ಉನ್ನತಿ ಯೋಜನೆ ಮೂಲಕ ನವೋದ್ಯಮಗಳಿಗೆ ಪ್ರೋತ್ಸಾಹ: ಯುವ ಪ್ರತಿಭೆಗಳಿಗೆ ಆರ್ಥಿಕ ನೆರವಿನ ಚೆಕ್‌ ವಿತರಿಸಿದ ಡಿಸಿಎಂ

ಬೆಂಗಳೂರು: ವಿಶಿಷ್ಟ ಐಡಿಯಾಗಳ ಮೂಲಕ ನವೋದ್ಯಮಗಳ (ಸ್ಟಾರ್ಟ್ ಅಪ್‌) ಕನಸು ಕಾಣುತ್ತಿರುವ ಪರಿಶಿಷ್ಟ ಜಾತಿ- ವರ್ಗದ 19 ಮಂದಿ ಯುವ ಪ್ರತಿಭಾವಂತರ ಆಯ್ಕೆ ಪಟ್ಟಿಯನ್ನು ಪ್ರಕಟಿಸಿರುವ ಐಟಿ-ಬಿಟಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ಆಯ್ಕೆಯಾದ ಎಲ್ಲರಿಗೂ ಸರಕಾರದ ʼಎಲಿವೇಟ್ ಉನ್ನತಿ-2020ʼ ಯೋಜನೆ ಅಡಿಯಲ್ಲಿ ಪ್ರಶಸ್ತಿ ಮತ್ತು 1.42 ಕೋಟಿ ರೂಪಾಯಿ ಆರ್ಥಿಕ ನೆರವಿನ ಚೆಕ್‌ ವಿತರಿಸಿ ಶುಭ ಹಾರೈಸಿದರು.

ವಿಧಾನಸೌಧದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಆಯ್ಕೆಯಾದ ಎಲ್ಲರನ್ನು ಗೌರವಿಸಿದ ಡಿಸಿಎಂ; ಸರಕಾರ ನೀಡಿರುವ ನೆರವನ್ನು ವೈಜ್ಞಾನಿಕವಾಗಿ ಬಳಸಿಕೊಂಡು ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.

10ರಿಂದ 30 ಲಕ್ಷ ರೂ. ನೆರವು:

ಪರಿಶಿಷ್ಟ ಜಾತಿಯ 14 ಹಾಗೂ ಪರಿಶಿಷ್ಟ ವರ್ಗದ ಐವರು ಪ್ರತಿಭಾನ್ವಿತರಿಗೆ ಡಿಸಿಎಂ ಅವರು ಆರ್ಥಿಕ ನೆರವು ವಿತರಿಸಿದರಲ್ಲದೆ, ಈ ನೆರವು ಕನಿಷ್ಠ 10 ಲಕ್ಷ ರೂ.ಗಳಿಂದ ಗರಿಷ್ಠ 30 ಲಕ್ಷ ರೂ.ಗಳವರೆಗೆ ಇದೆ. ಸಮಾಜ ಕಲ್ಯಾಣ ಇಲಾಖೆ ಈ ನೆರವು‌ ನೀಡಲಿದೆ. ಒಟ್ಟು. 2.85 ಕೋಟಿಯಲ್ಲಿ ಈಗ ಅರ್ಧದಷ್ಟು ಕೊಟ್ಟಿದ್ದು ಮುಂದಿನ ದಿನಗಳಲ್ಲಿ ಉಳಿದ ಹಣ ನೀಡಲಾಗುವುದು ಎಂದರು.

ಬಯೋಟೆಕ್ನಾಲಜಿ, ಇಎಸ್‌ಡಿಎಂ, ಐಓಟಿ-ಐಟಿಇಎಸ್‌ ಕ್ಷೇತ್ರಗಳಿಗೆ ಸಂಬಂಧಿಸಿದ ನವೋದ್ಯಮ ಸ್ಥಾಪನೆಗೆ ಈ ನೆರವು ನೀಡಲಾಗಿದ್ದು, ಇದಕ್ಕೆ ಬೇಕಾದ ಅನುದಾನವನ್ನು ಸಮಾಜ ಕಲ್ಯಾಣ ಇಲಾಖೆ ನೀಡಿದೆ. ಈ ಸಂಬಂಧ ಸರಕಾರ ಮತ್ತು ಆಯ್ಕೆಗೊಂಡ ಅಭ್ಯರ್ಥಿಗಳ ನಡುವೆ ಒಪ್ಪಂದ ಏರ್ಪಟ್ಟಿದ್ದು, ಐಟಿ-ಬಿಟಿ ಇಲಾಖೆ ಸೂಕ್ತ ಮಾರ್ಗದರ್ಶನ ನೀಡಲಿದೆ.

ಬಯೋಟೆಕ್ನಾಲಜಿ ಕ್ಷೇತ್ರದಲ್ಲಿ ನವೋದ್ಯಮ ಆರಂಭಿಸುತ್ತಿರುವ ಬೀದರ್‌ನ ಅಗಾರಿಕಸ್‌ ಸಲ್ಯೂಶನ್ಸ್‌ ಕಂಪನಿಗೆ ಗರಿಷ್ಠ 30 ಲಕ್ಷ ರೂ. ನೆರವು ನೀಡಲಾಯಿತು. ಇದೇ ಕ್ಷೇತ್ರಕ್ಕೆ ಸಂಬಂಧಿಸಿದ ಬೆಂಗಳೂರಿನ ಕಾರ್ಬನ್‌ ಹಬ್ಸ್‌, ಬೆಂಗಳೂರಿನ ಝೀವಾ, ರಾಮನಗರದ ಶ್ರೀ ವಿನಾಯಕ ಎಂಟರ್‌ಪ್ರೈಸಸ್‌ಗೆ ತಲಾ 20 ಲಕ್ಷ ರೂ.ಗಳ ಚೆಕ್‌ ವಿತರಿಸಿದರು ಡಿಸಿಎಂ.

ಇಎಸ್‌ಡಿಎಂ ಕ್ಷೇತ್ರದಲ್ಲಿ ತೊಡಗಿರುವ ಮೈಸೂರಿನ ಆಲ್ಟಿವ್ಯೂಸ್‌ ಏರೋಸ್ಪೇಸ್‌, ಐಒಟಿ-ಐಟಿ-ಐಟಿಇಎಸ್‌ ವಿಭಾಗದ ಬೆಂಗಳೂರಿನ ಎಕ್ಸಾಪೆಂಟ್‌ ಎಂಜಿನಿಯರಿಂಗ್‌, ಐಟಿ-ಇಎಸ್ ವಿಭಾಗದಲ್ಲಿನ ಬೆಂಗಳೂರಿನ ವೆಜಲೈಸ್‌ ಪ್ಲ್ಯಾನ್ಸ್‌ಗೆ ತಲಾ 17 ಲಕ್ಷ ರೂ. ನೆರವು ನೀಡಲಾಯಿತು.

ಇಎಸ್‌ಡಿಎಂ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಬೆಂಗಳೂರಿನ ಎಲೆ ಪೋಯೇಬಿ, ಹುಬ್ಬಳ್ಳಿ ಧಾರವಾಡದ ಕಂಪ್ಲೆಮ್‌ ಟೆಕ್‌, ಬೆಂಗಳೂರಿನ ಇಮೇಜ್‌ ಫ್ರೇಮ್ಸ್‌, ಮೈಸೂರಿನ ವಿರೂಬಿ ಟೆಕ್ನಾಲಜಿಸ್‌ಗೆ ತಲಾ 16 ಲಕ್ಷ ರೂ. ನೆರವು ನೀಡಲಾಯಿತು.

ಉಳಿದಂತೆ; ಬಯೋಟೆಕ್ನಾಲಜಿ ಕ್ಷೇತ್ರದಲ್ಲಿ ತೊಡಗಿರುವ ಬೆಂಗಳೂರಿನ ಎಂವಿಎಸ್‌ ಟೆಕ್ನೋ ಸೆಲ್ಯೂಶನ್ಸ್‌, ಇಎಸ್‌ಡಿಎಂ ವಿಭಾಗದಲ್ಲಿನ ಬೆಂಗಳೂರು ನಗರದ ಅನಂತ ಎನರ್ಜಿ ಸಿಸ್ಟಮ್ಸ್‌, ಐಒಟಿ-ಐಟಿ-ಐಟಿಇಎಸ್‌ ವಿಭಾಗದಲ್ಲಿ ಬೆಂಗಳೂರಿನ ಪ್ರೋಟಾಸೆಲ್‌ ಸೆಲ್ಯೂಶನ್ಸ್‌, ಐಟಿ-ಐಟಿಇಎಸ್‌ ಕ್ಷೇತ್ರದ ಬೆಂಗಳೂರಿನ ದಿನ್‌ ಅರ್ಮಾನಿಯಾ, ಐಟಿ-ಐಟಿಇಎಸ್‌ ವಿಭಾಗದಲ್ಲಿ ಕಲಬುರಗಿಯ ಎಲಿಕ್ಸ್‌ ಟೆಕ್ನೋಕ್ರಾಫ್ಟ್‌, ಐಟಿ-ಐಟಿಎಸ್‌ದಲ್ಲಿ ಬೆಂಗಲೂರಿನ ನನ್‌ ಸೆಲೆನೆ, ಬಯೋಟೆಕ್ನಾಲಜಿ ಕ್ಷೇತ್ರದಲ್ಲಿ ಮೈಸೂರಿನ ಇಂಡೀಬೀನ್‌ ಸ್ಪೆಶಾಟಿ ಕಾಫ್‌ ಪ್ರೈವೇಟ್‌ ಲಿಮಿಟೆಡ್‌, ಎಸ್‌ಡಿಎಂ ಕ್ಷೇತ್ರದಲ್ಲಿ ಮೈಸೂರಿನ ಸ್ಪಾಟ್‌ ಅಂಡ್‌ ವ್ಯೂ ಟೆಕ್‌ ಸೆಲ್ಯೂಶನ್ಸ್‌ಗೆ ತಲಾ 10 ಲಕ್ಷ ರೂ.ಗಳ ಚೆಕ್‌ಗಳನ್ನು ಉಪ ಮುಖ್ಯಮಂತ್ರಿ ವಿತರಿಸಿದರು.

ಸಮಾನತೆಗಾಗಿ ಉನ್ನತಿ:

ಸಮಾಜದಲ್ಲಿ ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದಿರುವ ಪರಿಶಿಷ್ಟ ಜಾತಿ-ವರ್ಗದ ಪ್ರತಿಭಾವಂತ ಯುವಜನರಿಗೆ ಉನ್ನತಿ ಯೋಜನೆ ಮೂಲಕ ನವೋದ್ಯಮ ಸ್ಥಾಪಿಸಲು ನೆರವು ನೀಡಲಾಗಿದೆ. ಒಟ್ಟು 96 ಅರ್ಜಿಗಳು ಬಂದಿದ್ದು, ಆ ಪೈಕಿ 61 ಅರ್ಜಿಗಳನ್ನು ಶಾರ್ಟ್‌ಲಿಸ್ಟ್‌ ಮಾಡಿ ಅಂತಿಮವಾಗಿ 19 ಪ್ರತಿಭಾವ ಸಂಸ್ಥೆಗಳನ್ನು ಆಯ್ಕೆ ಮಾಡಲಾಗಿದೆ. ಹೊಸ ಆವಿಷ್ಕಾರಗಳನ್ನು ಆಯ್ಕೆ ಸಮಿತಿ ಪರಿಗಣಿಸಿದೆ. ಉದ್ಯಮ ಕ್ಷೇತ್ರದ ಅತ್ಯುತ್ತಮ ತಜ್ಞರು ಈ ಆಯ್ಕೆ ಮಾಡಿದ್ದಾರೆ. ಈ ಮೂಲಕ ಉನ್ನತಿಯೊಂದಿಗೆ ಸಮಾನತೆ ಸಾಧಿಸುವತ್ತ ಹೆಜ್ಜೆ ಇಡಲಾಗಿದ್ದು, ಬಾಬಾಸಾಹೇಬ್‌ ಅಂಬೇಡ್ಕರ್‌ ಅವರ ಕನಸು ನನಸು ಮಾಡುತ್ತಿದ್ದೇವೆ ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು.

ನಮ್ಮ ರಾಜ್ಯದಲ್ಲಿ ಉನ್ನತಿ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿದೆ. ಇದಕ್ಕೆ ಕಾರಣ ಆಯ್ಕೆ ಸಮಿತಿಯಲ್ಲಿರುವ ಹೆಸರಾಂತ ತಜ್ಞರು. ಆದರೆ, ಇತರೆ ರಾಜ್ಯಗಳಲ್ಲಿ ಇಂಥ ಯೋಜನೆಗಳು ವಿಫಲವಾಗಿವೆ ಎಂದ ಡಿಸಿಎಂ, ಯಾವುದೇ ಐಡಿಯಾ ಮಾಡಿದರೂ ಅದನ್ನು ಹೂಡಿಕೆ- ವೆಂಚರ್‌ ಕ್ಯಾಪಿಟಲ್‌ ಗಳಿಸುವ ಮಟ್ಟಕ್ಕೆ ತರುವುದಕ್ಕೆ ಅನೇಕ ಪ್ರಕ್ರಿಯೆಗಳು ನಡೆಯಬೇಕಾಗುತ್ತದೆ. ಆ ರೀತಿಯ ಪ್ರಕ್ರಿಯೆಗಳು ಸುಲಭ ಆಗುವಂತೆ ಸರಕಾರ ಯುವಜನರಿಗೆ ನೆರವಾಗುತ್ತಿದೆ ಎಂದರು ಡಿಸಿಎಂ.

ಸಮಾಜ ಕಲ್ಯಾಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನಾಗಲಾಂಬಿಕಾ ದೇವಿ ಮಾತನಾಡಿ, ಈ ಉನ್ನತಿ ಯೋಜನೆಗೆ ಸಮಾಜ ಕಲ್ಯಾಣ ಇಲಾಖೆ ನೆರವು‌ ನೀಡುತ್ತಿದ್ದು ಮುಂದಿನ ದಿನಗಳಲ್ಲಿ ಅಗತ್ಯ ಬಿದ್ದರೆ ಇನ್ನೂ ಹೆಚ್ಚಿನ ಹಣ ನೀಡಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸ್ಟಾರ್‌ಟಪ್‌ ವಿಷನ್‌ ಗ್ರೂಪ್‌ ಅಧ್ಯಕ್ಷ ಪ್ರಶಾಂತ್‌ ಪ್ರಕಾಶ್‌, ಐಟಿ-ಬಿಟಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ.ಎಸ್‌ ರಮಣ ರೆಡ್ಡಿ ಮಾತನಾಡಿದರು.

ಸಮಾಜ ಕಲ್ಯಾಣ ಇಲಾಖೆಯ ಆಯುಕ್ತ ರವಿಕುಮಾರ್‌ ಸುರಪುರ್‌, ಐಟಿ-ಬಿಟಿ ಇಲಾಖೆ ನಿರ್ದೇಶಕಿ ಮೀನಾ ನಾಗರಾಜ್‌ ಮುಂತಾದವರು ಪಾಲ್ಗೊಂಡಿದ್ದರು.

ಆವಿಷ್ಕಾರದ ಹರಿಕಾರ ಕೃತಿ ಲೋಕಾರ್ಪಣೆ;

ಈ ಕಾರ್ಯಕ್ರಮಕ್ಕೂ ಮುನ್ನ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಖ್ಯಾತ ಲೇಖಕ ಅವಿ ಜೂರಿಚ್‌ ಇಂಗ್ಲಿಷ್‌ನಲ್ಲಿ ಬರೆದಿರುವ Thou Shalt Innovate ಕೃತಿಯನ್ನು ವಿಶ್ವವಾಣಿ ಪತ್ರಿಕೆಯ ಸಂಪಾದಕ ವಿಶ್ವೇಶ್ವರ ಭಟ್‌ ಅವರು ʼಆವಿಷ್ಕಾರದ ಹರಿಕಾರʼ ಹೆಸರಿನಲ್ಲಿ ಕನ್ನಡಕ್ಕೆ ಅನುವಾದ ಮಾಡಿದ್ದು, ಆ ಕೃತಿಯನ್ನು ಲೋಕಾರ್ಪಣೆ ಮಾಡಿದರು.

ಈ ಕೃತಿಯಲ್ಲಿ ಇಸ್ರೇಲ್‌ ದೇಶದ ಬೆಳವಣಿಗೆಯನ್ನು ಮನೋಜ್ಞವಾಗಿ ಚಿತ್ರಿಸಲಾಗಿದೆ. ಆವಿಷ್ಕಾರ ಕ್ಷೇತ್ರದಲ್ಲಿ ತೊಡಗಿಕೊಳ್ಳುವ ಯುವ ಜನರಿಗೆ ಕೃತಿ ದಾರಿದೀಪವಾಗುತ್ತದೆ ಎಂದು ಇದೇ ವೇಳೆ ವಿಶ್ವೇಶ್ವರ ಭಟ್‌ ಹೇಳಿದರು.

ಈ ಸಂದರ್ಭದಲ್ಲಿ ದಕ್ಷಿಣ ಭಾರತದ ಇಸ್ರೇಲ್‌ ಕಾನ್ಸುಲೇಟ್‌ ಜನರಲ್‌ ಆಗಿರುವ ಜೋನಾಥನ್‌ ಜಡ್ಕಾ ಇದ್ದರು.