ಸರ್ಕಾರಿ ಕಾಲೇಜುಗಳ ಅಭಿವೃದ್ಧಿ ಹಾಗೂ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಆದ್ಯತೆ-ಮೈಸೂರಿನಲ್ಲಿ ಡಿಸಿಎಂ ಡಾ.ಸಿ.ಎನ್ ಅಶ್ವಥ್ ನಾರಾಯಣ್ ನುಡಿ…

ಮೈಸೂರು ಸೆ.20,2019(www.justkannada.in): ಸರ್ಕಾರಿ ಕಾಲೇಜುಗಳ ಅಭಿವೃದ್ಧಿಗೆ ಹಾಗೂ ಶಿಕ್ಷಣದ ಗುಣಮಟ್ಟವನ್ನು ಮತ್ತಷ್ಟು ಹೆಚ್ಚಿಸಲು ಸರ್ಕಾರದಿಂದ ಪೂರಕವಾದ ಸಹಕಾರ ನೀಡಲಾಗುವುದು ಎಂದು ‌ಉಪಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ, ಐಟಿ.ಮತ್ತು ಬಿಟಿ ಸಚಿವರಾದ ಡಾ.ಸಿ.ಎನ್ ಅಶ್ವಥ್ ನಾರಾಯಣ ಅವರು‌ ಹೇಳಿದರು.

ನಗರದ ಮಹಾರಾಣಿ ಕಲಾ‌ ಕಾಲೇಜಿಗೆ ಭೇಟಿ ‌ನೀಡಿದ ಅವರು ಕಾಲೇಜಿನ‌ ಹೊರಾಂಗಣದಲ್ಲಿ ‌ಕಾಂಪೌಂಡ್ ನಿರ್ಮಿಸಲು ಸ್ಥಳ ವೀಕ್ಷಣೆ ಮಾಡಿ ಮಾತನಾಡಿದ  ಡಿಸಿಎಂ ಅಶ್ವಥ್ ನಾರಾಯಣ್,  ಕೂಡಲೆ ಕಾಂಪೌಂಡ್ ನಿರ್ಮಾಣಕ್ಕೆ ಅನುದಾನ‌ ನೀಡಲಾಗುವುದು ಹಾಗೂ ಇಲ್ಲಿ ‌ಹುಡುಗಿಯರು ಮಾತ್ರ ಇದ್ದು, ಅವರಿಗೆ ಸೂಕ್ತ ರಕ್ಷಣೆ ನೀಡುವ ಮೂಲಕ ಅಗತ್ಯವಾದ ಮೂಲ ಸೌಕರ್ಯಗಳನ್ನು ಒದಗಿಸಕೊಡಲು ನಾವು ಸಿದ್ದರಿದ್ದೇವೆ ಎಂದರು.

ರಾಜ್ಯದಲ್ಲಿ ಮೈಸೂರು ಶಿಕ್ಷಣ ಕ್ಷೇತ್ರದಲ್ಲಿ ‌ಉತ್ತಮ‌ ಸ್ಥಾನವನ್ನು ‌ಪಡೆದಿದೆ. ಅಂತಹ ನಗರದಲ್ಲಿ ಸರ್ಕಾರಿ‌ ಕಾಲೇಜುಗಳು ಮತ್ತಷ್ಟು ಅಭಿವೃದ್ಧಿ ಹೊಂದುವ ಅವಶ್ಯಕತೆ ಇದೆ. ಶೌಚಾಲಯ, ಕ್ಯಾಂಟೀನ್, ಗ್ರಂಥಾಲಯ ‌ಹೀಗೆ‌ ಹಲವಾರು ಸಮಸ್ಯೆಗಳನ್ನು ಹಲವಾರು ಕಾಲೇಜುಗಳು‌ ಹೊಂದಿದ್ದು, ರಾಜ್ಯಾದ್ಯಂತ ‌ಕಾಲೇಜುಗಳ ಅಭಿವೃದ್ಧಿಗೆ ಹಾಗೂ‌ ಶಿಕ್ಷಣದ ಗುಣಮಟ್ಟಕ್ಕೆ ನಾನು‌ ಮೊದಲನೇ ಆಧ್ಯತೆ ನೀಡುತ್ತೇನೆ ಎಂದರು.

ಕಾಲೇಜುಗಳ ಜೊತೆಯಲ್ಲಿ ಐಟಿ ಬಿಟಿ ಕಂಪನಿಗಳ‌ ಸಂಪರ್ಕವನ್ನು ಕಲ್ಪಿಸಲು ಚಿಂತನೆ ನಡೆಸಲಾಗಿದ್ದು, ಇದರಿಂದ ಕಾಲೇಜು‌ ವಿದ್ಯಾರ್ಥಿಗಳಿಗೆ ಕಂಪನಿಗಳ ಒಡನಾಟ ಬೆಳೆಯಲಿದ್ದು, ಶಿಕ್ಷಣ ಮುಗಿದ ನಂತರ ಉದ್ಯೋಗ ಪಡೆಯಲು ಅನುಕೂಲವಾಗಲಿದೆ ಎಂದರು.

ಮಹಾರಾಣಿ ಕಾಲೇಜಿನ‌ ಕಟ್ಟಡವನ್ನು ವೀಕ್ಷಣೆ ಮಾಡಿ ಅಲ್ಲಿ ಕಾರಣಾಂತರಗಳಿಂದ ಗ್ರಂಥಾಲಯ ಮುಚ್ಚಲ್ಪಟ್ಟಿದ್ದು, ಅದನ್ನು ಪ್ರಾಂಶುಪಾಲರು ಸಂಬಂಧ ಪಟ್ಟವರೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಿಕೊಂಡು ಶೀಘ್ರವಾಗಿ ಗ್ರಂಥಾಲಯ ತೆರೆಯುವಂತೆ  ಸೂಚಿಸಿದರು.

ಈ ಸಂದರ್ಭದಲ್ಲಿ ಶಾಸಕ ಎಲ್.ನಾಗೇಂದ್ರ, ಮುಖಂಡರಾದ ಮಂಜುನಾಥ್, ಶಿವಣ್ಣ ಹಾಗೂ ಕಾಲೇಜಿನ‌ ಪ್ರಾಂಶುಪಾಲರು ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Key words: DCM -Ashwath Narayan – Mysore – development – government colleges – quality of education.