ವಿಧಾನಮಂಡಲ ಅಧಿವೇಶನಕ್ಕೆ ದಿನಾಂಕ ಫಿಕ್ಸ್: ಸಚಿವ ಸಂಪುಟ ಸಭೆಯಲ್ಲಿ ಹಲವು ಮಹತ್ವದ ತೀರ್ಮಾನ…

ಬೆಂಗಳೂರು,ಜೂ,28,2019(www.justkannada.in):  ಜುಲೈ 12 ರಿಂದ 26 ರ ವರೆಗೆ  ರಾಜ್ಯ ವಿಧಾನ ಮಂಡಲದ ಮಳೆಗಾಲದ ಅಧಿವೇಶನ  ನಡೆಯಲಿದೆ ಎಂದು ಸಚಿವ ಕೃಷ್ಣ ಭೈರೇಗೌಡ ತಿಳಿಸಿದರು.

ವಿಧಾನ ಸೌಧದಲ್ಲಿ ಇಂದು  ಸಚಿವ ಸಂಪುಟ ಸಭೆ ನಡೆದ  ಬಳಿಕ  ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಕೃಷ್ಣಭೈರೇಗೌಡ, ಹಿಂಗಾರು ಬೆಳೆಗಳ ಸಮೀಕ್ಷೆ ನಡೆಸಲಾಗುತ್ತದೆ. ಈ ವರ್ಷವೂ ಬೆಳೆ ಸಮೀಕ್ಷೆಗೆ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಮೊಬೈಲ್‌ ಆಯಪ್‌ಗ್ಳ ಮೂಲಕ ಬೆಳೆ ಸಮೀಕ್ಷೆ ನಡೆಸಲಾಗುತ್ತದೆ ಫೋಟೋ ಸಮೇತ ಬೆಳೆ ಸಮೀಕ್ಷೆ ನಡೆಸಲಾಗುತ್ತದೆ ಎಂದು ಹೇಳಿದರು.

ಇದುವರೆಗೂ ರಾಜ್ಯದಲ್ಲಿ ಯಾವ ಬೆಳೆಯನ್ನು ರೈತರು ಬೆಳೆಯುತ್ತಿದ್ದಾರೆ ಎನ್ನುವ ಸರಿಯಾದ ಮಾಹಿತಿ ಇರುತ್ತಿರಲಿಲ್ಲ, ಬರ ಅಥವಾ ಅತಿವೃಷ್ಟಿಯಾದಾಗ ಪರಿಹಾರಕ್ಕೆ ಕೇಂದ್ರಕ್ಕೆ ಮನವಿ ಸಲ್ಲಿಸಿದಾಗ ವ್ಯತ್ಯಾಸವಾಗುತ್ತಿತ್ತು. ಆದ್ದರಿಂದ ನಿಖರವಾದ ಬೆಳೆ ಮಾಹಿತಿ ಪಡೆಯಲು ಮೊಬೈಲ್ ಆ್ಯಪ್‍ನ್ನು ಅಭಿವೃದ್ಧಿ ಪಡಿಸಲಾಗಿದೆ. ಇದರ ಮೂಲಕ ರಾಜ್ಯದಲ್ಲಿನ 2 ಕೋಟಿ 20 ಲಕ್ಷ ಪ್ಲಾಟ್‍ಗಳಲ್ಲಿ ಯಾವ ಬೆಳೆ ಇದೆ ಎನ್ನುವ ಮಾಹಿತಿ ಪಡೆಯಬಹುದು. ಈ ಉದ್ದೇಶಕ್ಕೆ ಎಸ್.ಎಸ್.ಎಲ್.ಸಿ ಉತ್ತೀರ್ಣರಾದ ಯುವಕ ಯುವತಿಯರನ್ನು ಬಳಸಿಕೊಳ್ಳುತ್ತೇವೆ. ಅವರಿಗೆ ಒಂದು ಸಮೀಕ್ಷೆಗೆ 10 ರೂ. ನೀಡಲಾಗುವುದು. ಪ್ರತಿನಿತ್ಯ 50 ಸಮೀಕ್ಷೆ ಮಾಡಲು ಸೂಚನೆ ನೀಡಲಾಗಿದೆ. ಇದಕ್ಕಾಗಿ 90 ಕೋಟಿ ವೆಚ್ಚ ತಗಲಬಹುದು ಎಂದು ಅಂದಾಜಿಸಲಾಗಿದೆ. ಇಡೀ ದೇಶದಲ್ಲೇ ಇದೇ ಮೊದಲ ಬಾರಿಗೆ ಮಾಡಲಾಗುತ್ತಿದೆ ಎಂದು ಕೃಷ್ಣೇಭೈರಗೌಡ ತಿಳಿಸಿದರು.

ಮೈಸೂರಿನಲ್ಲಿ  24 ಗಂಟೆ ಕುಡಿಯುವ ನೀರು ಯೋಜನೆಗೆ ಜಾರಿಗೆ ತರಲು ಒಪ್ಪಿಗೆ ಸೂಚಿಸಲಾಗಿದೆ. ಇನ್ನು ಜುಲೈ 2ನೇ ವಾರದಲ್ಲಿ ಮೋಡಬಿತ್ತನೆ ಮಾಡಲು ಸಿದ್ದತೆ ಮಾಡಿಕೊಂಡಿದ್ದೇವೆ. ಮೈಸೂರು -ಹುಬ್ಬಳ್ಳಿಯಲ್ಲಿ ಮೋಡ ಬಿತ್ತನೆ ನಡೆಸಲು ತೀರ್ಮಾನಿಸಲಾಗಿದ್ದು ಇದಕ್ಕೆ ಕೇಂದ್ರ ಸರ್ಕಾರದಿಂದ ಅನುಮತಿ ಸಿಗಬೇಕಿದೆ ಎಂದು ಸಚಿವ ಕೃಷ್ಣೇಭೈರೇಗೌಡ ಮಾಹಿತಿ ನೀಡಿದರು.

ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಧಾರಗಳು ಈ ಕೆಳಕಂಡಂತಿವೆ…

 

• ಫಸಲ್ ಭೀಮಾ ಯೋಜನೆಯಡಿ ರೈತರ ವಿಮಾಕಂತು ಪಾವತಿಸಲು ಇಂದಿನ ಸಚಿವ ಸಂಪುಟ ಸಭೆ ನಿರ್ಧರಿಸಿದೆ, ಕೆಲವು ಬೆಳೆಗಳಿಗೆ ಶೇಕಡಾ 2 ಮತ್ತು ಕೆಲವು ಬೆಳೆಗಳಿಗೆ ಶೇಕಡಾ 1.5 ರಷ್ಟು ತಮ್ಮ ಪಾಲಿನ ಕಂತನ್ನು ಪಾವತಿಸಬೇಕು. ಉಳಿದ ಪ್ರೀಮಿಯಂ ಮೊತ್ತವನ್ನು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ 50:50 ರಷ್ಟು ಪಾವತಿಸುತ್ತದೆ. ಅದರಂತೆ 2019-20ನೇ ಸಾಲಿನ ಪ್ರೀಮಿಯಂ ಪಾವತಿಗಾಗಿ 546.21 ಕೋಟಿ ರೂ.ಗಳನ್ನು ಪಾವತಿಸಲು ಸಚಿವ ಸಂಪಟು ಸಭೆ ಒಪ್ಪಿಗೆ ನೀಡಿದೆ.

• 2020-21ನೇ ಸಾಲಿನಲ್ಲಿ ರಾಜ್ಯದ ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗಳಲಿ ಹೆಚ್ಚುವರಿಯಾಗಿ ಡಿ.ಎನ್.ಬಿ. ಕೇಂದ್ರಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ. ವೈದ್ಯಕೀಯ ಶಿಕ್ಷಣ ಇಲಾಖೆಯಡಿ ಹೊಸದಾಗಿ ಸಾತ್ನಕೋತ್ತರ ವೈದ್ಯಕೀಯ ಪದವಿಗೆ 72 ಹೆಚ್ಚುವರಿ ಸೀಟುಗಳನ್ನು ಸೃಜಿಸಲಾಗಿದೆ. ಇದರಿಂದ ರಾಜ್ಯದ 10 ಆಸ್ಪತ್ರೆಗಳಲ್ಲಿ ಸಾತ್ನಕೋತ್ತರ ಪದವಿ ಮಾಡಲು ಅವಕಾಶ ಕಲ್ಪಿಸಿದೆ. (ಹೊಳೇನರಸಿಪುರ, ದೊಡ್ಡಬಳ್ಳಾಪುರ, ಗಂಗಾವತಿ, ಶಿರಾ, ಬಸವಕಲ್ಯಾಣ, ಹಾವೇರಿ, ಚಿಕ್ಕಬಳ್ಳಾಪುರ, ಯಾದಗಿರಿ, ಚಿಕ್ಕಮಗಳೂರು ಹಾಗೂ ದಕ್ಷಿಣ ಕನ್ನಡ ವೆನ್‍ಲಾಕ್ ಆಸ್ಪತ್ರೆಗಳಲ್ಲಿ ಇದನ್ನು ಆರಂಭಿಸಲಾಗುತ್ತಿದೆ. ನೀಟ್ ಪರೀಕ್ಷೆ ಮೂಲಕ ಇದಕ್ಕೆ ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದವರಿಗೆ 30,000 ರಿಂದ 40,000 ರೂಪಾಯಿಗಳ ಸ್ಟೈಫಂಡ್ ನೀಡಲಾಗುತ್ತದೆ. ಇದರಿಂದ ಸಾತ್ನಕೋತ್ತರ ವೈದ್ಯಕೀಯ ಸೀಟುಗಳು ಹೆಚ್ಚಳವಾಗವುದರ ಜೊತೆಗೆ ನಮ್ಮ ಆಸ್ಪತ್ರೆಗಳಿಗೆ ತಜ್ಞವೈದ್ಯರ ಸೇವೆ ದೊರಕಿದಂತಾಗುತ್ತದೆ ಎಂದು ಸಚಿವರು ಹೇಳಿದರು.

• ಮೈಸೂರಿನಲ್ಲಿ ಜೆ ನರ್ಮ್ ಯೋಜನೆಯಡಿ 24×7 ಕುಡಿಯುವ ನೀರು ಪೂರೈಸಲು ಯೋಜನೆ ರೂಪಿಸಲಾಗಿತ್ತು. ಮೊದಲು 194 ಕೋಟಿ ರೂ.ಗಳಿಗೆ ಅಂದಾಜು ಮಾಡಲಾಗಿತ್ತು. ಅದು ಈಗ ಪರಿಷ್ಕøತಗೊಂಡು 229.93 ಕೋಟಿ ರೂ.ಗಳಿಗೆ ಹೆಚ್ಚಳವಾಗಿದೆ. ಈ ಹೆಚ್ಚುವರಿ 50.76 ಕೋಟಿ ರೂ.ಗಳನ್ನು ಒದಗಿಸಲು ಇಂದಿನ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಕೇಂದ್ರ ಸರ್ಕಾರದಿಂದ ಬರಬೇಕಿದ್ದ ಪಾಲನ್ನು ಸಹ ರಾಜ್ಯ ಸರ್ಕಾರವೇ ಭರಿಸಲಿದ್ದು, ಒಟ್ಟಾರೆ 90 ಕೋಟಿ ರೂ.ಗಳನ್ನು ಒದಗಿಸಲು ಅನುಮೋದನೆ ನೀಡಲಾಯಿತು.

• ಹೇಮಾವತಿ ಬಲದಂಡೆ ನಾಲೆ ಶಿಥಿಲವಾಗಿರುವುದರಿಂದ 0.00 ಕಿ.ಮೀ 92.104 ಕಿ.ಮೀ ವರೆಗೆ ನಾಲೆ ಆಧುನೀಕರಣ ಕಾಮಗಾರಿಗೆ 422.75 ಕೋಟಿ. ರೂ.ಗಳನ್ನು ಒದಗಿಸಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

• ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಪಾವಗಡದಲ್ಲಿ 60 ಹಾಸಿಗೆಗಳ ಹೆರಿಗೆ ಆಸ್ಪತ್ರೆಗಳ ನಿರ್ಮಾಣ, ರಾಯಚೂರು ಆಸ್ಪತ್ರೆಗೆ ಹೆಚ್ಚುವರಿ ಸೌಲಭ್ಯ ಕಲ್ಪಿಸುವುದು, ದಾವಣಗೆರೆಯಲ್ಲಿ 100 ಹಾಸಿಗೆಗಳ ಹೆರಿಗೆ ಆಸ್ಪತ್ರೆ ಹಾಗೂ ಬಳ್ಳಾರಿಯಲ್ಲಿ 100 ಹಾಸಿಗೆಗಳ ಹೆರಿಗೆ ಆಸ್ಪತ್ರೆ ನಿರ್ಮಿಸುವ ಕಾಮಗಾರಿಗಳಿಗೆ ಒಟ್ಟಾರೆ 71.80 ಕೋಟಿ ರೂ.ಗಳನ್ನು ಒದಗಿಸಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

Key words: Date fix – session-Many decisions – Cabinet meeting.