ಬೆಂಗಳೂರಿನಲ್ಲೂ ಸಹ ಸಕ್ಕರೆ ವಲಯ ನಿರ್ದೇಶನಾಲಯ: ಎಂಎಲ್ ಸಿ ದಿನೇಶ್‌ ಗೂಳಿಗೌಡ ಮನವಿಗೆ ಸಕ್ಕರೆ ಸಚಿವರಿಂದ ಸ್ಪಂದನೆ.

ಬೆಂಗಳೂರು,ಡಿಸೆಂಬರ್,31,2022(www.justkannada.in): ಬೆಳಗಾವಿಯನ್ನು ರಾಜ್ಯದ 2ನೇ ರಾಜಧಾನಿ ಎಂದು ಪರಿಗಣಿಸಿ ಅಲ್ಲಿಗೆ ಕೆಲವು ಕಚೇರಿಗಳನ್ನು ಸ್ಥಳಾಂತರ ಮಾಡುತ್ತಿರುವುದು ಉತ್ತಮ ಕ್ರಮವೇ ಸರಿ. ಆದರೆ, ಬೆಂಗಳೂರಿನಲ್ಲಿರುವ ಕಬ್ಬು ಅಭಿವೃದ್ಧಿ ಮತ್ತು ನಿರ್ದೇಶನಾಲಯವನ್ನು ಬೆಳಗಾವಿಗೆ ಸ್ಥಳಾಂತರ ಮಾಡಿದ್ದರಿಂದ ಹಳೇ ಮೈಸೂರು ಭಾಗದ ರೈತರಿಗೆ ಅನಾನುಕೂಲವಾಗಲಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ವಿಭಾಗದಲ್ಲಿ ವಲಯ ನಿರ್ದೇಶನಾಲಯವನ್ನು ತೆರೆಯಬೇಕು ಹಾಗೂ ಸಕ್ಕರೆ ನಿರ್ದೇಶಕರು ವಾರದಲ್ಲಿ 2 ದಿನ ಬೆಂಗಳೂರಿನಲ್ಲಿ ರೈತರಿಗೆ ಲಭ್ಯವಾಗಬೇಕು. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಿ ಎಂದು ಸ್ಥಳೀಯ ಸಂಸ್ಥೆಗಳ ಮಂಡ್ಯ ಕ್ಷೇತ್ರದ ಶಾಸಕ ದಿನೇಶ್‌ ಗೂಳಿಗೌಡ ಅವರು ಸಕ್ಕರೆ ಸಚಿವ ಶಂಕರ ಪಾಟೀಲ್‌ ಮುನೇನಕೊಪ್ಪ ಅವರಿಗೆ ಮನವಿ ಮಾಡಿದ್ದಾರೆ. ಇದಕ್ಕೆ ಸಚಿವರೂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

ವಿಧಾನ ಪರಿಷತ್‌ ನಲ್ಲಿ ಪ್ರಶ್ನೋತ್ತರ ಸಮಯದಲ್ಲಿ ಸಕ್ಕರೆ ಸಚಿವರು, ಬೆಂಗಳೂರಿನಲ್ಲಿರುವ ಕಬ್ಬು ಅಭಿವೃದ್ಧಿ ಮತ್ತು ನಿರ್ದೇಶನಾಲಯವನ್ನು ಬೆಳಗಾವಿಯಲ್ಲಿರುವ ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರಿಸಲಾಗುವುದು ಎಂದು ಹೇಳಿದ್ದರು. ಇದು ಆ ಭಾಗದ ಕಬ್ಬು ಬೆಳಗಾರರಿಗೆ ಉಪಯೋಗವಾಗುವುದರಲ್ಲಿ ಸಂಶಯವೇ ಇಲ್ಲ. ಆದರೆ, ಹಳೇ ಮೈಸೂರು ಭಾಗದ ಮಂಡ್ಯ, ಮೈಸೂರು, ಚಾಮರಾಜನಗರ ಮತ್ತು ಹಾಸನ ಜಿಲ್ಲೆಗಳಲ್ಲಿಯೂ ಸಹ ಹೆಚ್ಚಿನ ಪ್ರದೇಶದಲ್ಲಿ ಕಬ್ಬು ಬೆಳೆಯನ್ನು ಬೆಳೆಯುತ್ತಿದ್ದಾರೆ. ಮಂಡ್ಯ ಜಿಲ್ಲೆಯು ಸಕ್ಕರೆಯ ನಾಡು ಎಂದೇ ಪ್ರಖ್ಯಾತವಾಗಿದೆ. ಈ ಹಿನ್ನೆಲೆಯಲ್ಲಿ ಇಲ್ಲಿನ ರೈತರಿಗೆ ಭಾರಿ ತೊಂದರೆಯಾಗುತ್ತದೆ ಎಂದು ಎಂಎಲ್ ಸಿ ದಿನೇಶ್ ಗೂಳಿಗೌಡ ಮನವಿ ಪತ್ರದಲ್ಲಿ ರೈತರ ಸಮಸ್ಯೆ ಬಗ್ಗೆ ವಿವರಿಸಿದ್ದಾರೆ.

ಹಳೇ ಮೈಸೂರು ಭಾಗದ ರೈತರಿಗೆ ಸಮಸ್ಯೆಯಾಗುವುದರ ನಿರ್ದೇಶನಾಲಯವನ್ನು ಬೆಳಗಾವಿಗೆ ಸ್ಥಳಾಂತರಿಸುವುದಾದರೆ ಬೆಂಗಳೂರು ವಿಭಾಗದಲ್ಲಿ ವಲಯ ನಿರ್ದೇಶನಾಲಯವನ್ನು ಸ್ಥಾಪನೆ ಮಾಡಬೇಕು. ಇದರಿಂದ ಈ ಭಾಗದ ರೈತರಿಗೆ ಅನುಕೂಲವಾಗುತ್ತದೆ. ಸಕ್ಕರೆ ನಿರ್ದೇಶಕರು ವಾರದಲ್ಲಿ 2 ದಿನ ಬೆಂಗಳೂರಿನಲ್ಲಿದ್ದರೆ, ಹಳೇ ಮೈಸೂರು ಭಾಗದ ಜನಪ್ರತಿನಿಧಿಗಳು ಮತ್ತು ಕಬ್ಬು ಬೆಳೆಗಾರರ ಸಮಸ್ಯೆಗಳಿಗೆ ಸ್ಪಂದಿಸಲು ಅನುಕೂಲವಾಗುತ್ತದೆ. ಆದ್ದರಿಂದ ತಾವು ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಹಳೇ ಮೈಸೂರು ಭಾಗದ ರೈತರ ಪರವಾಗಿ ಕೋರುವುದಾಗಿ ಶಾಸಕರಾದ ದಿನೇಶ್‌ ಗೂಳಿಗೌಡ ಅವರು ಸಚಿವರಿಗೆ ಮನವಿ ಮಾಡಿದ್ದಾರೆ.

ದಿನೇಶ್‌ ಗೂಳಿಗೌಡ ಅವರು ಈ ಸಂಬಂಧ ಸಕ್ಕರೆ ಸಚಿವ ಶಂಕರ್‌ ಪಾಟೀಲ್‌ ಮುನೇನಕೊಪ್ಪ ಅವರನ್ನು ಭೇಟಿಯಾಗಿ ಸಮಸ್ಯೆ ಬಗ್ಗೆ ಗಮನ ಸೆಳೆದಿದ್ದು, ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಬೆಂಗಳೂರಿನಲ್ಲಿಯೂ ಸಹ ವಲಯ ಕಚೇರಿಯನ್ನು ತೆರೆಯಲು ಕ್ರಮ ಕೈಗೊಳ್ಳುತ್ತೇನೆ. ಜತೆಗೆ ವಾರದಲ್ಲಿ 2 ದಿನ ಸಕ್ಕರೆ ನಿರ್ದೇಶಕರು ಬೆಂಗಳೂರಿನಲ್ಲಿ ರೈತರಿಗೆ ಲಭ್ಯವಿರುವಂತೆ ಮಾಡಲಾಗುವುದು ಎಂದು ಸಚಿವರು ಹೇಳಿದ್ದಾರೆಂದು ಎಂಎಲ್ ಸಿ ದಿನೇಶ್ ಗೂಳಿಗೌಡ ತಿಳಿಸಿದ್ದಾರೆ.

Key words: Directorate -Sugar -Sector -Bangalore – Response – Minister –MLC- Dinesh Gooligowda