ಮುಗಿಯಲ್ಲ ಕೊರೊನಾ ರೂಪಾಂತರಿ ವೈರಸ್ ಸರಣಿ: ವಿಜ್ಞಾನಿಗಳ ವರದಿ

ಬೆಂಗಳೂರು, ಜನವರಿ 17, 2022 (www.justkannada.in): ಒಮೈಕ್ರಾನ್ ಕೊರೋನಾ ವೈರಸ್‌ನ ಕೊನೆಯ ರೂಪಾಂತರವಾಗುವುದಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಇಂತಹ ರೂಪಾಂತರಗಳನ್ನು ಭವಿಷ್ಯದಲ್ಲಿಯೂ ಕಾಣಬಹುದು. ಆರಂಭಿಕ ಸೋಂಕಿನಿಂದಾಗಿ, ಈ ವೈರಸ್ ರೂಪಾಂತರಗೊಳ್ಳುವ ಅವಕಾಶವನ್ನು ಪಡೆಯುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಒಮಿಕ್ರಾನ್‌ ಈಗ ಇಡೀ ವಿಶ್ವದಲ್ಲಿ ಹರಡಿದೆ. ಪ್ರಸ್ತುತ ಲಸಿಕೆ ಒಮಿಕ್ರಾನ್ ವಿರುದ್ಧ ಕೆಲಸ ಮಾಡುತ್ತದೆ ಎಂಬುದಕ್ಕೆ ಯಾವುದೇ ಗ್ಯಾರಂಟಿ ಇಲ್ಲ. ಆದರೂ ಬೇರೆ ಉಪಾಯವಿಲ್ಲ ಎಂದು ತಜ್ಞರು ತಿಳಿಸಿದ್ದಾರೆ.

ವೇಗವಾಗಿ ಹರಡುತ್ತಿರುವ, ಒಮಿಕ್ರಾನ್ ಹೆಚ್ಚಿನ ರೂಪಾಂತರಗಳನ್ನು ರಚಿಸಲು ಅವಕಾಶವನ್ನು ಹೊಂದಿರುತ್ತದೆ, ಇದರಿಂದಾಗಿ ಹೆಚ್ಚಿನ ರೂಪಾಂತರಗಳು ರೂಪುಗೊಳ್ಳುವ ಸಾಧ್ಯತೆಯು ಹೆಚ್ಚಾಗುತ್ತದೆ ಎಂದಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ, ಜನವರಿ 3 ಮತ್ತು 9 ರ ನಡುವೆ, ವಿಶ್ವಾದ್ಯಂತ ಸುಮಾರು 1.5 ಕೋಟಿ ಕೋವಿಡ್ ಪ್ರಕರಣಗಳು ವರದಿಯಾಗಿವೆ, ಇದು ಹಿಂದಿನ ವಾರಕ್ಕಿಂತ 55 ಶೇಕಡಾ ಹೆಚ್ಚಾಗಿದೆ.