ಮಂಗಳೂರಲ್ಲಿ ಅಧಿಕಾರಿಗಳ ಸಭೆ ನಡೆಸಿದ ಸಿಎಂ ಬಿ.ಎಸ್.ಯಡಿಯೂರಪ್ಪ: ಸಿದ್ದರಾಮಯ್ಯ ವಿರುದ್ಧ ಗರಂ

Promotion

ಮಂಗಳೂರು, ಡಿಸೆಂಬರ್ 21, 2019 (www.justkannada.in): ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಏನೇನು ನಡೆದಿತ್ತು ಎಂಬುದು ಜಗತ್ತಿಗೆ ಗೊತ್ತಿದೆ. ನಮ್ಮ ಸರ್ಕಾರದ ಬಗ್ಗೆ ಮಾತನಾಡುವ ಮೊದಲು ವಿಪಕ್ಷ ನಾಯಕ ಸಿದ್ದರಾಮಯ್ಯ ಒಂದು ಬಾರಿ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ.

ಮಂಗಳೂರು ಗಲಭೆಯನ್ನು ನ್ಯಾಯಾಂಗ ತನಿಖೆ ನಡೆಸುವಂತೆ ಕಾಂಗ್ರೆಸ್ ನಾಯಕರು ಒತ್ತಡ ಹಾಕುತ್ತಿದ್ದಾರೆ. ಇವರು ಆಡಳಿತದಲ್ಲಿದ್ದಾಗ ಇಂತಹ ಘಟನೆಗಳು ನಡೆದಿರಲಿಲ್ಲವೇ ಎಂದು ಪ್ರಶ್ನಿಸಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉಂಟಾಗಿರುವ ಪರಿಸ್ಥಿತಿ ಬಗ್ಗೆ ಮೊದಲು ನಾನು ವಾಸ್ತವ ಸ್ಥಿತಿ ತಿಳಿದುಕೊಳ್ಳುತ್ತೇನೆ ಎಂದರು.

ಇಂದು ಅಧಿಕಾರಿಗಳ ಜೊತೆ ಸಭೆ ನಡೆಸಿ ನಂತರ ತನಿಖೆ ನಡೆಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು. ವಾಸ್ತವ ಸ್ಥಿತಿ ತಿಳಿಯದೆ ಮಾತನಾಡುವುದು ಸರಿಯಲ್ಲ ಎಂದು ಆಕ್ಷೇಪಿಸಿದರು. ಮಂಗಳೂರಿಗೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೋಗುವುದಕ್ಕೆ ನಮ್ಮದೇನು ತಕರಾರು ಇಲ್ಲ. ಪರಿಸ್ಥಿತಿ ಅವಲೋಕಿಸಿ ಪೊಲೀಸರು ಇದನ್ನು ತೀರ್ಮಾನಿಸುತ್ತಾರೆ.

ಅಧಿಕಾರಿಗಳ ಸಭೆ: ಮಂಗಳೂರು ವಿಮಾನ ನಿಲ್ದಾಣದಲ್ಲಿಯೇ ಅಧಿಕಾರಿಗಳ ಸಭೆ ನಡೆಸಿದ ಸಿಎಂ ಘಟನೆ ಕುರಿತು ಮಾಹಿತಿ ಪಡೆದರು. ಆದರೆ ಮಂಗಳೂರು ನಗರ ಪೊಲೀಸ್ ಆಯುಕ್ತರನ್ನು ಹೊರಗಿಟ್ಟು ಸಭೆ ನಡೆಸಿದ್ದು, ಕೆಲ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.