ಮಹಿಳಾ ಉದ್ಯಮಿಗಳ ಒಕ್ಕೂಟಕ್ಕೆ ಡಿಜಿಟಲ್‌ ವೇದಿಕೆ ಕಲ್ಪಿಸಿ ನೆರವು- ಡಿಸಿಎಂ ಡಾ.ಅಶ್ವತ್ಥನಾರಾಯಣ್ ಭರವಸೆ…

ಬೆಂಗಳೂರು,ಮಾ,6,2020(www.justkannada.in):  ಮಹಿಳಾ ಉದ್ಯಮಿಗಳ ಒಕ್ಕೂಟದ ಎಲ್ಲ ಕೆಲಸವನ್ನು ಡಿಜಿಟಲ್‌ ವೇದಿಕೆಯಡಿ ತರಲು ಇಲಾಖೆಯಿಂದ ಸಂಪೂರ್ಣ ನೆರವು ನೀಡುವುದಾಗಿ ಐಟಿ-ಬಿಟಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಭರವಸೆ ನೀಡಿದ್ದಾರೆ.

ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ಉದ್ಯಮಿಗಳ ಒಕ್ಕೂಟ ಯುಬಿಯುಎನ್‌ಟಿಯು ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ್, “ಕಾಗದ ಪತ್ರದಲ್ಲಿ ನಡೆಯುತ್ತಿರುವ ಒಕ್ಕೂಟದ ಎಲ್ಲ ಕಾರ್ಯಗಳನ್ನು ಒಂದೇ ಡಿಜಿಟಲ್‌ ವೇದಿಕೆಗೆ ತರಲು ಐಟಿ-ಬಿಟಿ ಇಲಾಖೆ ಸಂಪೂರ್ಣ ನೆರವು ನೀಡುತ್ತದೆ,”ಎಂದರು.

“ಮಹಿಳೆಯರು, ಮಕ್ಕಳು ಹಾಗೂ ಕೃಷಿಕರಿಗೆ ವಿಶೇಷ ಬಜೆಟ್‌ ಕೊಟ್ಟಿರುವ ಜತೆಗೆ ಆರ್ಥಿಕ ವಲಯದಲ್ಲಿ ಬಹಳಷ್ಟು ಸುಧಾರಣೆ ತರುವ ಮೂಲಕ ಕರ್ನಾಟಕಕ್ಕೆ ವಿಶಿಷ್ಟ ನಾಯಕತ್ವ ಕೊಟ್ಟಿರುವ  ನಮ್ಮ ಮುಖ್ಯಮಂತ್ರಿಗಳು  ಈ ಕಾರ್ಯಕ್ರಮ ಉದ್ಘಾಟಿಸಿದ್ದಾರೆ. ಕಾರ್ಯಕ್ರಮದಲ್ಲಿ ಅವರ ಉಪಸ್ಥಿತಿಯೇ ದೊಡ್ಡ ಶಕ್ತಿ. ಆರ್ಥಿಕ ವಲಯದಲ್ಲಿ ಕಾನೂನು ಸುಧಾರಣೆ ತಂದು ಈಸ್‌ ಆಫ್‌ ಡೂಯಿಂಗ್‌ ಬಿಸಿನಿಸ್‌ಗೆ ಒತ್ತು ನೀಡಿದ್ದಾರೆ. ನ್ಯೂಜಿಲೆಂಡ್‌ ಜತೆಗೆ ಉದ್ದಿಮೆ ಒಪ್ಪಂದ ಮಾಡಿಕೊಂಡು ಕರ್ನಾಟಕವನ್ನು ನಂ 1 ಸ್ಥಾನಕ್ಕೆ ಕೊಂಡೊಯ್ಯುವರು,”ಎಂದು ಹೇಳಿದರು.

“ಈ ಕಾರ್ಯಕ್ರಮದ ಮೂಲಕ ಮಹಿಳಾ ಉದ್ಯಮಿಗಳ ಒಕ್ಕೂಟ ವಿಶ್ವ ಮಹಿಳಾ ದಿನಾಚರಣೆಯನ್ನು ಬಹಳ ಅರ್ಥಪೂರ್ಣವಾಗಿ ಆಚರಿಸಿದೆ. ಈ ಒಕ್ಕೂಟಕ್ಕೆ ಎಲ್ಲ ರೀತಿಯ ಸಹಕಾರ ಕೊಟ್ಟು, ಶಕ್ತಿ ತುಂಬಲು ನಮ್ಮ ಸರ್ಕಾರ ಸಿದ್ಧ,”ಎಂದು ಡಿಸಿಎಂ ಅಶ್ವಥ್ ನಾರಾಯಣ್ ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಕೈಗಾರಿಕ ಸಚಿವ ಜಗದೀಶ್‌ ಶೆಟ್ಟರ್‌, ಯುಬಿಯುಎನ್‌ಟಿಯು ಹಾಗೂ ಕರ್ನಾಟಕ ಕೌಶಲ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ರತ್ನಪ್ರಭಾ ಉಪಸ್ಥಿತರಿದ್ದರು.

Key words: DCM -Dr Ashwath narayan – digital platform – women- entrepreneurs- union