ಮೈತ್ರಿ ಸರ್ಕಾರದ ಬಡ್ತಿ ರಾದ್ಧಾಂತ: ಕೋರ್ಟ್ ಮೆಟ್ಟಿಲೇರಲು ಹಿರಿಯರ ತಯಾರಿ, ಒಂದೇ ದಿನ 800 ಬಡ್ತಿ ಪ್ರಕರಣ

kannada t-shirts

ಬೆಂಗಳೂರು:ಆ-6:ಮೈತ್ರಿ ಸರ್ಕಾರ ಅಳಿವಿನಂಚಿನಲ್ಲಿದ್ದ ಸಂದರ್ಭದಲ್ಲಿ ರಾಜಕೀಯ ಒತ್ತಡಕ್ಕಾಗಿ ನಡೆದಿದ್ದ ಇಂಜಿನಿಯರ್​ಗಳ ಬಡ್ತಿ ಪ್ರಕರಣ ಈಗ ಗೊಂದಲದ ಗೂಡಾಗಿ ಪರಿಣಮಿಸಿದ್ದು, ಅವಕಾಶ ವಂಚಿತರು ನ್ಯಾಯಾಲಯದ ಮೆಟ್ಟಿಲೇರಲು ನಿರ್ಧರಿಸಿದ್ದಾರೆ.

2019ರ ಜುಲೈ 8ರಂದು ನಡೆದ ಇಲಾಖಾ ಪದೋನ್ನತಿ ಸಭೆಯಲ್ಲಿ ಒಂದೇ ಬಾರಿಗೆ 800 ಇಂಜಿನಿಯರ್​ಗಳಿಗೆ ಬಡ್ತಿ ನೀಡಲು ತೀರ್ವನಿಸಲಾಗಿತ್ತು. ಒಂದೇ ದಿನ ಅಷ್ಟೊಂದು ಬಡ್ತಿ ನೀಡುವ ತೀರ್ಮಾನ ಸಾಧ್ಯವೇ? ಸಾಧುವೇ? ಬಡ್ತಿ ನೀಡಲು ನಿರ್ಧರಿಸುವ ಪ್ರಕ್ರಿಯೆ ಸರಿಯಾಗಿ ನಡೆದಿದೆಯೇ ಎಂಬ ಪ್ರಶ್ನೆ ಎದ್ದಿದ್ದು, ಈ ತರಾತುರಿ ಸಾಕಷ್ಟು ಊಹಾಪೋಹಕ್ಕೆ ಕಾರಣವಾಗಿದೆ. ಇಂಜಿನಿಯರ್​ಗಳಿಗೆ ಮಾತೃ ಇಲಾಖೆಯಾಗಿರುವ ಲೋಕೋಪಯೋಗಿ ಇಲಾಖೆ ಜಲಸಂಪನ್ಮೂಲ, ಗ್ರಾಮೀಣಾ ಭಿವೃದ್ಧಿ, ನಗರಾಭಿವೃದ್ಧಿ ಸೇರಿ ವಿವಿಧ ಇಲಾಖೆಗಳಿಗೆ ಇಂಜಿನಿಯರ್​ಗಳನ್ನು ನಿಯೋಜನೆ ಮಾಡುತ್ತದೆ. ಇಲ್ಲಿ ಕಾರ್ಯನಿರ್ವಹಿಸುವ ಸಹಾಯಕ ಇಂಜಿನಿಯರ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಕಾರ್ಯಪಾಲಕ ಇಂಜಿನಿಯರ್ ಸೇರಿ ವಿವಿಧ ವೃಂದಗಳಿಗೆ ಬಡ್ತಿ ನೀಡಲು ಇಲಾಖೆ ಪದೋನ್ನತಿ ಸಭೆ ನಡೆದಿತ್ತು.

ಈ ಸಭೆಯಲ್ಲಿ ಲೋಕೋಪಯೋಗಿ ಇಲಾಖೆ ಅಪರ ಮುಖ್ಯಕಾರ್ಯದರ್ಶಿ, ಕಾನೂನು ಇಲಾಖೆ ಕಾರ್ಯದರ್ಶಿ, ಲೋಕೋಪಯೋಗಿ ಇಲಾಖೆ ಸಂಪರ್ಕ ಮತ್ತು ಕಟ್ಟಡ ದಕ್ಷಿಣ ವಲಯ ಮುಖ್ಯ ಇಂಜಿನಿಯರ್, ಜಲಸಂಪನ್ಮೂಲ ಅಭಿವೃದ್ಧಿ ಸಂಸ್ಥೆ ಮುಖ್ಯ ಇಂಜಿನಿಯರ್, ಸಣ್ಣನೀರಾವರಿ ಕಾರ್ಯದರ್ಶಿ, ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ, ಎಸ್ಸಿ-ಎಸ್ಟಿ ನೌಕರರ ಸಂಘದ ಪ್ರತಿನಿಧಿ ಹಾಜರಿದ್ದರು.

ಬಡ್ತಿ ವ್ಯಾಪ್ತಿಗೆ ಬರುವ ಇಂಜಿನಿಯರ್​ಗಳ ಸೇವಾ ವರದಿ, ರಹಸ್ಯ ವರದಿ, ಇಲಾಖೆ ವಿಚಾರಣೆ, ಕ್ರಿಮಿನಲ್ ಪ್ರಕರಣದ ಬಗ್ಗೆ ಇಲಾಖೆ ಪದೋನ್ನತಿ ಸಭೆಯಲ್ಲಿ ಚರ್ಚೆ ಆಗಬೇಕಾಗುತ್ತದೆ. ಆದರೆ, ಜುಲೈ 8ರಂದು ನಡೆದಿದ್ದ ಸಭೆಯಲ್ಲಿ 800 ಮಂದಿಯ ಇಷ್ಟೆಲ್ಲ ವಿಚಾರ ಚರ್ಚೆಗೆ ಬಂದಿಲ್ಲ ಎನ್ನಲಾಗಿದೆ. ರಾಜಕೀಯ ತರಾತುರಿಗೆ ಸಿಲುಕಿ ಒತ್ತಡದಿಂದ ಬಡ್ತಿ ಪಟ್ಟಿ ಸಿದ್ಧಪಡಿಸಲಾಯಿತೆಂದು ಉನ್ನತ ಮೂಲಗಳು ತಿಳಿಸಿವೆ.

ಮುಂದಿನ ಕ್ರಮ ಏನು?

ಈ ರಾಜಕೀಯಪ್ರೇರಿತ ಬಡ್ತಿ ಪ್ರಕ್ರಿಯೆ ಬಗ್ಗೆ ಇಲಾಖೆಯಲ್ಲೇ ಅಸಮಾಧಾನ ವ್ಯಕ್ತವಾಗಿದೆ. ಹಿರಿತನ ಕಡೆಗಣಿಸಿ ಬಡ್ತಿ ನೀಡುವ ಬಗ್ಗೆ ಬೇಸರಗೊಂಡಿರುವ 150 ಇಂಜಿನಿಯರ್​ಗಳು ನ್ಯಾಯಾಲಯದ ಮೆಟ್ಟಿಲೇರಲು ನಿರ್ಧರಿಸಿದ್ದಾರೆ. ಜತೆಗೆ ಇಲಾಖೆ ಪದೋನ್ನತಿ ಸಭೆ ನಡೆದಿರುವ ರೀತಿಯ ಬಗ್ಗೆ ಬಣ್ಣಬಣ್ಣದ ಮಾತುಗಳು ಕೇಳಿಬರುತ್ತಿವೆ. ಅನರ್ಹರನ್ನು ಬಡ್ತಿಗೆ ಪರಿಗಣಿಸುವಾಗ ಕೆಲವು ಸಂಗತಿ ಮುಚ್ಚಿಡಲಾಗಿದೆ. ಇದರಲ್ಲಿ ಕೆಳ ಹಂತದ ಕೆಲವು ಅಧಿಕಾರಿಗಳು ನೇರ ಶಾಮೀಲಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಒಂದು ಹಂತದಲ್ಲಿ ಅಧಿಕಾರಿಯೊಬ್ಬರು ಇದೇ ಬಡ್ತಿ ವಿಚಾರದಲ್ಲಿ ತಮ್ಮ 4 ಅಧೀನ ಅಧಿಕಾರಿಗಳ ವಿರುದ್ಧ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದರು ಎನ್ನಲಾಗಿದೆ.

ಡಿಪಿಸಿ ಪ್ರಕಾರ ಬಡ್ತಿ ಆಗಿದೆ. ಉಳಿದಂತೆ ಹೆಚ್ಚಿನ ಮಾಹಿತಿ ಇಲ್ಲ. ಕೆಲವು ಇಂಜಿನಿಯರ್​ಗಳು ನ್ಯಾಯಾಲಯದ ಮೆಟ್ಟಿಲೇರು ತ್ತಾರೆಂಬ ಬಗ್ಗೆಯೂ ತಿಳಿದಿಲ್ಲ.

| ರಜನೀಶ್ ಗೋಯಲ್ ಅಪರ ಮುಖ್ಯಕಾರ್ಯದರ್ಶಿ, ಲೋಕೋಪಯೋಗಿ ಇಲಾಖೆ

ಲೋಪಗಳು ಏನೇನು?

1. ಇಲಾಖಾ ಪದೋನ್ನತಿ ಸಭೆ ನಡೆಯುವ 8 ದಿನಗಳ ಮುನ್ನವೇ ಪೂರ್ವತಯಾರಿ ನಡೆಯಬೇಕಿತ್ತು. ಅಧಿಕಾರಿಗಳ ವರದಿ ಬಗ್ಗೆ ವಿಶ್ಲೇಷಣೆಗಳಾಗಬೇಕಿತ್ತು. ಈ ಪ್ರಕರಣದಲ್ಲಿ ಸಿದ್ಧಪಟ್ಟಿಗೆ ಒಪ್ಪಿಗೆ ನೀಡಲಾಗಿದೆ.

2. ಕ್ರಿಮಿನಲ್ ಪ್ರಕರಣ ಹೊತ್ತ 8 ಮಂದಿಗೂ ಬಡ್ತಿ ಸಿಕ್ಕಿದೆ. ಇಲಾಖಾ ವಿಚಾರಣೆ ಅಥವಾ ಕ್ರಿಮಿನಲ್ ಪ್ರಕರಣ ಎದುರಿಸಿರುವ ಇಂಜಿನಿಯರ್​ಗಳ ಬಗ್ಗೆ ಸಭೆಯಲ್ಲಿ ಚರ್ಚೆಯೇ ನಡೆದಿಲ್ಲ.

3. ಇಲಾಖಾ ಪದೋನ್ನತಿ ಸಭೆಯ ನಡಾವಳಿಗೆ ಸದಸ್ಯರೆಲ್ಲರೂ ಸಹಿ ಹಾಕಬೇಕೆಂಬುದು ನಿಯಮ. ಈ ಪ್ರಕ್ರಿಯೆ ವಿರೋಧಿಸಿ ಪ್ರಮುಖ ಅಧಿಕಾರಿಯೊಬ್ಬರೇ ಸಹಿ ಹಾಕಲು ಹಿಂದೇಟು ಹಾಕಿದ್ದರು.

4. ಅರ್ಹರಲ್ಲದ 150 ಕಿರಿಯರಿಗೆ ಬಡ್ತಿ ನೀಡಲಾಗಿದ್ದು, ಹಿರಿಯರನ್ನು ಬಡ್ತಿ ಪಟ್ಟಿಯಿಂದ ಕೈಬಿಡಲಾಗಿದೆ. ಇವರಲ್ಲಿ 6 ಮಂದಿ ಜು.31ರಂದು ನಿವೃತ್ತರಾದರು.

5. 170 ಕಾರ್ಯಪಾಲಕ ಇಂಜಿನಿಯರ್​ಗಳು ಸ್ಥಳ ನಿಯುಕ್ತಿಯಾಗದೇ ಕಾಯುತ್ತಿರುವಾಗ ಮತ್ತೆ 370 ಮಂದಿಗೆ ಕಾರ್ಯಪಾಲಕ ಇಂಜಿನಿಯರ್ ಆಗಿ ಬಡ್ತಿ ನೀಡಲಾಗಿದೆ.
ಕೃಪೆ:ವಿಜಯವಾಣಿ

ಮೈತ್ರಿ ಸರ್ಕಾರದ ಬಡ್ತಿ ರಾದ್ಧಾಂತ: ಕೋರ್ಟ್ ಮೆಟ್ಟಿಲೇರಲು ಹಿರಿಯರ ತಯಾರಿ, ಒಂದೇ ದಿನ 800 ಬಡ್ತಿ ಪ್ರಕರಣ
congress-jds-alliance-state-govt-transfer-court

website developers in mysore