ಕೆಸಿ ಜನರಲ್ ಆಸ್ಪತ್ರೆಯಲ್ಲಿ ಜಯದೇವ, ಇಂದಿರಾ ಗಾಂಧಿ ಆಸ್ಪತ್ರೆಗಳ ಉಪಕೇಂದ್ರಗಳನ್ನು ಉದ್ಘಾಟಿಸಿದ ಸಿಎಂ ಬೊಮ್ಮಾಯಿ.

ಬೆಂಗಳೂರು, ಅಕ್ಟೋಬರ್ 7, 2022 (www.justkannada.in): ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಜಯದೇವ ಆಸ್ಪತ್ರೆ ಹಾಗೂ ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆಗಳ ಉಪಕೇಂದ್ರಗಳನ್ನು ಉದ್ಘಾಟಿಸಿದರು. ಈ ಎರಡೂ ಕೇಂದ್ರಗಳಲ್ಲಿ ವೆಂಟಿಲೇಟರ್ ಸೌಲಭ್ಯಗಳನ್ನು ಒಳಗೊಂಡಿರುವ ಒಟ್ಟು ೧೦೦ ಹಾಸಿಗೆಗಳಿವೆ.

ಸದ್ಯದಲ್ಲೇ ಇಲ್ಲಿ ೨೦೦-ಹಾಸಿಗೆಗಳುಳ್ಳ ತಾಯಿ ಮತ್ತು ಮಕ್ಕಳ ಆರೋಗ್ಯ ಕೇಂದ್ರ ಹಾಗೂ ೫೦ ಹಾಸಿಗೆಗಳುಳ್ಳ ಅಪಘಾತ ಚಿಕಿತ್ಸಾ ಕೇಂದ್ರವನ್ನು ಸ್ಥಾಪಿಸಲು ಅನುಮೋದನೆ ನೀಡಲಾಗುವುದು ಎಂದು ತಿಳಿಸಿದ ಮುಖ್ಯಮಂತ್ರಿ ಬೊಮ್ಮಾಯಿ ಅವರು, ಈ ಆಸ್ಪತ್ರೆಯನ್ನು ವಿಕ್ಟೋರಿಯಾ ಆಸ್ಪತ್ರೆಯ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದರು.

ಮಾನ್ಯ ಮುಖ್ಯಮಂತ್ರಿಗಳ ಕಚೇರಿಯಿಂದ ಹೊರಡಿಸಿರುವ ಪತ್ರಿಕಾ ಹೇಳಿಕೆಯೊಂದರಲ್ಲಿ ಕೆಸಿ ಜನರಲ್ ಆಸ್ಪತ್ರೆಯ ಆಮ್ಲಜನಕ ಶೇಖರಣಾ ಸಾಮರ್ಥ್ಯವನ್ನು ೩,೦೦೦ ಕೆಎಲ್‌ ನಿಂದ ೧೮,೦೦೦ ಕೆಎಲ್‌ ಗೆ ಹೆಚ್ಚಿಸಲಾಗಿದ್ದು, ೩೦೦ ಹಾಸಿಗೆಗಳಿಗೆ ಬೆಡ್‌ ಸೈಡ್ ಮಾನಿಟರ್‌ ಗಳನ್ನು ಅಳವಡಿಸಲಾಗಿರುವುದಾಗಿ ಮಾಹಿತಿ ನೀಡಿದೆ.

ಬೆಂಗಳೂರಿನ ನಾಲ್ಕೂ ದಿಕ್ಕುಗಳಲ್ಲಿಯೂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಳನ್ನು ಸ್ಥಾಪಿಸುವುದಾಗಿಯೂ ಮುಖ್ಯಮಂತ್ರಿಗಳು ಮಾಹಿತಿ ನೀಡಿದರು. ಜೊತೆಗೆ, ೨೪೩ ಹೊಸ ನಮ್ಮ ಚಿಕಿತ್ಸಾಲಯಗಳ ಸ್ಥಾಪನೆ ಹಾಗೂ ೨೦ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು (ಪಿಹೆಚ್‌ ಸಿಗಳು) ಉನ್ನತೀಕರಿಸಲಾಗುವುದು ಎಂದು ತಿಳಿಸಿದರು.

ಮಾನ್ಯ ಉನ್ನತ ಶಿಕ್ಷಣ ಸಚಿವರು ಹಾಗೂ ಮಲ್ಲೇಶ್ವರಂನ ಎಂಎಲ್‌ಎ ಆಗಿರುವ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರು ಕೆಸಿ ಜನರಲ್ ಆಸ್ಪತ್ರೆಯಲ್ಲಿ ಹೊಸದಾಗಿ ಸ್ಥಾಪಿಸಿರುವ ಉಪಕೇಂದ್ರಗಳಲ್ಲಿ ಉತ್ತರ ಬೆಂಗಳೂರು ಭಾಗದ ಜನರಿಗೆ ಉತ್ತಮ ಆರೋಗ್ಯ ಸೇವೆಗಳು ಲಭಿಸಲಿದೆ ಎಂದು ಮಾಹಿತಿ ನೀಡಿದರು. ಆರೋಗ್ಯ ಸಚಿವ ಡಾ. ಕೆ. ಸುಧಾಕರ್, ಎಂಎಲ್‌ ಎ ದಿನೇಶ್ ಗುಂಡೂರಾವ್ ಹಾಗೂ ಹಿರಿಯ ಆರೋಗ್ಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಆರು ಕಮ್ಯಾಂಡ್ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳೊಂದಿಗೆ ಸಂಪರ್ಕ ಕಲ್ಪಿಸಿ, ಟೆಲಿಮೆಡಿಸಿನ್ ವ್ಯವಸ್ಥೆ ಮೂಲಕ ವೈದ್ಯರ ತಂಡ ಅಗತ್ಯ ಸಲಹೆಗಳು ಹಾಗೂ ಸೂಚನೆಗಳನ್ನು ನೀಡುವ ವ್ಯವಸ್ಥೆಯನ್ನು ಕಲ್ಪಿಸುವುದಾಗಿಯೂ ಮಾನ್ಯ ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ತಿಳಿಸಿದರು. ಈ ವೈದ್ಯರ ತಂಡ ದಿನದ ೨೪ ಗಂಟೆಗಳೂ ಕಾರ್ಯನಿರ್ವಹಿಸಲಿದ್ದಾರೆ.

೧೦೦ ಸಾರ್ವಜನಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳನ್ನಾಗಿ ಉನ್ನತೀಕರಿಸುವುದರ ಜೊತೆಗೆ, ಪ್ರತಿ ಕೇಂದ್ರಕ್ಕೆ ರೂ.೭ ರಿಂದ ರೂ.೮ ಲಕ್ಷ ವೆಚ್ಚದಲ್ಲಿ ಈ ಕೇಂದ್ರಗಳ ಹಾಸಿಗೆಗಳ ಬಲವನ್ನೂ ಹಾಗೂ ಸೌಲಭ್ಯಗಳನ್ನೂ ಸಹ ಹೆಚ್ಚಿಸುವುದಾಗಿಯೂ ಮಾಹಿತಿ ನೀಡಿದರು.

ಈ ಉನ್ನತೀಕರಿಸಿದ ಸಮುದಾಯ ಆರೋಗ್ಯ ಕೇಂದ್ರಗಳು ಹಾಗೂ ಹಾಲಿ ಕೇಂದ್ರಗಳನ್ನು ಟೆಲಿಮೆಡಿಸಿನ್ ವ್ಯವಸ್ಥೆಗಳೊಂದಿಗೆ ಸಂಪರ್ಕ ಕಲ್ಪಿಸಲಾಗುವುದು. ಸುಮಾರು ೮೧ ಹೊಸ ಪಿಹೆಚ್‌ ಸಿಗಳನ್ನು ನಿರ್ಮಿಸಲಾಗುತ್ತಿದೆ ಎಂದರು.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words: CM Bommai-inaugurated -sub centers – Jayadeva – Indira Gandhi -Hospitals