ಡಿ.ರೂಪಾ ಮತ್ತು ರೋಹಿಣಿ ಸಿಂಧೂರಿ ನಡುವೆ ತಿಕ್ಕಾಟ: ಶಿಸ್ತಿನ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಹೆಚ್.ಎ ವೆಂಕಟೇಶ್ ಆಗ್ರಹ.

ಮೈಸೂರು,ಫೆಬ್ರವರಿ,20,2023(www.justkannada.in):  ಕುಶಲ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಐಪಿಎಸ್ ಅಧಿಕಾರಿ ಡಿ. ರೂಪ ಮೌದ್ಗಿಲ್ ಹಾಗೂ ಮುಜರಾಯಿ ಇಲಾಖೆ ಆಯುಕ್ತೆ ರೋಹಿಣಿ ಸಿಂಧೂರಿ ಅವರ ಹೇಳಿಕೆಗಳು ಸಾರ್ವಜನಿಕ ವಲಯದಲ್ಲಿ ಅಪಹಾಸ್ಯಗೀಡಾಗಿದೆ. ಐಎಎಸ್ ಹಾಗೂ ಐಪಿಎಸ್ ನಂತಹ ಭಾರತದ ಪ್ರತಿಷ್ಠಿತ ವಿದ್ಯಾ ಅರ್ಹತೆಯನ್ನು ಗಳಿಸಿರುವ ಇಬ್ಬರು ಮಹಿಳಾ ಮಣಿಗಳ ವರ್ತನೆ ಸಾರ್ವಜನಿಕರಲ್ಲಿ ಚರ್ಚೆಗೆ ಒಳಪಟ್ಟಿದೆ . ಇಬ್ಬರು ಮಹಿಳಾ ಅಧಿಕಾರಿಗಳ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಕೆಪಿಸಿಸಿ ವಕ್ತಾರ ಹೆಚ್.ಎ ವೆಂಕಟೇಶ್ ಆಗ್ರಹಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿ ಪ್ರತಿಕ್ರಿಯಿಸಿರುವ ಹೆಚ್.ಎ ವೆಂಕಟೇಶ್, ಇಬ್ಬರ ಜ್ಞಾನವು ಸಮಾಜದ ಒಳಿತಿಗೆ, ಏಳಿಗೆಗೆ ಉಪಯೋಗವಾಗದೆ ವೈಯಕ್ತಿಕ ದ್ವೇಷದಿಂದ ಅವರ ನಿಜವಾದ ಮುಖವಾಡಗಳು ಕಳಚಿ ಬಿದ್ದಿದೆ. ಐಎಎಸ್, ಐಪಿಎಸ್ ಪಡೆದಿರುವ ವ್ಯಕ್ತಿಗಳ ಬಗ್ಗೆ ಇವರ ನಡವಳಿಕೆಗಳಿಂದ ಅಪಚಾರವಾಗಿದೆ. ದೇಶದ ಅತ್ಯುನ್ನತ ಶಿಕ್ಷಣದ ಪಡೆದ ಈ ಮಹಿಳೆಯರು ತಮ್ಮ ವ್ಯಕ್ತಿತ್ವ , ತಮ್ಮ  ಅಂತಃಕರಣ ಸೇವೆ ಮೂಲಕ ಜನಸಾಮಾನ್ಯರಲ್ಲಿ ಉತ್ತಮ ಅಭಿಪ್ರಾಯ ಮೂಡಿಸಿ ಇತರ ವಿದ್ಯಾವಂತರಿಗೆ ಉತ್ತಮ ಸೇವೆ ಸಲ್ಲಿಸುವ ಆದರ್ಶಪ್ರಾಯರಾಗಿ ಕಾಣಬೇಕಾದವರು. ಆದರೆ ತಮ್ಮ ಬಗ್ಗೆ ಜನ ತಪ್ಪು ಅಭಿಪ್ರಾಯದಲ್ಲಿ ನೋಡುವಂತಹ ವಾತಾವರಣವನ್ನು ಸೃಷ್ಟಿ ಮಾಡಿಕೊಂಡಿರುವುದು ನಿಜಕ್ಕೂ ದುರದೃಷ್ಟ. ಇತರ ಮಹಿಳಾ ಉದ್ಯೋಗ ಆಕಾಂಕ್ಷಿಗಳು ಅನುಸರಿಸುವಂತಹ ವ್ಯಕ್ತಿತ್ವ ಹೊಂದಿದ್ದವರಾಗಿರಬೇಕಿತ್ತು. ಆದರೆ ಬೀದಿ ಕಾಳಗದಲ್ಲಿ ತೊಡಗಿಸಿಕೊಂಡಿರುವುದು ನಾಗರಿಕ ಸಮಾಜದ ಲಕ್ಷಣವಲ್ಲ ಎಂದು ಟೀಕಿಸಿದರು.

ಸರ್ಕಾರ ಇದೆಲ್ಲವನ್ನು ಬಹಳ ದಿನಗಳಿಂದ ಗಮನಿಸುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳದೆ ತನ್ನ ಅಸಹಾಯಕತೆಯನ್ನು ವ್ಯಕ್ತಪಡಿಸಿದೆ. ಇಂತಹ  ವಾತಾವರಣದಿಂದ ಸಾರ್ವಜನಿಕವಾಗಿ ಕೆಟ್ಟ ಪರಿಣಾಮ ಬೀರಲಿದೆ. ಸರ್ಕಾರಿ ನೌಕರರ ನಡವಳಿಕೆಗಳು ಸರ್ಕಾರ ಒಂದು ಭಾಗವೇ ಆಗಿರುತ್ತದೆ. ಸರ್ಕಾರ ಈ ಕೂಡಲೇ  ಶಿಸ್ತಿನ ಕ್ರಮ ಜರುಗಿಸುವುದು ಅತಿ ಜರೂರಿನ ಕೆಲಸವಾಗಿದೆ ಎಂದು ಹೆಚ್.ಎ ವೆಂಕಟೇಶ್ ತಿಳಿಸಿದ್ದಾರೆ.

Key words: D.Roopa -Rohini Sindhuri-kpcc-HA Venkatesh-government – disciplinary action