ಬಿಜೆಪಿಗೆ ಚೆಕ್ ​ಮೇಟ್: ಪಕ್ಷೇತರರಿಗೆ ಚಾನ್ಸ್ , ಕಮಲ ಪಾಳಯಕ್ಕೆ ದೋಸ್ತಿಗಳ ಶಾಕ್

kannada t-shirts

ಬೆಂಗಳೂರು:ಜೂ-9: ರಾಜ್ಯದಲ್ಲಿ ಅತಿ ದೊಡ್ಡ ಪಕ್ಷವಾಗಿ ಸರ್ಕಾರ ರಚಿಸಲು ಕಾತುರದಿಂದ ಕಾಯುತ್ತಿದ್ದ ರಾಜ್ಯ ಬಿಜೆಪಿ ನಾಯಕರಿಗೆ ಉಭಯ ಪಕ್ಷಗಳ ಮುಖಂಡರು ತಂತ್ರಗಾರಿಕೆ ನಡೆಯಿಂದ ಬಿಸಿ ಮುಟ್ಟಿಸಿದ್ದಾರೆ.

ಕಾಂಗ್ರೆಸ್-ಜೆಡಿಎಸ್​ನ ಅತೃಪ್ತ ಶಾಸಕರ ಬೆಂಬಲದೊಂದಿಗೆ ಸರ್ಕಾರ ರಚಿಸಬಹುದೆಂಬ ಬಿಜೆಪಿ ಹಾದಿ ಬಹುತೇಕ ಮುಚ್ಚಿದಂತಾಗಿದ್ದು, ಮುಂದಿನ ದಿನಗಳಲ್ಲಿ ದೋಸ್ತಿ ಪಕ್ಷಗಳಲ್ಲಿ ವಿರಸ ಹೆಚ್ಚಾಗಿ ಸಂಬಂಧ ಹಳಸಿದರಷ್ಟೇ ಒಂದು ಅವಕಾಶ ಸಿಗಬಹುದು.

ಲೋಕಸಭೆ ಚುನಾವಣೆ ಬಳಿಕ ಪಕ್ಷದ ಪರ ಜನಾಭಿಪ್ರಾಯ ಇರುವುದನ್ನು ಸ್ಪಷ್ಟವಾಗಿ ಅರಿತಿದ್ದ ಬಿಜೆಪಿ ಕೇಂದ್ರ ನಾಯಕರು, ರಾಜ್ಯದಲ್ಲಿ ಸರ್ಕಾರ ರಚಿಸುವ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಿರಲಿಲ್ಲ. ಹಾಗೆಯೇ ತಾವೂ ಆತುರ ಮಾಡಬೇಡಿ ಎಂದು ರಾಜ್ಯ ನಾಯಕರಿಗೆ ಸೂಚನೆ ನೀಡಿದ್ದರು. ಈ ಕಾಲಾವಕಾಶ ಬಳಸಿಕೊಂಡ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಬಿಜೆಪಿ ಇನ್ನು ಸದ್ಯಕ್ಕೆ ಸರ್ಕಾರ ರಚಿಸದಂತೆ ಮಾಡುವ ದಾಳ ಉರುಳಿಸಿದ್ದಾರೆ. ಅಂದರೆ, ಬಿಜೆಪಿಗೆ ಸರ್ಕಾರ ರಚಿಸುವ ಕನಸು ಮತ್ತಷ್ಟು ದೂರದ ಮಾತು ಎಂಬಂತಾಗಿದೆ.

ಬಿಜೆಪಿಗೆ ಸರ್ಕಾರ ರಚಿಸಲು ಅವಕಾಶವೇ ಇಲ್ಲ ಎಂದೇನಿಲ್ಲ. ಒಂದು ವೇಳೆ ಕಾಂಗ್ರೆಸ್-ಜೆಡಿಎಸ್ ಸಖ್ಯ ಕಡಿದುಕೊಂಡರೆ ಬಿಜೆಪಿಗೆ ಅವಕಾಶ ಸಿಗಬಹುದು. ಪ್ರಸ್ತುತ ಸನ್ನಿವೇಶದಲ್ಲಂತೂ ಕಾಂಗ್ರೆಸ್ ಮತ್ತು ಜೆಡಿಎಸ್​ನ ರಾಜ್ಯ ನಾಯಕರಿಗೆ ಸರ್ಕಾರದಲ್ಲಿರುವುದೇ ಒಳಿತೆಂಬ ಅಭಿಪ್ರಾಯವಿದೆ. ಈ ಕಾರಣಕ್ಕೆ ಕಾಂಗ್ರೆಸ್ ರಾಜ್ಯ ನಾಯಕತ್ವ ತನ್ನ ಪಕ್ಷದ ಅಸಮಾಧಾನಿತರು, ಅತೃಪ್ತರ ಮನವೊಲಿಸಿಕೊಂಡು ಸರ್ಕಾರದ ರಥ ಇನ್ನಷ್ಟು ದಿನ ಎಳೆಯುವುದಂತೂ ನಿಚ್ಚಳವಾಗಿದೆ.

224 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ 105 ಸ್ಥಾನಗಳೊಂದಿಗೆ ಅತಿ ದೊಡ್ಡ ಪಕ್ಷವಾಗಿದೆ. ಈ ಪಕ್ಷಕ್ಕೆ ಸರಳ ಬಹುಮತ ತೋರಿಸಲು ಇನ್ನು ಕನಿಷ್ಠ 8 ಶಾಸಕರು ಬೇಕು. ಪಕ್ಷೇತರ ಶಾಸಕರನ್ನು ತನ್ನತ್ತ ಸೆಳೆದು ಸಂಖ್ಯೆ 107ಕ್ಕೆ ಏರಿಸಿಕೊಂಡು, ಬಳಿಕ ಕಾಂಗ್ರೆಸ್-ಜೆಡಿಎಸ್​ನ ಬಲ 117ರಿಂದ 106ಕ್ಕೆ ತರುವುದು ಬಿಜೆಪಿ ಲೆಕ್ಕಾಚಾರವಾಗಿತ್ತು. ಅಂದರೆ ಆಡಳಿತ ಪಕ್ಷದ 11 ಅತೃಪ್ತ ಶಾಸಕರಿಂದ ರಾಜೀನಾಮೆ ಕೊಡಿಸಿದ್ದರೆ ಸಾಕಿತ್ತು. ಈಗ ಇಬ್ಬರು ಪಕ್ಷೇತರ ಶಾಸಕರು ಮೈತ್ರಿ ಸರ್ಕಾರದಲ್ಲಿ ಸಚಿವರಾಗುವುದರಿಂದ ಬಿಜೆಪಿಗೆ ಗುರಿಯ ದೂರ ಹೆಚ್ಚಾದಂತಾಗಿದೆ.

ಈಗಿರುವ ಸರ್ಕಾರ ಬೀಳಿಸಿ ತಕ್ಷಣಕ್ಕೆ ಅಧಿಕಾರಕ್ಕೆ ಏರಬೇಕೆಂದರೆ ಮೈತ್ರಿ ಪಕ್ಷದ ಬಲಾಬಲವನ್ನು ಬಿಜೆಪಿ 104ಕ್ಕೆ ಇಳಿಸಬೇಕು. ಆದರೆ ಕಾಂಗ್ರೆಸ್-ಜೆಡಿಎಸ್ ಬಿಟ್ಟು ಶಾಸಕರು ದೊಡ್ಡ ಸಂಖ್ಯೆಯಲ್ಲಿ ಪಕ್ಷಾಂತರ ಮಾಡುವ ಸನ್ನಿವೇಶವಂತೂ ಇಲ್ಲ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ದೊಡ್ಡಮಟ್ಟದ ವಿಜಯ ದಾಖಲಿಸಿದ್ದರೂ ಪೌರಸಂಸ್ಥೆ ಚುನಾವಣೆಯಲ್ಲಿ ವಿಫಲವಾಗಿತ್ತು. ಹೀಗಾಗಿ ಶಾಸಕರು ದೊಡ್ಡಮಟ್ಟದಲ್ಲಿ ಪಕ್ಷ ತೊರೆಯುವ ಸಾಧ್ಯತೆ ಇಲ್ಲ.

ಪಕ್ಷೇತರರಿಗೆ ಮಾತ್ರ ಏಕೆ?

ಶಂಕರ್ ಈ ಹಿಂದೆ ಮೈತ್ರಿ ಸರ್ಕಾರದಲ್ಲಿ ಸಚಿವರಾಗಿದ್ದವರು. ಸಂಪುಟ ಪುನಾರಚನೆ ವೇಳೆ ಅವರನ್ನು ಕೈಬಿಡಲಾಗಿತ್ತು. ಆಗ ಅವರು ಬಿಜೆಪಿ ಕದ ತಟ್ಟಿದ್ದರು. ಜತೆಗೆ ಸರ್ಕಾರಕ್ಕೆ ಕೊಟ್ಟಿದ್ದ ಬೆಂಬಲ ವಾಪಸ್ ಪಡೆದು ಬಿಜೆಪಿ ಬೆಂಬಲಿಸುವುದಾಗಿ ಹೇಳಿಕೆ ನೀಡಿದ್ದರು. ಮುಳಬಾಗಿಲು ಶಾಸಕ ನಾಗೇಶ್ ಸಹ ಕಾಂಗ್ರೆಸ್ ಅತೃಪ್ತ ಶಾಸಕರ ಜತೆ ಕಾಣಿಸಿಕೊಂಡಿದ್ದು, ಮೈತ್ರಿ ನಾಯಕರನ್ನು ಕಂಗಾಲು ಮಾಡಿದ್ದರು. ಈ ಕಾರಣಕ್ಕೆ ಅವರಿಗೆ ಸಚಿವ ಸ್ಥಾನ ನೀಡುವ ಮೂಲಕ ಇಬ್ಬರನ್ನು ಬಿಜೆಪಿಯತ್ತ ವಾಲದಂತೆ ನೋಡಿಕೊಳ್ಳಲು ಮೈತ್ರಿ ನಾಯಕರಿಬ್ಬರೂ ತಂತ್ರ ರೂಪಿಸಿದ್ದರು. ಇನ್ನು ಕಾಂಗ್ರೆಸ್​ನಲ್ಲಿ ಗುಡುಗುತ್ತಿರುವ ಹಿರಿಯ ನಾಯಕರಾದ ರೋಷನ್ ಬೇಗ್, ರಾಮಲಿಂಗಾರೆಡ್ಡಿ, ಎಚ್.ಕೆ. ಪಾಟೀಲ್ ಆದಿಯಾಗಿ ಯಾವ ಶಾಸಕರೂ ಪಕ್ಷ ಬಿಡುವುದಿಲ್ಲ ಎಂದರಿತೇ ಮೈತ್ರಿ ನಾಯಕರು ಪಕ್ಷೇತರರಿಗೆ ಸಚಿವ ಸ್ಥಾನ ನೀಡಿ ಅವರನ್ನು ಮೊದಲು ಕಟ್ಟಿಹಾಕಿದ್ದಾರೆ.

ಬಿಜೆಪಿ ಕಚೇರಿಗೆ ಸುಮಲತಾ: ಸಂಘಟನಾ ಕಾರ್ಯದರ್ಶಿಗಳ ಜತೆ ಮಾತುಕತೆ

ಬೆಂಗಳೂರು: ಮಂಡ್ಯ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಜಯಿಸಿದ ಸುಮಲತಾ ಅಂಬರೀಷ್ ಇದೇ ಮೊದಲ ಬಾರಿಗೆ ರಾಜ್ಯ ಬಿಜೆಪಿ ಕಚೇರಿಗೆ ಶನಿವಾರ ದಿಢೀರ್ ಭೇಟಿ ನೀಡಿದ್ದು, ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ. ರಾಷ್ಟ್ರೀಯ ಜಂಟಿ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರಿಗೆ ಕರೆ ಮಾಡಿದ ಸುಮಲತಾ, ಭೇಟಿ ಇಂಗಿತ ವ್ಯಕ್ತಪಡಿಸಿದ್ದಾರೆ. ನಗರದಲ್ಲೇ ಇದ್ದ ಸಂತೋಷ್ ಇದಕ್ಕೆ ಸಮ್ಮತಿಸಿದ್ದು, ನಿರ್ವಪಕ ರಾಕ್​ಲೈನ್ ವೆಂಕಟೇಶ್ ಜತೆಗೂಡಿ 30 ನಿಮಿಷಗಳಲ್ಲೇ ಕಚೇರಿಗೆ ಆಗಮಿಸಿದ್ದಾರೆ. ಸುಮಾರು 30 ನಿಮಿಷ ಸಂತೋಷ್ ಮತ್ತು ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್​ಕುಮಾರ್ ಜತೆ ರ್ಚಚಿಸಿ ತೆರಳಿದ್ದಾರೆ. ಸಭೆ ಕುರಿತು ನಿಖರ ಮಾಹಿತಿ ಹೊಂದಿರುವವರ ಪ್ರಕಾರ, ವಿಶೇಷವಾಗಿ ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ. ಒಟ್ಟಾರೆ ಚುನಾವಣೆ ನಡೆದ ರೀತಿ, ಬಿಜೆಪಿಯಿಂದ ಸಿಕ್ಕ ಸಹಕಾರ, ಕೇಂದ್ರದಲ್ಲಿ ಬಿಜೆಪಿಯ ಅಭೂತಪೂರ್ವ ಫಲಿತಾಂಶದ ಬಗ್ಗೆಯೇ ಮಾತುಗಳನ್ನಾಡಿದ್ದಾರೆ. ಭೇಟಿ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಸುಮಲತಾ, ಮಂಡ್ಯ ಚುನಾವಣೆಯಲ್ಲಿ ಬಿಜೆಪಿಯಿಂದ ಸಾಕಷ್ಟು ಬೆಂಬಲ ಸಿಕ್ಕಿದೆ. ಗೆದ್ದ ನಂತರ ಎಲ್ಲರಿಗೂ ಕೃತಜ್ಞತೆ ಹೇಳುತ್ತಿದ್ದೇನೆ. ಜತೆಗೆ ಮಂಡ್ಯ ಅಭಿವೃದ್ಧಿಗೆ ಬೆಂಬಲ ಕೋರಲು ಬಂದಿದ್ದೇನೆ ಎಂದರು.

ಕಾಂಗ್ರೆಸ್ ಗಮನ ಸೆಳೆಯುವ ಪ್ರಯತ್ನ?

ಮಂಡ್ಯದಲ್ಲಿ ತಾವಾಗಲಿ ಅಥವಾ ಪುತ್ರ ಅಭಿಷೇಕ್ ಆಗಲಿ ಭವಿಷ್ಯದಲ್ಲಿ ರಾಜಕಾರಣ ಮಾಡಲು ಬಿಜೆಪಿಗಿಂತ ಕಾಂಗ್ರೆಸ್ ಅನಿವಾರ್ಯ ಎಂದು ಅರಿತಿರುವ ಸುಮಲತಾ, ಆ ಪಕ್ಷದ ಗಮನ ಸೆಳೆಯುವ ಪ್ರಕ್ರಿಯೆಯ ಭಾಗ ಇದು ಎಂದು ಬಿಜೆಪಿ ನಾಯಕರೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ಹಿಂದಿನಿಂದಲೂ, ಈಚೆಗೆ ಸಂದರ್ಶನವೊಂದರಲ್ಲೂ ಕಾಂಗ್ರೆಸ್ ಬಗ್ಗೆ ಸುಮಲತಾ ಮೃದು ಧೋರಣೆಯ ಮಾತನಾಡಿದ್ದಾರೆ. ಬಿಜೆಪಿ ಜತೆ ಸಂಪರ್ಕದಲ್ಲಿದ್ದಾರೆ ಎಂಬ ಸಂದೇಶ ರವಾನೆಯಾದರೆ ಕಾಂಗ್ರೆಸ್​ನಲ್ಲಿ ಅವಕಾಶ ಸೃಷ್ಟಿಯಾಗುತ್ತದೆ ಎಂಬ ದೂರಾಲೋಚನೆ ಇರಬಹುದುದೆಂದು ಮೂಲಗಳು ತಿಳಿಸಿವೆ.
ಕೃಪೆ:ವಿಜಯವಾಣಿ

ಬಿಜೆಪಿಗೆ ಚೆಕ್​ವೇಟ್: ಪಕ್ಷೇತರರಿಗೆ ಚಾನ್ಸ್ , ಕಮಲ ಪಾಳಯಕ್ಕೆ ದೋಸ್ತಿಗಳ ಶಾಕ್
cm-hd-kumaraswamy-congress-jds-alliance-bjp-cabinet-expansion

website developers in mysore