ಕೊರೋನಾ ತಡೆಗೆ 200 ಕೋಟಿ ಹಣ ಬಿಡುಗಡೆ: ಬಂದ್ ಮುಂದುವರೆಸುವ ಕುರಿತು ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ…

ಬೆಂಗಳೂರು,ಮಾ,18,2020(www.justkannada.in):  ರಾಜ್ಯದಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಮಾರ್ಚ್ 31ರವರೆಗೆ ಬಂದ್ ಮುಂದುವರೆಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಇಂದು ವಿಧಾನಸೌಧದಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ತುರ್ತು ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸಚಿವ ಸಂಪುಟ ಸಭೆ ಬಳಿಕ ಈ ಕುರಿತು ಮಾತನಾಡಿದ ಸಿಎಂ ಬಿಎಸ್ ಯಡಿಯೂರಪ್ಪ, ಕೊರೋನಾ ಸೋಂಕು ಹರಡುತ್ತಿರುವ ಹಿನ್ನೆಲೆ ಮಾರ್ಚ್ 31ರವರೆಗೆ ಬಂದ್ ಮುಂದುವರೆಸಲು ನಿರ್ಧಾರ ಮಾಡಲಾಗಿದೆ.  ಹಿಂದಿನ ಮಾರ್ಗಸೂಚಿಯನ್ನೆ ಮುಂದುವರೆಸಲು ತೀರ್ಮಾನಿಸಿದ್ದೇವೆ. ಹಾಗೆಯೇ ಕೊರೋನಾ ತಡೆಗೆ 200 ಕೋಟಿ ಹಣ ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿಸಿದರು.

ಜತೆಗೆ ಕೊರೋನಾ ಸೋಂಕು ತಡೆಗೆ ನಾಲ್ಕು ಟಾಸ್ಕ್ ಪೋರ್ಸ್ ರಚನೆ ಮಾಡಲಾಗುತ್ತಿದೆ. ಸಚಿವರಾದ ಅಶ್ವಥ್ ನಾರಾಯಣ್, ಬಸವರಾಜ ಬೊಮ್ಮಾಯಿ, ಶ್ರೀರಾಮುಲು, ಡಾ.ಕೆ.ಸುಧಾಕರ್ ನೇತೃತ್ವದಲ್ಲಿ ಟಾಸ್ಕ್ ಪೋರ್ಸ್ ರಚಿಸಲಾಗುತ್ತಿದೆ.  ಈ ಟಾಸ್ಕ್ ಪೋರ್ಸ್ ಗಳು  ಪ್ರತಿದಿನ ಕೊರೊನಾ ಅಪ್ಡೇಟ್ ಬುಲೆಟಿನ್ ಕೊಡುತ್ತವೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಮಾಹಿತಿ ನೀಡಿದರು.

ಕೊರೋನಾ ವೈರಸ್ ಭೀತಿಯಿಂದಾಗಿ ರಾಜ್ಯದ ಸಿನಿಮಾ ಥಿಯೇಟರ್ ಗಳು ಮಾಲ್ ಗಳು ಶಾಲಾ ಕಾಲೇಜುಗಳು ಸಭೆ ಸಮಾರಂಭಗಳು ಕ್ರೀಡಾಕಾರ್ಯಕ್ರಮಗಳನ್ನ ಬಂದ್ ಮಾಡಲಾಗಿದೆ.

Key words: Corona- Decision – Cabinet Meeting – continue- Bandh -until -March 31