ಸಿಎಂ ಬಿಎಸ್ ವೈಗೆ ರೈತರನ್ನ ರಕ್ಷಣೆ ಮಾಡಲು ಸಾಧ್ಯವಾಗಲಿಲ್ಲ: ಈ ಸರ್ಕಾರ ಬೇಕಾ..?- ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್…

ಮಂಡ್ಯ,ಅಕ್ಟೋಬರ್,10,2020(www.justkannada.in): ಯಡಿಯೂರಪ್ಪ ಅವರು ಹಸಿರು ಟವಲ್ ಹಾಕಿಕೊಂಡು ರೈತರನ್ನು ಉಳಿಸುತ್ತೇನೆ ಎಂದು ಪ್ರಮಾಣ ಮಾಡಿದ್ದರು. ಆದರೆ ಈ ರೈತರ ರಕ್ಷಣೆ ಮಾಡಲು ಸಾಧ್ಯವಾಗಲಿಲ್ಲ. ಈ ಸರ್ಕಾರ ಯಾಕೆ ಇರಬೇಕು? ಈ ಸರ್ಕಾರಕ್ಕೆ ರೈತ ಸಮುದಾಯ ಯಾಕೆ ಬೆಂಬಲವಾಗಿ ನಿಲ್ಲಬೇಕು..? ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪ್ರಶ್ನಿಸಿದರು.jk-logo-justkannada-logo

ಮಂಡ್ಯದ ರೈತ ಧ್ವನಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ  ಡಿ.ಕೆ ಶಿವಕುಮಾರ್, ಇದು ಭಾಷಣ ಮಾಡುವ ಸಂದರ್ಭ ಅಲ್ಲ, ಚರ್ಚೆ ಮಾಡುವ ಕಾಲ. ಈ ರೈತನಿಗೆ ಸಂಬಳ ಇಲ್ಲ, ಪ್ರಮೋಷನ್ ಇಲ್ಲ, ಲಂಚ ಸಿಗಲ್ಲ, ನಿವೃತ್ತಿ ಇಲ್ಲ. ಈ ರೈತರನ್ನು ನಾವು ಕಾಪಾಡಬೇಕು. ಇಡೀ ವಿಶ್ವದಲ್ಲಿ ರೈತರಿಗೆ ಯಾವುದೇ ಜಾತಿ, ಧರ್ಮ ಇಲ್ಲ ಅಂತಾ ನಾನು ಆಗಾಗ್ಗೆ ಹೇಳುತ್ತಿರುತ್ತೇನೆ. ಈ ದೇಶದ ಸಂಸ್ಕೃತಿಯನ್ನು ಉಳಿಸಿಕೊಂಡು ಬರುತ್ತಿರುವವನು ಅನ್ನದಾತ. ಈ ದೇಶದ ಭೂಮಿ ಕಾಪಾಡಿಕೊಂಡು ಬಂದ ರೈತನನ್ನು, ಮಣ್ಣಿನ ಮಕ್ಕಳನ್ನು ಸ್ಮರಿಸಲು ನಾವಿಲ್ಲಿ ಸೇರಿದ್ದೇವೆ ಎಂದರು.

ಕಾಂಗ್ರೆಸ್ ರಾಜಕೀಯ ಪಕ್ಷವೇ ಆಗಿದ್ದರೂ, ಇಲ್ಲಿ ಪಕ್ಷದ ಬಾವುಟ ಹಾಕಿಕೊಂಡು ಈ ಕಾರ್ಯಕ್ರಮ ಮಾಡುತ್ತಿಲ್ಲ. ಈ ತ್ರಿವರ್ಣ ಧ್ವಜ ದೇಶದ ಬಾವುಟ. ಇದಕ್ಕೆ ಒಂದು ಇತಿಹಾಸ ಇದೆ. ಆದರೆ ಸ್ವಾಭಿಮಾನ, ಶಕ್ತಿ ಇರುವುದು ಈ ಹಸಿರು ಬಾವುಟದಲ್ಲಿ. ಈ ರೈತರನ್ನು ಉಳಿಸಲು ನಾವು ಹೋರಾಟ ಮಾಡುತ್ತಿದ್ದೇವೆ.  ದೇಶದಲ್ಲಿ ಕಾಂಗ್ರೆಸ್ 60-70 ವರ್ಷಗಳ ಕಾಲ ಅಧಿಕಾರ ಮಾಡಿದೆ. ನಾವು ಎಲ್ಲವನ್ನೂ ಸರಿ ಮಾಡಿದ್ದೇವೆ ಎಂದು ಹೇಳುವುದಿಲ್ಲ. ಸಾಕಷ್ಟು ತಪ್ಪುಗಳನ್ನು ತಿದ್ದುಕೊಂಡಿದ್ದೇವೆ. ಕಾಲಕಾಲಕ್ಕೆ ಬದಲಾವಣೆ ಮಾಡಿಕೊಂಡು ಬಂದಿದ್ದೇವೆ. ಜನರ ಧ್ವನಿ ಮತ್ತು ರೈತರ ಧ್ವನಿಯನ್ನು ಗಮನದಲ್ಲಿಟ್ಟುಕೊಂಡು ನಾವು ಕಾನೂನುಗಳನ್ನು ತಿದ್ದುಪಡಿ ಮಾಡಿದ್ದೇವೆ ಎಂದು ಡಿ.ಕೆ ಶಿವಕುಮಾರ್ ತಿಳಸಿದರು.

ರೈತರು ಇಂದು ರಸ್ತೆಗಿಳಿದಿರುವುದು ಯಾಕೆ? ನಿಮ್ಮ ಜಿಲ್ಲೆಯಲ್ಲಿ ಯಾರಾದರೂ ಒಬ್ಬ ರೈತ ನೆಮ್ಮದಿಯಾಗಿದ್ದಾನಾ? ವರ್ತಕರು, ಕಾರ್ಮಿಕರು ನೆಮ್ಮದಿಯಾಗಿದ್ದಾರಾ? ಯುವಕರು, ವಿದ್ಯಾರ್ಥಿಗಳು ಸಮಾಧಾನದಿಂದ ಇದ್ದಾರಾ? ಯಾವುದಾದರು ಒಂದು ವರ್ಗ ನೆಮ್ಮದಿಯಾಗಿದೆ ಎಂದು ಹೇಳಲು ಸಾಧ್ಯವಿದೆಯಾ? ದೆಹಲಿಯಲ್ಲಿರುವ ಕೆಲವು ಶ್ರೀಮಂತರು ಸೇರಿದಂತೆ ದೇಶದಲ್ಲಿ ಹೆಚ್ಚೆಂದರೆ 100 ಮಂದಿ ಉದ್ಯಮಿಗಳು ಮಾತ್ರ ನೆಮ್ಮದಿಯಾಗಿದ್ದಾರೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಜನ ನೊಂದು ಬೇಯುತ್ತಿದ್ದಾರೆ. ಜನ ತಮ್ಮ ಮನೆಗೆ ಬಾಡಿಗೆ ಕಟ್ಟಲು ಆಗುತ್ತಿಲ್ಲ. ಕೊರೋನಾ ಸಮಯದಲ್ಲಿ ರೈತರ ಬದುಕು ಹಿಂಡಿ, ಹಿಪ್ಪೆಯಾಯಿತು. ರೈತರನ್ನು ಗಾಣದಲ್ಲಿ ಹಾಕಿ ಅರೆದಿದ್ದಾರೆ. ರೈತರು ಕ್ಯಾರೆಟ್ ಅನ್ನು ಕೆ.ಜಿಗೆ 2 ರೂಪಾಯಿ, ದ್ರಾಕ್ಷಿಯನ್ನು 5 ರೂಪಾಯಿಗೆ ತೆಗೆದುಕೊಂಡು ಹೋಗಿ ಅಂತಾ ಹೇಳುತ್ತಿದ್ದರು. ಈ ಪರಿಸ್ಥಿತಿಯಲ್ಲಿ ಸರ್ಕಾರ ಒಬ್ಬ ರೈತನಿಗೆ ಸಹಾಯ ಮಾಡಲಿಲ್ಲ. ಆತನ ನಷ್ಟ ಎಷ್ಟು ಎಂದು ತಿಳಿಯಲಿಲ್ಲ. ಆತನಿಗೆ ಬೆಂಬಲ ಬೆಲೆ ನೀಡಲಿಲ್ಲ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.cm-bs-yeddyurappa-not-protect-farmers-kpcc-president-dk-sivakumar

ಸರ್ಕಾರ ಕಾರ್ಯಕ್ರಮಗಳನ್ನು ಘೋಷಣೆ ಮಾಡಿತಾದರೂ, ನುಡಿದಂತೆ ನಡೆಯಲು ಸಾಧ್ಯವಾಗಲಿಲ್ಲ. ಬೆಂಬಲ ಬೆಲೆ ನೀಡಲಿಲ್ಲ ಅಂದ ಮೇಲೆ ಈ ಸರ್ಕಾರ ನಮಗೆ ಬೇಕಾ? ಎಂದು ಪ್ರಶ್ನಿಸಿದ ಡಿ.ಕೆ ಶಿವಕುಮಾರ್, ನಿಮ್ಮ ಜಿಲ್ಲೆಯ ಕಾರ್ಖಾನೆಯನ್ನು ಬಂಡವಾಳಶಾಹಿಗಳಿಗೆ ಮಾರಿದ್ದಾರೆ. ಈ ಕಾರ್ಖಾನೆಯನ್ನು ನಾವು ಉಳಿಸಿಕೊಂಡು ಬಂದಿದ್ದೆವು. ಸಿದ್ದರಾಮಯ್ಯ ಅವರು ಈ ಕಾರ್ಖಾನೆ ಉಳಿಸಲು ಕೋಟ್ಯಂತರ ರೂಪಾಯಿ ಕೊಟ್ಟಿದ್ದರು.

ಖಾಸಗಿಯವರು ಕಾರ್ಖಾನೆ ನಡೆಸಬಹುದಾದರೆ ಸರ್ಕಾರಕ್ಕೆ ಏಕೆ ಆಗಲ್ಲ? ನಿಮಗೆ ಯಾವುದೇ ಶಾಸಕರನ್ನು ಕೊಡಲಿಲ್ಲ, ನಿಮಗೆ ಬೆಂಬಲ ನೀಡಲಿಲ್ಲಾ ಅಂತಾ ಮಂಡ್ಯದ ಆಸ್ತಿಯನ್ನು ನಿಮ್ಮ ಪಕ್ಷದ ಕಾರ್ಯಕರ್ತರಿಗೆ ಮಾರಿದಿರಲ್ಲಾ, ಇದನ್ನು ನಾವು ನೋಡಿಕೊಂಡು ನಾವು ಸುಮ್ಮನೆ ಕೂರಬೇಕಾ?jk-logo-justkannada-logo

ನಿಮ್ಮ ಧ್ವನಿಯನ್ನು ರಾಷ್ಟ್ರಕ್ಕೆ ಕಳುಹಿಸಲು ಈ ಕಾರ್ಯಕ್ರಮವನ್ನು ಇಲ್ಲಿ ನಡೆಸುತ್ತಿದ್ದೇವೆ. ಈ ಕಾರ್ಯಕ್ರಮದ ನಂತರ ನಿಮ್ಮ ಸಮಸ್ಯೆಯನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಗೆ ಮುಟ್ಟಿಸಲು ಸೋನಿಯಾ ಗಾಂಧಿ ಅವರು ಸಹಿ ಸಂಗ್ರಹ ಆಂದೋಲನ ನಡೆಸುತ್ತಿದ್ದು, ನೀವು ಸಹಿ ಹಾಕುವ ಮೂಲಕ ಇದರಲ್ಲಿ ಭಾಗವಹಿಸಿ. ಈ ತಿಂಗಳು 31ರಂದು ನಮ್ಮ ನಾಯಕಿ ಸೋನಿಯಾ ಗಾಂಧಿ ಅವರು ಈ ಕಾಯ್ದೆಗಳಿಂದ ಜನರಿಗೆ ಆಗುವ ಸಮಸ್ಯೆ ಕುರಿತು ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಿದ್ದಾರೆ.

ನಮ್ಮ ರಾಜ್ಯದಲ್ಲಿ ವಿಧಾನ ಪರಿಷತ್ ಸ್ಥಾಪನೆಯಾದ ಮೇಲೆ ಮೊದಲ ಬಾರಿಗೆ ಕಾಂಗ್ರೆಸ್ ಮೇಲ್ಮನೆಯಲ್ಲಿ ಮೂರು ಮಸೂದೆಗಳನ್ನು ಅಂಗೀಕಾರ ಮಾಡದೆ ವಾಪಸ್ ಕಳುಹಿಸಿದೆ. ಜನರ ಹಿತಾಸಕ್ತಿಗಾಗಿ ನಮ್ಮ ವಿಧಾನಪರಿಷತ್ ನಾಯಕರು ಮಾಡಿದ ಈ ಕಾರ್ಯಕ್ಕೆ ನಾನು ನಮಸ್ಕರಿಸುತ್ತೇನೆ. ಇದು ರೈತರಿಗೆ ಸಂಬಂಧಿಸಿದ ಮಸೂದೆ. ಹೀಗಾಗಿ ನಿಮ್ಮ ಧ್ವನಿಯಾಗಿ ನಮ್ಮ ನಾಯಕರು ಕೆಲಸ ಮಾಡಿದ್ದಾರೆ.

ಕಾಂಗ್ರೆಸ್ ಪಕ್ಷ ಉಳುವವನೇ ಭೂಮಿಯ ಒಡೆಯ ಎಂದು ಘೋಷಿಸಿ, ಉಳುವವನಿಗೆ ಭೂಮಿಯನ್ನು ಕೊಟ್ಟಿದೆ. ಆದರೆ ಈ ಸರ್ಕಾರ ಏನು ಮಾಡುತ್ತಿದೆ? ಕೃಷಿ ಭೂಮಿಯನ್ನು ಯಾರು ಬೇಕಾದರೂ ಖರೀದಿಸಬಹುದು ಅಂತಾ ಅವಕಾಶ ಕೊಟ್ಟಿದ್ದಾರೆ. ಆ ಮೂಲಕ ಯಡಿಯೂರಪ್ಪನವರು, ಅಶೋಕ್ ಅವರು ಸೇರಿ ಇಡೀ ರಾಜ್ಯ ಮಾರಲು ಹೊರಟಿದ್ದಾರೆ. ಇದರ ವಿರುದ್ಧ ನಿಮ್ಮ ಧ್ವನಿ ಇರಬೇಕಾಗಿದೆ. ನಿಮ್ಮ ಧ್ವನಿ ರಾಷ್ಟ್ರಕ್ಕೆ ಮುಟ್ಟಬೇಕಿದೆ.

ನಮ್ಮ ನಾಯಕರಾದ ರಾಹುಲ್ ಗಾಂಧಿ ಅವರು ನಿಮ್ಮ ಹೋರಾಟದಲ್ಲಿ ಕೈಜೋಡಿಸಲು ಮುಂದಿನ ತಿಂಗಳು ಇಲ್ಲಿಗೆ ಆಗಮಿಸಲಿದ್ದಾರೆ. ಅವರು ಬರುವ ದಿನಾಂಕವನ್ನು ನಾವು ಸದ್ಯದಲ್ಲೇ ಘೋಷಿಸುತ್ತೇವೆ. ನೀವು ಅವರಿಗೆ ಬೆಂಬಲವಾಗಿ ನಿಲ್ಲಬೇಕಿದೆ ಎಂದು ಡಿ.ಕೆ ಶಿವಕುಮಾರ್ ತಿಳಿಸಿದರು.

Key words: CM BS Yeddyurappa-  not protect –farmers-KPCC President- DK Sivakumar.