ಮಂಡ್ಯದಿಂದಲೇ ಮತ್ತೆ ಕಾಂಗ್ರೆಸ್ ಶಕೆ ಆರಂಭ: ಮಾಜಿ ಸಚಿವ ಚೆಲುವರಾಯ ಸ್ವಾಮಿ

ಮಂಡ್ಯ, ನವೆಂಬರ್ 24, 2021: ಕಾಂಗ್ರೆಸ್ ಪರ್ವ ಮಂಡ್ಯದಿಂದಲೇ ಪ್ರಾರಂಭವಾಗಬೇಕು ಹೊಸ ಮನ್ವಂತರಕ್ಕೆ ಮುಂದಿನ ವಿಧಾನ ಪರಿಷತ್ ಚುನಾವಣೆ ಸಾಕ್ಷಿಯಾಗಲಿದ್ದು, ಇಡೀ ರಾಷ್ಟ್ರ ಶಾಂತಿಯನ್ನು ನೋಡಬೇಕಾದರೆ ಅದು ಕಾಂಗ್ರೆಸ್ ನಿಂದ ಮಾತ್ರ ಸಾಧ್ಯ ಎಂದು ಮಾಜಿ ಸಚಿವರಾದ ಚೆಲುವರಾಯ ಸ್ವಾಮಿ ಅವರು ಹೇಳಿದರುಮ

ಮದ್ದೂರು ತಾಲ್ಲೂಕಿನ ಭಾರತೀನಗರದಲ್ಲಿ ಬುಧವಾರ ನಡೆದ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

ಯಾವುದೇ ಚುನಾಯಿತ ಪ್ರತಿನಿಧಿಗಳಾಗಬೇಕಾದರೆ ಕನಿಷ್ಠ ಪ್ರಜ್ಞೆ ಹಾಗೂ ತಿಳುವಳಿಕೆ ಇರಬೇಕು. ಇದರಿಂದ ಕೊಟ್ಟಿರುವ ಜವಾಬ್ದಾರಿಯನ್ನು ರಾಜ್ಯಮಟ್ಟದಲ್ಲಿ, ಜಿಲ್ಲಾಮಟ್ಟದಲ್ಲಿ ಹಾಗೂ ತಾಲ್ಲೂಕು ಮಟ್ಟದಲ್ಲಿ ನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಯಾವುದೋ ಒಂದು ಸಂದರ್ಭದಲ್ಲಿ ಒಬ್ಬ ಮನುಷ್ಯ ದುಡುಕಿ ಆತುರದ ನಿರ್ಧಾರ ತೆಗೆದುಕೊಂಡು ತಪ್ಪುಮಾಡಬಹುದು. ಆದರೆ ಅದೆ ತಪ್ಪನ್ನು ಆತ ಮತ್ತೆ ಮಾಡಲಾರ. ಈಗ ಅಂತಹ ತಪ್ಪನ್ನು ತಿದ್ದಿಕೊಳ್ಳುವ ಅವಕಾಶ ಬಂದಿದೆ. ರಾಜ್ಯದ ಹಾಗೂ ರಾಷ್ಟ್ರದ ನಾಯಕರ ಇಚ್ಚೆಯ ಮೇರೆಗೆ ಆಯ್ಕೆ ಆಗಿರುವ ದಿನೇಶ್ ಗೂಳಿಗೌಡ ಅವರನ್ನು ಗೆಲ್ಲಿಸುವ ಮೂಲಕ ರಾಜ್ಯದಲ್ಲಿ ಇಲ್ಲಿಂದ ಕಾಂಗ್ರೆಸ್ ಶಕೆ ಆರಂಭವಾಗಬೇಕು ಎಂದರು.

ಮಂಡ್ಯ ಜಿಲ್ಲೆಯಲ್ಲಿ ನಮ್ಮ ಅಭ್ಯರ್ಥಿಯ ಬಗ್ಗೆ ಒಳ್ಳೆಯ ಅಭಿಪ್ರಾಯ ಹಾಗೂ ಒಲವು ಇದೆ. ಜೆಡಿಎಸ್ ಅಭ್ಯರ್ಥಿ ಕಳೆದ ಚುನಾವಣೆಯಲ್ಲಿ ಆಯ್ಕೆಯಾದ ನಂತರ ಯಾವ ಜನಪ್ರತಿನಿಧಿಯನ್ನು ಗೌರವಿಸದೆ, ಕಾಲಹರಣ ಮಾಡಿದರು. ಅಂತಹವರು ಮತ್ತೆ ಚುನಾವಣೆಗೆ ಸ್ಪರ್ಧಿಸಿರುವುದು ಜಿಲ್ಲೆಯ ದುರ್ದೈವ. ಆದರೆ ಕಾಂಗ್ರೆಸ್ ಪಕ್ಷ ಹಾಗೆ ಮಾಡದೆ ಪಕ್ಷಕ್ಕಾಗಿ ಸಕ್ರಿಯರಾಗಿ ಕಾರ್ಯನಿರ್ವಹಿಸುತ್ತಿರುವರನ್ನು ಹಾಗೂ ಅವರ ಬುದ್ಧಿವಂತಿಕೆ ನೋಡಿ ಕಣಕ್ಕೆ ಇಳಿಸಿದೆ ಎಂದು ಹೇಳಿದರು.

ಮೋದಿ ನೇತೃತ್ವದ ಸರ್ಕಾರದಿಂದ ಜನರು ಕಳೆದ 06 ರಿಂದ 07 ವರ್ಷಗಳ ಯಾವ ರೀತಿ ಏನೆಲ್ಲಾ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ ಎಂದು ಗಮನಿಸುತ್ತಿದ್ದೆವೆ‌. ಯಾವುದೋ ಕಾಲದಲ್ಲಿ ಆದ ಚೈನಾ ಮತ್ತು ಪಾಕಿಸ್ತಾನದ ಗಲಾಟೆಯನ್ನು ತೋರಿಸಿ ಜನರಿಗೆ ಮೂರ್ಖರನ್ನಾಗಿ ಮಾಡುತ್ತಿದ್ದಾರೆ ಎಂದು ಹೇಳಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೇವಲ ಯಶಸ್ವಿಯಾಗಿ ದೇಶ ಪರ್ಯಾಟನೆ ಮಾತ್ರ ಮಾಡುತ್ತಿದ್ದಾರೆ. ಇದರಿಂದ ರಾಷ್ಟ್ರದ ಜನರ ಬದುಕಿಗೆ, ಎಲ್ಲಾ ಮಹಿಳೆಯರಿಗೆ, ಹಿಂದುಳಿದವರಿಗೆ ಅಥವಾ ಅಲ್ಪಸಂಖ್ಯಾತರಿಗೆ ಹಾಗೂ ರೈತರಿಗೆ ಏನು ಸಿಕ್ಕಿದೆ ಎಂಬುದನ್ನು ನೋಡಬೇಕಾಗಿದೆ ಎಂದರು.

ಜೆಡಿಎಸ್ ಪಕ್ಷ ಕಾಂಗ್ರೆಸ್ ಅನ್ನು ಉಪಯೋಗಿಸಿಕೊಂಡು ಅಧಿಕಾರಕ್ಕೆ ಬಂದರು. ಇಂದು ಬಿಜೆಪಿ ಅವರೊಡನೆ ಕೈ ಜೋಡಿಸಿದ್ದಾರೆ. ಅಧಿಕಾರಕ್ಕಾಗಿ ಅವರ ಸ್ಥಾನವನ್ನು ಭದ್ರ ಮಾಡಿಕೊಳ್ಳುತ್ತಾರೆ. ಆದರೆ ನಿಮ್ಮ ಪರಿಸ್ಥಿತಿ ಬಗ್ಗೆ ಯೋಚಿಸುವುದಿಲ್ಲ. ಆದರೆ ನಾವು ಯೋಚನೆ ಮಾಡಿದಾಗ ಕಾಂಗ್ರೆಸ್ ಸ್ವಾತಂತ್ರ್ಯ ಬಂದಾಗಿನಿಂದ ಅನೇಕ ಪ್ರಧಾನಿಗಳು ಜನಪರವಾಗಿ ಕೆಲಸ ಮಾಡಿದ್ದಾರೆ ಎಂದು ಹೇಳಿದರು.

ದಿನೇಶ್ ಗೂಳಿಗೌಡ ಅವರು ಮಾತನಾಡಿ, ಕೃಷಿ ಕುಟುಂಬದಿಂದ ಬಂದವನು ನಾನು. ನಮ್ಮ ತಂದೆ ಇಂದಿಗೂ ಕೃಷಿ ಮಾಡುತ್ತಿದ್ದಾರೆ. ನಿಮ್ಮವನೇ ಆದ ನನಗೆ ನಿಮ್ಮೆಲ್ಲರ ತಿಳುವಳಿಕೆ ಮತ್ತು ಹೆಮ್ಮೆ ಇದೆ. ನನ್ನ ಸ್ಪರ್ಧೆ ಪಕ್ಷದ ಸ್ಪರ್ಧಯಾಗಿದೆ ಎಂದು ಹೇಳಿದರು.

ನನ್ನ ಹೆಸರು ಕೇವಲ ನಗಣ್ಯ, ಇಲ್ಲಿ ಸ್ಪರ್ಧಿಗಳು ಪ್ರತಿಯೊಬ್ಬ ಕಾಂಗ್ರೆಸ್ಸಿಗರಾಗಿದಾಗಿದ್ದು, ನಿಮ್ಮೆಲ್ಲರ ಪರಿಶ್ರಮದಿಂದ ಪಕ್ಷ ಮತ್ತೆ ಜಯದ ಮುನ್ನುಡಿ ಬರೆಯುವಂತಾಗಲಿ. ನಿಮ್ಮೆಲ್ಲರ ಆರ್ಶಿವಾದ ನನ್ನ ಮೇಲಿರಲಿ ಎಂದು ಮನವಿ ಮಾಡಿದರು. ನೀವೆ ಆಗಿದ್ದಿರಿ ಎಂದರು.

ಈ ಬಾರಿಯ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸುವ ಮೂಲಕ ನಿಮ್ಮ ಸೇವೆ ಮಾಡಲು ಅವಕಾಶ ನೀಡಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಮಧು ಜಿ.ಮಾದೇಗೌಡ, ಡಿ.ರಾಮಕೃಷ್ಣ, ಎಸ್.ಗುರುಚರಣ್, ಎಂ.ಎಸ್.ಆತ್ಮಾನಂದ, ಮಾಜಿ ವಿಧಾನ ಪರಿಷತ್ ಸದಸ್ಯರಾದ ಮಲ್ಲಾಜ್ಜಮ್ಮ, ಜಿಲ್ಲಾಪಂಚಾಯಿತಿಯ ಮಾಜಿ ಸದಸ್ಯರಾದ ಪಾಪಣ್ಣ, ಎ.ಎಸ್.ರಾಜೀವ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಂಜೇಗೌಡ, ಮಹಿಳಾ ಘಟಕದ ಅಧ್ಯಕ್ಷರಾದ ಅಂಜನಾ ಶ್ರೀಕಾಂತ್, ಮದ್ದರೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕದ್ಲೂರು ರಾಮಕೃಷ್ಣ, ಯುವ ಕಾಂಗ್ರೆಸ್ ಅಧ್ಯಕ್ಷರಾದ ವಿಜಯ್ ಕುಮಾರ್ ಸೇರಿದಂತೆ ಇತರರು ಹಾಜರಿದ್ದರು.