ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ವಿರುದ್ದ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು…

ಬೆಂಗಳೂರು,ಮೇ,15,2019(www.justkannada.in): ಚಿಂಚೋಳಿ ಮತ್ತು ಕುಂದಗೋಳ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆ, ಒಂದು ಸಮುದಾಯದ ಮತದಾರರ ಮೇಲೆ ಪ್ರಭಾವ ಬೀರುವ ದುರುದ್ದೇಶ ಪೂರಿತ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ವಿರುದ್ದ ರಾಜ್ಯ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು ನೀಡಿದೆ.

ಕೆಪಿಸಿಸಿ  ಸಾಮಾಜಿಕ ಜಾಲತಾಣ ವಿಭಾಗ ಸಂಚಾಲಕರು ಹಾಗೂ ಕಾರ್ಯದರ್ಶಿಯಾದ  ಎ.ಎನ್ ನಾಟರಾಜೇಗೌಡ, ತುಮಕೂರು ಜಿಲ್ಲಾ ಕಾಂಗ್ರೆಸ್ ನಪ್ರಧಾನ ಕಾರ್ಯದರ್ಶಿ ಮಂಜುನಾಥ್ ಅದ್ದೆ ಕೆಪಿಸಿಸಿ ಕಾನೂನು ವಿಭಾಗದ  ಪ್ರಧಾನ ಕಾರ್ಯದರ್ಶಿ ಸೂರ್ಯ ಮುಕುಂದರಾಜ್ ರಿಂದ ದೂರು ಸಲ್ಲಿಕೆಯಾಗಿದೆ.  ಜನಪ್ರತಿನಿಧಿ ಕಾಯ್ದೆ 1951ರ ಸೆಕ್ಷನ್ 123(3) ಉಲ್ಲಂಘನೆ ಮಾಡಿರುವ ಆರೋಪದ ಮೇಲೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ವಿರುದ್ಧ ದೂರು ನೀಡಲಾಗಿದೆ.

ಕುಂದಗೋಳ ಮತ್ತು ಚಿಂಚೋಳಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಒಂದು ಸಮುದಾಯದ ಮತದಾರರ ಮೇಲೆ ಪ್ರಭಾವ ಬೀರುವ ದುರುದ್ದೇಶ ಪೂರಿತ ಹೇಳಿಕೆಯನ್ನು ಕಲ್ಬುರ್ಗಿಯಲ್ಲಿ ವಿರೋಧ ಪಕ್ಷದ ನಾಯಕ ಹಾಗೂ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮಾಧ್ಯಮಗಳಿಗೆ ಮತ್ತು ಬಹಿರಂಗ ಚುನಾವಣಾ ಪ್ರಚಾರದಲ್ಲಿ ನೀಡಿದ್ದಾರೆ.

“ವೀರೇಂದ್ರ ಪಾಟೀಲರಿಗೆ ಅವಮಾನಿಸಿದ ಕಾಂಗ್ರೆಸ್ ಪಕ್ಷಕ್ಕೆ ಲಿಂಗಾಯತರು ಮತ ನೀಡಿದರೆ ಅಪರಾಧ ಮಾಡಿದಂತೆ” ಎಂದು ಬಿ.ಎಸ್. ಯಡಿಯೂರಪ್ಪ ಅವರು ಹೇಳಿಕೆ ನೀಡಿದ್ದು, ಇದು ಚಿಂಚೋಳಿಯ ಪ್ರಚಾರ ಸಭೆಯಲ್ಲಿ ಒಂದು ಸಮುದಾಯದ ಜನರನ್ನು ಪ್ರಚೋದಿಸುವ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವಿರುದ್ಧ ಜಾತಿಯಾಧಾರಿತ ಮತ ಧೃವೀಕರಣ ಮಾಡುವ ದುರುದ್ದೇಶವಾಗಿದೆ

ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ವಿರೋಧ ಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ತಮ್ಮ ಸ್ಥಾನದ ಘನತೆಯನ್ನು ಮರೆತು ಜಾತಿಯಾಧಾರಿತವಾಗಿ ಮತದಾರರ ಮೇಲೆ ಪ್ರಭಾವ ಬೀರುವ ಹೇಳಿಕೆ ನೀಡುವ ಮೂಲಕ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಪ್ರಕಾರ ಜನಪ್ರತಿನಿಧಿ ಕಾಯ್ದೆ 1951ರ ಸೆಕ್ಷನ್ 123(3) ನ್ನು ಉಲ್ಲಂಘನೆ ಮಾಡಿದ್ದಾರೆ. ಉಪ ಚುನಾವಣೆಯ ಮತದಾನಕ್ಕೆ ಇನ್ನು ಕೇವಲ ನಾಲ್ಕು ದಿನಗಳು ಮಾತ್ರ ಇರುವುದರಿಂದ ಲಿಂಗಾಯತ ವೀರಶೈವ ಸಮುದಾಯಕ್ಕೆ ಸೇರಿದ ಬಿ.ಎಸ್. ಯಡಿಯೂರಪ್ಪ ಆ ಸಮುದಾಯದ ಮತದಾರರ ಮೇಲೆ ಜಾತಿಯಾಧಾರಿತವಾಗಿ ಪ್ರಭಾವ ಬೀರಿ ನಿಷ್ಪಕ್ಷಪಾತ ಮತದಾನಕ್ಕೆ ಅಡ್ಡಿ ಪಡಿಸಿದ್ದಾರೆ. ಅದ್ದರಿಂದ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ  ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಅನ್ವಯ ಜನಪ್ರತಿನಿಧಿ ಕಾಯ್ದೆ 1951ರ ಸೆಕ್ಷನ್ 123(3) ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಚುನಾವಣಾ ಪ್ರಚಾರದಿಂದ ನಿರ್ಬಂಧಿಸಿ ಆದೇಶಿಸಬೇಕು ಎಂದು ಮನವಿ ಮಾಡಿದ್ದಾರೆ.

Key words: Congress -complained – Election Commission- agains-t BJP state- president- BS Yeddyurappa