ಹಣದುಬ್ಬರ, ಕಡಿಮೆಯಾಗುತ್ತಿರುವ ಲಾಭಗಳಿಂದಾಗಿ ಬಿಕ್ಕಟ್ಟಿನಲ್ಲಿ ಡೈರಿ ವಲಯ.

ಬೆಂಗಳೂರು, ಜುಲೈ 14, 2022 (www.justkannada.in): ಬಲಿಷ್ಠ ಸಹಕಾರಿ ವಲಯದ ಅಸ್ತಿತ್ವದ ಹೊರತಾಗಿಯೂ, ಹಣದುಬ್ಬರವು ಹಿಂದೆಂದೂ ಕಾಣದಿರುವ ರೀತಿಯಲ್ಲಿ ಡೈರಿ ಉದ್ಯಮಕ್ಷೇತ್ರವನ್ನು ಬಿಕ್ಕಟ್ಟಿಗೆ ಸಿಲುಕಿಸಿದೆ. ಸಂಘಟಿತ ಖರೀದಿ ಹಾಗೂ ಮಾರುಕಟ್ಟೆ ವ್ಯವಸ್ಥೆ ಹಾಗೂ ಇದಕ್ಕೆ ಪೂರಕವಾಗುವ ಹಾಗೆ ಸರಾಗವಾದ ಉತ್ಪಾದನಾ ಪ್ರಕ್ರಿಯೆಯ ಹೊರತಾಗಿಯೂ ದಾಖಲೆ ಉತ್ಪಾದನಾ ವೆಚ್ಚಗಳಿಂದಾಗಿ ಡೈರಿ ವಲಯ ಬಿಕ್ಕಟ್ಟಿಗೆ ಸಿಲುಕಿದೆ.

ಎಲ್ಲಾ ರೀತಿಯ ಮೇವಿನ ಬೆಲೆಗಳು ಹೆಚ್ಚಾಗುತ್ತಿದೆ. ಉದಾಹರಣೆಗೆ, ೫೦ ಕೆಜಿ ತೂಕದ ಗೋಧಿ ಹುಲ್ಲಿನ ಚೀಲದ ಬೆಲೆ ಸಾಂಕ್ರಾಮಿಕಕ್ಕೂ ಮುಂಚೆ ರೂ.೮೫೦ರಷ್ಟಿತ್ತು. ಆದರೆ ಈಗ ರೂ.೧,೨೦೦ಕ್ಕೂ ಏರಿಕೆಯಾಗಿದೆ. ಬೂಸಾ ಬೆಲೆ ಪ್ರತಿ ಕೆಜಿಗೆ ರೂ.೧,೬೦೦ ಹಾಗೂ ೨೦೧೯ರಲ್ಲಿ ೫ ಕೆಜಿಗೆ ರೂ.೧೨ ರಷ್ಟಿದ್ದ ಒಣಹುಲ್ಲಿನ ಬೆಲೆ ಈಗ ೨ ಕೆಜಿಗೆ ರೂ.೨೫ ಆಗಿದೆ.

“ಈಗ ಮೇವು ಖರೀದಿ ಕೈಗೆಟಕುದಂತಾಗಿದೆ. ಒಂದು ಹಸು ವರ್ಷದಲ್ಲಿ ಗರಿಷ್ಠ ೩,೦೦೦ ಲೀಟರ್ ಹಾಲು ನೀಡುತ್ತದೆ, ಅದರ ಬೆಲೆ ರೂ.೯೦,೦೦೦ರಷ್ಟಾಗುತ್ತದೆ, ಹಾಗೂ ಹಸುವಿನ ಗೊಬ್ಬರದಿಂದ ರೂ.೫,೦೦೦ ಲಭಿಸುತ್ತದೆ. ಆದರೆ ಇದಕ್ಕಾಗಿ ಓರ್ವ ರೈತ ಮೇವು, ಕೂಲಿ, ಔಷಧಗಳು ಹಾಗೂ ಇತರೆ ವೆಚ್ಚಗಳು ಒಳಗೊಂಡಂತೆ ಒಂದು ವರ್ಷಕ್ಕೆ ಒಂದು ಹಸುವಿಗೆ ರೂ.೯೦,೦೦೦ಕ್ಕಿಂತಲೂ ಹೆಚ್ಚಿನ ಹಣ ಹೂಡಿಕೆ ಮಾಡಬೇಕಾಗುತ್ತದೆ,” ಎನ್ನುತ್ತಾರೆ ಮೈಸೂರಿನ ಓರ್ವ ರೈತರು.

ಚಿಕ್ಕಬಳ್ಳಾಪುರದ ಹೈನುಗಾರಿಕೆ ರೈತ ರಾಜಗೋಪಾಲ್ ಅವರು, “ರೈತರು ತಮ್ಮ ಬಳಿ ಇರುವ ಎಲ್ಲಾ ಹಸು, ಕುರಿಗಳಿಗೂ ಸಹ ಮೇವು ಹಾಕಬೇಕಾಗುತ್ತದೆ, ಆದರೆ ಎಲ್ಲವೂ ಹಾಲು ನೀಡುವುದಿಲ್ಲ,” ಎಂದರು.

ರೈತರಿಂದ ಖರೀದಿಸುವ ಹಾಲಿನ ಬೆಲೆ ಅಷ್ಟೇನೂ ಹೆಚ್ಚಾಗಿಲ್ಲ. ರಾಜ್ಯದಾದ್ಯಂತ ಇರುವಂತಹ ಡೈರಿ ಸಹಕಾರ ಸಂಘಗಳು, ಸರ್ಕಾರಿ ನೀಡುವ ರೂ.೫ ಸರ್ಕಾರಿ ಸಹಾಯಧನವೂ ಒಳಗೊಂಡಂತೆ ಗರಿಷ್ಠ ಪ್ರತಿ ಲೀಟರ್ ಹಾಲಿಗೆ ರೈತರಿಗೆ ರೂ.೩೪ (ಕನಿಷ್ಠ ರೂ.೨೭) ನೀಡುತ್ತಿವೆ. ಹಾಗಾಗಿ ರೈತರು ಹಾಲಿನ ವೆಚ್ಚ ಮತ್ತು ದರಗಳಿಗೆ ಸರಿಹೊಂದುವಂತೆ ಪ್ರತಿ ಲೀಟರ್‌ ಗೆ ಕನಿಷ್ಠ ರೂ.೫೦ ನೀಡುವಂತೆ ಸಂಬಂಧಪಟ್ಟ ಪ್ರಾಧಿಕಾರಗಳನ್ನು ಕೋರುತ್ತಿದ್ದಾರೆ.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words: Dairy sector – crisis -due – inflation-shrinking -profits.