ಸಚಿವ ಎಸ್ ಟಿ ಸೋಮಶೇಖರ್ ಉಸ್ತುವಾರಿ ಬಗ್ಗೆ ಸಿಎಂ ಎದುರೇ ಪಕ್ಷಾತೀತವಾಗಿ ಶ್ಲಾಘಿಸಿದ ಕಾಂಗ್ರೆಸ್, ಜೆಡಿಎಸ್ ಶಾಸಕರು.

ಮೈಸೂರು,ಆಗಸ್ಟ್,9,2021(www.justkannada.in): “ಮೈಸೂರು ಜಿಲ್ಲೆಯಲ್ಲಿ ಕೋವಿಡ್ ನಿರ್ವಹಣೆಯಿಂದ ಹಿಡಿದು ಎಲ್ಲ ತಾಲೂಕುಗಳಲ್ಲಿಯೂ ಅಚ್ಚುಕಟ್ಟಾಗಿ, ಎಲ್ಲರನ್ನೂ ಸರಿದೂಗಿಸಿಕೊಂಡು ಅತ್ಯುತ್ತಮವಾಗಿ “ಜಿಲ್ಲಾ ಉಸ್ತುವಾರಿ” ಜವಾಬ್ದಾರಿಯನ್ನು ಸಹಕಾರ ಸಚಿವರಾದ ಎಸ್.ಟಿ. ಸೋಮಶೇಖರ್ ಅವರು ನಿರ್ವಹಣೆ ಮಾಡುತ್ತಿದ್ದಾರೆ” ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರ ಎದುರು ಕಾಂಗ್ರೆಸ್, ಜೆಡಿಎಸ್ ಶಾಸಕರು ಪಕ್ಷಾತೀತವಾಗಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಮೈಸೂರು ಜಿಲ್ಲಾ ಪಂಚಾಯಿತಿಯಲ್ಲಿ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿಯವರ ಅಧ್ಯಕ್ಷತೆಯಲ್ಲಿ ಕೋವಿಡ್ ಸ್ಥಿತಿಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಉಭಯ ಪಕ್ಷಗಳ ಶಾಸಕರು, ಕೋವಿಡ್ ಪರೀಕ್ಷೆ, ವ್ಯಾಕ್ಸಿನೇಶನ್ ಸೇರಿದಂತೆ ಯಾವುದೇ ಸಮಸ್ಯೆಗಳಿದ್ದರೂ ಸಹ ಗಮನಕ್ಕೆ ತಂದರೆ ತಕ್ಷಣ ಅವುಗಳಿಗೆ ಸ್ಪಂದಿಸುವ, ಪರಿಹರಿಸುವ ಕೆಲಸವನ್ನು ಸಚಿವರಾದ ಸೋಮಶೇಖರ್ ಅವರು ಮಾಡುತ್ತಾರೆ ಎಂದು ಸಭೆಯ ಗಮನಕ್ಕೆ ತಂದರು.

ಹುಣಸೂರಿನ ಕಾಂಗ್ರೆಸ್ ಶಾಸಕರಾದ ಹೆಚ್.ಪಿ. ಮಂಜುನಾಥ್ ಅವರು, ಉಸ್ತುವಾರಿ ಸಚಿವರಾದ ಸೋಮಶೇಖರ್ ಅವರು ಜಿಲ್ಲೆಗೆ ಕಾಲ ಕಾಲಕ್ಕೆ ಭೇಟಿ ಕೊಟ್ಟು ಕೊರೋನಾ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಅತ್ಯಂತ ಸಮರ್ಪಕವಾಗಿ ಕಾರ್ಯನಿರ್ವಹಣೆಯನ್ನು ತೋರಿದ್ದಾರೆ. ಆಯಾ ತಾಲೂಕಿನ ಶಾಸಕರ ಬೇಡಿಕೆಗಳಿಗೆ ಸ್ಪಂದಿಸುತ್ತಿದ್ದು, ಸೋಂಕು ನಿವಾರಣೆಗೆ ಸೂಕ್ತ ಕ್ರಮವನ್ನು ವಹಿಸುತ್ತಿದ್ದಾರೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.

ಜೆಡಿಎಸ್ ವತಿಯಿಂದ ಆಯ್ಕೆಯಾಗಿರುವ ವಿಧಾನ ಪರಿಷತ್ ಸದಸ್ಯರಾದ ಶ್ರೀಕಂಠೇಗೌಡ ಅವರು ಮಾತನಾಡಿ, ಜಿಲ್ಲಾಡಳಿತ ಮತ್ತು ಉಸ್ತುವಾರಿ ಸಚಿವರ ಕಾರ್ಯವೈಖರಿ ನಮಗೆ ತೃಪ್ತಿ ತಂದಿದೆ. ಸಚಿವರು ಅತ್ಯಂತ ಉತ್ತಮವಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಜೆಡಿಎಸ್ ವತಿಯಿಂದ ಆಯ್ಕೆಯಾಗಿರುವ ಮತ್ತೊಬ್ಬ ವಿಧಾನ ಪರಿಷತ್ ಸದಸ್ಯರಾದ ಮರಿತಿಬ್ಬೇಗೌಡ ಅವರು ಮಾತನಾಡಿ, ಮೈಸೂರು ಜಿಲ್ಲೆಯ ವಿಸ್ತಾರ ದೊಡ್ಡದಿದೆ. ಇಂಥ ಜಿಲ್ಲೆಗೆ ಉಸ್ತುವಾರಿ ಸಚಿವರಾಗಿ ನಿರಂತರವಾಗಿ ಭೇಟಿ ನೀಡುವುದಲ್ಲದೆ, ಜಿಲ್ಲೆಯಲ್ಲಿ ಹೆಚ್ಚಿನ ವ್ಯಾಕ್ಸಿನೇಶನ್ ಕೊಡಿಸಲು ಕ್ರಮವಹಿಸುವುದು, ಹೆಚ್ಚಿನ ಕೋವಿಡ್ ಟೆಸ್ಟ್ ಗೆ ವ್ಯವಸ್ಥೆ ಕಲ್ಪಿಸುವುದು, ಶಾಸಕರಿಗೆ ಸುಲಭವಾಗಿ ಲಭ್ಯವಾಗುತ್ತಾರೆ. ಜೊತೆಗೆ ಎಲ್ಲ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುವ ಕೆಲಸವನ್ನು ಎಸ್.ಟಿ. ಸೋಮಶೇಖರ್ ಅವರು ಮಾಡುತ್ತಿದ್ದಾರೆ. ಇದು ಪ್ರಶಂಸಾರ್ಹ ಎಂದು ಹೇಳಿದರು.

ಜೆಡಿಎಸ್ ಶಾಸಕರಾದ ಜಿ.ಟಿ.ದೇವೇಗೌಡ ಅವರು ಮಾತನಾಡಿ, ಸಹಕಾರ ಕ್ಷೇತ್ರದಿಂದ ಬಂದು ಸಚಿವರಾಗಿರುವ ಎಸ್.ಟಿ. ಸೋಮಶೇಖರ್ ಅವರು ಎಲ್ಲರಿಗೂ ಉತ್ತಮ ಸಹಕಾರವನ್ನು ಕೊಡುತ್ತಾರೆ. ಅಭಿವೃದ್ಧಿಗೆ ಹೆಚ್ಚಿನ ಒತ್ತನ್ನು ಕೊಡುವ ಅವರು ಯಾವುದೇ ಸಮಸ್ಯೆಗಳಿದ್ದರೂ, ಯಾವುದೇ ಪಕ್ಷದವರಿದ್ದರೂ ಭೇದ ಭಾವ ಮಾಡದೆ ಪರಿಹರಿಸಿಕೊಡುವ ಕೆಲಸವನ್ನು ಮಾಡಿಕೊಂಡು ಬಂದಿದ್ದಾರೆ. ಇದು ಅವರ ಉತ್ತಮ ಗುಣವಾಗಿದೆ. ಕೋವಿಡ್ ನಿರ್ವಹಣೆಯಲ್ಲಿಯೂ ಸಹ ಅವರ ಕೆಲಸ ಶ್ಲಾಘನೀಯವಾಗಿದೆ. ಅವರದ್ದು ಮಾತು ಕಡಿಮೆ, ಕೆಲಸ ಜಾಸ್ತಿ ಎನ್ನುವ ಪ್ರವೃತ್ತಿ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಶಾಸಕರಾದ ಎಲ್. ನಾಗೇಂದ್ರ ಮಾತನಾಡಿ, ಸಚಿವರಾದ ಸೋಮಶೇಖರ್ ಅವರು ನಮ್ಮ ಜಿಲ್ಲೆಯವರಂತೆಯೇ ಆಗಿದ್ದಾರೆ. ಮೈಸೂರಿನ ಎಲ್ಲ ಆಸ್ಪತ್ರೆಗಳನ್ನು ಸುಸಜ್ಜಿತಗೊಳಿಸಲು ಅವರು ಸಾಕಷ್ಟು ಶ್ರಮವಹಿಸಿದ್ದಾರೆ. ನಮ್ಮ ಬೇಡಿಕೆಗಳೇನೇ ಇದ್ದರೂ ಪರಿಹರಿಸಿದ್ದಾರೆ. ಸರ್ಕಾರದ ಮಟ್ಟದಲ್ಲಿ ಈ ವಿಷಯಗಳನ್ನು ಗಮನಕ್ಕೆ ತಂದು ಆಗಬೇಕಾದ ಕೆಲಸ ಹಾಗೂ ಸೌಕರ್ಯಗಳನ್ನು ಕಲ್ಪಿಸಿಕೊಟ್ಟಿದ್ದಾರೆ. ಆ ನಿಟ್ಟಿನಲ್ಲಿ ಮೈಸೂರಿಗರು ಉತ್ತಮ ಜಿಲ್ಲಾ ಉಸ್ತುವಾರಿ ಮಂತ್ರಿಯವರನ್ನು ಪಡೆದಿದ್ದೇವೆ ಎಂದು ಹೇಳಿದರು.

ಶಾಸಕರಾದ ತನ್ವೀರ್ ಸೇಠ್ ಅವರು ಮಾತನಾಡಿ, ಸಚಿವರಾದ ಎಸ್.ಟಿ. ಸೋಮಶೇಖರ್ ಅವರು ಮೈಸೂರು ಜಿಲ್ಲೆಗೆ ಉಸ್ತುವಾರಿ ಸಚಿವರಾಗಿ ಅತ್ಯುತ್ತಮ ಕೊಡುಗೆಗಳನ್ನು ನೀಡುತ್ತಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಅವರ ಸಹಕಾರ ನಮಗೆ ತುಂಬಾ ಉಪಯುಕ್ತವಾಗಿತ್ತು. ಯಾವುದೇ ಸಮಸ್ಯೆಗಳನ್ನು ನಾವು ಅವರ ಬಳಿ ಹೊತ್ತೊಯ್ದರೂ ಅವುಗಳನ್ನು ಆಲಿಸಿ, ಸೂಕ್ತ ಪರಿಹಾರವನ್ನು ಕಲ್ಪಿಸಿಕೊಡುವ ಮನೋಭಾವವನ್ನು ಅವರು ಹೊಂದಿದ್ದಾರೆ ಎಂದು ತಿಳಿಸಿದರು.

Key words: Congress – JDS-MLA- praised CM -Minister -ST Somashekhar-incharge-work-mysore