ಡಿಸಿ v/s ಪಾಲಿಕೆ ಆಯುಕ್ತೆ : ಮೈಸೂರು ಜಿಲ್ಲಾಧಿಕಾರಿ ವಿರುದ್ಧ ಗಂಭೀರ ಆರೋಪ ಮಾಡಿದ ಶಿಲ್ಪಾನಾಗ್.

ಮೈಸೂರು,ಮೇ,3,2021(www.justkannada.in): ಮೈಸೂರಿನಲ್ಲಿ ಕೋವಿಡ್ ನಿರ್ವಹಣೆ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಶಿಲ್ಪಾನಾಗ್ ಅವರು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ನಡೆ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.jk

ಈ ಬಗ್ಗೆ ತುರ್ತುಸುದ್ಧಿಗೋಷ್ಠಿ ನಡೆಸಿದ ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ದುಃಖಿಸುತ್ತಲೇ ಜಿಲ್ಲಾಡಳಿತದ ಕಾರ್ಯವೈಖರಿಗೆ ಬೇಸರ ವ್ಯಕ್ತಪಡಿಸಿದ್ದಾರೆ. ನಾನು ಅತ್ಯಂತ ದುಃಖದ ಸಂಗತಿಯಲ್ಲಿ‌ ಮಾತನಾಡುತ್ತಿದ್ದೇನೆ. ನಗರ ಪ್ರದೇಶಕ್ಕೆ ಒಂದು ಮಾನದಂಡ, ಗ್ರಾಮೀಣ ಪ್ರದೇಶಕ್ಕೆ ಒಂದು ಮಾನದಂಡ ನೀಡಲಾಗುತ್ತಿದೆ. ಸೂಕ್ತವಾಗಿ ಕೊರೊನಾ ನಿರ್ವಹಣೆ ಮಾಡಿದ್ರೂ, ಪಾಲಿಕೆ ಕೆಲಸ ಮಾಡ್ತಿಲ್ಲ ಎಂದು ಬಿಂಬಿಸಲಾಗ್ತಿದೆ. ಡಿಸಿ ಅವರು ಪಾಲಿಕೆ ವಿರುದ್ದ ಸಮರ ಸಾರುತ್ತಿದ್ದಾರೆ. ಸಿಟಿಯಲ್ಲಿ ಕಮಿಷನರ್ ವಿಫಲವಾಗಿದ್ದಾರೆ ಅಂತಾರೆ. ಜಿಲ್ಲಾಧಿಕಾರಿಗಳು ಈ ರೀತಿ ಹೇಳುತ್ತಿದ್ದಾರೆ. ಏನು ಕೆಲಸ ಮಾಡಿಲ್ಲ ಎಂಬ ಬಣ್ಣ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ಜಿಲ್ಲಾಧಿಕಾರಿಗಳ ಡಿಸಿ ರೋಹಿಣಿ ಸಿಂಧೂರಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಜಿಲ್ಲಾಡಳಿತದಿಂದ‌ ನಮಗೆ ಯಾವುದೇ ಸಹಕಾರ ದೊರೆತಿಲ್ಲ.ಸಿಎಸ್‌ಆರ್ ಫಂಡ್‌ನಿಂದ ನಾವು ಕೆಲಸ ಮಾಡುತ್ತಿದ್ದೇವೆ. ಎಲ್ಲರಿಗೂ ಒಂದು  ಸಹನೆ ಇರುತ್ತೆ, ಸಹನೆ ಒಡೆದಾಗ ಏನು ಮಾಡಬೇಕು. ಒಬ್ಬರು ಐಎಎಸ್ ಅಧಿಕಾರಿಯಾಗಿ ಮತ್ತೊಬ್ಬ ಅಧಿಕಾರಿ ಮೇಲೆ ದಬ್ಬಾಳಿಕೆ ಮಾಡೋದು ಎಷ್ಟು ಸರಿ.? ನನ್ನನ್ನ ತುಳಿಯುವ ವ್ಯವಸ್ಥಿತ ಪಿತೂರಿ ನಡೆದಿದೆ. ಅವರ ಇಗೋದಿಂದ ನಾವು ಮಾಡುವ ಕೆಲಸಕ್ಕೆ ಮನ್ನಣೆ ಸಿಗ್ತಿಲ್ಲ ಎಂದು ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಬೇಸರ ವ್ಯಕ್ತಪಡಿಸಿದರು.

 ರಾಜೀನಾಮೆಗೆ ನಿರ್ಧಾರ.

ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ನಡೆಯಿಂದ ಬೇಸರಗೊಂಡಿರುವ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ರಾಜಿನಾಮೆಗೆ ನಿರ್ಧಾರ ಮಾಡಿದ್ದಾರೆ. ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ರಾಜಿನಾಮೆ ನೀಡುವುದಾಗಿ ಹೇಳಿದ್ದಾರೆ. ಅಲ್ಲದೆ  ಈ ರೀತಿಯ ಜಿಲ್ಲಾಧಿಕಾರಿ  ಯಾವುದೇ ಜಿಲ್ಲೆಗೂ ಸಿಗಬಾರದು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಾನು ಐಎಎಸ್ ಅಧಿಕಾರಿಯಾಗಿ ಸರ್ಕಾರದ ಮುಖ್ಯಕಾರ್ಯದರ್ಶಿಗಳಿಗೆ ರಾಜೀನಾಮೆ‌ ಸಲ್ಲಿಸುತ್ತಿದ್ದೇನೆ. ಯಾವುದೇ ಜಿಲ್ಲೆಗೂ ಇಂತಹ ಜಿಲ್ಲಾಧಿಕಾರಿಗಳು ಬೇಡ. ಅವರ ದುರಂಹಕಾರದಿಂದ ಈ ರೀತಿ ಪರಿಸ್ಥಿತಿ ಬಂದಿದೆ. ಒಂದು ವಾರದಿಂದ ನನಗೆ ಮಾನಸಿಕವಾಗಿ ಹಿಂಸೆಯಾಗುತ್ತಿದೆ ಎಂದು ಶಿಲ್ಪನಾಗ್ ಅಸಮಧಾನ ವ್ಯಕ್ತಪಡಿಸಿದ್ದಾರೆ.

ವೈಯಕ್ತಿಕ ದ್ವೇಷವಿದ್ದರೆ ನನ್ನ ಮೇಲೆ ತೀರಿಸಿಕೊಳ್ಳಲಿ. ಅದನ್ನ ಬಿಟ್ಟು ಮೈಸೂರು ಪಾಲಿಕೆ ಅಧಿಕಾರಿಗಳು ಹಾಗೂ ಮೈಸೂರು ಜನತೆಗೆ ಅವಮಾನ ಮಾಡೋದು ಬೇಡ. ಉಸಿರುಗಟ್ಟಿದ ವಾತಾವರಣದಲ್ಲಿ ಕೆಲಸ ಮಾಡಲು ಆಗುತ್ತಿಲ್ಲ. ಹಾಗಾಗಿ ಐಎಎಸ್ ಹುದ್ದೆಗೆ ನಾನು ರಾಜೀನಾಮೆ ನೀಡುತ್ತಿದ್ದೇನೆ. ಇದರಿಂದ ಯಾರಿಗೆ ಸಂತೋಷ ಆಗುತ್ತೋ ಆಗಲಿ. ಮೈಸೂರು ಜನತೆ ಬಗ್ಗೆ ನನಗೆ ಹೆಮ್ಮೆ ಇದೆ.  ಪ್ರತಿಯೋಂದಕ್ಕೂ ಜಾತಿ ಲೇಪನ ಹಾಕ್ತಿದ್ದಾರೆ. ಜಾತಿ ವಿಚಾರದಲ್ಲೂ ನನ್ನ ಬಗ್ಗೆ ಮಾತನಾಡಿದ್ದಾರೆ. ನನ್ನ ಬಗ್ಗೆ ಅಪಪ್ರಚಾರ ಮಾಡಿ ನಿರಂತರವಾಗಿ ಅವಮಾನ ಮಾಡ್ತಿದ್ದಾರೆ. ಹಾಗಾಗಿ ನೋವಿನಿಂದ ಈ ಮಾತನ್ನು ಹೇಳ್ತಿದ್ದೀನಿ‌ ಎಂದು ಶಿಲ್ಪಾನಾಗ್ ಬೇಸರ ವ್ಯಕ್ತಪಡಿಸಿದ್ದಾರೆ.

ತುಂಬಾ ಚೀಪ್ ಮೆಂಟಾಲಿಟಿ ಅಧಿಕಾರಿ ಅವರು. ಇಂತವರು ಮೈಸೂರಂತಾ ಜಿಲ್ಲೆಯಲ್ಲಿ ಇರಬಾರದು. ಮೈಸೂರಿಗೆ ಸಿಎಸ್ ಆರ್ ಫಂಡ್ ನಿಂದ ಕೋಟ್ಯಾಂತರ ರೂಪಾಯಿ ಹರಿದು ಬರುತ್ತಿದೆ. ಉತ್ತಮ ಜನ ಇರೋ ನಗರ ಮೈಸೂರು ನಗರ. ಆದ್ರೆ ಜಿಲ್ಲಾಧಿಕಾರಿಗಳು ಈ ರೀತಿ ಗಲೀಜು ಎಬ್ಬಿಸುತ್ತಿದ್ದಾರೆ ಯಾಕೆ ಈ ರೀತಿ ಹಠ ಮಾಡುತ್ತಿದ್ದಾರೋ ಗೊತ್ತಿಲ್ಲ. ನಾನು2014 ನೇ ಬ್ಯಾಚ್ ಅಧಿಕಾರಿ, ಅವರು 2009 ನೇ ಬ್ಯಾಚ್ ಅಧಿಕಾರಿ. ನನ್ನ ಮೇಲೆ ದ್ವೇಷ ಇದ್ರೆ ನನ್ನ ಮೇಲೆ ಸಾಧಿಸಲಿ. ಮೈಸೂರು ಜನರ ಮೇಲೆ ಅದು ಪರಿಣಾಮ ಬೀರುವುದು ಬೇಡ. ನಾನು ರಾಜೀನಾಮೆ ಕೊಟ್ಟು ಬೇರೆ ಜೀವನ ನಡೆಸುತ್ತೇನೆ‌ ಎಂದು ಶಿಲ್ಪಾನಾಗ್ ತಿಳಿಸಿದರು.

ಮೂರನೇ ಅಲೆಯಲ್ಲಿ ಮಕ್ಕಳಿಗೆ ಯಾವುದೇ ತೊಂದರೇ ಆಗೋದು ಬೇಡ ಅಂತಾ ಮಕ್ಕಳ ತಜ್ಞರನ್ನ ಎಲ್ಲರನ್ನೂ ಒಳಗೊಂಡು ಕಾರ್ಯ ನಿರ್ವಹಣೆ ಮಾಡುತ್ತಿದ್ದೆವು‌. ನನ್ನ ಬಿಟ್ಟರೆ ಮೈಸೂರು ನಗರಕ್ಕೆ ಒಳ್ಳೆಯದು ಆಗುತ್ತದೆ ಅಂದ್ರೆ ನಾನು ಹೋಗುತ್ತೇನೆ. ಅವಾಗ್ಲಾದ್ರೂ ಮೈಸೂರು ನಗರ ಚೆನ್ನಾಗಿರಲಿ. ನಾನೇ ಸುಪ್ರೀಂ ಅಂತಾ ಅಧಿಕಾರಿಗಳ ಸಭೆಯಲ್ಲಿ ವರ್ತನೆ ಮಾಡುತ್ತಿದ್ದಾರೆ. ಹಿರಿಯ ಅಧಿಕಾರಿಗಳಿಗೆ ಗೌರವ ಕೊಡದೆ ಅಧಿಕಾರಿಗಳನ್ನ ಟಾರ್ಗೆಟ್ ಮಾಡುತ್ತಿದ್ದರು. ಇಂದು ಕೋವಿಡ್ ಮಿತ್ರ ಪ್ರಧಾನ ಮಂತ್ರಿವರೆಗೂ ಹೋಗಿದೆ. ಯಾರದ್ದೋ ಕಾರ್ಯಕ್ರಮವನ್ನ, ನನ್ನ ಕಾರ್ಯಕ್ರಮ ಅಂತಾ ಹೇಳುತ್ತಾರೆ. ಆದ್ರೆ ಕೋವಿಡ್ ಮಿತ್ರದಲ್ಲಿ ಯಾರು, ಹೇಗೆ ಕೆಲಸ ಮಾಡುತ್ತಾರೆ, ಎಲ್ಲಿಂದ ಊಟ ಬರುತ್ತೆ ಅಂತಾ ಗೊತ್ತಿಲ್ಲ‌ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಆಯುಕ್ತೆ ಶಿಲ್ವ ನಾಗ್ ಅಸಮಾಧಾನ ಹೊರ ಹಾಕಿದರು.

ಐಎಎಸ್ ಹುದ್ದೆ ಅಷ್ಟು ಸುಲಭಕ್ಕೆ ಬರುವುದಿಲ್ಲ. ಪಾಲಿಕೆ ಮೆಡಿಕಲ್ ಕಿಟ್ ಗೆ ಬೀಗ ಹೊಡೆಸುತ್ತೇನೆ ಅಂತಾ ಪೊಲೀಸರನ್ನ ಕರೆದಿದ್ದರು. ನಾನೂ ಕೂಡಾ ಡಿಸಿ ಜಿಮ್, ಸ್ವಿಮಿಂಗ್ ಫೂಲ್ ಬಗ್ಗೆ, ಪಾಲಿಕೆ ವತಿಯಿಂದ ನೋಟಿಸ್ ನೀಡಬಹುದಿತ್ತು. ನನ್ನ ಮೇಲೆ ಫೈಟ್ ಮಾಡಲಿ ನಾನು ಫೈಟ್ ಮಾಡ್ತಾ ಇದ್ದೆ. ಆದ್ರೆ ಪಾಲಿಕೆಯ ತಳ ಹಂತದ ಅಧಿಕಾರಿಗಳನ್ನ ಟಾರ್ಗೆಟ್ ಮಾಡುವುದನ್ನ ನಾನು ಸಹಿಸೋದಿಲ್ಲ. ಕೇಸ್ ಇಲ್ಲದ ಏರಿಯಾಗಳನ್ನ ರೆಡ್ ಜೋನ್ ಅಂತಾ ಘೋಷಣೆ ಮಾಡುವಷ್ಟಕ್ಕೆ ಮಾಡಿದ್ದಾರೆ. ಎಲ್ಲರೂ ಡಿಸಿಗೆ ದುರಹಂಕಾರ ಅಂತಾ ಹೇಳ್ತಾ ಇದ್ದರು. ಸಹಿಸಿಕೊಳ್ಳಿ ಅಂತಾ ಎಲ್ಲರೂ ಹೇಳ್ತಾ ಇದ್ದರು. ಮೈಸೂರು ನಗರದವನ್ನ ನಾನು ಬಲಿ ಕೊಡಲು ಆಗುವುದಿಲ್ಲ ಎಂದು ಶಿಲ್ಪಾನಾಗ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

Key words: DC v / s corporation Commissioner-  Shilpanag -serious -allegations -against dc-rohini sinduri