ಉದ್ಯಮಿ ಸಿದ್ಧಾರ್ಥ್  ಅವರ ಸಾವು ರಾಜ್ಯಕ್ಕೆ ಅತಿದೊಡ್ಡ ನಷ್ಟ- ಅಂತಿಮ ದರ್ಶನ ಪಡೆದು ಸಿಎಂ ಬಿ.ಎಸ್ ಯಡಿಯೂರಪ್ಪ ಹೇಳಿಕೆ…

ಚಿಕ್ಕಮಗಳೂರು,ಜು,31,2019(www.justkannada.in): ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ  ಉದ್ಯಮಿ ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.

ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮುಗಿದ ನಂತರ  ಸಿದ್ಧಾರ್ಥ್  ಅವರ ಮೃತದೇಹವನ್ನ ಚಿಕ್ಕಮಂಗಳೂರಿಗೆ ತರಲಾಗಿದ್ದು ಕೆಫೆ ಕಾಫಿಡೇ ಗ್ಲೋಬಲ್ ಲೀ ಅವರಣದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿದೆ. ಈ ನಡುವೆ ಸಿಎಂ ಬಿ.ಎಸ್ ಯಡಿಯೂರಪ್ಪ ಅಲ್ಲಿಗೆ ತೆರಳಿ ಸಿದ್ಧಾರ್ಥ್ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದರು. ಪಾರ್ಥೀವ ಶರೀರಕ್ಕೆ ಹೂಗುಚ್ಛ ಇರಿಸಿ ಅಂತಿಮ ನಮನ ಸಲ್ಲಿಸಿದರು.

ಬಳಿಕ ಮಾತನಾಡಿದ ಸಿಎಂ ಬಿಎಸ್ ಯಡಿಯೂರಪ್ಪ, ಸಿದ್ಧಾರ್ಥ್ ಸರಳ ಸಜ್ಜನಿಕೆಯ ವ್ಯಕ್ತಿ. ಅವರ ಸಾವು ರಾಜ್ಯಕ್ಕೆ ಅತಿದೊಡ್ಡ ನಷ್ಟ.  ಇಂತಹ ಘಟನೆ ನಡೆಯಬಾರದಿತ್ತು. ಹಿಂದೆ ಮುಂದು ಹತ್ತಾರು ಕಾರುಗಳಲ್ಲಿ ಓಡಾಡುತ್ತಿದ್ದ ಮನುಷ್ಯ, ಅಂದು ಏಕೆ ಸಿದ್ಧಾರ್ಥ್ ಒಬ್ಬರೇ ಹೋದರು ಎಂದು ಕಳವಳ ವ್ಯಕ್ತಪಡಿಸಿದರು.

ಸಿದ್ಧಾರ್ಥ್ ಹಲವು ಸಂಸ್ಥೆಗಳನ್ನ ಸ್ಥಾಪಿಸಿ  35 ರಿಂದ 40 ಸಾವಿರ ಯುವಕರಿಗೆ ಉದ್ಯೋಗ ನೀಡಿದ್ದಾರೆ.  ಅವರು ಮೃತಪಟ್ಟಿದ್ದು ದುರ್ದೈವ. ಇಂತಹ ಅನಾಹುತ ಆಗಬಾರದಿತ್ತು ಎಂದು ಸಿಎಂ ಬಿ.ಎಸ್ ಯಡಿಯೂರಪ್ಪ ತಿಳಿಸಿದರು.

Key words:  death – businessman — biggest loss – state-CM- bs Yeddyurappa