ಎಲ್ಲಾ ಕ್ಷೇತ್ರಗಳಲ್ಲಿ ಸ್ಪರ್ಧೆ, ಕೌಶಲ್ಯಗಳ ಕಲಿಯುವುದು ಅಗತ್ಯ: ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್

ಮೈಸೂರು,ಜನವರಿ,26,2021: ವಿದ್ಯಾಭ್ಯಾಸದ ಜೊತೆಗೆ ಬದುಕು ರೂಪಿಸಿಕೊಳ್ಳುವುದು ಬಹಳ ಮುಖ್ಯ. ಎಲ್ಲಾ ಕ್ಷೇತ್ರದಲ್ಲಿ ಸ್ಪರ್ಧೆಯಿದೆ. ಹೀಗಾಗಿ, ಅಗತ್ಯ ಕೌಶಲ್ಯಗಳನ್ನು ತಮ್ಮದಾಗಿಸಿಕೊಂಡು ಗುರಿ ಸಾಧಿಸಬೇಕು ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಸಲಹೆ ನೀಡಿದರು.

ಮೈಸೂರು ವಿಶ್ವವಿದ್ಯಾನಿಲಯದ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ವಿದ್ಯಾರ್ಥಿನಿಲಯದ ಆವರಣದಲ್ಲಿ ಆಯೋಜಿಸಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಕೇಂದ್ರದ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿವಿಯಿಂದ ಪದವಿ, ಸ್ನಾತಕೋತ್ತರ ಪದವಿ, ಪಿಎಚ್.ಡಿ ಸೇರಿ ಪ್ರತಿವರ್ಷ 26ರಿಂದ 28ಸಾವಿರ ವಿದ್ಯಾರ್ಥಿಗಳು ತೇರ್ಗಡೆಯಾಗುತ್ತಿದ್ದಾರೆ. ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳಿಗೆ ಉದ್ಯೋಗ ಕಲ್ಪಿಸಿಕೊಡುವುದು ಅಗತ್ಯ. ಈ ಹಿಂದೆ ಪದವಿ ಪಡೆದರೆ ಸರಕಾರಿ ಉದ್ಯೋಗ ದೊರೆಯುತ್ತಿತ್ತು. ಆದರೆ, ಇಂದು ಎಲ್ಲಾ ಕ್ಷೇತ್ರಗಳಲ್ಲಿ ಸ್ಪರ್ಧೆ ಹೆಚ್ಚಿದೆ. ಹೀಗಾಗಿ, ಉದ್ಯೋಗವನ್ನು ಪಡೆಯಲು ಪದವಿಗಳ ಜೊತೆಗೆ ಸಂವಹನ ಕೌಶಲ್ಯ ಬಹಳ ಮುಖ್ಯ ಎಂದರು.

ಕೆರಿಯರ್ ಹಬ್ ಮೂಲಕ ವಿದ್ಯಾರ್ಥಿಗಳಿಗೆ ತರಬೇತಿ
ವಿವಿಯಲ್ಲಿ ಕೆರಿಯರ್ ಹಬ್ ಮಾಡಬೇಕು ಎಂಬ ಕನಸು ಇದ್ದು, ಇದರ ಮೂಲಕ ತರಬೇತಿ ನೀಡಲಾಗುವುದು. 700ಮಂದಿ ಕೆ ಎ ಎಸ್ ಪರಿಕ್ಷೆಗೆ ತರಬೇತಿ ಪಡೆದುಕೊಳ್ಳುವುದಾಗಿ ನೊಂದಾಯಿಸಿಕೊಂಡಿದ್ದು, ಕಲಾ, ವಾಣಿಜ್ಯ, ವಿಜ್ಞಾನಕ್ಕೆ ಸಂಬಂಧಿಸಿದಂತೆ ಅಗತ್ಯ ತರಬೇತಿ ನೀಡಲಾಗುವುದು. ಪ್ರತಿವರ್ಷ ವಿವಿಯ ಕ್ಯಾಂಪಸ್ ನಿಂದ 3ಸಾವಿರ ಮಂದಿ ಸ್ನಾತಕೋತ್ತರ ಪದವಿ ಪಡೆದುಕೊಳ್ಳುತ್ತಾರೆ. ಅದರಲ್ಲಿ ಒಂದು ಸಾವಿರ ಮಂದಿಗಾದರೂ, ಉದ್ಯೋಗ ದೊರಕಿಸಿಕೊಡಬೇಕು ಎಂದು ಹೇಳಿದರು.

ಕೇವಲ ಪದವಿಗಳಿಂದ ಬದುಕು ರೂಪಿಸಿಕೊಳ್ಳಲು ಸಾಧ್ಯವಿಲ್ಲ

ಕೇವಲ ಪದವಿಗಳಿಂದ ಬದುಕು ರೂಪಿಸಿಕೊಳ್ಳಲು ಸಾಧ್ಯವಿಲ್ಲ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಪಡೆಯುವುದು ಬಹಳ ಮುಖ್ಯ. ವಿವಿಯ ಸಂಪನ್ಮೂಲಗಳನ್ನು ಸರಿಯಾದ ರೀತಿಯಲ್ಲಿ ಸದುಪಯೋಗಪಡಿಸಿಕೊಂಡು ಅಭಿವೃದ್ಧಿಯಾಗಬೇಕು ಎಂದು ಮನವಿ ಮಾಡಿದರು.

ಮಾಜಿ ಮೇಯರ್ ಪುರುಷೋತ್ತಮ್ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ರಚನೆಯ ಸಂವಿಧಾನವು ಶಿಕ್ಷಣ ಸೇರಿದಂತೆ ಎಲ್ಲಾ ರೀತಿಯ ಹಕ್ಕುಗಳನ್ನು ಒದಗಿಸಿಕೊಟ್ಟಿದೆ. ಹಕ್ಕುಗಳನ್ನು ಸರಿಯಾದ ರೀತಿಯಲ್ಲಿ ಸದುಪಯೋಗಪಡಿಸಿಕೊಂಡು ಉತ್ತಮ ಬದುಕು ರೂಪಿಸಿಕೊಳ್ಳಬೇಕು, ಸಮಾಜಕ್ಕೆ ಕೊಡುಗೆ ನೀಡಬೇಕು ಎಂದರು.

ಎಲ್ಲ ಕ್ಷೇತ್ರಗಳು ಖಾಸಗೀಕರಣವಾಗುತ್ತಿದ್ದು, ತೋಳ್ಬಲ, ಹಣಬಲ ಇದ್ದವರು ಅಲ್ಲಿ ಉದ್ಯೋಗ ಪಡೆದುಕೊಳ್ಳುತ್ತಾರೆ. ಬಡವರು ಗುಲಾಮರಾಗಿ ಉಳಿಯುತ್ತಾರೆ. ಸರಕಾರಿ ಕೆಲಸವೇ ಬೇಡ, ನಾವು ಕೂಡ ಉದ್ಯಮಿಗಳಾಗುವತ್ತ ಗಮನಹರಿಸಬೇಕು ಎಂದು ಹೇಳಿದರು.

ವಿದ್ಯಾರ್ಥಿಗಳು ಸಮಸ್ಯೆಗಳು ಬಂದಾಗ ಅದನ್ನು ನ್ಯಾಯಯುತವಾಗಿ ಪ್ರತಿಭಟಿಸುವ ಕಾರ್ಯವನ್ನು ಮಾಡಬೇಕು. ಪ್ರಶ್ನಿಸುವಂತಹ ನೈತಿಕ ಶಕ್ತಿಯನ್ನು ವಿದ್ಯಾರ್ಥಿಗಳು ರೂಪಿಸಿಕೊಳ್ಳಬೇಕು. ಭ್ರಷ್ಟಚಾರವನ್ನು ವಿರೋಧಿಸಬೇಕು, ನೊಂದವರ ಅಭಿವೃದ್ಧಿಗಾಗಿ ಶ್ರಮಿಸಬೇಕು ಎಂದು ಸಲಹೆ ನೀಡಿದರು.

ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯ ನಿರ್ದೇಶಕ ಡಾ.ಎಸ್.ಟಿ.ರಾಮಚಂದ್ರ, ಮೈಸೂರು ವಿವಿ ಆಡಳಿತಾಧಿಕಾರಿ ಡಾ.ಪಿ.ಮಾದೇಶ್, ಸಂಶೋಧಕರ ಸಂಘದ ಅಧ್ಯಕ್ಷ ಮರಿದೇವಯ್ಯ, ಪ್ರಾಧ್ಯಾಪಕ ಪ್ರೊ.ಡಿ.ಆನಂದ್ ಇತರರು ಉಪಸ್ಥಿತರಿದ್ದರು.