ಕ್ರೀಡಾಪಟುಗಳಿಗೆ ಸರ್ಕಾರಿ ನೌಕರಿಯಲ್ಲಿ ಶೇ.2ರಷ್ಟು ಮೀಸಲಾತಿಗೆ ತೀರ್ಮಾನ –ಸಿಎಂ ಬಸವರಾಜ ಬೊಮ್ಮಾಯಿ.

ಬೆಂಗಳೂರು, ಆಗಸ್ಟ್ 29,2022(www.justkannada.in):  ಕ್ರೀಡಾಕ್ಷೇತ್ರದಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಸರ್ಕಾರಿ ನೌಕರಿಯಲ್ಲಿ ಶೇ. 2ರಷ್ಟು ಮೀಸಲಾತಿ ನೀಡಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಇಂದು  ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಅಂಗವಾಗಿ  ಗ್ರಾಮೀಣ ಕ್ರೀಡೋತ್ಸವ ಹಾಗೂ ಯೋಗಾಥಾನ್ ಗೆ ಚಾಲನೆ ನೀಡಿ  2020ನೇ ಸಾಲಿನ  ಏಕಲವ್ಯ, ಜೀವಮಾನ ಸಾಧನೆ , ಕರ್ನಾಟಕ ಕ್ರೀಡಾ ರತ್ನ ಹಾಗೂ 2021- 22 ನೆ ಸಾಲಿನ ಕ್ರೀಡಾ ಪೋಷಕ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

ಮುಂದಿನ ಪ್ಯಾರೀಸ್ ಒಲಂಪಿಕ್ಸ್ ನಲ್ಲಿ ಭಾಗವಹಿಸಲು ರಾಜ್ಯದ ಆಯ್ದ 75 ಕ್ರೀಡಾಪಟುಗಳಿಗೆ ವಿಶ್ವಮಟ್ಟದ ತರಬೇತಿ ನೀಡಲಾಗುತ್ತಿದೆ. ಇವರಲ್ಲಿ ಹಲವರು ಒಲಂಪಿಕ್ಸ್‍ ನಲ್ಲಿ ಪದಕಗಳನ್ನು ಗೆಲ್ಲಬೇಕೆಂಬುದು ಸರ್ಕಾರದ ಗುರಿಯಾಗಿದೆ. ಗ್ರಾಮೀಣ ಮಟ್ಟದಲ್ಲಿಯೂ ಕ್ರೀಡಾ ಸಾಧನೆಗಳಾಗಬೇಕು ಹಾಗೂ ಗ್ರಾಮೀಣ ಕ್ರೀಡೆಗಳನ್ನು ಸರ್ಕಾರದ ವತಿಯಿಂದ ವ್ಯವಸ್ಥಿತವಾಗಿ ನಡೆಸುವ ಉದ್ದೇಶದಿಂದ ಗ್ರಾಮೀಣ ಕ್ರೀಡಾಕೂಟವನ್ನು ಪ್ರಾರಂಭಿಸಲಾಗಿದೆ. ಕಬ್ಬಡಿ, ಕೋಕೋ, ಕಂಬಳ, ಎತ್ತಿನಗಾಡಿ ಸ್ಪರ್ಧೇ, ಹೀಗೆ ಹಲವು ಕ್ರೀಡೆಗಳು ಗ್ರಾಮೀಣ ಪ್ರದೇಶದ ಸೊಗಡನ್ನು ಸೂಸುತ್ತದೆ. ಗ್ರಾಮಪಂಚಾಯತಿ, ತಾಲ್ಲೂಕು,ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಕ್ರೀಡೆಗಳು ನಡೆಯುತ್ತವೆ. ಗ್ರಾಮಮಟ್ಟದಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವಾಗುತ್ತಿದೆ ಎಂದರು.

ಸ್ವಯಂ ಉದ್ಯೋಗದಿಂದ ಇತರರಿಗೆ ಉದ್ಯೋಗ -ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆ :

ಯುವಜನ ಸಬಲೀಕರಣಕ್ಕಾಗಿ ಶಿಕ್ಷಣ, ಉದ್ಯೋಗ ಮತ್ತು ಸಬಲೀಕರಣ ಬಹಳ ಮುಖ್ಯ.  ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆಯನ್ನು ಆಗಸ್ಟ್ 15ಕ್ಕೆ ಚಾಲನೆ ನೀಡಲಾಗಿದೆ. ಪ್ರತಿ ಗ್ರಾಮದಲ್ಲಿ 30 ಜನರ ಯುವಜನರ ಸಂಘವನ್ನು ಗುರುತಿಸಿ, 7.5 ಲಕ್ಷದಿಂದ 10 ಲಕ್ಷದವರೆಗೆ ಯೋಜನೆಗಳನ್ನು ನೀಡಿ, ಸಂಘಕ್ಕೆ 1.5 ಲಕ್ಷದ ಅನುದಾನವನ್ನು ಸರ್ಕಾರವೇ ಭರಿಸಿ, ಉತ್ಪನ್ನಗಳ ತಯಾರಿಕೆಗೆ ತರಬೇತಿ, ತಯಾರಿಕೆ ಹಾಗೂ ಮಾರುಕಟ್ಟೆ ಜೋಡಣೆಯನ್ನು ಕಲ್ಪಿಸುವ ಯೋಜನೆಯಾಗಿದೆ. ಸ್ವಯಂ ಉದ್ಯೋಗ ಮಾಡಿ ಇತರರಿಗೆ ಉದ್ಯೋಗ ನೀಡುವ ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆಯಿಂದ ಒಂದು ವರ್ಷಕ್ಕೆ ಸುಮಾರು 5 ಲಕ್ಷ ಯುವಕರಿಗೆ ಉದ್ಯೋಗ ಸೃಷ್ಟಿಸಿದಂತಾಗುತ್ತದೆ. ಇದು ವಿನೂತನವಾದ ಯೋಜನೆ. ಆರ್ಥಿಕವಾಗಿ, ಸಾಮಾಜಿಕವಾಗಿ ಯುವಕರ ಸಾಮರ್ಥ್ಯವನ್ನು ಹೆಚ್ಚಿಸುವಂತಹ ಕೆಲಸವನ್ನು ಸರ್ಕಾರ ನಿರಂತರವಾಗಿ ಮಾಡುತ್ತದೆ ಎಂದರು.

ಕ್ರೀಡಾ ಕರ್ನಾಟಕವನ್ನಾಗಿಸುವ ಸರ್ಕಾರದ ಗುರಿ:

ಕರಾವಳಿಯ ಕಂಬಳ, ಉತ್ತರ ಕರ್ನಾಟಕದ ಚಕ್ಕಡಿ ಹೊಡೆಯುವ ಸ್ಪರ್ಧೆ, ಕುಸ್ತಿ, ಸೈಕಲ್, ಮೋಟರ್ ಸೈಕಲ್, ಕಾರ್ ರ್ಯಾಲಿಗಳು, ಗಾಲ್ಫ್, ವಾಲಿಬಾಲ್ ಕ್ರೀಡೆಗಳನ್ನು ಪ್ರೋತ್ಸಾಹಿಸಲಾಗುತ್ತಿದೆ. ಕನ್ನಡದ ಯುವಕರು ಯಶಸ್ಸಿನ ಉತ್ತುಂಗಕ್ಕೆ ಏರಬೇಕು. ಸೀನಿಯರ್ ಒಲಂಪಿಕ್ಸ್ ಏರ್ಪಡಿಸಲು ರಾಜ್ಯ ಸರ್ಕಾರ 8 ಕೋಟಿ ರೂಗಳನ್ನು ನೀಡಿದೆ. ಕರ್ನಾಟಕವನ್ನು ಕ್ರೀಡಾ ಕರ್ನಾಟಕವನ್ನಾಗಿ ಮಾಡುವ ಗುರಿ ರಾಜ್ಯ ಸರ್ಕಾರಕ್ಕಿದೆ. ಕ್ರೀಡೆಯ ತರಬೇತುದಾರರಿಗೆ ಎಲ್ಲ ಸಹಕಾರವನ್ನು ನೀಡಲಾಗುವುದು ಎಂದರು.

ಭಾರತದ ಭವಿಷ್ಯ ಯುವಜನತೆಯ ಮೇಲಿದೆ :

ಧ್ಯಾನ್‍ ಚಂದ್ ಅವರು ಒಲಂಪಿಕ್ಸ್ ನಲ್ಲಿ ಮೂರು ಬಾರಿ  ಚಿನ್ನದ ಪದಕ ಗೆದ್ದು, ಭಾರತಕ್ಕೆ ಕೀರ್ತಿ ತಂದವರು. ಹಾಕಿಯ ಜಾದೂಗಾರರಾಗಿದ್ದ ಅವರು ಹಾಕಿಯನ್ನು ಅಗ್ರಮಾನ್ಯ ಸ್ಥಾನಕ್ಕೆ ತಂದವರು. ಧ್ಯಾನ್ ಚಂದ್ ಅವರ ಹೆಸರಿನಲ್ಲಿ ಖೇಲ್ ರತ್ನ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಕರ್ನಾಟಕದಲ್ಲಿ ನೀಡಲಾಗುವ ಏಕಲವ್ಯ ಪ್ರಶಸ್ತಿ , ಕ್ರೀಡಾರತ್ನ ಪ್ರಶಸ್ತಿ, ನಗದು ಪ್ರಶಸ್ತಿ ನೀಡಲಾಗುತ್ತಿದೆ. ಕ್ರೀಡಾಕ್ಷೇತ್ರದಲ್ಲಿನ ತಮ್ಮ ಶ್ರಮ, ಸಾಧನೆಯನ್ನು ಗುರುತಿಸಿ ರಾಜ್ಯ ಸರ್ಕಾರ ನಿಮ್ಮ ಬೆನ್ನುತಟ್ಟಿ ಪ್ರೋತ್ಸಾಹಿಸುವ ಕೆಲಸವನ್ನು ಮಾಡುತ್ತಿದೆ. ಭಾರತದಲ್ಲಿ ಶೇ. 46 ರಷ್ಟು ಜನಸಂಖ್ಯೆ ಯುವಜನರಿದ್ದಾರೆ. ಮುಂದಿನ 25 ವರ್ಷಗಳು ಭಾರತದ ಭವಿಷ್ಯ ಈ ಯುವಜನತೆಯ ಮೇಲಿದೆ ಎಂದು ತಿಳಿಸಿದರು.

ಯಶಸ್ಸು ಸಾಧಿಸಲು ಧೃಢ ನಿಶ್ಚಯ ಬೇಕು :

ಯುವಕರಲ್ಲಿ ಶಿಸ್ತು, ವ್ಯಕ್ತಿತ್ವದಿಂದ ಯಶಸ್ಸು ಬರುತ್ತದೆ. ಕಠಿಣ ಪರಿಶ್ರಮಗಳಿಂದ ಹೆಚ್ಚಿನ ಗುರಿಗಳನ್ನು ಸಾಧಿಸುತ್ತಿರಬೇಕು. ಗೆಲ್ಲಬೇಕೆಂದು ಆಡಬೇಕೇ ಹೊರತು ಸೋಲಬಾರದು ಎಂದು ಆಟವಾಡಬಾರದು. ಗೆಲ್ಲಬೇಕೆಂಬ ಹುರುಪಿನಿಂದ ಸಕಾರಾತ್ಮಕವಾಗಿ ಆಡಬೇಕು ಆತ್ಮವಿಶ್ವಾಸದಿಂದ ನಿಮ್ಮ ಮೇಲೆ ನಂಬಿಕೆಯಿರಿಸಿ. ಯುವಕರು ಸಾಧನೆಗಳನ್ನು ಮಾಡಿದಾಗ ಹುರಿದುಂಬಿಸಿದರೆ, ಇನ್ನಷ್ಟು ಸಾಧನೆಗಳಿಗೆ ಪ್ರೋತ್ಸಾಹಿಸಿದಂತಾಗುತ್ತದೆ. ಜಗತ್ತಿನ ಅತಿ ಎತ್ತರದ ಶಿಖರ ಮೌಂಟ್ ಎವರೆಸ್ಟ್, ಹಿಮಾಲಯದ ತಪ್ಪಲಿನಲ್ಲಿ ಕುರಿ ಕಾಯುವವರ ಜನಾಂಗದಲ್ಲಿ ಕುರಿ ಕಾಯುತ್ತಿದ್ದ  ಸಣ್ಣ ಹುಡುಗ ತೇನ್ ಸಿಂಗ್, ತನ್ನ 42ನೇ ವಯಸ್ಸಿನಲ್ಲಿ ಮೌಂಟ್ ಎವರೆಸ್ಟ್  ಅನ್ನು ಹತ್ತಿ ಭಾರತದ ಧ್ವಜವನ್ನು ನೆಟ್ಟ ಕೀರ್ತಿ ಅವರದು. ಅತಿ ಚಿಕ್ಕ ವಯಸ್ಸಿನಲ್ಲಿ ಅವರು ಮಾಡಿದ ಸಂಕಲ್ಪವನ್ನು ಯಶಸ್ವಿಯಾಗಿ ಸಾಕಾರಗೊಳಿಸಿದ್ದರು.  ಕ್ರೀಡಾ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲು ಮೊದಲು ಧೃಢ ನಿಶ್ಚಯ, ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಸಿಎಂ ಬೊಮ್ಮಾಯಿ ಯುವಕರಿಗೆ ಕಿವಿಮಾತು ಹೇಳಿದರು.

Key words: Decision – 2% reservation – government- jobs – athletes-CM -Basavaraja Bommai

ENGLISH SUMMARY…

Two percent reservation for sportspersons in Govt. jobs: CM Bommai
Bengaluru, August 29, 2022 (www.justkannada.in): Chief Minister Basavaraj Bommai today informed that achievers in sports will be provided a 2% reservation in government jobs.
He launched the Grameena Kreedotsava and Yogathon, organized on the occasion of the National Sports Day, and Ekalavya, Lifetime Achievement, Karnataka Kreeda Ratna awards for the year 2020 and Kreeda Poshaka Award for the year 2021-22.
In his address, he said, “world-class training is being provided for 75 sportspersons in the State to enable them to participate in the Paris Olympics. The government aims to prepare them to win medals in the Olympic games. To encourage rural youth also to become sports achievers the government has commenced the rural sports meet. Games like Kabbadi, Kho-Kho, Kambala, Bullock Cart race, etc., reflect the rural sports culture. Competitions are being held at the Gram Panchayat, Taluk, District, and State levels. Efforts are made to identify talented youth in the field of sports in rural areas and encourage them.”
Swami Vivekananda Yuvashakti Yojana to encourage self-employment and employment generation:
“Improvement of education and increasing job opportunities are important for the empowerment of the youth. Our government launched the Swami Vivekananda Yuvashakti Yojana on August 15. Under this program, 30 youth will be identified in each village and a union will be formed. They will be provided projects worth Rs. 7.5 lakh to Rs. 10 lakh, along with Rs. 1.5 lakh subsidy and training will be provided in manufacturing and linking it with the market. Encouraging the youth to undertake self-employment and generate job opportunities is the objective of this program. This way we aim to create five lakh jobs. It is a special program that enables the youth to find financial and social independence,” he added.
Keywords: Chief Minister Basavaraj Bommai/ 2% reservation/ sports quota/ govt. jobs