ಕೆ.ಸಿ ಜನರಲ್ ಆಸ್ಪತ್ರೆ ಆವರಣದಲ್ಲಿ 100 ಹಾಸಿಗೆಗಳ ಸುಸಜ್ಜಿತ ಮಾಡ್ಯೂಲರ್ ಐಸಿಯು

kannada t-shirts

ಬೆಂಗಳೂರು,ಸೆಪ್ಟಂಬರ್,17,2020(www.justkannada.in):  ಮಲ್ಲೇಶ್ವರದ ಕೆ.ಸಿ ಜನರಲ್ ಆಸ್ಪತ್ರೆ ಆವರಣದಲ್ಲಿ 100 ಹಾಸಿಗೆಗಳ ಕೋವಿಡ್ ಮಾಡ್ಯೂಲರ್ ಐಸಿಯು ಘಟಕವನ್ನು ಸ್ಥಾಪಿಸಲಾಗಿದ್ದು, ಅದು ಇನ್ನು ಹತ್ತು ದಿನಗಳಲ್ಲಿ ಕಾರ್ಯಾರಂಭ ಮಾಡಲಿವೆ ಎಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.

ಸರಕು ಸಾಗಣೆ ಕಂಟೇನರ್ ಗಳಲ್ಲಿ 50 ಹಾಸಿಗೆಗಳ ಐಸಿಯು ಮತ್ತು ಆಸ್ಪತ್ರೆ ಆವರಣದಲ್ಲೇ ಇದ್ದ ಐಪಿಪಿ ಕಟ್ಟಡದಲ್ಲಿ 50 ಹಾಸಿಗೆಗಳ ರಿಮೋಟ್ ಐಸಿಯು ಸಿದ್ಧಪಡಿಸಲಾಗಿದೆ. ಇವೆರಡೂ ಘಟಕಗಳನ್ನು ಖುದ್ದು ಬುಧವಾರ ಪರಿಶೀಲಿಸಿದ ಡಿಸಿಎಂ ಪ್ರಗತಿಯನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು.

11 ಮಂದಿ ದಾನಿಗಳ ನೆರವಿನಿಂದ ಇಷ್ಟೆಲ್ಲ ವ್ಯವಸ್ಥೆ ಮಾಡಲಾಗಿದೆ. ಕೋವಿಡ್ ಸಂಕಷ್ಟ ಕಾಲದಲ್ಲಿ ಜನರ ನೆರವಿಗೆ ಬಂದ ದಾನಿಗಳಿಗೆ ಸರಕಾರ ಋಣಿಯಾಗಿದೆ ಎಂದು ತಿಳಿಸಿದರು.

ಈ ಮೊದಲು ಈ ಆಸ್ಪತ್ರೆಯಲ್ಲಿ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುವುದು ಕಷ್ಟವಾಗುತ್ತಿತ್ತು. ಐಸಿಯುಗಳು ಸೇರಿ ಸಾಮಾನ್ಯ ಹಾಸಿಗೆಗಳ ಕೊರತೆ ಇತ್ತು. ಈ ಹಿನ್ನೆಲೆಯಲ್ಲಿ ಐಪಿಪಿ ಕಚೇರಿಯನ್ನು ಬೇರೆಡೆಗೆ ಸ್ಥಳಾಂತರಿಸಿ ಆ ಕಟ್ಟಡದಲ್ಲಿ 50 ಅತ್ಯಾಧುನಿಕ ವೆಂಟಿಲೇಟರುಗಳನ್ನು ಆಳವಡಿಸಿ ಅದನ್ನು ಆಧುನಿಕವಾದ ತೀವ್ರನಿಗಾ ಘಟಕವನ್ನಾಗಿ ರೂಪಿಸಲಾಗಿದೆ. ಎಲ್ಲ ವೆಂಟಿಲೇಟರುಗಳಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳಿಗೆ ದ್ರವರೂಪದ ಆಮ್ಲಜನಕ ಪೂರೈಸುವ ವ್ಯವಸ್ಥೆ ಮಾಡಲಾಗಿದೆ. ಇವುಗಳಿಗೆ ಆತ್ಯಾಧುನಿಕ ಮಾನಿಟರ್ ಗಳನ್ನು ಕೂಡ ಆಳವಡಿಸಲಾಗುತ್ತಿದ್ದು, ಅವುಗಳ ಖರೀದಿಗೆ ಈಗಾಗಲೇ ಸರಕಾರ ಅನುಮತಿ ನೀಡಿದೆ ಎಂದು ಉಪ ಮುಖ್ಯಮಂತ್ರಿ ಮಾಹಿತಿ ನೀಡಿದರು.

ಈ ಘಟಕಗಳಿಗೆ ಇನ್ನು ಅಗತ್ಯವಿರುವ ಇತರೆ ಅಗತ್ಯ ಉಪಕರಣಗಳನ್ನು ಶೀಘ್ರವೇ ಒದಗಿಲಾಗುವುದು. ಜತೆಗೆ ಸಿಬ್ಬಂದಿಯನ್ನೂ ನಿಯೋಜಿಸಲಾಗುವುದು. ಬೆಂಗಳೂರಿನ ಪ್ರಮುಖ ಆಸ್ಪತ್ರೆಗಳಲ್ಲಿ ಒಂದಾದ ಕೆಸಿ ಜನರಲ್ ಆಸ್ಪತ್ರೆಯೂ ಒಂದಾಗಿದ್ದು, ಇನ್ನು ಮುಂದೆ ಕೋವಿಡ್ ರೋಗಿಗಳಿಗೆ ಇಲ್ಲಿ ಉತ್ತಮ ಚಿಕಿತ್ಸೆ ಸಿಗಲಿದೆ ಎಂದು ಡಿಸಿಎಂ ಹೇಳಿದರು.

ಹೇಗಿರುತ್ತದೆ ಕೋವಿಡ್ ಮಾಡ್ಯೂಲರ್ ಐಸಿಯು?

ಈ ಐಸಿಯುಗಳ ಅನುಕೂಲವೆಂದರೆ, ಎಲ್ಲಿಗೆ ಬೇಕಾದರೂ ಇವುಗಳನ್ನು ಸುಲಭವಾಗಿ ಸಾಗಿಸಬಹುದು. ಸುಲಭವಾಗಿ ಇಡಬಹುದು. ನಿರ್ವಹಣೆಯೂ ಸುಲಭ. ಪ್ರಾಯೋಗಿಕವಾಗಿ ಇವುಗಳನ್ನು ಮೊದಲು ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಉಪ ಮುಖ್ಯಮಂತ್ರಿಗಳ ಪರಿಕಲ್ಪನೆಯಂತೆ ಬಳಸಲಾಗುತ್ತಿದೆ. ಅಲ್ಲಿ ಒಮ್ಮೆಲೆ ಇಂಥ 10 ಕಂಟೇನರ್ ಐಸಿಯುಗಳನ್ನು ಹಾಕಿದ್ದು, ಪ್ರತಿ ಐಸಿಯುನಲ್ಲಿ ಐದು ಸುಸಜ್ಜಿತ, ಅತ್ಯಾಧುನಿಕ ಹಾಸಿಗೆಗಳು ಇರುತ್ತವೆ.

ಈ ಐಸಿಯು ಒಂದರ ಗಾತ್ರ 12.135 X 3.3 X 2.62 ಮೀಟರ್. ಹಡಗುಗಳಲ್ಲಿ ಸರಕು ಸಾಗಾಣಿಕೆಗೆ ಬಳಸಲಾಗುವ ಬೃಹತ್ ಗಾತ್ರದ ಕಂಟೈನರುಗಳಲ್ಲಿ ಈ ಐಸಿಯುಗಳನ್ನು ಅಭಿವೃದ್ಧಿ ಮಾಡಲಾಗಿದೆ. ಇದನ್ನು ಸಾಗಿಸುವುದು ಸುಲಭ ಹಾಗೂ ಯಾವುದೇ ವಾತಾವರಣಕ್ಕೂ ಸರಿಹೊಂದುವ ತಾಂತ್ರಿಕ ಸೌಲಭ್ಯವನ್ನು ಇವು ಹೊಂದಿವೆ. ಆಮ್ಲಜನಕ ವ್ಯವಸ್ಥೆ ಜತೆಗೆ ಹವಾನಿಯಂತ್ರಿತ ವ್ಯವಸ್ಥೆ ಮಾಡಲಾಗಿದೆ. ಕಂಪ್ಲೀಟ್ ಏರ್ ಟೈಟ್ ಆಗಿರುತ್ತದೆ. ಕ್ಯಾಮೆರಾ ಕೂಡ ಇದ್ದು, ಆನ್ ಲೈನ್ ಚಿಕಿತ್ಸೆ ನೀಡಲು ಬೇಕಾದ ಎಲ್ಲ ಪರಿಕರಗಳನ್ನು ಅಳವಡಿಸಲಾಗಿದೆ. ಎಲ್ಲ ಕಂಟೈನರುಗಳಲ್ಲಿ ಶುದ್ಧ ಗಾಳಿಯನ್ನು ತುಂಬಿಸಲಾಗಿದ್ದು, ಪ್ರತ್ಯೇಕವಾದ ಸಿವಿಯೇಜ್ ಮತ್ತು ನೀರಿನ ಸಂಪರ್ಕವೂ ಇರುತ್ತದೆ. ಪ್ರತಿ ಕಂಟೈನರ್’ಗೆ 5 ಬೆಡ್ ಇದ್ದು, ಅದಕ್ಕೆ ಇನ್ನೊಂದು ಕಂಟೈನರ್ ಸೇರಿದರೆ 10 ಬೆಡ್’ಗಳಾಗುತ್ತವೆ. ಆಯಾ ಆಸ್ಪತ್ರೆಗಳ ವೈದ್ಯರೇ ಇವುಗಳಲ್ಲಿ ದಾಖಲಾಗಿರುವ ರೋಗಿಗಳಿಗೂ ಚಿಕಿತ್ಸೆ ನೀಡಬಹುದು.

ದೇಶದಲ್ಲೇ ಹೊಸ ಪ್ರಯೋಗ

ಸರಕು ಸಾಗಣೆ ಮಾಡುವ ಕಂಟೈನರುಗಳಲ್ಲಿ ಐಸಿಯು ಮಾಡಬಹುದು ಎಂಬ ಆಲೋಚನೆಯೇ ವಿನೂತನ. ದೇಶದಲ್ಲೇ ಮೊತ್ತಮೊದಲ ಬಾರಿಗೆ ಇಂಥ ತುರ್ತು ಚಿಕಿತ್ಸಾ ಘಟಕಗಳನ್ನು ನಮ್ಮ ರಾಜ್ಯದಲ್ಲಿ ಸಿದ್ಧಪಡಿಸಲಾಗಿದೆ. ನಮ್ಮ ಸಂಶೋಧಕರು, ತಜ್ಞರ ಸೃಜನಶೀಲತೆಗೆ ಇದೊಂದು ಉತ್ತಮ ಉದಾಹರಣೆ. ಪ್ರಸಕ್ತ ಕಾಲದ ಅಗತ್ಯಕ್ಕೆ ತಕ್ಕಂತೆ ಇವುಗಳನ್ನು ಅತ್ಯಾಧುನಿಕವಾಗಿ ರೂಪಿಸಲಾಗಿದೆ. ಗುಣಮಟ್ಟಕ್ಕೆ ಹೆಚ್ಚು ಒತ್ತು ನೀಡಲಾಗಿದೆ ಹಾಗೂ ಬಳಸಲಾಗಿರುವ ಎಲ್ಲ ಉಪಕರಣಗಳು ಉತ್ತಮವಾಗಿವೆ ಎಂದು ಡಾ. ಸಿ.ಎನ್. ಅಶ್ವತ್ಥನಾರಾಯಣ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರಾಯೋಗಿಕವಾಗಿ ಮೊದಲಿಗೆ ಮಲ್ಲೇಶ್ವರದ ಕೆ.ಸಿ. ಜನರಲ್ ಆಸ್ಪತ್ರೆಗೆ ಹತ್ತು ಕಂಟೈನರು ಗಳನ್ನು ಒದಗಿಸಲಾಗುತ್ತಿದೆ. ಅಲ್ಲಿನ ವೈದ್ಯರೇ ಇವುಗಳಲ್ಲಿ ದಾಖಲಾಗುವ ರೋಗಿಗಳಿಗೆ ಚಿಕಿತ್ಸೆ ನೀಡುವರು. ತುರ್ತು ಸಂದರ್ಭಗಳು, ಅದರಲ್ಲೂ ನೈಸರ್ಗಿಕ ವಿಕೋಪದಂಥ ದುರಂತಗಳು ಎದುರಾದಾಗ ಇಂಥ ಐಸಿಯುಗಳು ಹೆಚ್ಚು ಪರಿಣಾಮಕಾರಿ.dcm-ashwath-narayan-100-beds-equipped-modular-icu-kc-general-hospital

ಶಸ್ತ್ರಚಿಕಿತ್ಸಾ ಘಟಕ ಹಾಗೂ ಕ್ಲೀನ್ ರೂಮುಗಳನ್ನು ಅಭಿವೃದ್ಧಿಪಡಿಸುವಲ್ಲಿ ಹೆಸರಾಗಿರುವ ಬೆಂಗಳೂರು ಮೂಲದ ’ರಿನ್ಯಾಕ್’ ಎಂಬ ಕಂಪನಿ ಇವುಗಳನ್ನು ಅಭಿವೃದ್ಧಿಪಡಿಸಿದೆ. ಇದನ್ನು ಸಾಗಿಸುವುದು ಅತ್ಯಂತ ಸುಲಭ. ಯಾವುದೇ ವಾತಾವರಣಕ್ಕೂ ಸರಿಹೊಂದುವ ತಾಂತ್ರಿಕ ಸೌಲಭ್ಯವನ್ನು ಹೊಂದಿರುತ್ತವೆ. ಇವುಗಳನ್ನು ಜಾಗತಿಕ ಗುಣಮಟ್ಟವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಸಿದ್ಧಪಡಿಸಲಾಗಿದೆ.

ಹಾಸಿಗೆಗಳ ಕೊರತೆ ಇಲ್ಲ:

ಬೆಂಗಳೂರಿನಲ್ಲಿ ಕೋವಿಡ್ ಮತ್ತು ಕೋವಿಡ್ಯೇತರ ರೋಗಿಗಳಿಗೆ ಹಾಸಿಗೆಗಳ ಕೊರತೆ ಇಲ್ಲ. ಎಲ್ಲ ಆಸ್ಪತ್ರೆ ಗಳಲ್ಲೂ ಅಗತ್ಯ ವ್ಯವಸ್ಥೆ ಮಾಡಲಾಗಿದೆ. ಕೆಲ ಆಸ್ಪತ್ರೆಗಳಲ್ಲಿ ಅತ್ಯಂತ ಕಡಿಮೆ ಹಾಸಿಗೆಗಳಿದ್ದವು. ಈಗ ಅಂತಹ ಆಸ್ಪತ್ರೆಗಳಲ್ಲಿ ನೂರಾರು ಹಾಸಿಗೆಗಳು ಇವೆ. ಕೆಲವೆಡೆಯಂತೂ 400, 600 ಹಾಸಿಗೆ ವ್ಯವಸ್ಥೆ ಮಾಡಲಾಗಿದೆ. ಜಯನಗರ, ಸಿವಿ ರಾಮನ್ ನಗರ ಆಸ್ಪತ್ರೆಗಳಲ್ಲಿ ಹೆಚ್ಚಿನ ಹಾಸಿಗೆಗಳನ್ನು ಹಾಕಲಾಗಿದೆ. ಹೀಗಾಗಿ ಜನರು ಆತಂಕಪಡುವ ಅಗತ್ಯವಿಲ್ಲ ಎಂದು ಡಿಸಿಎಂ ಅವರು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

key words: dcm -Ashwath narayan-100 beds- equipped -modular ICU -KC General Hospital

website developers in mysore