ಕೋವಿಡ್ ಸಂಕಷ್ಟ- ಬಿಬಿಎಂಪಿ ವ್ಯವಸ್ಥೆ,  ಡಿಸಿಎಂ ಕಾಳಜಿಗೆ ಐ.ಐ.ಎಸ್.ಸಿ. ಪ್ರಾಧ್ಯಾಪಕರು ಮೆಚ್ಚುಗೆ..

Promotion

ಬೆಂಗಳೂರು,ಏಪ್ರಿಲ್,26,2021(www.justkannada.in):  ತಮ್ಮ ಕುಟುಂಬದವರು ಕೋವಿಡ್ ಸೋಂಕಿಗೆ ಒಳಗಾದ ಸಂದರ್ಭದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅವರು ತೋರಿದ ಕರ್ತವ್ಯ ಪಾಲನೆ ಹಾಗೂ ಕಾಳಜಿ ಬಗ್ಗೆ ಭಾರತೀಯ ವಿಜ್ಞಾನ ಸಂಸ್ಥೆಯ (ಐ.ಐ.ಎಸ್.ಸಿ.) ಪ್ರಾಧ್ಯಾಪಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.covid-bbmp-system-dcm-iisc-professor-appreciated

ಐ.ಐ.ಎಸ್.ಸಿ. ಪ್ರಾಧ್ಯಾಪಕರಾದ ಎ.ಜಿ.ರಾಧಾಕೃಷ್ಣನ್ ಅವರು ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

“ಬೆಂಗಳೂರಿನ ಮಲ್ಲೇಶ್ವರದಲ್ಲಿ ನಾವು ವಾಸವಾಗಿದ್ದು, ಮೊದಲು ನಮ್ಮ ಮಗನಿಗೆ ಕೊರೋನಾ ಪಾಸಿಟಿವ್ ಬಂದಿತು. ಆಗ ಬಿಬಿಎಂಪಿ ಯವರು ನಮಗೆ ಕರೆ ಮಾಡಿ ಕುಟುಂಬ ಸದಸ್ಯರ ವಿವರವನ್ನು ದಾಖಲಿಸಿಕೊಂಡರು. ಅದಾದ ನಂತರ ಅವರು ನಮ್ಮ ಮನೆ ಬಾಗಿಲಿಗೆ ಔಷಧಿಗಳನ್ನು ಕಳಿಸಿಕೊಟ್ಟರು. ಅದಾದ ಮೇಲೆ ಪುನಃ ಬಂದು ಪರೀಕ್ಷೆಗಾಗಿ ನಮ್ಮ ಮನೆಯವರೆಲ್ಲರ ಸ್ಯಾಂಪಲ್‌ ಗಳನ್ನು ಸಂಗ್ರಹಿಸಿಕೊಂಡರು. ಅದಾದ ಎರಡನೇ ದಿನಕ್ಕೆ ನಮಗೆ ಫಲಿತಾಂಶವನ್ನು ತಿಳಿಸಿ, ನನಗೆ ಮತ್ತು ನನ್ನ ತಾಯಿಗೆ ಪಾಸಿಟಿವ್ ಎಂಬುದನ್ನು ದೃಢಪಡಿಸಿದರು. ನನ್ನ ತಾಯಿಯನ್ನು ಆಸ್ಪತ್ರೆಗೆ ಸೇರಿಸುವಂತೆ ಸಲಹೆಯನ್ನೂ ನೀಡಿದರು. ಆದರೆ, ನಾನು ಮನೆಯಲ್ಲೇ ತಾಯಿಯ ಆರೋಗ್ಯ ನೋಡಿಕೊಳ್ಳುವುದಾಗಿ ಹೇಳಿದೆ. ಅದಕ್ಕೆ ಒಪ್ಪಿದ ಅವರು ನಮ್ಮಿಬ್ಬರಿಗೂ ಔಷಧಗಳನ್ನು ಮನೆಗೇ ಕೊಟ್ಟು ಕಳಿಸಿದರು. ಎರಡು ವಾರಗಳಾದ ಮೇಲೆ ನಮ್ಮಿಬ್ಬರಿಗೂ ಕರೆ ಮಾಡಿ ಸೋಂಕಿನ ಸ್ಥಿತಿಯ ಬಗ್ಗೆ ವಿಚಾರಿಸಿ, ಪ್ರಾಥಮಿಕ ಆರೋಗ್ಯ ಕೇಂದ್ರದ ವಿಳಾಸಕೊಟ್ಟು ಅಲ್ಲಿ ಪರೀಕ್ಷೆ ಮಾಡಿಸಿಕೊಳ್ಳಲು ಸೂಚಿಸಿದರು. ಅದರಂತೆ ನಾವು ಅಲ್ಲಿಗೆ ಹೋದಾಗ ಸರದಿಯಲ್ಲಿ ಇಬ್ಬರು ಮಾತ್ರ ಇದ್ದರು. ಅಲ್ಲಿ ಆರ್‌ಟಿಪಿಸಿಆರ್ ಪರೀಕ್ಷೆ ಮಾಡಿದ ಎರಡು ದಿನಗಳಲ್ಲಿ ನಮ್ಮ ಮೊಬೈಲ್‌ಗೆ ಕೊರೋನಾ ನೆಗೆಟಿವ್ ಎಂಬ ಫಲಿತಾಂಶ ಬಂತು. ಅದಾದ ಎರಡು ದಿನಗಳಿಗೆ ನಮಗೆ ಮತ್ತೊಂದು ಕರೆ ಬಂದು, ಅದರಲ್ಲಿ ನಮ್ಮ ಆರೋಗ್ಯದ ಬಗ್ಗೆ ವಿಚಾರಿಸಿದರು. ಹೀಗೆ ಕರೆ ಮಾಡಿದ ವ್ಯಕ್ತಿಯು ತಾನು ಮಲ್ಲೇಶ್ವರ ಶಾಸಕರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅವರ ಕಚೇರಿಯಿಂದ ಮಾತನಾಡುತ್ತಿರುವುದಾಗಿ ತಿಳಿಸಿದರು” ಎಂದು ವಿವರಿಸಿದ್ದಾರೆ.covid-bbmp-system-dcm-iisc-professor-appreciated

ಇದು ನಿಜವಾಗಿಯೂ ಉಲ್ಲೇಖಿಸಬೇಕಾದ ವಿಷಯವಾಗಿದೆ. ಈ ಕೊರೋನಾ ಸನ್ನಿವೇಶದಲ್ಲಿ ಬರೀ ನಕಾರಾತ್ಮಕ ಸುದ್ದಿಗಳೇ ಕೇಳಿಬರುತ್ತಿರುವಾಗ ಇದೊಂದು ಗಮನಿಸಬೇಕಾದ ಧನಾತ್ಮಕ ಸಂಗತಿಯಾಗಿದೆ. ಜಗತ್ತಿನ ಆರನೇ ಒಂದರಷ್ಟು ಜನಸಂಖ್ಯೆಯಿರುವ ಭಾರತದಂತಹ ದೊಡ್ಡ ರಾಷ್ಟ್ರದಲ್ಲಿ ಬಿಬಿಎಂಪಿ ಮಾಡಿರುವ ವ್ಯವಸ್ಥೆ ಹಾಗೂ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅವರ ಕಚೇರಿಯವರು ತೋರಿದ ಕಾಳಜಿ ಅನುಕರಣೀಯ ಎಂದು ಪ್ರೊಫೆಸರ್ ರಾಧಾಕೃಷ್ಣನ್ ಅಭಿಪ್ರಾಯಪಟ್ಟಿದ್ದಾರೆ.

Key words: Covid-  BBMP –System- DCM – IISC professor- Appreciated