ಹಿರಿಯ ಪತ್ರಕರ್ತ ಸಿ.ಎಂ ರಾಮಚಂದ್ರ ನಿಧನಕ್ಕೆ  ಸಿಎಂ ಹೆಚ್.ಡಿ ಕುಮಾರಸ್ವಾಮಿ ಮತ್ತು ಸಚಿವ ಜಿ.ಟಿ ದೇವೇಗೌಡರಿಂದ ಸಂತಾಪ

ಬೆಂಗಳೂರು, ಜು,12,2019(www.justkannada.in):  ದಿ ಹಿಂದೂ ಪತ್ರಿಕೆಯ ಎಡಿಟೋರಿಯಲ್ ರೆಪ್ರೆಸೆಂಟೇಟಿವ್  ಆಗಿದ್ದ ಹಿರಿಯ ಪತ್ರಕರ್ತ ಸಿ. ಎಂ. ರಾಮಚಂದ್ರ ಅವರ ನಿಧನಕ್ಕೆ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಅವರು ತೀವ್ರ  ವ್ಯಕ್ತಪಡಿಸಿದ್ದಾರೆ.

96 ವರ್ಷಗಳ ತುಂಬು ಜೀವನ ನಡೆಸಿದ ಅವರು ಕೊನೆಯವರೆಗೂ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದರು. ರಾಜಕೀಯ ವಿದ್ಯಮಾನಗಳ ವಸ್ತುನಿಷ್ಠ ವಿಶ್ಲೇಷಣೆ, ಆಡಳಿತ, ನೀತಿ ನಿರೂಪಣೆ ಕುರಿತು ಅಧಿಕಾರಯುತವಾಗಿ ಬರೆಯಬಲ್ಲವರಾಗಿದ್ದರು. ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ತಮ್ಮ ಪತ್ರಿಕಾ ವೃತ್ತಿ ಪ್ರಾರಂಭಿಸಿದ ಅವರು ದಿ ಹಿಂದೂ ಪತ್ರಿಕೆಯಲ್ಲಿ 4 ದಶಕಗಳ ಸುದೀರ್ಘ ಸೇವೆ ಸಲ್ಲಿಸಿದ್ದು, ನಾಡಿನ ಅತ್ಯಂತ ಹಿರಿಯ ಹಾಗೂ ಮೇರು ವ್ಯಕ್ತಿತ್ವದ  ಪತ್ರಕರ್ತರು ಅವರಾಗಿದ್ದರು.

ವಿವಿಧ ವಿಷಯಗಳ ಕುರಿತು 15 ಪುಸ್ತಕಗಳನ್ನು ಬರೆದಿರುವ ಅವರ ಪುಸ್ತಕವೊಂದು ಒಂದೂವರೆ ತಿಂಗಳ ಹಿಂದೆಯಷ್ಟೇ ಸ್ಪೀಕರ್ ಅವರು  ಪುಸ್ತಕ ಬಿಡುಗಡೆ ಮಾಡಿದ್ದು ಇನ್ನೂ ಹಸಿರಾಗಿರುವಾಗಲೇ ಅವರ ನಿಧನದ ವಾರ್ತೆ ದುಃಖ ತಂದಿದೆ. ಅವರ   ನಿಧನದಿಂದ ಮೌಲ್ಯಾಧಾರಿತ ಪತ್ರಿಕೋದ್ಯಮದ ಕೊಂಡಿಯೊಂದು ಕಳಚಿದಂತಾಗಿದೆ. ಮೃತರ ಆತ್ಮಕ್ಕೆ ಸದ್ಗತಿ ದೊರೆಯಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಸಚಿವ ಜಿ.ಟಿ ದೇವೇಗೌಡರಿಂದ ಸಂತಾಪ…

ನಾಡಿನ‌ ಹಿರಿಯ ಪತ್ರಕರ್ತರಾಗಿದ್ದ  ಸಿ.ಎಂ ರಾಮಚಂದ್ರ ಅವರ ನಿಧನಕ್ಕೆ ಸಚಿವ ಜಿಟಿ ದೇವೇಗೌಡರು ಸಂತಾಪ ಸೂಚಿಸಿದ್ದಾರೆ.

ಸಿ.ಎಂ ರಾಮಚಂದ್ರ ಅವರ ನಿಧನ ರಾಜ್ಯದ ಮಾಧ್ಯಮ ರಂಗಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ದಿ ಹಿಂದೂ ಪತ್ರಿಕೆಯ ಸಂಪಾದಕರಾಗಿ ತಮ್ಮ ಮೌಲಿಕ ಮತ್ತು ವಸ್ತುನಿಷ್ಠ  ಬರಹಗಳಿಂದ ಸಿಎಂ ರಾಮಚಂದ್ರ ಹೆಸರಾಗಿದ್ದರು. ಅವರಿಂದ ಅನೇಕ ಕಿರಿಯ ಪತ್ರಕರ್ತರು ಮಾರ್ಗದರ್ಶನ ಪಡೆಯುತ್ತಿದ್ದರು. ಪತ್ರಿಕೋದ್ಯಮದ ಘನತೆಯನ್ನು ಹೆಚ್ಚಿಸಿದ ಸಿಎಂ ರಾಮಚಂದ್ರ ಅವರಿಗೆ ಕರ್ನಾಟಕ ಪತ್ರಿಕಾ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ದೊರೆತಿದ್ದವು. ಅವರ ನಿಧನದಿಂದ ಕರ್ನಾಟಕ ಪತ್ರಿಕಾ ಕ್ಷೇತ್ರ ಒಬ್ಬ ಧೀಮಂತ ಪತ್ರಕರ್ತರನ್ನು ಕಳೆದುಕೊಂಡಿದೆ. ಇವರ ಆತ್ಮಕ್ಕೆ ಸದ್ಗತಿ ಸಿಗಲಿ ಮತ್ತು ಇವರ ಕುಟುಂಬದ ಸದಸ್ಯರಿಗೆ ಶೋಕ ಭರಿಸುವ ಶಕ್ತಿ ನೀಡಲೆಂದು ತಾಯಿ ಚಾಮುಂಡೇಶ್ವರಿಯಲ್ಲಿ ಪ್ರಾರ್ಥಿಸುತ್ತೇನೆ‌ ಎಂದು ಸಚಿವ ಜಿ.ಟಿ ದೇವೇಗೌಡ ತಿಳಿಸಿದ್ದಾರೆ.

Key words:CM HD Kumaraswamy – Condolences – death -journalist -CM Ramachandra