ಮುನ್ನೆಚ್ಚರಿಕೆ ಕ್ರಮಗಳ ಅನುಸರಣೆ ನಿರ್ಲಕ್ಷಿಸುತ್ತಿರುವ ಹಿರಿಯ ನಾಗರಿಕರಲ್ಲಿ ಮತ್ತೆ ಕೋವಿಡ್ ಸೋಂಕು.

ಬೆಂಗಳೂರು, ಜುಲೈ 29, 2021(www.justkannada.in): ಕೋವಿಡ್ ಲಸಿಕೆಯನ್ನು ಪಡೆದ ನಂತರ ಸಭೆ, ಸಮಾರಂಭಗಳಿಗೆ ಹಾಜರಾಗುತ್ತಿರುವ ಅನೇಕ ಹಿರಿಯ ನಾಗರಿಕರು ಪುನಃ ಕೋವಿಡ್ ಸೋಂಕಿತರಾಗುತ್ತಿರುವ ಸುದ್ದಿ ವರದಿಯಾಗಿದೆ.

ಬೆಂಗಳೂರು ನಗರದ ಆಸ್ಪತ್ರೆಗಳ ವೈದ್ಯರು ಹೇಳುತ್ತಿರುವ ಪ್ರಕಾರ ಕೋವಿಡ್ ವಾರ್ಡುಗಳಿಗೆ ಹಿರಿಯ ನಾಗರಿಕರು ಹಿಂದಿರುಗುತ್ತಿರುವ ಸಂಖ್ಯೆ ಹೆಚ್ಚುತ್ತಿದ್ದು, ಈ ಹಿನ್ನೆಲೆಯಲ್ಲಿ ಹಿರಿಯ ನಾಗರಿಕರಿಗೆ ಎಚ್ಚರಿಕೆ ವಹಿಸುವಂತೆ ಸೂಚಿಸಿದ್ದಾರೆ. ಕೋವಿಡ್ ಲಸಿಕೆಯ ಎರಡೂ ಡೋಸ್‌ ಗಳನ್ನು ಪಡೆದುಕೊಂಡಿದ್ದರೂ ಸಹ ಪುನಃ ಸೋಂಕು ಉಂಟಾಗಬಹುದು ಎಂದು ಎಚ್ಚರಿಸಿದ್ದಾರೆ.

ಬೆಂಗಳೂರು ದಕ್ಷಿಣ ವಿಭಾಗದ ೬೮-ವರ್ಷ-ವಯಸ್ಸಿನ ನಿವಾಸಿ ಶ್ಯಾಮ್ (ಹೆಸರು ಬದಲಾಯಿಸಿದೆ) ಲಸಿಕೆಯ ಎರಡೂ ಡೋಸ್‌ಗಳನ್ನು ತೆಗೆದುಕೊಂಡಿದ್ದು, ಇತ್ತೀಚೆಗೆ 60 ಜನರೊಂದಿಗೆ ಒಂದು ಸಾವಿನ ಸಮಾರಂಭದಲ್ಲಿ ಪಾಲ್ಗೊಂಡಿದ್ದರಂತೆ. “ನನ್ನಂತೆಯೇ ಅಲ್ಲಿ ಇನ್ನೂ ಅನೇಕ ಹಿರಿಯ ನಾಗರಿಕರಿದ್ದರು, ಎಲ್ಲರೂ ಲಸಿಕೆಯನ್ನು ಪಡೆದುಕೊಂಡಿದ್ದಾರು. ಆ ಪೈಕಿ ಹಿರಿಯರೊಬ್ಬರು ಮಾಸ್ಕ್ಗಳನ್ನು ತೆಗೆಯಬಹುದು, ಏನೂ ಆಗುವುದಿಲ್ಲ ಎಂದು ತಿಳಿಸಿದರು. ಹಾಗಾಗಿ ಇತರರಂತೆ ನಾನು ಮತ್ತು ನನ್ನ ಮಡದಿಯೂ ಸಹ ಮಾಸ್ಕ್ ಗಳನ್ನು ತೆಗೆದೆವು. ನಾವು ಒಂದು ಕೊಠಡಿಯಲ್ಲಿದ್ದೆವು ಹಾಗೂ ಕೆಲವು ಗಂಟೆಗಳ ಕಾಲ ಅಲ್ಲಿದ್ದೆವು. ಕೆಲವು ದಿನಗಳ ನಂತರ, ನನಗೆ ಮತ್ತು ನನಗೆ ಮಡದಿ ಇಬ್ಬರಿಗೂ ಕೋವಿಡ್ ಸೂಚನೆಗಳು ಗೋಚರಿಸಿದವು. ಪರೀಕ್ಷೆಗೆ ಒಳಪಟ್ಟಾಗ ಪುನಃ ಕೋವಿಡ್ ಸೋಂಕು ತಗುಲಿರುವುದು ಖಾತ್ರಿಯಾಯಿತು. ನಮ್ಮಂತೆಯೇ ಆ ಸಮಾರಂಭಕ್ಕೆ ಹಾಜರಾಗಿದ್ದಂತಹ ಇನ್ನೂ ಹಲವರಿಗೆ ಸೋಂಕು ತಗುಲಿದೆ. ನನ್ನ ಮಡದಿಗೆ ಸಹ ಖಾಯಿಲೆಗಳಿರುವುದರಿಂದಾಗಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಬೇಕಾಯಿತು. ನಾನು ಮನೆಯಲ್ಲೇ ಐಸೋಲೇಷನ್‌ನಲ್ಲಿರಬೇಕಾಯಿತು. ಲಸಿಕೆಯ ಎರಡೂ ಡೋಸ್‌ ಗಳನ್ನು ಪಡೆದುಕೊಂಡಿದ್ದಂತಹ ನನ್ನ ಮಕ್ಕಳು ಹಾಗೂ ಮೊಮ್ಮಕಳಿಗೂ ಸಹ ಸೋಂಕು ಉಂಟಾಗಿದೆ,” ಎಂದು ತಿಳಿಸಿದ್ದಾರೆ.

ನಗರದ ಆಸ್ಟರ್-ಸಿಎಂಐ ಆಸ್ಪತ್ರೆಯಲ್ಲಿ ಇನ್‌ಟರ್ನಲ್ ಮೆಡಿಸಿನ್ ವಿಭಾಗದ ವೈದ್ಯೆ ಡಾ. ಬೃಂದಾ ಅವರು ಹೇಳುವಂತೆ ಪ್ರಸ್ತುತ ಅವರ ಆಸ್ಪತ್ರೆಯಲ್ಲಿ ಅವರು ಕೋವಿಡ್ ಚಿಕಿತ್ಸೆ ನೀಡುತ್ತಿರುವಂತಹ ಜನರ ಪೈಕಿ ಬಹುತೇಕರು ಲಸಿಕೆಯ ಎರಡೂ ಡೋಸ್‌ಗಳನ್ನು ಪಡೆದಿರುವಂತಹ ಹಿರಿಯ ನಾಗರಿಕರಂತೆ! “ಅನೇಕ ಹಿರಿಯ ನಾಗರಿಕರು ಹೊರಗೆ ಹೋಗುವಾಗ, ಸಭೆ, ಸಮಾರಂಭಗಳಿಗೆ ಹಾಜರಾಗುವಾಗ ಮಾಸ್ಕ್ಗಳನ್ನು ಸರಿಯಾಗಿ ಧರಿಸುತ್ತಿಲ್ಲ. ಇದರಿಂದಾಗಿ ಸೋಂಕು ಮರುಕಳಿಸುವ ಸಾಧ್ಯತೆಗಳೇ ಹೆಚ್ಚು. ಈ ತಿಂಗಳಲ್ಲಿ ನಮ್ಮ ಆಸ್ಪತ್ರೆಯಲ್ಲಿ ೨೫-೩೦ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಿದ್ದು, ಈ ಪೈಕಿ ಶೇ.೬೦ರಷ್ಟು ರೋಗಿಗಳು ಹಿರಿಯ ನಾಗರಿಕರಾಗಿದ್ದಾರೆ.”

ಏಸ್ ಸುಹಾಸ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಡಾ. ಜಗದೀಶ್ ಹಿರೇಮಠ್ ಅವರು ಹೇಳಿರುವಂತೆ ಕೋವಿಡ್ ಲಸಿಕೆ ರಕ್ಷಣೆಯನ್ನು ಒದಗಿಸಿದರೂ ಸಹ, ಪುನಃ ಜನರು ಸೋಂಕಿತರಾಗಬಹುದು. “ಲಸಿಕೆ ಸಾಕಷ್ಟು ಮಟ್ಟಿಗೆ ಮರಣದ ಸಂಭವವನ್ನು ಕಡಿಮೆಗೊಳಿಸಬಹುದು. ಹಿರಿಯ ನಾಗರಿಕರಲ್ಲಿ ಅವರು ಬದುಕುಳಿಯಬಹುದು, ಆದರೆ ಸೋಂಕಿನ ತೀವ್ರತೆ ಆಸ್ಪತ್ರೆಯಲ್ಲಿ ಉಳಿದುಕೊಳ್ಳಬೇಕಾಗುವ ಅವಧಿ ಹೆಚ್ಚಾಗುತ್ತದೆ ಮತ್ತು ಅವರನ್ನು ಬಲಹೀನರನ್ನಾಗಿಸುತ್ತದೆ. ಕೋವಿಡ್ ನಂತರದಲ್ಲಿ ಇನ್ನೂ ಅನೇಕ ಅನಾರೋಗ್ಯ ಸಮಸ್ಯೆಗಳು ಎದುರಾಗಬಹುದು,” ಎಂದು ಎಚ್ಚರಿಸಿದ್ದಾರೆ.

ಈ ತಿಂಗಳಲ್ಲಿ ಅವರ ಆಸ್ಪತ್ರೆಯಲ್ಲಿ ಕೋವಿಡ್‌ ಗೆ ಚಿಕಿತ್ಸೆ ನೀಡಿರುವವರ ಪೈಕಿ ಶೇ.೪೦ಕ್ಕೂ ಹೆಚ್ಚಿನ ಸಂಖ್ಯೆಯ ಜನರು ಲಸಿಕೆಯ ಎರಡೂ ಡೋಸ್‌ ಗಳನ್ನು ಪಡೆದಿರುವಂತಹ ಹಿರಿಯ ನಾಗರಿಕರಾಗಿದ್ದಾರೆ. ಆದರೂ ಸಹ ಸೋಂಕಿಗೆ ಈಡಾಗಿದ್ದಾರೆ. “ನನ್ನ ಅಭಿಪ್ರಾಯದಲ್ಲಿ ಹಿರಿಯ ನಾಗರಿಕರು ಹೊರಗೆ ಹೋಗುವುದೆಂದರೆ ಸಾವಿಗೆ ಆಹ್ವಾನ ನೀಡಿದಂತೆ. ಹಾಗಾಗಿ, ಸಾಧ್ಯವಾದಷ್ಟು ಅವರು ಮನೆಯ ಒಳಗೆ ಇರುವುದು ಒಳಿತು. ಒಂದು ವೇಳೆ ಹೊರಗೆ ಹೋಗುವುದು ಅನಿವಾರ್ಯವಾದರೆ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಲೇಬೇಕು,” ಎಂದು ತಿಳಿಸಿದ್ದಾರೆ.

ಕೆ.ಸಿ. ಜನರಲ್ ಆಸ್ಪತ್ರೆಯ ವೈದ್ಯಕೀಯ ಮೇಲ್ವಿಚಾರಣಾಧಿಕಾರಿ ಡಾ. ಬಿ.ಆರ್. ವೆಂಕಟೇಶಯ್ಯ ಅವರು ಹೇಳಿರುವಂತೆ ತಾವು ಸ್ವತಃ ಲಸಿಕೆಯ ಎರಡೂ ಡೋಸ್‌ಗಳನ್ನು ತೆಗೆದುಕೊಂಡಿದ್ದರೂ ಸಹ ಸೋಂಕಿಗೆ ಈಡಾಗಿದ್ದು, ತಾವೇ ಒಂದು ಉತ್ತಮ ಉದಾಹರಣೆ ಎಂದಿದ್ದಾರೆ. “ನನಗೆ ಈಗ ೫೮ ವರ್ಷ ವಯಸ್ಸು. ನಾನು ಕೋವಿಡ್ ಲಸಿಕೆಯ ಎರಡೂ ಡೋಸ್‌ಗಳನ್ನು ತೆಗೆದುಕೊಂಡಿದ್ದರೂ ಸಹ ಎರಡು ತಿಂಗಳ ಹಿಂದೆ ನನಗೆ ಸೋಂಕು ತಗುಲಿತು. ಹಾಗಾಗಿ ಜನರು ತಮ್ಮ ಆರೋಗ್ಯವನ್ನು ನಿರ್ಲಕ್ಷಿಸಬಾರದು, ಬದಲಿಗೆ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಬೇಕು, ಅದರಲ್ಲಿಯೂ ವಿಶೇಷವಾಗಿ ಹಿರಿಯ ನಾಗರಿಕರು. ಲಸಿಕೆ, ಸೋಂಕಿನ ತೀವ್ರತೆಯನ್ನು ಕಡಿಮೆಗೊಳಿಸಬಹುದು, ಆದರೆ ಸಂಪೂರ್ಣವಾಗಿ ತಡೆಗಟ್ಟುವುದಿಲ್ಲ. ಪ್ರಸ್ತುತ, ನಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎಲ್ಲಾ ಕೋವಿಡ್ ಸೋಂಕಿತರೂ ಸಹ ೫೦ ವರ್ಷ ಮೇಲ್ಪಟ್ಟವರಾಗಿದ್ದು, ಈ ಪೈಕಿ ಶೇ.೨೫ರಷ್ಟು ರೋಗಿಗಳು ಲಸಿಕೆಯನ್ನು ಪಡೆದುಕೊಂಡವರಾಗಿದ್ದು, ಇನ್ನುಳಿದವರು ಲಸಿಕೆ ಪಡೆಯಬೇಕಾಗಿದೆ,” ಎಂದು ತಿಳಿಸಿದ್ದಾರೆ.

ಸುದ್ದಿ ಮೂಲ: ಬೆಂಗಳೂರ್ ಮಿರರ್

Key words: covid infection- again – senior citizens -gnore -precautions.