ಮುಖ್ಯಮಂತ್ರಿ ದಾರಿ ತಪ್ಪಿಸುವ ಆಫೀಸರ್ಸ್: ಸಿಎಂ ಸೂಚಿಸಿದರೂ ಜನರ ದೂರಿಗಿಲ್ಲ ಪರಿಹಾರ

ಬೆಂಗಳೂರು:ಜೂ-4: ಅಧಿಕಾರ ಉಳಿಸಿಕೊಳ್ಳುವ ಕಸರತ್ತಿನ ನಡುವೆಯೂ ಜನರ ಕಷ್ಟಗಳಿಗೆ ಕಿವಿಯಾಗುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಅವರ ಅಧಿಕಾರಿಗಳ ವರ್ಗವೇ ದಾರಿತಪ್ಪಿಸುತ್ತಿರುವ ವಿಚಾರ ಬೆಳಕಿಗೆ ಬಂದಿದೆ. ಜನತಾದರ್ಶನ ಹಾಗೂ ಪ್ರವಾಸದ ಸಂದರ್ಭದಲ್ಲಿ ಬರುವ ದೂರು, ದುಮ್ಮಾನದ ನೂರಾರು ಅರ್ಜಿಗಳಿಗೆ ಸ್ಪಂದಿಸುವ ಸಿಎಂ ಸಮಸ್ಯೆ ಪರಿಹರಿಸುವ ಹೊಣೆಗಾರಿಕೆಯನ್ನು ಅಧಿಕಾರಿಗಳ ಬೆನ್ನಿಗೆ ಕಟ್ಟಿದರೆ, ಅಧಿಕಾರಿಗಳು ಪರಿಹಾರ ಕಲ್ಪಿಸಿರುವುದಾಗಿ ಸುಳ್ಳು ಮಾಹಿತಿ ಕೊಟ್ಟು ಕಡತವನ್ನು ಗಂಟು ಮೂಟೆ ಕಟ್ಟುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಈ ಬೆಳವಣಿಗೆ ಬಳಿಕ ಎಚ್ಚೆತ್ತಿರುವ ಮುಖ್ಯಕಾರ್ಯದರ್ಶಿಗಳು ಅಧಿಕಾರಿ ವಲಯದ ಮೇಲೆ ಕಣ್ಣಿದ್ದಾರೆ.

ಗೃಹ ಕಚೇರಿ ಕೃಷ್ಣ ಹಾಗೂ ಸ್ವಗೃಹ ಕಚೇರಿಗಳಲ್ಲಿ ಹಾಗೂ ಪ್ರವಾಸದ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಸಾರ್ವಜನಿಕರ ಕುಂದು-ಕೊರತೆಗಳ ಮನವಿ ಪತ್ರ ಸ್ವೀಕರಿಸುತ್ತಾರೆ.

ಆ ಮನವಿಗಳನ್ನು ಮುಖ್ಯಮಂತ್ರಿಗಳ ಜನತಾ ದರ್ಶನ ಶೀರ್ಷಿಕೆಯಡಿ ‘ಇ-ಸ್ಪಂದನ’ ವೆಬ್​ಸೈಟ್​ನಲ್ಲಿ ಗಣಕೀಕೃತಗೊಳಿಸಿ ಆನ್​ಲೈನ್ ಮೂಲಕ ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಇಲಾಖಾ ಮುಖ್ಯಸ್ಥರಿಗೆ ಕಳುಹಿಸಲಾಗುತ್ತದೆ. ಪ್ರತ್ಯೇಕ ಯೂಸರ್ ಐಡಿ ಹಾಗೂ ಪಾಸ್​ವರ್ಡ್ ಹೊಂದಿರುವ ಆಯಾ ಇಲಾಖೆಗಳ ಮುಖ್ಯಸ್ಥರು ಕಾಲಮಿತಿಯೊಳಗೆ ಅರ್ಜಿಗಳನ್ನು ವಿಲೇವಾರಿ ಮಾಡಿ ಸೂಕ್ತ ಹಿಂಬರಹದೊಂದಿಗೆ ವೆಬ್​ಸೈಟ್​ಗೆ ಅಪ್​ಲೋಡ್ ಮಾಡಬೇಕು. ಆದರೆ, ಅಧಿಕಾರಿಗಳು ಮನವಿಗಳನ್ನು ಪರಿಶೀಲಿಸದೆಯೇ ಪರಿಹಾರ ಕಲ್ಪಿಸಿ ಮುಕ್ತಾಯಗೊಳಿಸಿದ್ದೇವೆ ಎಂದು ವೆಬ್​ಸೈಟ್​ನಲ್ಲಿ ಉಲ್ಲೇಖಿಸಿ ಕೈತೊಳೆದುಕೊಳ್ಳುತ್ತಿದ್ದಾರೆ.

ಪಾಲನೆಗೆ ಸಿಎಸ್ ಕಟ್ಟಾಜ್ಞೆ: ಜನತಾದರ್ಶನ ಹಾಗೂ ಸಿಎಂ ಕಚೇರಿಯಿಂದ ದಾಖಲಾಗುವ ಎಲ್ಲ ಅರ್ಜಿಗಳನ್ನು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ವೈಯಕ್ತಿವಾಗಿ ಪರಿಶೀಲಿಸಿ, ಗುಣಾತ್ಮಕ ನಿರ್ಣಯ ಕೈಗೊಂಡು, ಸೂಕ್ತ ಹಿಂಬರಹದೊಂದಿಗೆ ಕಾಲ ಮಿತಿಯೊಳಗೆ ವಿಲೇವಾರಿ ಮಾಡಿ ಇ-ಸ್ಪಂದನ ತಂತ್ರಾಂಶಕ್ಕೆ ಅಪ್​ಲೋಡ್ ಮಾಡಬೇಕು. ಯಾವುದೇ ಸೂಕ್ತ ಅಥವಾ ಸಕಾರಣ ಮಾಹಿತಿಯ ಹಿಂಬರಹವಿಲ್ಲದೆ ಅರ್ಜಿಯನ್ನು ಮುಕ್ತಾಯಗೊಳಿಸುವಂತಿಲ್ಲ. ಸಾರ್ವಜನಿಕರ ಮನವಿಗಳಿಗೆ ಸೂಕ್ತ ಹಾಗೂ ಶೀಘ್ರ ಪರಿಹಾರ ಕಲ್ಪಿಸಲು ಸರ್ಕಾರ ಬದ್ಧವಾಗಿದೆ. ಹೀಗಾಗಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು ಎಂದು ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್ ಎಲ್ಲ ಇಲಾಖೆ ಮುಖ್ಯಸ್ಥರಿಗೆ ಲಿಖಿತ ಆದೇಶ ಹೊರಡಿಸಿದ್ದಾರೆ.

ತಪ್ಪು ಮರುಕಳಿಸುವಂತಿಲ್ಲ: ಇನ್ಮುಂದೆ ಯಾವುದೇ ಅರ್ಜಿಗಳನ್ನು ಪರಿಶೀಲನೆ ನಡೆಸದೆ ಮುಕ್ತಾಯಗೊಳಿಸಿದ್ದೇವೆ ಎಂಬ ಕಲಂಗೆ ಹಾಕುವಂತಿಲ್ಲ. ಈ ತಪ್ಪು ಪುನರಾವರ್ತನೆಯಾಗದಂತೆ ಆಯಾ ಇಲಾಖಾ ಮುಖ್ಯಸ್ಥರುಗಳು ಗಮನಹರಿಸಬೇಕು. ಪ್ರಸ್ತುತ ಪರಿಶೀಲನೆ ನಡೆಸದೆ ಮುಕ್ತಾಯಗೊಳಿಸಲಾಗಿದೆ ಎಂದು ‘ಪರಿಹರಿಸಲಾಗಿದೆ’ ಕಲಂಗೆ ಅಪ್​ಲೋಡ್ ಮಾಡಿರುವ ಅರ್ಜಿಗಳನ್ನು ಪುನಃ ಪೆಂಡಿಂಗ್ ಕಲಂಗೆ ಒಂದು ಬಾರಿಗೆ ಮಾತ್ರ ವರ್ಗಾಯಿಸಲಾಗುತ್ತಿದೆ. ಆ ಅರ್ಜಿಗಳ ವಿಲೇವಾರಿಗೆ ಕ್ರಮ ಕೈಗೊಳ್ಳುವಂತೆ ಸೂಚನೆ ಕೊಡಲಾಗಿದೆ.

ಅನುಷ್ಠಾನ ಯಾರ ಜವಾಬ್ದಾರಿ?: ಸರ್ಕಾರದ ಎಲ್ಲ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು, ಡಿಸಿಗಳು, ಸಿಇಒ, ಎಸ್ಪಿಗಳು, ನಿಗಮ ಮಂಡಳಿ ಎಂಡಿಗಳು, ಜಿಲ್ಲಾ ಹಾಗೂ ತಾಲೂಕು ಮಟ್ಟದ ಮುಖ್ಯಸ್ಥರು, ಆಯುಕ್ತರು, ನಿರ್ದೇಶಕರಿಗೆ ಆದೇಶ ಪಾಲಿಸಲು ಸೂಚಿಸಲಾಗಿದೆ.

ಆದೇಶವೇನಿದೆ?

ಸಿಎಂ ಕಡೆಯಿಂದ ಬರುವ ಪ್ರತಿ ಅರ್ಜಿಯನ್ನೂ ಪರಿಶೀಲಿಸಿ ತಾತ್ವಿಕ ಅಂತ್ಯ ಕಲ್ಪಿಸಿದ ನಂತರವೇ ವೆಬ್​ಸೈಟ್​ನ ಪರಿಹರಿಸಲಾಗಿದೆ (ರಿಸಾಲ್ವ್) ಕಲಂನಲ್ಲಿ ಅಪ್​ಲೋಡ್ ಮಾಡಬೇಕು. ಒಂದು ವೇಳೆ ಆ ಅರ್ಜಿಗಳಿಗೆ ಪರಿಹಾರ ಕಲ್ಪಿಸಲು ನಿಯಮಗಳಲ್ಲಿ ಅವಕಾಶವಿಲ್ಲದಿದ್ದಲ್ಲಿ ಸೂಕ್ತ ಹಿಂಬರಹದೊಂದಿಗೆ ತಿರಸ್ಕೃತ (ರಿಜೆಕ್ಟ್) ಕಲಂನಲ್ಲಿ ಅಪ್​ಲೋಡ್ ಮಾಡಬೇಕು. ಪ್ರಕ್ರಿಯೆ ಪ್ರಗತಿಯಲ್ಲಿದ್ದರೆ ಪೆಂಡಿಂಗ್ ಕಲಂನಲ್ಲಿ ಅಪ್​ಲೋಡ್ ಮಾಡಬೇಕು ಎಂದು ಸ್ಪಷ್ಟವಾಗಿ ಸೂಚಿಸಲಾಗಿದೆ.
ಕೃಪೆ:ವಿಜಯವಾಣಿ

ಮುಖ್ಯಮಂತ್ರಿ ದಾರಿ ತಪ್ಪಿಸುವ ಆಫೀಸರ್ಸ್: ಸಿಎಂ ಸೂಚಿಸಿದರೂ ಜನರ ದೂರಿಗಿಲ್ಲ ಪರಿಹಾರ
cm-hd-kumaraswamy-govt-officers-janatha-darshan-grama-vatsavya-state-govt