ಬೆಂಗಳೂರಿನ ಎಲ್ಲಾ ಸಮಸ್ಯೆಗಳನ್ನು ಕೇವಲ 15 ದಿನಗಳೊಳಗೆ ಬಗೆಹರಿಸುವ ಡ್ಯಾಶ್‌ಬೋರ್ಡ್.

ಬೆಂಗಳೂರು ಸೆಪ್ಟೆಂಬರ್ 30, 2021 (www.justkannada.in): ಬೆಂಗಳೂರು ನಗರದಲ್ಲಿ ಕೈಗೊಳ್ಳಲಾಗಿರುವ ಪ್ರಮುಖ ಮೂಲಭೂತಸೌಕರ್ಯಗಳ ಕಾಮಗಾರಿಗಳ ಮೇಲೆ ನಿಗಾವಹಿಸುವ ಸಲುವಾಗಿ ಅಭಿವೃದ್ಧಿಪಡಿಸಲಾಗುತ್ತಿರುವ ಡಿಜಿಟಲ್ ಡ್ಯಾಶ್‌ಬೋರ್ಡ್ ಗೆ ಮುಖ್ಯಮಂತ್ರಿಗಳ ಕಾರ್ಯಾಲಯ (ಸಿಎಂಒ) ಅಂತಿಮ ರೂಪನ್ನು ನೀಡುತ್ತಿದೆ.

ಈ ಡ್ಯಾಶ್‌ಬೋರ್ಡ್ (ವೆಬ್‌ಸೈಟ್ ಡ್ಯಾಶ್‌ಬೋರ್ಡ್) ಅಂತರ-ಇಲಾಖಾ ಸಂಯೋಜನೆ ಅಥವಾ ಇತರೆ ಸಮಸ್ಯೆಗಳಿಂದಾಗಿ ಉಂಟಾಗುವಂತಹ ಅನಗತ್ಯ ಯೋಜನಾ ವಿಳಂಬಗಳನ್ನು ತಡೆಗಟ್ಟುವ ನಿರೀಕ್ಷೆಯನ್ನು ಹೊಂದಿದೆ. ಮೂಲಗಳ ಪ್ರಕಾರ ಅದರ ನಿಯಂತ್ರಣ ಕೊಠಡಿಯನ್ನು (ಕಂಟ್ರೋಲ್ ರೂಂ) ಇನ್ನು ಕೆಲವೇ ವಾರಗಳಲ್ಲಿ ಉದ್ಘಾಟಿಸಲಾಗುವುದು.

ಬುಧವಾರದಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಈ ಡ್ಯಾಶ್‌ಬೋರ್ಡ್ ನ ಬ್ಯಾಕ್‌ ಎಂಡ್ ಕಾಮಗಾರಿಗಳ ಪರಿಶೀಲನೆ ನಡೆಸಿದರು. ಈ ಡಿಜಿಟಲ್ ಡ್ಯಾಶ್‌ ಬೋರ್ಡ್ ವ್ಯವಸ್ಥೆ ಬಹುಯೋಜನೆಗಳ ಕುರಿತಂತೆ ರಿಯಲ್-ಟೈಂ ಆಧಾರದ ಮೇಲೆ ನಿಗಾವಹಿಸುವ ದೇಶದ ಮೊಟ್ಟ ಮೊದಲ ಪ್ರಯೋಗವಾಗಿದೆ. ಈ ಡ್ಯಾಶ್‌ ಬೋರ್ಡ್ ಅನ್ನು ಸಾರ್ವಜನಿಕರ ವೀಕ್ಷಣೆಗೆ ಲಭ್ಯಗೊಳಿಸಲಾಗುವುದೋ ಅಥವಾ ಕೇವಲ ಸಿಎಂಒಗೆ ಮಾತ್ರ ಲಭ್ಯಗೊಳಿಸಲಾಗುವುದೋ ಎಂಬ ಕುರಿತು ಇನ್ನೂ ಸ್ಪಷ್ಟವಾಗಿಲ್ಲ.

ಸಿದ್ದರಾಮಯ್ಯ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಅಂದಿನ ರಾಜ್ಯ ಸರ್ಕಾರ ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತಕ್ಕೆ ಸಂಬಂಧಪಟ್ಟ ಯೋಜನೆಗಳ ಪ್ರಗತಿಯ ಮೇಲೆ ನಿಗಾವಹಿಸುವ ಸಲುವಾಗಿ ಅಭಿವೃದ್ಧಿಪಡಿಸಲಾಗಿದ್ದಂತಹ ‘ಪ್ರತಿಬಿಂಬ’ ಎಂಬ ಇದೇ ರೀತಿಯ ಡ್ಯಾಶ್‌ ಬೋರ್ಡ್ ಗೆ ವೆಬ್‌ಸೈಟ್‌ ನಲ್ಲಿ ಚಾಲನೆ ನೀಡಲಾಗಿತ್ತು. ಆ ಡ್ಯಾಶ್‌ ಬೋರ್ಡ್ ಕೆಲವು ತಿಂಗಳವರೆಗೆ ಮಾತ್ರ ಸಕ್ರಿಯವಾಗಿತ್ತು, ಆದರೆ ಕ್ರಮೇಣ ಕೇವಲ ಅಧಿಕಾರಿಗಳಿಗೆ ಮಾತ್ರ ಲಭ್ಯವಾಗುವಂತೆ ನಿಯಂತ್ರಿಸಲಾಯಿತು.

ಇತ್ತೀಚೆಗೆ ಮೈಸೂರು ರಸ್ತೆಯ ಹೊಸ ಮೆಟ್ರೊ ಲೈನ್ ಅನ್ನು ಉದ್ಘಾಟಿಸುವ ಸಂದರ್ಭದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಅವರು ಬೆಂಗಳೂರಿನ ಎಲ್ಲಾ ಪ್ರಮುಖ ಯೋಜನೆಗಳನ್ನು ಸ್ವತಃ ನಿಗಾವಹಿಸುವುದಾಗಿ ಘೋಷಿಸಿದ್ದರು. ಜೊತೆಗೆ, ಈ ಕಾಮಗಾರಿಗಳ ಮೇಲೆ ನಿಗಾವಹಿಸಲು ತಮ್ಮ ದೈನಂದಿನ ಕಚೇರಿ ಸಮಯದ ಮೊದಲ ಒಂದು ಗಂಟೆ ಅವಧಿಯನ್ನು ಈ ಕೆಲಸಕ್ಕಾಗಿ ಮೀಸಲಿರಿಸುವುದಾಗಿಯೂ ತಿಳಿಸಿದ್ದರು.

ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗಿನಿAದ ಮುಖ್ಯಮಂತ್ರಿಗಳ ಕಾರ್ಯಾಲಯ (ಸಿಎಂಒ) ನಗರದ ಮೂಲಭೂಸೌಕರ್ಯ ಅಭಿವೃದ್ಧಿ ಯೋಜನೆಗಳ ಪ್ರಸ್ತಾವನೆಗಳನ್ನು ವೈಯಕ್ತಿಕವಾಗಿ ಪರಿಶೀಲಸಲು ಆರಂಭಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಹಿಂದಿನ ಮುಖ್ಯಮಂತ್ರಿಗಳಿದ್ದಾಗ ಇಂತಹ ಯೋಜನೆಗಳಿಗೆ ಸಂಬಂಧಪಟ್ಟ ಕಡತಗಳನ್ನು ಮುಖ್ಯಮಂತ್ರಿಗಳ ಕಚೇರಿಗೆ ಕಳುಹಿಸಿದರೆ ಬಹಳ ಬೇಗ ಹಿಂದಿರುಗುತ್ತಿದ್ದವಂತೆ. ಆದರೆ ಈಗ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿದೆ ಎನ್ನುವುದು ಕೆಲವು ಅಧಿಕಾರಿಗಳ ಅಭಿಪ್ರಾಯವಾಗಿದೆ.

ಈ ಡಿಜಿಟಲ್ ಡ್ಯಾಶ್‌ ಬೋರ್ಡ್ ನಿಂದಾಗಿ ಅನುಷ್ಠಾನದಲ್ಲಿ ವಿಳಂಬವಾಗಿರುವ ಯೋಜನೆಗಳಿಗೆ ವೇಗ ದೊರೆಯುತ್ತದೆ ಎನ್ನುವುದು ಕೆಲವು ನಾಗರಿಕ ಗುಂಪುಗಳ ಅಭಿಪ್ರಾಯವಾಗಿದ್ದು, ಆ ಡ್ಯಾಶ್‌ ಬೋರ್ಡ್ ಅನ್ನು ಸಾರ್ವಜನಿಕರಿಗೂ ಲಭ್ಯವಾಗುವಂತೆ ಮಾಡಬೇಕೆನ್ನುವುದು ಅವರ ಬೇಡಿಕೆಯಾಗಿದೆ. “ಇಂತಹ ಯೋಜನೆಗಳ ಸ್ಥಿತಿಗತಿಯ ಕುರಿತಾದ ಮಾಹಿತಿ ಸಾರ್ವಜನಿಕರಿಗೆ ಸುಲಭವಾಗಿ ಲಭ್ಯವಾಗುವಂತೆ ಮಾಡಿದರೆ, ಈ ಸಿಎಂಒ ಇತರೆ ರಾಜ್ಯಗಳು ಹಾಗೂ ಇಲಾಖೆಗಳಿಗೆ ಮಾದರಿಯಾಗಬಲ್ಲದು. ಸಾರ್ವಜನಿಕ ಕಾಮಗಾರಿಗಳಿಗೆ ಸಂಬಂಧಪಟ್ಟ ಅನೇಕ ಮಾಹಿತಿ ಸಾರ್ವಜನಿಕವಾಗಿ ಪ್ರಸ್ತುತ ಲಭ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸಿಎಂಒ ಆಡಳಿತದಲ್ಲಿ ಹೆಚ್ಚಿನ ಪಾರದರ್ಶಕತೆಯನ್ನು ತರಬೇಕು,” ಎನ್ನುತ್ತಾರೆ ಇಂದಿರಾನಗರದ ನಿವಾಸಿ ಸತೀಶ್ ಕುಮಾರ್.

ಸುದ್ದಿ ಮೂಲ: ಬೆಂಗಳೂರ್ ಮಿರರ್

Key words: Dashboard – solve- all the problems – Bengaluru -just 15 days