ಕಿರುಬಂದರುಗಳನ್ನು ಅಭಿವೃದ್ದಿಪಡಿಸಿ, ಉದ್ಯೋಗ ಸೃಜಿಸಿ-  ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸೂಚನೆ..

ಬೆಂಗಳೂರು, ಮೇ 29,2019(www.justkannada.in):  ರಾಜ್ಯದ 12 ಕಿರು ಬಂದರುಗಳ ಸರ್ವಾಂಗೀಣ ಅಭಿವೃದ್ಧಿ ಹಾಗೂ ಸಂರಕ್ಷಣೆಗೆ ಒತ್ತು ನೀಡಿ ತನ್ಮೂಲಕ ಉದ್ಯೋಗ ಸೃಜನೆಯನ್ನು ಕೈಗೊಳ್ಳಬೇಕೆಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸೂಚಿಸಿದರು.

ಇಂದು  ಸಿಎಂ ಹೆಚ್.ಡಿ ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಚಟುವಟಿಕೆಗಳ ಕುರಿತ ಸಭೆ ನಡೆಯಿತು.  ಸಭೆಯಲ್ಲಿ ಮಾತನಾಡಿದ ಅವರು, ಕಾರವಾರ ಮತ್ತು ಮಂಗಳೂರು ಬಂದರುಗಳನ್ನು ಹೊರತುಪಡಿಸಿದರೆ ಉಳಿದ ಕಿರು ಬಂದರುಗಳಲ್ಲಿ ಹೆಚ್ಚಿನ ವಾಣಿಜ್ಯ ಚಟುವಟಿಕೆಗಳು ನಡೆಯಬೇಕು. ಮೀನುಗಾರಿಕೆ ಸೇರಿದಂತೆ ಇತರೆ ವಾಣಿಜ್ಯ ಚಟುವಟಿಕೆಗಳಿಗೂ ಆದ್ಯತೆ ನೀಡಿ ರಾಜ್ಯದ ಎಲ್ಲ ಬಂದರುಗಳ ಸಂಪೂರ್ಣ ಸಾಮರ್ಥ್ಯ ವನ್ನು ಬಳಸಿಕೊಳ್ಳುವಂತೆ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚಿಸಿದರು.

ಮ್ಯಾರಿಟೈಮ್ ಮಂಡಳಿಗೆ ಶೀಘ್ರದಲ್ಲಿಯೇ ಅಧಿಕಾರಿಯನ್ನು  ನೇಮಿಸಲಾಗುವುದು ಎಂದು ಸಿಎಂ ಭರವಸೆ ನೀಡಿದರು.  ಕಾರವಾರ ಬಂದರಿನ 2 ನೇ ಹಂತದ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದ್ದು, ಬಂದರಿನ ಉತ್ತರಕ್ಕೆ 1258 ಮೀ.ಉದ್ದದ ಬರ್ರ್ತ್ ನ್ನು ವಿಸ್ತರಿಸಲು ವಿಸ್ತøತ ಯೋಜನಾ ವರದಿಯನ್ನು ತಯಾರಿಸಿದ್ದು, ಸರ್ಕಾರದ ಅನುಮೋದನೆಗೆ ಸಲ್ಲಿಸಲಾಗಿದೆ ಎಂದು ಅಧಿಕಾರಿಗಳು ಸಭೆಗೆ ತಿಳಿಸಿದರು.

ಸಾಗರಮಾಲಾ ಕೋಸ್ಟಲ್  ಬರ್ತ್ ಯೋಜನೆಯಡಿ ಪ್ರಸಕ್ತ ಸಾಲಿಗೆ 54.10 ಕೋಟಿ ರೂ.ಗಳ ಅನುದಾನವನ್ನು ಒದಗಿಸಲಾಗಿದ್ದು, ತಡೆಗೋಡೆ ನಿರ್ಮಾಣ ಕಾಮಗಾರಿ ಕೈಗೊಳ್ಳಲು ಟೆಂಡರ್ ಕರೆದು ಕಾರ್ಯಾದೇಶ ನೀಡಲಾಗಿದೆ ಹಾಗೂ ಕಾರವಾರ ಕೋಸ್ಟಲ್  ಬರ್ತ್ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದೆ ಮತ್ತು ಮಂಗಳೂರು ಹಳೇ ಬಂದರಿನಲ್ಲಿ ಕೋಸ್ಟಲ್  ಬರ್ತ್ ನಿರ್ಮಾಣಕ್ಕೆ ತಾಂತ್ರಿಕ ಮಂಜೂರಾತಿ ಕಾರ್ಯ ಪ್ರಗತಿಯಲ್ಲಿದೆ ಎಂದು ಸಭೆ ಮಾಹಿತಿ ಒದಗಿಸಲಾಯಿತು.

 ಸಮುದ್ರಕೊರೆತ ತಡೆಯಲು ತಡೆಗೋಡೆ ನಿರ್ಮಾಣ:

ಕರಾವಳಿ ಪ್ರದೇಶದಲ್ಲಿ  ಕಡಲು ಕೊರೆತ ಪದೇ ಪದೇ ಉಂಟಾಗಿ ಸ್ಥಳೀಯರಿಗೆ ತೊಂದರೆಯಾಗುತ್ತಿದ್ದು, ಈ ಬಗ್ಗೆ ದೀರ್ಘಾವಧಿ ಪರಿಹಾರ ಕಂಡುಕೊಳ್ಳಬೇಕು. ಕಡಲ ಬದಿಯಲ್ಲಿರುವ ಜನರಿಗೆ ಪುನರ್ವಸತಿ ಕಲ್ಪಿಸುವ ಬಗ್ಗೆ ಪರಿಶೀಲಿಸುವಂತೆ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದರು.

ಕಡಲಕೊರೆತ ಸಂಭವಿಸುತ್ತಿದ್ದ ಪ್ರದೇಶಗಳಲ್ಲಿ ಈವರೆಗೆ 64.35 ಉದ್ದದ ತಡೆ ನಿರ್ಮಿಸಲಾಗಿದೆ. ಉದಯವಾರ, ಮರವಂತೆ, ಕೋಡಿಬೆಂಗ್ರೆ, ಸೋಮೇಶ್ವರ, ಮುಕ್ಕಚೆರ್ರಿ ಸೇರಿದಂತೆ ಒಟ್ಟು 12 ಪ್ರದೇಶಗಳಲ್ಲಿ ತಡೆಗೋಡೆ ನಿರ್ಮಾಣ ಮತ್ತು ವಿವಿಧ ಕಾಮಗಾರಿಗಳು ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ಸಭೆಗೆ ತಿಳಿಸಿದರು. ತಡೆಗೋಡೆ ಉಳ್ಳಾಲ ಮತ್ತು ಉದಯವಾರದಲ್ಲಿ ತಡೆಗೋಡೆ ನಿರ್ಮಾಣವಾದ ಬಳಿಕ ಕಡಲಕೊರೆತ ಕಡಿಮೆಯಾಗಿದ್ದು ಮೀನುಗಾರಿಕಾ ಚಟುವಟಿಕೆಗಳು ಹೆಚ್ಚಾಗಿದೆ ಎಂದು ಇತ್ತೀಚೆಗೆ ಸ್ವಯಂಸೇವಾ ಸಂಸ್ಥೆಯೊಂದು ನಡೆಸಿದ ಸಮೀಕ್ಷೆಯಲ್ಲಿ ವರದಿಯಾಗಿದೆ ಎಂದು ಅಧಿಕಾರಿಗಳು ಸಭೆಯ ಗಮನಕ್ಕೆ ತಂದರು.

ಸಭೆಯಲ್ಲಿ ವಿಧಾನಪರಿಷತ್ ಸದಸ್ಯ ತಿಪ್ಪೇಸ್ವಾಮಿ, ಮುಖ್ಯಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಅಭಿವೃದ್ಧಿ ಆಯುಕ್ತರಾದ ವಂದಿತಾ ಶರ್ಮ, ಆರ್ಥಿಕ ಇಲಾಖೆ ಅಪರಮುಖ್ಯ ಕಾರ್ಯದರ್ಶಿ ಐ.ಎಸ್.ಎನ್.ಪ್ರಸಾದ್, ಲೋಕೋಪಯೋಗಿ ಇಲಾಖೆ ಅಪರಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಉಪಸ್ಥಿತರಿದ್ದರು.

Key words: Develop small ships and create jobs-   CM HD Kumaraswamy Instructed..

#Cmhdkumaraswamy #createjobs #meeting #officer