಂದಿ, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಪೋಡಿನ ಸ್ವಯಂ ಸೇವಕರಿಗೆ ಆಹಾರ ಕಿಟ್ ಹಾಗೂ ಮೆಡಿಕಲ್ ಕಿಟ್ ಗಳನ್ನು ನೀಡಲಾಗುತ್ತಿದೆ. ಜನ ಕೊರೊನಾ ಕುರಿತು ಜಾಗೃತಿ ವಹಿಸಬೇಕು. ಲಸಿಕೆ ಹಾಕಿಸಿಕೊಂಡು ಕೋವಿಡ್ ವಿರುದ್ಧ ಹೋರಾಡಬೇಕು. ಸಂಘ-ಸಂಸ್ಥೆಗಳು ಈ ಕುರಿತು ಅರಿವು ಮೂಡಿಸಬೇಕು ಎಂದು ಹೇಳಿದರು.

ತಾಲೂಕು ಮಟ್ಟದ ಬುಡಕಟ್ಟು ಕಲ್ಯಾಣಾಧಿಕಾರಿ ಮಂಜುಳಾ, ಉನ್ನತ ಭಾರತ ಯೋಜನೆ ಯೋಜನೆ ಹಾಗೂ ಸ್ಮಾರ್ಟ್ ವಿಲೇಜ್ ಯೋಜನೆ ಸಂಯೋಜನಾಧಿಕಾರಿ ಡಾ.ಎಚ್.ಪಿ.ಜ್ಯೋತಿ, ಸೋಲಿಗ ಅಭಿವೃದ್ಧಿ ಸಂಘದ ಕಾರ್ಯದರ್ಶಿ ಮುತ್ತಯ್ಯ ಇತರರು ಇದ್ದರು.