ಜಾಲತಾಣದಲ್ಲಿ ಕ್ರೇಜ್ ಸೃಷ್ಟಿಸಿದ ಮಕ್ಕಳ ಕಮರ್ಷಿಯಲ್ ಚಿತ್ರ ‘ಗಿರ್ಮಿಟ್ ‘

kannada t-shirts

ಬೆಂಗಳೂರು,ಅ,30,2019(www.justkannada.in): ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಮಕ್ಕಳೇ ಪ್ರಧಾನವಾಗಿರುವ ಮಕ್ಕಳ ವಾಣಿಜ್ಯ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಕಮಾಲ್ ಮಾಡಿದೆ. ಶೀರ್ಷಿಕೆಯ ಮೂಲಕವೇ ಗಮನ ಸೆಳೆದಿರುವ ಗಿರ್ಮಿಟ್ ಮೊದಲ ಮಕ್ಕಳ ಕಮರ್ಷಿಯಲ್ ಚಿತ್ರವಾಗಿದ್ದು ಜಾಲತಾಣದಲ್ಲಿ ಸುದ್ದಿ ಮಾಡುತ್ತಿದೆ. ಶನಿವಾರ, ಅ.26 ರಂದು ಬಿಡುಗಡೆಯಾದ ಗಿರ್ಮಿಟ್ ಟ್ರೈಲರ್ ಗೆ ಪ್ರೇಕ್ಷಕ ವಾಹ್ ಎಂದಿದ್ದಾನೆ. ಇದು ಸಂಗೀತ ನಿರ್ದೇಶಕ ರವಿ ಬಸ್ರೂರು ಮತ್ತು ತಂಡದ ಪ್ರಯತ್ನದ ಫಲವಾಗಿದ್ದು ಬಸ್ರೂರು ಅವರ ಶ್ರಮದ ನಾಲ್ಕನೇ ಚಿತ್ರವಾಗಿದೆ.ಟ್ರೈಲರ್ ಮೂಲಕ ಕುತೂಹಲ ಹುಟ್ಟಿಸಿರುವ ಚಿತ್ರ ಮುಂದಿನ ತಿಂಗಳು ನವೆಂಬರ್ 8 ರಂದು ಪ್ರಪಂಚದಾದ್ಯಂತ ಬಿಡುಗಡೆಯಾಗುತ್ತಿದೆ.

ಟ್ರೈಲರ್ ಯೂಟ್ಯೂಬ್ ನಲ್ಲಿ ಬಿಡುಗಡೆಯಾದಾಗಿನಿಂದ ಇದುವರೆಗೂ ಮೂರುವರೆ ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ. ಅಲ್ಲದೆ ಪಕ್ಕಾ ಮಾಸ್ ಸಿನಿಮಾದಂತೆ ಕಂಡು ಬಂದಿರುವ ಚಿತ್ರದ ಟ್ರೈಲರ್ ಗೆ ಪ್ರೇಕ್ಷಕ ಮೆಚ್ಚುಗೆ ವ್ಯಕ್ತಪಡಿಸಿದ್ದಾನೆ.

“ಭಾರತೀಯ ಸಿನಿಮಾ ರಂಗದಲ್ಲಿ ಇದು ಹೊಸ ಪ್ರಯತ್ನ, ನಿಮಗೆ ಶುಭವಾಗಲಿ”, ಎಂದು ಶಿವಶಂಕರ್ ಶೆಟ್ಟಿ ಎಂಬುವವರು ಚಿತ್ರಕ್ಕೆ ಶುಭ ಕೋರಿದ್ದಾರೆ.

“ಬಸ್ರೂರು ಅವರಿಗೆ ಶುಭವಾಗಲಿ, ಜೈ ಭುವನೇಶ್ವರಿ”, ಎಂದು ಕ್ರಾಂತಿಕಾರಿ ಕನ್ನಡಿಗ ಎಂಬುವವರು ಬರೆದಿದ್ದಾರೆ.  ಟ್ರೈಲರ್ ನೋಡಿದ ಪ್ರತಿಯೊಬ್ಬರೂ ಚಿತ್ರದ ಬಗ್ಗೆ ಭರವಸೆ ವ್ಯಕ್ತಪಡಿಸಿದ್ದಾರೆ.

ಚಿತ್ರದ ಟ್ರೈಲರ್ ನಲ್ಲಿ ನಾಯಕ, ನಾಯಕಿಯಾಗಿರುವ ಮಕ್ಕಳು ಗಮನ ಸೆಳೆದಿದ್ದಾರೆ. ಚಿತ್ರದಲ್ಲಿ ರಾಕಿಸ್ಟಾರ್ ಯಶ್, ರಾಧಿಕಾ ಪಂಡಿತ್ ಸೇರಿದಂತೆ ಹಿರಿಯ ಕಲಾವಿದರು ಮಕ್ಕಳ ಪ್ರಧಾನ ಪಾತ್ರಗಳಿಗೆ ಹಿನ್ನಲೆ ದನಿ ನೀಡಿರುವುದು ಚಿತ್ರದ ಪ್ರಮುಖ ಅಂಶಗಳಲ್ಲಿ ಒಂದು. ಕಮರ್ಷಿಯಲ್ ಚಿತ್ರದ ಸೂತ್ರದ ಅಡಿಯಲ್ಲಿ ತಯಾರಾಗಿರುವ ಚಿತ್ರ ಟ್ರೈಲರ್ ಮೂಲಕ ಗಮನ ಸೆಳೆದಿದೆ. ಯಶ್ ರಾಜ್ ಎಂಬ ಪಾತ್ರ ಮತ್ತು ನಟಿ ರಾಧಿಕಾ ರಶ್ಮಿ ಎಂಬ ಎಂಬ ಮಕ್ಕಳ ಪ್ರಧಾನ ಪಾತ್ರಗಳಿಗೆ ದನಿಯಾಗಿದ್ದಾರೆ.

ಬಸ್ರೂರು ತಮ್ಮ ತಂಡದೊಂದಿಗೆ ಚಿತ್ರವನ್ನು ತಯಾರಿಸಿದ್ದಾರೆ. ಅಲ್ಲದೆ ಸಂಗೀತದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ಚಿತ್ರದ ‘ಆರಂಭವೇ ಆನಂದವೇ’ ಎಂಬ ಲಿರಿಕಲ್ ವಿಡಿಯೋ ಗೀತೆ ಅ.21 ರ ಸಂಜೆ 7 ಕ್ಕೆ ಬಿಡುಗಡೆಯಾಗಿತ್ತು. ಕಿನ್ನಾಳ ರಾಜ್ ಸಾಹಿತ್ಯ ಇದ್ದು ಸಂತೋಷ್ ವೆಂಕಿ ಗೀತೆಗೆ ಧ್ವನಿಯಾಗಿದ್ದಾರೆ.

ಚಿತ್ರದಲ್ಲಿ ಮಕ್ಕಳೇ ನಾಯಕ, ನಾಯಕಿ, ತಂದೆ, ತಾಯಿ, ಅಜ್ಜಿ, ಸ್ನೇಹಿತರು ಹೀಗೆ ಎಲ್ಲ ಬಗೆಯ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಭಾರತೀಯ ಚಿತ್ರರಂಗದಲ್ಲೇ ಒಂದು ವಿಶಿಷ್ಟ ಪ್ರಯತ್ನವಾದ ಈ ಚಿತ್ರವನ್ನು ಮಕ್ಕಳ ಮೂಲಕವೇ ಚಿತ್ರಿಸಿ ತೆರೆಗೆ ತರಲಾಗುತ್ತಿದೆ. ಒಂದು ಕಮರ್ಷಿಯಲ್ ಚಿತ್ರದಲ್ಲಿ ಇರುವ ಅಂಶಗಳೆಲ್ಲವೂ ಇದರಲ್ಲಿದೆ. ನಾಯಕ, ನಾಯಕಿಯ ವಾಗ್ಯುದ್ಧಗಳು, ನಾಯಕನ ಖಡಕ್ ಡೈಲಾಗ್ ಗಳು, ನಾಯಕ, ನಾಯಕಿಯ ಪ್ರೇಮ ಸಲ್ಲಾಪಗಳು ಎಲ್ಲವೂ ಚಿತ್ರದಲ್ಲಿದೆ. ದೊಡ್ಡವರ ಪೋಷಾಕಿನಲ್ಲಿ ಕಾಣಿಸಿಕೊಂಡಿರುವ ಮಕ್ಕಳ ಪೋಸ್ಟರ್ ಮತ್ತು ಟೀಸರ್ ಗಮನ ಸೆಳೆದಿತ್ತು.

ಚಿತ್ರರಂಗದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಸ್ಟಾರ್ ನಟರು ಪ್ರಧಾನ ಪಾತ್ರಗಳಿಗೆ ಕಂಠದಾನ ನೀಡಿದ ಗಿರ್ಮಿಟ್ ಡಬ್ಬಿಂಗ್ ಟ್ರೈಲರ್ ಕಳೆದ ಶನಿವಾರ, ಅ.19 ರಂದು ರಿಲೀಸ್ ಆಗಿತ್ತು.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅರ್ಪಿಸುವ ಈ ಚಿತ್ರವು ಓಂಕಾರ್ ಮೂವೀಸ್ ಬ್ಯಾನರ್ ನಡಿ ನಿರ್ಮಾಣವಾಗಿದೆ. ಚಿತ್ರಕ್ಕೆ ಎನ್ ಎಸ್ ರಾಜ್ ಕುಮಾರ್ ಬಂಡವಾಳ ಹೂಡಿದ್ದಾರೆ. ಸೂರಜ್ ಚೌಧರಿ ಮತ್ತು ನರೇನ್ ಚಂದ್ರ ಚೌಧರಿಯು ಸಹ ನಿರ್ಮಾಪಕರಾಗಿದ್ದಾರೆ.

ಪ್ರಮೋದ್ ಮರವಂತೆ, ಕಿನ್ನಲ್ ರಾಜ್, ಸಂದೀಪ್ ಶಿರಸಿ, ಸುಚನ್ ಶೆಟ್ಟಿ ಮತ್ತು ಮಂಜುನಾಥ್ ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ಚಿತ್ರದಲ್ಲಿ ಅಶ್ಲೇಷ್ ರಾಜ್, ಶ್ಲಾಘಾ ಸಾಲಿಗ್ರಾಮಾ, ಆರಾಧ್ಯ ಶೆಟ್ಟಿ, ತನಿಶಾ ಕೋನಿ, ಜಯೇಂದ್ರ, ನಾಗರಾಜ್ ಜಪ್ತಿ, ಆದಿತ್ಯ ಕುಂದಾಪುರ ಮತ್ತು ಸಿಂಚನಾ ಕೋಟೇಶ್ವರ ಮೊದಲಾದ ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಸಂಗೀತ ನಿರ್ದೇಶಕ ರವಿ ಬಸ್ರೂರು ಮತ್ತು ಅವರ ತಂಡ ಭಿನ್ನ ಪ್ರಯತ್ನದ ಮೂಲಕ ಮಕ್ಕಳ ಕಮರ್ಷಿಯಲ್ ಚಿತ್ರ ಗಿರ್ಮಿಟ್ ನ್ನು ತಯಾರಿಸಿದ್ದಾರೆ. ಗಿರ್ಮಿಟ್ ಟ್ರೈಲರ್ ನಲ್ಲಿ ನಾಯಕ, ನಾಯಕಿಯಾಗಿ ಮಕ್ಕಳ ಪಾತ್ರವು ಗಮನ ಸೆಳೆದಿದ್ದು ಚಿತ್ರದ ಬಗ್ಗೆ ಕುತೂಹಲ ಮೂಡಿಸಿದೆ.

ಚಿತ್ರವು ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ, ಹಿಂದಿ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಏಕಕಲಾದಲ್ಲಿ ನವೆಂಬರ್ 8 ರಂದು ವಿಶ್ವದಾದ್ಯಂತ ಬೆಳ್ಳಿ ಪರದೆಗೆ ಅಪ್ಪಳಿಸಲಿದೆ.

Key words: Craze -created – Children’s -Commercial film-girmit

website developers in mysore