ಪಿಎಂ ಜತೆ ವಿಡಿಯೋ ಸಂವಾದದಲ್ಲಿ ಲಾಕ್ ಡೌನ್ ವಿಸ್ತರಣೆಗೆ ಎಲ್ಲ ರಾಜ್ಯಗಳ ಸಿಎಂಗಳ ಒಲವು: ಇಂದು ಪ್ರಧಾನಿ ಮೋದಿ ಅಧಿಕೃತ ಘೋಷಣೆ ಸಾಧ್ಯತೆ

ಬೆಂಗಳೂರು, ಏಪ್ರಿಲ್ 11, 2020 (www.justkannada.in): ಸನ್ಮಾನ್ಯ ಪ್ರಧಾನ ಮಂತ್ರಿಯವರು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ನಡೆಸಿದ ವಿಡಿಯೊ ಕಾನ್ಫರೆನ್ಸ್ ನ ಮುಖ್ಯಾಂಶಗಳು ಇಂತಿವೆ…

1. ದೇಶದಲ್ಲಿ ಕೋವಿಡ್ 19 ಪ್ರಕರಣಗಳು ಹೆಚ್ಚುತ್ತಿರುವ ಕುರಿತು ಹಾಗೂ ಸಮುದಾಯದಲ್ಲಿ ಹರಡುವ ಸಾಧ್ಯತೆಗಳ ಕುರಿತು ಪ್ರಧಾನಮಂತ್ರಿಯವರು ಕಳವಳ ವ್ಯಕ್ತಪಡಿಸಿದರು.

2. ಹಾಟ್ ಸ್ಪಾಟ್ ಗಳನ್ನು ಗುರುತಿಸಿ, ಸೀಲ್ ಡೌನ ಮಾಡುವ ಮೂಲಕ ಹಾಗೂ ಇತರ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಮೂಲಕ ರಾಜ್ಯಗಳು ಮಾಡುತ್ತಿರುವ ನಿಯಂತ್ರಣದ ಪ್ರಯತ್ನಗಳನ್ನು ಅವರು ಶ್ಲಾಘಿಸಿದರು.

3. ನಾವು ಒಗ್ಗಟ್ಟಿನಿಂದ ಹೋರಾಡಿದರೆ ಮಾತ್ರವೇ ಯಶಸ್ವಿಯಾಗಲು ಸಾಧ್ಯ ಎಂದು ಅವರು ಹೇಳಿದರು.

4. ದೇಶದಲ್ಲಿ ಕೋವಿಡ್ ಪ್ರಕರಣಗಳ ಬೆಳವಣಿಗೆಯ ದರ ಲಾಕ್ ಡೌನ್ ನಂತರ ಶೇ. 28 ರಿಂದ ಶೇ. 14 ಕ್ಕೆ ಇಳಿದಿರುವುದು ಸಮಾಧಾನದ ಸಂಗತಿ.

5. ರೋಗಿಗಳಿಗೆ ವೈದ್ಯಕೀಯ ಚಿಕಿತ್ಸೆ ನೀಡುವ ಕುರಿತು ಹೆಚ್ಚು ಗಮನ ಹರಿಸಬೇಕಾಗಿದೆ.

6. ಭಾರತ ಸರ್ಕಾರವು 142 ಹಾಟ್ ಸ್ಪಾಟ್ ಗಳನ್ನು ಗುರುತಿಸಲಾಗಿದೆ. ಈ ಹಾಟ್ ಸ್ಪಾಟ್ ಗಳಲ್ಲಿ ತೀವ್ರ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.

7. ಈ ವರೆಗೆ 2.84 ಲಕ್ಷ ಪಿಪಿಇ ಕಿಟ್ ಗಳನ್ನು ಪೂರೈಸಲಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೂರೈಸಲಾಗುವುದು. ಪ್ರತಿ ಎರಡು ದಿನಗಳಿಗೊಮ್ಮೆ 2 ಲಕ್ಷ ಮಾಸ್ಕ್ ಗಳನ್ನು ಒದಗಿಸಲು ಕ್ರಮ ವಹಿಸಲಾಗುತ್ತಿದೆ.

8. ಪರೀಕ್ಷಾ ‍ಪ್ರಯೋಗಾಲಯಗಳ ಸಂಖ್ಯೆ 220 ಕ್ಕೆ ಹೆಚ್ಚಿಸಲಾಗಿದೆ. ಪ್ರಸ್ತುತ ದಿನಕ್ಕೆ 15,000 ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಏಪ್ರಿಲ್ 30 ರ ವೇಳೆಗೆ ಪರೀಕ್ಷಾ ಪ್ರಯೋಗಾಲಯಗಳ ಸಂಖ್ಯೆಯನ್ನು 300 ಕ್ಕೆ ಹೆಚ್ಚಿಸಲಾಗುವುದು. ಮೇ 31ರ ವೇಳೆಗೆ ಪ್ರತಿ ದಿನ 1 ಲಕ್ಷ ಪರೀಕ್ಷೆಗಳನ್ನು ನಡೆಸುವ ಗುರಿ ಹೊಂದಲಾಗಿದೆ.

9. ಪರೀಕ್ಷಾ ಸೌಲಭ್ಯ ಹೆಚ್ಚಿಸುವ ನಿಟ್ಟಿನಲ್ಲಿ ಐಸಿಎಂಆರ್ ಗೆ ಅರ್ಜಿ ಸಲ್ಲಿಸುವಂತೆ ಖಾಸಗಿ ಪ್ರಯೋಗಾಲಯಗಳು ಮತ್ತು ವೈದ್ಯಕೀಯ ಕಾಲೇಜುಗಳಿಗೆ ಸಲಹೆ ನೀಡುವಂತೆ ಪ್ರಧಾನ ಮಂತ್ರಿಯವರು ಸೂಚಿಸಿದರು.

10. ಮೋದಿ ಜಿ ಅವರ ನೇತೃತ್ವದಲ್ಲಿ ಕೋವಿಡ್ 19 ರ ವಿರುದ್ಧದ ಸಮರದಲ್ಲಿ ಗೆಲುವು ನಿಶ್ಚಿತ ಎಂಬ ವಿಶ್ವಾಸವನ್ನು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ವ್ಯಕ್ತಪಡಿಸಿದರು.

11. ಈ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವರು ಜನ ಸಂದಣಿಯಾಗದಂತೆ ಎಚ್ಚರ ವಹಿಸುವಂತೆ ಸೂಚಿಸಿದರು. ಈ ಬಗ್ಗೆ ನಮ್ಮ ಸರ್ಕಾರ ಈಗಾಗಲೇ ಕ್ರಮ ಕೈಗೊಂಡಿದೆ.

12. ಗೃಹ ಸಚಿವರು ಕ್ಲಾಂಪ್ ಡೌನ್ ಕ್ರಮಗಳನ್ನು ಇನ್ನಷ್ಟು ಕಟ್ಟುನಿಟ್ಟಾಗಿ ಹಾಗೂ ಗಂಭೀರವಾಗಿ ಕೈಗೊಳ್ಳುವಂತೆಯೂ ಸೂಚಿಸಿದರು.

13. ಪ್ರಧಾನ ಮಂತ್ರಿಯವರು ನಗರಗಳಲ್ಲಿ ಸಿಲುಕಿಕೊಂಡಿರುವ ಕಾರ್ಮಿಕರನ್ನು ಹಳ್ಳಿಯ ಜನರು ಸ್ವೀಕರಿಸದ ಕಾರಣ ಹಳ್ಳಿಗಳಿಗೆ ಕಳುಹಿಸದಂತೆ ಸಲಹೆ ನೀಡಿದರು.

14. ಮೀನುಗಾರಿಕೆ ಮತ್ತು ಮೀನು ಸಂಸ್ಕರಣಾ ಚಟುವಟಿಕೆಗಳಿಗೆ ಏಪ್ರಿಲ್ 10ರಂದು ಲಾಕ್ ಡೌನ್ ನಿಂದ ವಿನಾಯಿತಿ ನೀಡಲಾಗಿದೆ ಎಂದು ಪ್ರಧಾನ ಮಂತ್ರಿಯವರು ತಿಳಿಸಿದರು. ಇದರಿಂದ ರಾಜ್ಯದ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಮೀನುಗಾರರಿಗೆ ಅನುಕೂಲವಾಗಲಿದೆ.

15. ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಅಗತ್ಯ ವಸ್ತುಗಳ ಮಾರಾಟವಾಗುತ್ತಿರುವ ಬಗ್ಗೆ ವ್ಯಾಪಕ ದೂರುಗಳಿದ್ದು, ರಾಜ್ಯ ಸರ್ಕಾರಗಳು ಈ ಕುರಿತು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.

16. ಭಾರತ ಸರ್ಕಾರ ಅಭಿವೃದ್ಧಿ ಪಡಿಸಿರುವ ಆರೋಗ್ಯ ಸೇತು ಮೊಬೈಲ್ ಆಪ್ ಅನ್ನು ಜನಪ್ರಿಯಗೊಳಿಸಲು ಸಲಹೆ ನೀಡಿದರು. ಈ ಆಪ್ ನ ಸಹಾಯದಿಂದ ವ್ಯಕ್ತಿಯು ಮುನ್ನೆಚ್ಚರಿಕೆ ವಹಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಪ್ರಧಾನ ಮಂತ್ರಿಯವರ ಸೂಚನೆಗಳು:

17. ಯಾವುದೇ ಕಾರಣಕ್ಕೂ ಲಾಕ್ ಡೌನ್ ನಲ್ಲಿ ಸಡಿಲಗೊಳಿಸಬಾರದು. ಲಾಕ್ ಡೌನ್ ವಿಸ್ತರಣೆ ಕುರಿತು ಸಲಹೆಗಳು ಬಂದಿವೆ.

18. ಮುಂದಿನ 15 ದಿನಗಳಲ್ಲಿ ಲಾಕ್ ಡೌನ್ ಅನುಷ್ಠಾನದ ಕುರಿತು ಇನ್ನು ಒಂದೆರಡು ದಿನಗಳಲ್ಲಿ ಮಾರ್ಗಸೂಚಿಗಳನ್ನು ಹೊರಡಿಸಲಾಗುವುದು.

19. ಮುಂದಿನ ಎರಡು ವಾರಗಳ ಕಾಲ ಲಾಕ್ ಡೌನ್ ಹಿಂದಿನ 3 ವಾರಗಳಿಗಿಂತ ವಿಭಿನ್ನವಾಗಿರುತ್ತದೆ.

20. ವಿಶೇಷವಾಗಿ ಆರ್ಥಿಕ ಚಟುವಟಿಕೆಗಳಿಗೆ ಸಹಾಯವಾಗುವಂತೆ, ಕೃಷಿ ಮತ್ತು ಕೈಗಾರಿಕೆ ಹಾಗೂ ಕಾರ್ಮಿಕರಿಗೆ ಉದ್ಯೋಗದ ದೃಷ್ಟಿಯಿಂದ ಕೆಲವು ಮಾರ್ಗಸೂಚಿಗಳನ್ನು ಕೇಂದ್ರ ಸರ್ಕಾರ ರೂಪಿಸಲಿದೆ.

21. ಸರ್ಕಾರಿ ಕಚೇರಿಗಳು ಭಾಗಶಃ ನೌಕರರೊಂದಿಗೆ ಕಾರ್ಯ ನಿರ್ವಹಿಸಲಿದೆ.

22. ಪ್ರಧಾನ ಮಂತ್ರಿಯವರು ಮುಖ್ಯಮಂತ್ರಿಗಳು ನೀಡಿರುವ ರಚನಾತ್ಮಕ ಹಾಗೂ ಅನುಷ್ಠಾನ ಯೋಗ್ಯ ಸಲಹೆಗಳ ಕುರಿತು ಮೆಚ್ಚುಗೆ ವ್ಯಕ್ತ ಪಡಿಸಿದರು.

23. ಮುಂದಿನ ಮೂರು ನಾಲ್ಕು ವಾರ 130 ಕೋಟಿ ಜನರಿಗೆ ಬಹಳ ಪ್ರಮುಖ ಅವಧಿ. ಈ ಅವಧಿಯಲ್ಲಿ ನಾವು ಮಾಡಿರುವ ಪ್ರಯತ್ನದ ಪರಿಣಾಮ ಏನಾಗುವುದು ಎಂಬುದರ ಕುರಿತು ಸಿದ್ಧರಾಗಿರಬೇಕು. ಪರಿಸ್ಥಿತಿ ಬಿಗಡಾಯಿಸಿದರೆ ಎದುರಿಸಲು ಸನ್ನದ್ಧರಾಗಿರಬೇಕು.

24. ಕೇಂದ್ರ ಸರ್ಕಾರ ಸಂಪೂರ್ಣವಾಗಿ ರಾಜ್ಯಗಳೊಂದಿಗೆ ಇದೆ. ದೇಶದಲ್ಲಿ ವೈದ್ಯಕೀಯ ಸೌಲಭ್ಯಗಳ ದೃಷ್ಟಿಯಿಂದ ಸುಧಾರಣೆ ಆಗಿದೆ.

25. ವೈದ್ಯಕೀಯ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸುವುದನ್ನು ಸಹಿಸಲಾಗದು ಎಂದು ಪ್ರಧಾನಿಯವರು ಸೂಚಿಸಿದರು.

*********

ಲಾಕ್ ಡೌನ್ ಅನುಷ್ಠಾನ ಮಾಡುವ ನಿಟ್ಟಿನಲ್ಲಿ ಸರ್ಕಾರ ಕೈಗೊಂಡಿರುವ ಕ್ರಮಗಳು:

1. ರಾಜ್ಯದಲ್ಲಿ ಇಂದು ಬೆಳಿಗ್ಗೆ 7 ಪ್ರಕರಣಗಳು ವರದಿಯಾಗಿದ್ದು, ಒಟ್ಟಾರೆ ಸಂಖ್ಯೆ 214 ಕ್ಕೆ ಏರಿದೆ.

2. ಪ್ರಾರಂಭದಲ್ಲಿ ಕೋವಿಡ್ 19 ಪ್ರಕರಣಗಳು ವರದಿಯಾದ ರಾಜ್ಯಗಳಲ್ಲಿ 3ನೇ ಸ್ಥಾನದಲ್ಲಿದ್ದ ಕರ್ನಾಟಕವು ಈಗ 11ನೇ ಸ್ಥಾನದಲ್ಲಿದೆ.

3. ಲಾಕ್ ಡೌನ್ ಅನುಷ್ಠಾನಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.

4. ಬೆಂಗಳೂರು ನಗರದಲ್ಲಿ 345 ಚೆಕ್ ಪೋಸ್ಟ್ ಗಳು ಹಾಗೂ ಇತರ ಜಿಲ್ಲೆಗಳ ಗಡಿ ಭಾಗ ಹಾಗೂ ಅಂತರ್ ರಾಜ್ಯ ಗಡಿ ಭಾಗಗಳಲ್ಲಿ 588 ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಿ ವಾಹನಗಳ ಓಡಾಟವನ್ನು ನಿಯಂತ್ರಿಸಲಾಗುತ್ತಿದೆ.

5. ಈ ವರೆಗೆ 43,432 ವಾಹನಗಳಲ್ಲಿ ಜಪ್ತಿ ಮಾಡಿಕೊಳ್ಳಲಾಗಿದೆ. ಲಾಕ್ ಡೌನ್ ಉಲ್ಲಂಘನೆಗೆ ಸಂಬಂಧಿಸಿದಂತೆ 1558 ಎಫ್ ಐ ಆರ್ ಗಳು ದಾಖಲಾಗಿವೆ. 2,682 ಜನರನ್ನು ಬಂಧಿಸಲಾಗಿದೆ.

6. ತಬ್ಲಿಘಿ ಜಮಾತ್ ನ 50 ವಿದೇಶಿ ಕಾರ್ಯಕರ್ತರನ್ನು ಗುರುತಿಸಿ ಕ್ವಾರಂಟೈನ್ ಮಾಡಲಾಗಿದೆ. ವೀಸಾ ನಿಯಮ ಉಲ್ಲಂಘನೆಯ ಪ್ರಕರಣಗಳನ್ನೂ ದಾಖಲಿಸಲಾಗಿದೆ.

7. ಬೆಂಗಳೂರು ನಗರದಲ್ಲಿ 269 ತೆಬ್ಲಿಘಿ ಜಮಾತ್ ನ ಕಾರ್ಯಕರ್ತರು ಹಾಗೂ ಇತರಜಿಲ್ಲೆಗಳಲ್ಲಿ 482 ಕಾರ್ಯಕರ್ತರನ್ನು ಗುರುತಿಸಲಾಗಿದೆ. ಒಟ್ಟು 801 ಕಾರ್ಯಕರ್ತರನ್ನು ಕ್ವಾರಂಟೈನ್ ನಲ್ಲಿ ಇಡಲಾಗಿದೆ.

8. ಇತರ ರಾಜ್ಯಗಳಲ್ಲಿರುವ 581 ಮಂದಿ ಕಾರ್ಯಕರ್ತರ ಕುರಿತು ಆಯಾ ರಾಜ್ಯಗಳಿಗೆ ಮಾಹಿತಿ ನೀಡಲಾಗಿದೆ.

9. ಬೆಂಗಳೂರು ನಗರ ಮತ್ತು ಇತರ ಆಯುಕ್ತಾಲಯಗಳ ವ್ಯಾಪ್ತಿಯಲ್ಲಿ 273 ಹೊಯ್ಸಳ ವಾಹನಗಳು ನಾಗರಿಕರಿಗೆ ವೈದ್ಯಕೀಯ ಮತ್ತು ಇತರ ತುರ್ತು ಸಂದರ್ಭಗಳಲ್ಲಿ ನೆರವಾಗುತ್ತಿವೆ.