ಎಂಎಲ್ ಸಿ ಸ್ಥಾನಕ್ಕೆ ರಾಜೀನಾಮೆ: ಕಾಂಗ್ರೆಸ್ ಗೂ ಗುಡ್ ಬೈ ಹೇಳಿದ ಸಿಎಂ ಇಬ್ರಾಹಿಂ.

ಬೆಂಗಳೂರು,ಮಾರ್ಚ್,12,2022(www.justkannada.in):  ಎಂಎಲ್ ಸಿ ಸ್ಥಾನಕ್ಕೆ ಮತ್ತು  ಕಾಂಗ್ರೆಸ್ ಸದಸ್ಯತ್ವಕ್ಕೆ ಸಿಎಂ ಇಬ್ರಾಹಿಂ ಅಧಿಕೃತವಾಗಿ ರಾಜೀನಾಮೆ ನೀಡಿದ್ದು ಮುಂದೆ ಜೆಡಿಎಸ್ ಸೇರ್ಪಡೆಯಾಗುವುದಾಗಿ ತಿಳಿಸಿದ್ದಾರೆ.

ಸುದ‍್ಧಿಗೋಷ್ಠಿ ನಡೆಸಿ ಇಂದು ಮಾತನಾಡಿದ ಸಿಎಂ ಇಬ್ರಾಹಿಂ, ನಾನು ಕಾಂಗ್ರೆಸ್ ಪಕ್ಷದ ಸದಸ್ಯ ಸ್ಥಾನಕ್ಕೆ ರಾಜೀನಾಮೆಯನ್ನು ಸೋನಿಯಾಗಾಂಧಿಯವರಿಗೆ ಕಳುಹಿಸುತ್ತಿದ್ದೇನೆ. ವಿಧಾನಪರಿಷತ್‌ ಸ್ಥಾನಕ್ಕೂ ರಾಜೀನಾಮೆ ಕೊಡುತ್ತೇನೆ. ಈಗ ನಾನು ವಿಧಾನಪರಿಷತ್‌ ಸ್ಥಾನಕ್ಕೆ ರಾಜೀನಾಮೆ ಕೊಟ್ಟರೇ, ಬಿಜೆಪಿಗೆ ಮಜಾರಿಟಿ ಬರುತ್ತದೆ. ರಾಜಕಾರಣ ಮಾಡುವುದು ಎರಡು ವಿಚಾರಕ್ಕೆ. ಒಂದು ಸ್ವಾಭಿಮಾನಕ್ಕೆ, ಇನ್ನೊಂದು ಸಮಾಜ ಸೇವೆಗೆ. ಅನೇಕ ಜನರು ನನ್ನ ಜೊತೆ ಬರುತ್ತಿದ್ದಾರೆ. ಮಾರ್ಚ್ 20 ರ ಬಳಿಕ ತುಂಬಾ ಜನ ಬರುತ್ತಿದ್ದಾರೆ. ವಿಧಾನಪರಿಷತ್‌ ಸದಸ್ಯ ಸ್ಥಾನಕ್ಕೆ‌ ರಾಜೀನಾಮೆ ವಿಪಕ್ಷ ನಾಯಕ ಸಿದ್ಧರಾಮಯ್ಯರಿಗೆ ಕೊಡುತ್ತಿದ್ದೇನೆ ಎಂದರು.

1995 ರಲ್ಲಿ ಏನು ಬೆಳವಣಿಗೆ ಇತ್ತೋ, ಅದೇ ಬೆಳವಣಿಗೆ 2022 ಬಂದಿದೆ. 222 ಅಂದರೆ ಟ್ರಿಬಲ್ ಟೂ ನಲ್ಲಿ ಆಗುತ್ತಿದೆ. ಕಾಂಗ್ರೆಸ್‌ ಪಕ್ಷ ನೆಲೆ ಕಳೆದುಕೊಳ್ಳುತ್ತಿದೆ. ಇದನ್ನು ಈ ಹಿಂದೆಯೇ ನಾವು ಹೇಳಿದ್ದೆ ಎಂದರು.

ಇಂದು ಅಥವಾ ನಾಳೆ ನಾನು, ಹೆಚ್.ಡಿ.ದೇವೇಗೌಡ್ರು, ಕುಮಾರಸ್ವಾಮಿ ಹಾಗೂ ಹೆಚ್.ಡಿ. ರೇವಣ್ಣ ಒಂದು ಸೇರುತ್ತೇವೆ.  ಬಳಿಕ ಮುಂದೆ ರಾಜ್ಯದಲ್ಲಿ ಪಕ್ಷ ‌ಸಂಘಟನೆ ಬಗ್ಗೆ ಚರ್ಚಿಸಲಾಗುವುದು ಎಂದರು.

JDS- join- issue-CM Ibrahim- clarified.
ಕೃಪೆ-internet

ನಾನು ಎಲ್ಲಿಯೂ ಹೋಗುವುದಿಲ್ಲ ಎನ್ನುತ್ತಿದ್ರು. ಈಗ ಅಧಿಕೃತವಾಗಿ ‌ನಾನು ಸ್ವತಂತ್ರವಾಗಿದ್ದೇನೆ. ನಾನು ಕಾಂಗ್ರೆಸ್ ಬಿಟ್ಟು ಹೋಗುತ್ತಿರುವ ನೋವಿದೆ. ಅಲ್ಲಿ ಅನೇಕ ಜನ ನನ್ನ ಸ್ನೇಹಿತರಿದ್ದಾರೆ. ಅವರನ್ನೆಲ್ಲಾ ಬಿಟ್ಟು ಹೋಗುತ್ತಿರುವುದು ನೋವು ತಂದಿದೆ. ನನಗೆ ಇರುವ ಸುಲಭವಾದ ದಾರಿ ಜೆಡಿಎಸ್‌‌. ಅವರ ಜೊತೆಗೆ ಇನ್ನೊಂದು ಸುತ್ತಿನ ಮಾತುಕತೆ ಮಾಡಿ, ನಿರ್ಧಾರ ಪ್ರಕಟಿಸುತ್ತೇನೆ ಎಂದು ಸಿಎಂ ಇಬ್ರಾಹಿಂ ತಿಳಿಸಿದರು.

ಜೆಡಿಎಸ್‌‌, ಬಿಜೆಪಿ ಜೊತೆಗೆ ಒಳ ಒಪ್ಪಂದದ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ನಾನು ಅದನ್ನು ಕೂಡ ಮಾತುಕತೆ ಮಾಡುತ್ತೇನೆ. ಹುಡುಗಿ ಲವ್ ಮಾಡಿದ ತಕ್ಷಣ ಮದುವೆನೇ ಆಯ್ತು ಎಂದಾರ್ಥನಾ? ನಾನು ಇದೆಲ್ಲ ವಿಚಾರ ನೇರವಾಗಿ ದೇವೇಗೌಡರ ಜತೆ ಮಾತುಕತೆ ಮಾಡುತ್ತೇನೆ. ಲಿವಿಂಗ್ ಟು ಗೆದರ್ ಸಂಬಂಧ ನಮ್ಮದ್ದಲ್ಲ.  ನಾನು ಕಂಡೀಷನ್ ಹಾಕುವುದರ ಬಗ್ಗೆ ಈಗ ಚರ್ಚೆ ಮಾಡುವುದಿಲ್ಲ. ಚರ್ಚೆ ಮಾಡುವಾಗ ಅನೇಕ ಚರ್ಚೆಗಳು ಆಗುತ್ತದೆ. ನನ್ನ ತಂದೆ ಸಮಾನರು. ನಾನು ಕಂಡೀಷನ್ ಸಾರ್ವಜನಿಕವಾಗಿ ತಿಳಿಸಿದ್ರೆ, ಅವರಿಗೆ ಅಗೌರವ ತೋರಿಸಿದ ಹಾಗೇ ಎಂದರು.

ಸಿದ್ಧರಾಮಯ್ಯರ ಸಾಫ್ಟ್ ಕಾರ್ನರ್‌ನಿಂದ ಯಡಿಯೂರಪ್ಪರ ಸರ್ಕಾರ ಅಧಿಕಾರಕ್ಕೆ ಬಂದಿದೆ. ದೇವೇಗೌಡ್ರು ದೇಶದ ಪ್ರಧಾನಿ ಆಗುತ್ತಾರೆ ಎಂದಿದ್ದೆ. ನಾನು‌ ಕಾಲಿಟ್ಟ ಕಡೆ ಒಳ್ಳೆಯದಾಗಿದೆ. ಭಗವಂತ ಹಾಗೂ ಜನ ನನ್ನ ಕೈ ಬಿಟ್ಟಿಲ್ಲ. ಹಿಂದೆ ಬಸ್‌ಸ್ಟ್ಯಾಂಡ್‌ನಲ್ಲಿ ಬೋರ್ಡ್ ಹಾಕಿಕೊಂಡು ಬಸ್ ಬರುತ್ತಿತ್ತು. ಈಗ ಬಸ್ ಬಂದು ನಿಂತ ಮೇಲೆ ಬೋರ್ಡ್ ಬದಲಾಗುತ್ತದೆ ಎಂದು ಸಿಎಂ ಇಬ್ರಾಹಿಂ ಹೇಳಿದರು.

21% ರಷ್ಟು ನಮ್ಮ ಜನಾಂಗ ಇದೆ. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಅಂತಾರೆ. ಒಳ್ಳೆಯದೆಲ್ಲಾ ಅವರ ಪಾಲು, ಬೇಡದ್ದೆಲ್ಲಾ ನಮ್ಮ ಪಾಲು. ಸಿದ್ಧರಾಮಯ್ಯ ನಮ್ಮ ಮನೆಗೆ ಯಾವಾಗ ಬರುತ್ತಾರೋ, ಬರಲಿ. ಅವರು ಬರಲೀ. ಇಂದು ಕೂಡ ಬಿರಿಯಾನಿ ತಿನ್ನೋಕೆ ಬರಲಿ. ಬೊಮ್ಮಾಯಿ ಕೂಡ ನಮ್ಮ ಸ್ನೇಹಿತರು. ಅವರು ನಾನು ಜೆಡಿಎಸ್‌‌‌ ನಲ್ಲಿದ್ದಾಗ ಅವರೇ ನನ್ನ ಮನೆಗೆ ಬರುತ್ತಿದ್ರು. ನನ್ನನ್ನು ಕರೆದುಕೊಂಡು ಹೋಗುತ್ತಿದ್ರು. ಅವರು ಬರಲಿ, ಬಿರಿಯಾನಿ ತಿನ್ನಲಿ. ನಾನು ಪ್ಲಾನಿಂಗ್ ಕಮಿಷನ್‌ ನಲ್ಲಿ ಉಪಾಧ್ಯಕ್ಷ ಇದ್ದಾಗ ಕೊಟ್ಟ ವರದಿ ಇಟ್ಟಿಲ್ಲ. ಬೊಮ್ಮಾಯಿಗೆ ಈಗ ಹೇಳುತ್ತೇನೆ ವರದಿ ನೋಡಿ ಅಂತ ಎಂದರು.

ಕಾಂಗ್ರೆಸ್‌ ಅಧಿಕಾರಕ್ಕೆ ಬಂದ್ರೆ, ಸಿದ್ಧರಾಮಯ್ಯ ಮುಖ್ಯಮಂತ್ರಿ ಆಗುವುದಿಲ್ಲ…

ಮಾನ ನಿರೀಕ್ಷೆಯಿಂದ ಮಾತ್ರ ಜೆಡಿಎಸ್‌‌ ಕಡೆ ಹೋಗುತ್ತಿದ್ದೇನೆ. ಸ್ಥಾನ ನಿರೀಕ್ಷೆ ಇಲ್ಲ. ಶಾಸಕರು ಬರುತ್ತಾರೆ. ಯುಗಾದಿ ಆದ ಬಳಿಕ ನೋಡುತ್ತೀರಿ ಎಂದ ಸಿಎಂ ಇಬ್ರಾಹಿಂ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ್ರೆ, ಸಿದ್ಧರಾಮಯ್ಯ ಮುಖ್ಯಮಂತ್ರಿ ಆಗುವುದಿಲ್ಲ. ಭವಿಷ್ಯ ನುಡಿದರು. I don’t want to become a king, I want to be a king maker ಎಂದರು.

ನಾನು ಕ್ಷೇತ್ರದ ಆಯ್ಕೆ ಮಾಡಿಕೊಂಡು ಹೋಗುತ್ತಿಲ್ಲ. ನಾನು ಎಲ್ಲವನ್ನೂ ನೋಡಿದ್ದೇನೆ ವೀರೇಂದ್ರ ಪಾಟೀಲ್‌ರನ್ನು ಕೆಳಗಿಳಿಸಿ ಇನ್ನು ಕಾಂಗ್ರೆಸ್ ಸುಧಾರಿಸಿಕೊಳ್ಳುತ್ತಿದೆ. ಒಕ್ಕಲಿಗರು, ಸಾಬರು ಸೇರಿದ್ರೆ 65 ಸೀಟು ಬರುತ್ತದೆ. ಸಾಬರು,‌ಲಿಂಗಾಯತರು ಸೇರಿದ್ರೆ 110 ಸೀಟು ಬರುತ್ತದೆ. ಇದು ಸಿದ್ಧರಾಮಯ್ಯರಿಗೂ ಗೊತ್ತಿದೆ. ಕಾಂಗ್ರೆಸ್‌ ನಲ್ಲಿ ಇರುವುದು ಗೊಡ್ಡು ಎಮ್ಮೆಗಳು. ಯಾವ ಹಸು ಇದೆ ಓಟು ತರುವುದಕ್ಕೆ? ಎಂದು ಲೇವಡಿ ಮಾಡಿದರು.

ದೇವೇಗೌಡ್ರು ಮೀಸಲಾತಿ ಕೊಟ್ಟಿದ್ದಾರೆ. 4% ರಷ್ಟು ಮೀಸಲಾತಿ ಕೊಟ್ರು. ಕಾಂಗ್ರೆಸ್‌ನವರು ನಮಗೆ ಚೆನ್ನಾಗಿ ಮೇಕಪ್ ಮಾಡಿ, ಬಸ್ ಸ್ಟ್ಯಾಂಡ್‌ನಲ್ಲಿ ನಿಲ್ಲಿಸಿದ್ರು. ಹೋಗುವವರನ್ನು, ಬರುವವರನ್ನು ಕರೆಯುವ ಕೆಲಸ ಮಾಡಿದ್ರು. ಈಗ ಖಾದರ್‌ಗೆ ಚಡ್ಡಿ ಕೊಟ್ಟಿದ್ದಾರೆ. ಕಲ್ಕಡ ಪ್ರಭಾಕರ್ ಭಟ್‌ರನ್ನು ಎದುರಿಸಲು ಆಯ್ತಾ? ಎಂದು ವ್ಯಂಗ್ಯವಾಡಿದರು.

ಶಾಮನೂರು ಶಿವಶಂಕರಪ್ಪ ಕಾಂಗ್ರೆಸ್‌‌ನ ಶಾಸಕ. ಯಡಿಯೂರಪ್ಪರನ್ನು ಬದಲಿಸಬೇಡಿ‌ ಅಂತಾರೆ. ಅವರು ಯಾವ ಪಕ್ಷದ ಶಾಸಕರು? ನಾನು ಇದನ್ನು ಕೇಳಿದ್ದಕ್ಕೆ, ಉಗ್ರಪ್ಪನ ಕೈಯಲ್ಲಿ ಬೈಯಿಸಿದ್ರು. ಅವರ ಮೇಲೆ ಯಾವುದೇ ಕ್ರಮ ಆಗಲಿಲ್ಲ. ಕಾಂಗ್ರೆಸ್‌ನವರು ನನ್ನನ್ನು ತಳ್ಳಿದ್ದು ಆಯ್ತು. ಈಗ ನಾವು ಹೊರಗೆ ಹೋಗುತ್ತಿದ್ದೇವೆ. ಮುಂದೆ ಸಿದ್ಧರಾಮಯ್ಯನವರು ಜೆಡಿಎಸ್‌‌‌ಗೆ ಬರುವುದನ್ನು ಹೆಚ್.ಡಿ. ದೇವೇಗೌಡರು ನಿರ್ಧರಿಸುತ್ತಾರೆ.

ಸಿದ್ಧರಾಮಯ್ಯರನ್ನು ನಂಬಿ ಕಾಂಗ್ರೆಸ್‌ ಗೆ ಸೇರಿದೆ. ನನ್ನನ್ನು ನಡು ನೀರಲ್ಲಿ ಕೈ ಬಿಟ್ರು‌. ಟೆಂಟ್‌ ಗೆ ಬೆಂಕಿ ಬಿದ್ದಿದೆ. ಎಲ್ಲರೂ ಗೇಟು ನೋಡುತ್ತಿದ್ದಾರೆ. ಒಳ್ಳೆಯ ಗೂಳಿಯನ್ನು ಹೊರಗೆ ಕಳುಹಿಸುತ್ತಿದ್ದೀರಿ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಸೋತರೆ, ಅದಕ್ಕೆ ನಾನೇ ಕಾರಣ ಎಂದು ಸನ್ನೆ ಮಾಡಿ ಸಿಎಂ  ಇಬ್ರಾಹಿಂ ತೋರಿಸಿದರು.

Key words: CM -Ibrahim –resigns-congress