ದರ್ಗಾ, ಚರ್ಚ್‌ಗಳು ಯಾಕೆ ತೆರವು ಮಾಡಿಲ್ಲ: ನಮ್ಮ ಹಿಂದೂ ದೇವಾಲಯಗಳನ್ನ ಟಾರ್ಗೆಟ್ ಮಾಡ್ತಿರಾ..? – ಸಂಸದ ಪ್ರತಾಪ್ ಸಿಂಹ ಆಕ್ರೋಶ.

ಮೈಸೂರು,ಸೆಪ್ಟಂಬರ್,12,2021(www.justkannada.in): ಹಿಂದೂ ದೇವಾಲಯಗಳ ತೆರವು ವಿವಾದಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತದ ವಿರುದ್ದ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೈಸೂರಿನ ಅಗ್ರಹಾರದ 101 ಗಣಪತಿ ದೇವಸ್ಥಾನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ  ಸಂಸದ ಪ್ರತಾಪ್ ಸಿಂಹ, ಮೈಸೂರಿನಾದ್ಯಂತ 90 ಕ್ಕಿಂತ ಹೆಚ್ಚು ದೇವಾಲಯಗಳಿವೆ. ಅವುಗಳನ್ನ ಕೆಡವುದರಿಂದ ಜನರ ಭಾವನೆಗೆ ಧಕ್ಕೆಯಾಗುತ್ತೆ. ನಾನು ಕೆಡಿಪಿ ಸಭೆಯಲ್ಲಿ ಇದನ್ನೆ ಚರ್ಚೆ ಮಾಡಿದ್ದೆನೆ. ನಮ್ಮ ಹಿಂದೂ ದೇವಾಲಯಗಳನ್ನ ಟಾರ್ಗೆಟ್ ಮಾಡ್ತಿರಾ..? ದರ್ಗಾ, ಚರ್ಚ್‌ಗಳು ಯಾಕೆ ತೆರವು ಮಾಡಿಲ್ಲ ಎಂದು ಕಿಡಿಕಾರಿದರು.

ಮಧ್ಯರಾತ್ರಿಯಲ್ಲಿ ಕಳ್ಳ ರೀತಿ ಬಂದು ಹಿಂದೂ ದೇವಾಲಯಗಳನ್ನ ಕೆಡವುತ್ತಿದ್ದಿರಾ. ಕಳ್ಳರು ದರೋಡೆಕೋರರು ಜನರಿಲ್ಲದೆ ವೇಳೆ ಮಾಡ್ತಾರೆ. ಅದೇ ರೀತಿ ಇವ್ರು ನಮ್ಮ ದೇವಸ್ಥಾನಗಳನ್ನ ಕೆಡವುತ್ತಿದ್ದಾರೆ. ಇದು ಯಾವುದೇ ಕಾರಣಕ್ಕೂ ಸರಿಯಲ್ಲ ಎಂದು ಹರಿಹಾಯ್ದರು.

ಮಾತೆತ್ತಿದ್ದರೆ ಸುಪ್ರೀಂಕೋರ್ಟ್ ಆರ್ಡರ್ ಅಂತಾರೆ. ನಮ್ಮ ಹತ್ತಿರನೂ ಸುಪ್ರೀಂ ಕೋರ್ಟ್ ಆರ್ಡರ್ ಇದೆ. ಸುಪ್ರೀಂ ಕೋರ್ಟ್ 2009 ರಲ್ಲಿ ಮಧ್ಯಂತರ ಆದೇಶ ನೀಡಿದೆ. ಎಂಟು ವಾರದೊಳಗೆ ತೀರ್ಪು ಅನುಷ್ಠಾನದ ವರದಿ ನೀಡುವಂತೆ ಮುಖ್ಯ ಕಾರ್ಯದರ್ಶಿ ಅವರಿಗೆ ಸೂಚನೆ ನೀಡಿದೆ. 2009 ಕ್ಕೆ ದೇವಸ್ಥಾನ, ಮಸೀದಿ ಮತ್ತು ಚರ್ಚ್ ಗಳನ್ನು ತಲೆ ಎತ್ತಲು ಬಿಡಬೇಡಿ ಅಂತ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಮೈಸೂರಿನ ಕ್ಯಾತಮಾರನ ಹಳ್ಳಿಯಲ್ಲಿ ಮಸೀದಿ ತಲೆ ಎತ್ತಲು ಹೇಗೆ ಬಿಟ್ಡಿದ್ದೀರಾ, ಇದರಿಂದ ರಾಜು ಮರ್ಡರ್ ಆಯಿತು ಎಂದು ಪ್ರತಾಪ್ ಸಿಂಹ ಕಿಡಿಕಾರಿದರು.

ರಾಜ್ಯ ಸರ್ಕಾರ ಮತ್ತೊಮ್ಮೆ ದೇವಾಲಯಗಳ ಪಟ್ಟಿ ಪರೀಲನೆ ಮಾಡಬೇಕು. 2010ರ ರಾಜ್ಯ ಸರ್ಕಾರದ ಆದೇಶವನ್ನ ತಕ್ಷಣ ವಾಪಸ್ ಪಡೆಯಬೇಕು. ಮತ್ತೊಮ್ಮೆ ಸುಪ್ರೀಂಕೋರ್ಟ್ ಮುಂದೆ ಪರಿಷ್ಕೃತ ಪಟ್ಟಿ ಸಲ್ಲಿಸಬೇಕು. ಸಾರ್ವಜನಿಕವಾಗಿ ತೊಂದರೆಯಾಗುವ ದೇವಾಲಯ, ಮಸೀದಿ ಹಾಗೂ ಚರ್ಚೆಗಳನ್ನು ಪ್ರತ್ಯೇಕ ಪ್ರಕರಣವಾಗಿ ಪರಿಗಣಿಸಿ. ಸ್ಥಳಿಯರೊಂದಿಗೆ ಚರ್ಚೆ ಮಾಡಿ ಮುಂದಿನ ಕ್ರಮ ಕೈಗೊಳ್ಳಿ. ಇಲ್ಲವಾದರೆ ರಾಜ್ಯಾದ್ಯಂತ ದೇವಾಲಯಗಳನ್ನು ಉಳಿಸಿ ಎಂಬ ಅಭಿಯಾನ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸುಪ್ರೀಂಕೋರ್ಟ್  ತೀರ್ಪನ್ನು ನಾನು ಮೈಸೂರಿಗೆ ಮಾತ್ರ ಸೀಮಿತಗೊಳಿಸಿ ಮಾತನಾಡುತ್ತಿಲ್ಲ. ಇಡೀ ದೇಶಕ್ಕೆ ಅನ್ವಯವಾಗುವಂತೆ ಮಾತನಾಡುತ್ತಿದ್ದೇನೆ. ಯಾವುದೇ ಪೂರ್ವಾಪರಗಳನ್ನು ಪರಿಶೀಲಿಸದೇ ಏಕಾಏಕಿ ದೇಗುಲಗಳ ನೆಲಸಮ ಸರಿಯಲ್ಲ. ಇಂತಹ ಘಟನೆಗಳನ್ನು ಯಾವುದೇ ನಾಗರೀಕ ಸಮಾಜ ಒಪ್ಪುವುದಿಲ್ಲ. ಯಾವುದೇ ಪ್ರಾರ್ಥನಾ ಮಂದಿರಗಳನ್ನು ತೆರವುಗೊಳಿಸುವ ಮುನ್ನಾ ಮೊದಲು ಅಲ್ಲಿನ ಸ್ಥಳೀಯ ನಿವಾಸಿಗಳೊಂದಿಗೆ ಚರ್ಚಿಸಬೇಕು. ಪ್ರಾರ್ಥನಾ ಮಂದಿರವನ್ನು ಉಳಿಸಿಕೊಳ್ಳಲು ಕಾನೂನಿನಲ್ಲಿ ಅವಕಾಶವಿದೆಯೇ.? ಅಥವಾ ಸ್ಥಳಾಂತರ ಮಾಡಲು ಸಾಧ್ಯವಿದೆಯೇ.? ಎಂಬೆಲ್ಲಾ ವಿಚಾರಗಳನ್ನು ಗಣನೆಗೆ ತೆಗೆದುಕೊಳ್ಳಬೇಕು.ಅನಿವಾರ್ಯ ಪರಿಸ್ಥಿತಿ ಇದ್ದರೆ ಮಾತ್ರ ಅಂತಹ ಪ್ರಾರ್ಥನಾ ಮಂದಿರಗಳನ್ನು ಮಾತ್ರ ತೆರವು ಮಾಡಿ. ಸ್ಥಳೀಯ ನಿವಾಸಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು, ತೆರವುಗೊಳಿಸಿ. ಇದಲ್ಲದೆ ಜನರ ಭಾವನೆಗಳಿಗೆ ಧಕ್ಕೆ ತರುವ ರೀತಿಯಲ್ಲಿ ಯಾವುದೇ ಪ್ರಾರ್ಥನಾ ಮಂದಿರಗಳನ್ನು ತೆರವುಗೊಳಿಸಬಾರದು ಎಂದು ಪ್ರತಾಪ್ ಸಿಂಹ ಹೇಳಿದರು.

ಮೈಸೂರಿನ ದೇವರಾಜ ಅರಸ್ ರಸ್ತೆಯ ದರ್ಗಾ ತೆರವುಗೊಳಸಿದ್ರೆ ಬಳೆ ತೊಟ್ಟು ಕೂರುವುದಿಲ್ಲ ಅಂತ ತನ್ವೀರ್ ಸೇಠ್ ಹೇಳಿದ್ದಾರೆ. ಬಳೆ ತೊಡುವ ಹೆಣ್ಣಿನ ಬಗ್ಗೆ ತಾತ್ಸರ ಏಕೆ ಎಂದು ಸಂಸದ ಪ್ರತಾಪ್ ಸಿಂಹ ಪ್ರಶ್ನಿಸಿದರು.

ಸುದ್ದಿಗೋಷ್ಟಿಯಲ್ಲಿ ಮೇಯರ್ ಸುನಂದಾ ಪಾಲನೇತ್ರಾ, ಬಿಜೆಪಿ ನಗರಾಧ್ಯಕ್ಷ ಶ್ರೀವತ್ಸ, ಪ್ರೇಮ್‌ಕುಮಾರ್ ಸೇರಿದಂತೆ ಹಲವು ಬಾಗಿಯಾಗಿದ್ದರು.

Key words: Dargah- churches- not cleared-Target -Hindu Temples-MP- Pratap Simha