ಕೋವಿಡ್  ಎಫೆಕ್ಟ್: ಸಮರ್ಪಕ ಬಳಕೆಯಾಗದೆ ಉಳಿದಿರುವ ಬೆಂಗಳೂರಿನ ಮಿಂಟೊ ಕಣ್ಣಾಸ್ಪತ್ರೆಯ ನೂತನ ಅತ್ಯಾಧುನಿಕ ಕಣ್ಣಿನ ಶಸ್ತ್ರ ಚಿಕಿತ್ಸಾ ವ್ಯವಸ್ಥೆ.

ಬೆಂಗಳೂರು, ಆಗಸ್ಟ್ 21, 2021 (www.justkannada.in): ಬೆಂಗಳೂರಿನ ಸರ್ಕಾರಿ ಸ್ವಾಮ್ಯದ ಮಿಂಟೊ ಕಣ್ಣಿನ ಆಸ್ಪತ್ರೆಯಲ್ಲಿ ಅತ್ಯಂತ ಕಡಿಮೆ ದರದಲ್ಲಿ ಲಸಿಕ್ ಹಾಗೂ ಇತರೆ ಕಣ್ಣಿನ ದುಬಾರಿ ಶಸ್ತ್ರಚಿಕಿತ್ಸೆಗಳನ್ನು ಅತ್ಯಂತ ಕಡಿಮೆ ಬೆಲೆಯಲ್ಲಿ ಸಾಮಾನ್ಯರಿಗೆ ತಲುಪಿಸುವ ಉದ್ದೇಶದೊಂದಿಗೆ ಸ್ಥಾಪಿಸಲಾದ ಅತ್ಯಾಧುನಿಕ ಕಣ್ಣಿನ ಶಸ್ತ್ರಚಿಕಿತ್ಸಾ ವ್ಯವಸ್ಥೆ (advanced refractive surgery suite) ಕೋವಿಡ್ ಕಾರಣದಿಂದಾಗಿ ಸಮರ್ಪಕವಾಗಿ ಬಳಕೆಯಾಗದೆ ಉಳಿದುಕೊಂಡಿದೆ.

ಮಿಂಟೊ ಆಸ್ಪತ್ರೆಯಲ್ಲಿ ಹೊಸದಾಗಿ ಅಳವಡಿಸಲಾಗಿರುವ ಅತ್ಯಾಧುನಿಕ ಕಣ್ಣಿನ ಶಸ್ತ್ರಚಿಕಿತ್ಸಾ ವ್ಯವಸ್ಥೆ ಜರ್ಮನಿಯ ವಿಶ್ವಪ್ರಸಿದ್ಧ ಜೇಯಸ್ (Zeiss) ಕಂಪನಿ ತಯಾರಿಸಿದ್ದು, ೨೦೧೯ರಲ್ಲಿ ರಾಜ್ಯ ಸರ್ಕಾರ ಈ ಯಂತ್ರೋಪಕರಣವನ್ನು ರೂ.೮ ಕೋಟಿ ವೆಚ್ಚದಲ್ಲಿ ಖರೀದಿಸಿತು. ಆದರೆ ಇದನ್ನು ರಾಜ್ಯದಲ್ಲಿ ಕೋವಿಡ್-೧೯ ಸೋಂಕು ಎದುರಾಗುವ ಕೆಲವೇ ತಿಂಗಳ ಹಿಂದೆ ಅಳವಡಿಸಲಾಯಿತು ಎನ್ನುವುದು ಮಿಂಟೋ ಕಣ್ಣಿನ ಆಸ್ಪತ್ರೆಯ ನಿರ್ದೇಶಕಿ ಡಾ. ಬಿ.ಎಲ್. ಸುಜಾತ ರಾಥೋಡ್ ಅವರ ಅಭಿಪ್ರಾಯವಾಗಿದೆ.

“ಖಾಸಗಿ ಕಣ್ಣಿನ ಆಸ್ಪತ್ರೆಗಳಲ್ಲಿ ಇದೇ ಯಂತ್ರೋಪಕರಣವನ್ನು ಉಪಯೋಗಿಸಿಕೊಂಡು ಸುಧಾರಿತ ಲಸಿಕ್, ಫೋಟೊರಿಫ್ರಾಯಕ್ಟಿವ್ ಕೆರಟೆಕ್ಟೊಮಿ ಹಾಗೂ ಇತರೆ ಕಣ್ಣಿನ ಶಸ್ತ್ರಚಿಕಿತ್ಸೆಗಳನ್ನು ದುಬಾರಿ ಬೆಲೆಯಲ್ಲಿ ಒದಗಿಸಲಾಗುತ್ತಿದೆ. ಅದೇ ಚಿಕಿತ್ಸೆಯನ್ನು ಅದೇ ಯಂತ್ರೋಪಕರಣ ಬಳಸಿಕೊಂಡು ಸಾಮಾನ್ಯರಿಗೆ ಅತೀ ಕಡಿಮೆ ವೆಚ್ಚದಲ್ಲಿ ಉತ್ತಮ ಶಸ್ತ್ರಚಿಕಿತ್ಸೆಯನ್ನು ಒದಗಿಸುವುದು ನಮ್ಮ ಉದ್ದೇಶವಾಗಿದೆ. ಖಾಸಗಿ ಆಸ್ಪತ್ರೆಗಳು ಲಸಿಕ್ ಶಸ್ತ್ರ ಚಿಕಿತ್ಸೆಗೆ ರೂ.೧.೨ ಲಕ್ಷ ಶುಲ್ಕ ವಿಧಿಸುತ್ತದೆ. ಆದರೆ ಇಲ್ಲಿ ಅದೇ ಶಸ್ತ್ರಚಿಕಿತ್ಸೆಯನ್ನು ಕೇವಲ ರೂ.೬೦,೦೦೦ಕ್ಕೆ ಒದಗಿಸಲಾಗುತ್ತದೆ. ಇತರೆ ಶಸ್ತ್ರಚಿಕಿತ್ಸೆಗಳ ದರಗಳು ರೂ.೪,೦೦೦ ದಿಂದ ರೂ.೫೦,೦೦೦ದ ನಡುವೆ ಇದೆ. ಆದರೆ ಕರ್ನಾಟಕದಲ್ಲಿ ಕೋವಿಡ್-೧೯ ಸಾಂಕ್ರಾಮಿಕ ಎದುರಾಗಿ ರೋಗಿಗಳಿಗೆ ಸಮಸ್ಯೆಯನ್ನು ಒಡ್ಡಿತು,” ಎಂದು ವಿವರಿಸಿದರು.

ಮಾರ್ಚ್ ೨೦೨೦ರ ವೇಳೆಗೆ ಆಸ್ಪತ್ರೆಯಲ್ಲಿ ೩೦೦ ಶಸ್ತçಚಿಕಿತ್ಸೆಗಳನ್ನು ನಡೆಸಲಾಗಿತ್ತು. ಆಗ ಲಾಕ್‌ ಡೌನ್ ವಿಧಿಸಲಾಗಿ ಕೋವಿಡೇತರ ಸೇವೆಗಳನ್ನು ಸ್ಥಗಿತಗೊಳಿಸಲಾಯಿತು. “ಈ ಆಸ್ಪತ್ರೆಯ ವಾರ್ಡುಗಳನ್ನು ಕೋವಿಡ್-೧೯ ಪ್ರಕರಣಗಳನ್ನು ನಿರ್ವಹಿಸಲು ಅನುವಾಗುವಂತೆ ಪರಿವರ್ತಿಸಲಾಯಿತು. ಆದರೆ ಕೋವಿಡ್ ಎರಡೂ ಅಲೆಗಳ ನಂತರ ಶಸ್ತ್ರ ಚಿಕಿತ್ಸೆಗಳ ಸಂಖ್ಯೆ ನಾವು ನಿರೀಕ್ಷಿಸಿದಂತೆ ಹೆಚ್ಚಾಗಿಲ್ಲ. ನಮ್ಮ ವೈದ್ಯರ ತಂಡ ಪ್ರತಿ ದಿನ ೧೪ ಶಸ್ತçಚಿಕಿತ್ಸೆಗಳನ್ನು ನಡೆಸುವ ಸಾಮರ್ಥ್ಯವನ್ನು ಹೊಂದಿದೆ. ಪ್ರತಿ ಶಸ್ತ್ರಚಿಕಿತ್ಸೆಗೆ ಐದು ನಿಮಿಷಗಳು ಬೇಕಾಗುತ್ತದೆ. ಪ್ರತಿ ದಿನ ಕನಿಷ್ಠ ಎರಡು ಅಥವಾ ಮೂರು ರೋಗಿಗಳು ಬರುವ ನೀರಿಕ್ಷೆ ನಮಗಿತ್ತು. ಆದರೆ ಅಷ್ಟು ಜನರೂ ಬರುತ್ತಿಲ್ಲ,” ಎಂದರು.

ಕೋವಿಡ್-೧೯ರಿಂದಾಗಿ ಜನರಲ್ಲಿ ಭಯ ಹಾಗೂ ಈ ಕೇಂದ್ರದಲ್ಲಿ ಈ ರೀತಿ ಅತ್ಯಾಧುನಿಕ ಚಿಕಿತ್ಸಾ ವ್ಯವಸ್ಥೆ ಲಭ್ಯಗೊಳಿಸಿರುವ ಕುರಿತು ಜನರಲ್ಲಿ ಮಾಹಿತಿ ಕೊರತೆ ಇದಕ್ಕೆ ಪ್ರಮುಖ ಕಾರಣಗಳು ಎನ್ನಲಾಗಿದೆ. ಎಐಐಎಂಎಸ್ ಹಾಗೂ ಪಿಜಿಐಎಂಇಆರ್, ಚಂಡೀಘಡ ಈ ಎರಡು ಸ್ಥಳಗಳನ್ನು ಬಿಟ್ಟರೆ ಇದು ಇಡೀ ದೇಶದಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಲಭ್ಯಗೊಳಿಸಲಾಗಿರುವ ಈ ರೀತಿಯ ಅತ್ಯಾಧುನಿಕ ಕಣ್ಣಿನ ಶಸ್ತçಚಿಕಿತ್ಸಾ ವ್ಯವಸ್ಥೆಯಾಗಿದೆ.

ಇಷ್ಟು ದೊಡ್ಡ ಪ್ರಮಾಣದ ರಿಯಾಯಿತಿ ದರದಲ್ಲಿ ಶಸ್ತ್ರಚಿಕಿತ್ಸೆ ಒದಗಿಸುತ್ತಿದ್ದರೂ ಸಹ ಬಡವರಿಗೆ ಈ ದರಗಳನ್ನು ಭರಿಸುವುದು ಸಾಧ್ಯವಾಗುತ್ತಿಲ್ಲ. “ನಮ್ಮ ಆಸ್ಪತ್ರೆಗೆ ಪ್ರತಿ ದಿನ ಸರಾಸರಿ 400 ರಿಂದ 500 ಜನರು ಬರುತ್ತಾರೆ. ಆ ಪೈಕಿ ೫೦%ರಷ್ಟು ಜನರಿಗೆ ರಿಪ್ರಾಯಕ್ಟಿವ್ ಕಣ್ಣಿನ ತೊಂದರೆಗಳಿರುತ್ತವೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ವಿವಿಧ ಸಮಸ್ಯೆಗಳಿಂದಾಗಿ ಉದ್ಭವಿಸುವ ದೃಷ್ಟಿಕೊರತೆಗಳ ಪೈಕಿ, ಕಣ್ಣಿನ ರಿಪ್ರ್ಯಾಕ್ಟಿವ್ ಸಮಸ್ಯೆಯಿಂದಾಗಿ ಸಂಭವಿಸುವ ದೃಷ್ಟಿದೋಶವನ್ನು ಅತೀ ಸುಲಭವಾಗಿ ಸರಿಪಡಿಸಬಹುದಾಗಿದೆ. ಆದರೆ ಅನೇಕರಿಗೆ ಶುಲ್ಕ ಭರಿಸಲಾಗುವುದಿಲ್ಲ,” ಎನ್ನುವುದು ಮಿಂಟೊ ಕಣ್ಣಿನ ಆಸ್ಪತ್ರೆಯ, ಈ ಅತ್ಯಾಧುನಿಕ ಶಸ್ತ್ರಚಿಕಿತ್ಸಾ ವ್ಯವಸ್ಥೆಯ ಮುಖ್ಯಸ್ಥರು, ಕಾರ್ನಿಯಾ, ಕ್ಯಾರ್ಯಾ ಕ್ಟ್ ಹಾಗೂ ರಿಫ್ರ್ಯಾಕ್ಟಿವ್ ಸರ್ವೀಸಸ್‌ ನ ಸಹಾಯಕ ಪ್ರಾಧ್ಯಾಪಕ ಕಿರಣ್ ಕುಮಾರ್ ಕೆ ಅವರ ಅಭಿಪ್ರಾಯವಾಗಿದೆ.

“ಬಡವರಿಗೆ ಅತ್ಯಂತ ಕಡಿಮೆ ದರದಲ್ಲಿ ಈ ಆಧುನಿಕ ಶಸ್ತ್ರಚಿಕಿತ್ಸೆ ಲಭಿಸಲಿ ಎನ್ನುವ ಕಾರಣಕ್ಕಾಗಿ, ಈ ಚಿಕಿತ್ಸೆಯನ್ನು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ (ಎಸ್‌ಎಎಸ್‌ಟಿ) ಅಡಿ ದೊರಕಿಸಿಕೊಡುವಂತೆ ನಾವು ಬುಧವಾರ ಸರ್ಕಾರಕ್ಕೆ ಒಂದು ಮನವಿಯನ್ನು ಕಳುಹಿಸಿದ್ದೇವೆ,” ಎಂದು ವಿವರಿಸಿದರು.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words: Covid Effect- New Sophisticated- Ophthalmic- Surgical System -Bengaluru Minto -Eye -hospital