ಬೆಂಗಳೂರಿನಲ್ಲಿ 27 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಡಿಜಿಟಲ್ ಕ್ಲಿನಿಕ್: ವಾರದೊಳಗೆ ಪ್ರಕ್ರಿಯೆಗೆ ಚಾಲನೆ…

kannada t-shirts

ಬೆಂಗಳೂರು,ಅಕ್ಟೋಬರ್,13,2020(www.justkannada.in):  ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅವರ ಮಹತ್ವಾಕಾಂಕ್ಷಿ ಯೋಜನೆ ಹಾಗೂ ಪರಿಕಲ್ಪನೆಯ ಕೂಸಾದ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಡಿಜಿಟಲ್/ ವರ್ಚ್ಯುಯಲ್ ಕ್ಲಿನಿಕ್ ಗಳ ಸ್ಥಾಪನೆಯು ಅಂತಿಮ ರೂಪ ಪಡೆದಿದೆ. 27 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಇಂತಹ ಕ್ಲಿನಿಕ್ ಗಳ ಸ್ಥಾಪನೆಗೆ ಒಂದು ವಾರದಲ್ಲಿ ಟೆಂಡರ್ ಪ್ರಕ್ರಿಯೆ ಆರಂಭವಾಗಲಿದೆ.jk-logo-justkannada-logo

ಉಪ ಮುಖ್ಯಮಂತ್ರಿ ಡಿಸಿಎಂ ಅಶ್ವಥ್  ನಾರಾಯಣ್ ಅವರು ಬಿಬಿಎಂಪಿಯ ಆರೋಗ್ಯ ಅಧಿಕಾರಿಗಳ ಜೊತೆ ಮಂಗಳವಾರ ನಡೆಸಿದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಯಿತು. ಈ ಸೇವಾ ಸೌಲಭ್ಯದಿಂದಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಈಗ ಲಭ್ಯವಿರುವ ಆರೋಗ್ಯ ಸೇವೆಗಳ ಜೊತೆಗೆ ಹಲವಾರು ಅನಾರೋಗ್ಯಗಳಿಗೆ ಸಂಬಂಧಪಟ್ಟಂತೆ ತಜ್ಞ ವೈದ್ಯರ ಸೇವೆಯೂ ಲಭ್ಯವಾಗಲಿದೆ. ಅಶ್ವತ್ಥ ನಾರಾಯಣ ಅವರು ಈ ಮಹಾತ್ವಾಕಾಂಕ್ಷಿ ಯೋಜನೆಯನ್ನು ಕಾರ್ಯಗತಗೊಳಿಸುವ ಸಲುವಾಗಿ ಈ ಹಿಂದೆ ಹಲವು ಬಾರಿ ಸಭೆಗಳನ್ನು ನಡೆಸಿದ್ದರು.

ಮೊದಲ ಹಂತದಲ್ಲಿ ನಗರದ ಪ್ರತಿಯೊಂದು ವಿಧಾನಸಭಾ ಕ್ಷೇತ್ರದ ತಲಾ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಈ ಕ್ಲಿನಿಕ್ ಸ್ಥಾಪಿಸಲಾಗುತ್ತದೆ. ನಂತರದ ಹಂತದಲ್ಲಿ ನಗರದ ಪ್ರತಿಯೊಬ್ಬ ನಾಗರಿಕರಿಗೂ ಗುಣಮಟ್ಟದ ಆರೋಗ್ಯ ಸೇವೆ ಲಭ್ಯವಾಗಿಸುವ ಉದ್ದೇಶದಿಂದ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಇದನ್ನು ವಿಸ್ತರಿಸಲಾಗುತ್ತದೆ.

ಸಭೆಯಲ್ಲಿ ಪಾಲ್ಗೊಂಡಿದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿಗಳು ಆರೋಗ್ಯಸೇವಾ ವ್ಯವಸ್ಥಾಪನೆಯಲ್ಲಿ ಡಿಜಿಟಲೀಕರಣವನ್ನು ಹೆಚ್ಚಿನ ಮಟ್ಟದಲ್ಲಿ ಬಳಸಿಕೊಳ್ಳಬೇಕೆಂದು ಅಭಿಪ್ರಾಯಪಟ್ಟರು. ಕೋವಿಡ್-19 ಸೋಂಕಿನ ಈ ಸಂದರ್ಭವು ಡಿಜಿಟಲ್ ತಾಂತ್ರಿಕತೆ ನೆರವಿನಿಂದ ಆರೋಗ್ಯಸೇವಾ ಗುಣಮಟ್ಟವನ್ನು ಉನ್ನತ ದರ್ಜೆಗೇರಿಸಲು ಸೂಕ್ತ ಸಮಯವಾಗಿದೆ ಎಂದೂ ಅವರು ಹೇಳಿದರು.

ಈ ಹೊಸ ಆರೋಗ್ಯ ಸೇವಾ ವಿಧಾನದಲ್ಲಿ ಯಾವುದೇ ಅನಾರೋಗ್ಯ ಪೀಡಿತ ವ್ಯಕ್ತಿಯು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ಕೊಟ್ಟು ಅಲ್ಲಿನ ಡಿಜಿಟಲ್ ಕ್ಲಿನಿಕ್ ನಲ್ಲಿ ಆಧಾರ್ ಕಾರ್ಡ್ ನೆರವಿನಿಂದ ಹೆಸರು ನೋಂದಣಿ ಮಾಡಿಸಿಕೊಳ್ಳಬೇಕು. ಈ ಪ್ರಕ್ರಿಯೆ ನಂತರ ಡಿಜಿಟಲ್/ ವರ್ಚ್ಯುಯಲ್ ಕ್ಲಿನಿಕ್ ಮೂಲಕ ಅನಾರೋಗ್ಯ ಬಾಧಿತರನ್ನು ಇ-ಕಮಾಂಡ್ ಕೇಂದ್ರದಲ್ಲಿರುವ ತಜ್ಞವೈದ್ಯರೊಂದಿಗೆ ಸಂಪರ್ಕಗೊಳಿಸಲಾಗುತ್ತದೆ. ಹೃದಯ ತಜ್ಞರು, ಚರ್ಮ ತಜ್ಞರು, ಸಾಮಾನ್ಯ ವೈದ್ಯಕೀಯ, ಇಎನ್ ಟಿ, ಕಣ್ಣಿನ ತಜ್ಞರು, ಶಿಶು ವೈದ್ಯಕೀಯ, ತಜ್ಞ ಮನೋವೈದ್ಯರು, ಸಾಮಾನ್ಯ ಶಸ್ತ್ರಚಿಕಿತ್ಸೆ ಸೇರಿದಂತೆ ಹಲವು ಆರೋಗ್ಯ ವಿಭಾಗಗಳ ತಜ್ಞರ ಸೇವೆಯನ್ನು ಇದರ ಮೂಲಕ ಒದಗಿಸಲಾಗುತ್ತದೆ. ಈ ಸೌಲಭ್ಯವು ರೋಗ ನಿರ್ಣಯ, ಕಾಯಿಲೆ ಬಾಧಿತರ ತಪಾಸಣೆ ಮತ್ತು ವೈದ್ಯಕೀಯ ಸಲಹೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆಂದು ಹೇಳಲಾಗಿದೆ.Digital Clinic - 27 Primary Health Centers – Bangalore-process- within - week.

ಈ ಟೆಲಿಹೆಲ್ತ್ ವೇದಿಕೆಯು ಕಾಯಿಲೆ ಬಾಧಿತರ ಆಯಾಕ್ಷಣದ ದತ್ತಾಂಶಗಳನ್ನು ಕೂಡ ತಜ್ಞ ವೈದ್ಯರಿಗೆ ಲಭ್ಯವಾಗಿಸಲಿದೆ. ಇದರಿಂದ ಆರೋಗ್ಯಸೇವಾ ನಿರ್ವಹಣೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಲು ಹಾಗೂ ದಕ್ಷಗೊಳಿಸಲು ಸಾಧ್ಯ. ಜೊತೆಗೆ ಕಾಯಿಲೆ ಪೀಡಿತರು ಆಸ್ಪತ್ರೆ ದಾಖಲಾಗುವ ಸಂಭವನೀಯತೆ, ಆಸ್ಪತ್ರೆಯಲ್ಲಿದ್ದುಕೊಂಡೇ ಚಿಕಿತ್ಸೆ ಕೊಳ್ಳಬೇಕಾದ ಅನಿವಾರ್ಯತೆ, ಚಿಕಿತ್ಸಾ ವೆಚ್ಚ ಇತ್ಯಾದಿ ಗಮನಾರ್ಹವಾಗಿ ತಗ್ಗುತ್ತವೆ  ಎಂದೂ ವಿಶ್ಲೇಷಿಸಲಾಗಿದೆ.

ವಿಡಿಯೊ ಮತ್ತು ಚಾಟ್ ಮುಖಾಂತರ ವೈದ್ಯರೊಂದಿಗೆ ಸಮಾಲೋಚನೆ, ದೂರದಿಂದಲೇ ರೋಗನಿರ್ಣಯ ಹಾಗೂ ಮೇಲ್ವಿಚಾರಣೆ, ಆಪ್ ಬಳಸಿ ವೈದ್ಯರ ಭೇಟಿಗೆ ಸಮಯ ನಿಗದಿ ಸೇರಿದಂತೆ ಹಲವು ಪ್ರಯೋಜನಗಳು ಇದರಿಂದ ಸಾಧ್ಯವಾಗಲಿದೆ. ಮಲ್ಲೇಶ್ವರಂನಲ್ಲಿ ಶೀಘ್ರವೇ ಡಯಾಗ್ನಾಸ್ಟಿಕ್ ಕೇಂದ್ರ ಕಾರ್ಯಾರಂಭಗೊಳಿಸುವುದರ ಬಗ್ಗೆಯೇ ಸಭೆಯಲ್ಲಿ ಚರ್ಚೆ ನಡೆಯಿತು.

Key words: Digital Clinic – 27 Primary Health Centers – Bangalore-process- within – week.

website developers in mysore