ಯತ್ನಾಳ್ ಹೇಳಿಕೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ: ವಿಧಾನಸಭೆ ಮತ್ತು ವಿಧಾನ ಪರಿಷತ್ ಕಲಾಪ ನಾಳೆಗೆ ಮುಂದೂಡಿಕೆ

ಬೆಂಗಳೂರು,ಮಾ,2,2020(www.justkannada.in): ಮಾರ್ಚ್ 5 ರಂದು ರಾಜ್ಯ ಬಜೆಟ್ ಮಂಡನೆ ಹಿನ್ನೆಲೆ ಇಂದಿನಿಂದ ಬಜೆಟ್ ಅಧಿವೇಶನ ಆರಂಭವಾಗಿದ್ದು ಈ ನಡುವೆ ದೊರೆಸ್ವಾಮಿ ಬಗ್ಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ಕುರಿತು ಕಾಂಗ್ರೆಸ್ ಪ್ರತಿಭಟನೆ ನಡೆಸಿದ ಹಿನ್ನೆಲೆ ವಿಧಾನಮಂಡಲ ಉಭಯ ಸದನಗಳ ಕಲಾಪವನ್ನ ನಾಳೆಗೆ ಮುಂದೂಡಲಾಯಿತು.

ದೊರೆಸ್ವಾಮಿ ನಕಲಿ ಸ್ವಾತಂತ್ರ ಹೋರಾಟಗಾರ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೀಡಿದ ಹೇಳಿಕೆಯನ್ನ ಖಂಡಿಸಿ ಪ್ರತಿಪಕ್ಷ ಸದಸ್ಯರು ಇಂದು ವಿಧಾನಸಭೆ ಮತ್ತು ವಿಧಾನಪರಿಷತ್ ನಲ್ಲಿ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು.

 ಇಂದು ಮಧ್ಯಾಹ್ನದ ಬಳಿಕ ವಿಧಾನ ಪರಿಷತ್ ಮತ್ತು ವಿಧಾನಸಭೆ ಕಲಾಪ  ಆರಂಭ ವಾಗುತ್ತಿದ್ದಂತೆ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಪ್ರತಿಪಕ್ಷಗಳ ಸದಸ್ಯರು ಕಿಡಿಕಾರಿದರು. ಅಲ್ಲದೇ, ಸದನ ಬಾವಿಗಿಳಿದ ಪ್ರತಿಪಕ್ಷ ಸದಸ್ಯರು ದೇಶದ್ರೋಹಿ ಯತ್ನಾಳ್ ಗೆ ಧಿಕ್ಕಾರ ಎಂಬ ಘೋಷಣೆ ಕೂಗಿದರು.

ಪ್ರತಿಪಕ್ಷ ಸದಸ್ಯರ ಪ್ರತಿಭಟನೆ ಹಿನ್ನೆಲೆ ವಿಧಾನಸಭೆ ಕಲಾಪವನ್ನ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ನಾಳೆ 11 ಗಂಟೆಗೆ ಮುಂದೂಡಿದರು. ಹಾಗೆಯೇ ಪರಿಷತ್ ಕಲಾಪವನ್ನ ಸಭಾಪತಿ ಪ್ರತಾಪ್ ಚಂದ್ರಶೆಟ್ಟಿ ನಾಳೆ ಬೆಳಿಗ್ಗೆ 11 ಗಂಟೆಗೆ ಮುಂದೂಡಿದರು.

Key words: Congress- protests- against- Yatnal’s statement- Adjournment -session