ಬಿಎಸ್ ವೈ ಮೂಲಕ ಬೊಮ್ಮಾಯಿ ಅಧಿಕಾರಕ್ಕೆ ಬಂದ್ರು: ಪಾದಯಾತ್ರೆ ಎನ್ನುವ ಕಲ್ಪನೆ ಸಹ ಇವರಿಗಿಲ್ಲ- ಸಿದ್ಧರಾಮಯ್ಯ ಟೀಕೆ.

ಬೆಂಗಳೂರು,ಮಾರ್ಚ್,1,2022(www.justkannada.in):  ಕಾಂಗ್ರೆಸ್ ನ ಮೇಕೆದಾಟು ಪಾದಯಾತ್ರೆ ರಾಜಕೀಯ ಹೋರಾಟ  ಎಂಬ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆಗೆ ವಿಪಕ್ಷ ನಾಯಕ ಸಿದ್ಧರಾಮಯ್ಯ ತಿರುಗೇಟು ನೀಡಿದ್ದಾರೆ.

ಪಾದಯಾತ್ರೆ ಮಾರ್ಗಮಧ್ಯೆ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಸಿದ್ದರಾಮಯ್ಯ, ಬಸವರಾಜ ಬೊಮ್ಮಯಿ ಹೋರಾಟದ ಮೂಲಕ ಬಂದವರಲ್ಲ. ಪಾದಯಾತ್ರೆ ಅನ್ನೋ ಕಲ್ಪನೆ ಸಹ ಇವರಿಗಿಲ್ಲ. ಯಡಿಯೂರಪ್ಪ ಮೂಲಕ ಅಧಿಕಾರಕ್ಕೆ ಬಂದವರು. ಜನರ ಆಶಿರ್ವಾದದಿಂದ ಅಧಿಕಾರಕ್ಕೆ ಬೊಮ್ಮಾಯಿ ಬಂದಿಲ್ಲ. ಯಡಿಯೂರಪ್ಪ ಆಪರೇಷನ್ ಕಮಲ ಮಾಡಿದಕ್ಕೆ ಇವರು ಅಧಿಕಾರಕ್ಕೆ ಬಂದರು ಎಂದು ಟೀಕಿಸಿದರು.

ಮೇಕೆದಾಟು ಪಾದಯಾತ್ರೆ ಹಿಂದೆ ರಾಜಕೀಯ ಉದ್ದೇಶ ಇಲ್ಲ. ಜನಹಿತಕ್ಕಾಗಿ ಜನ ಬೆಂಬಲದೊಂದಿಗೆ ನಡೆಯುತ್ತಿರುವ ಹೋರಾಟ ಇದಾಗಿದೆ. ಪಾದಯಾತ್ರೆ ರಾಜಕೀಯಕ್ಕಾಗಿ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಕುಡಿಯುವ ನೀರಿನ ವಿಷಯದಲ್ಲಿ ಯಾರೂ ರಾಜಕೀಯ ಮಾಡುವುದಿಲ್ಲ. ಮೇಕೆದಾಟು ಯೋಜನೆ ವಿಚಾರದಲ್ಲಿ ಸರ್ಕಾರವನ್ನು ಬಡಿದೆಬ್ಬಿಸಲು ನಾವು ಹೋರಾಟ ಮಾಡುತ್ತಿದ್ದೇವೆ. ಬಿಜೆಪಿ ಅಧಿಕಾರಕ್ಕೆ ಬಂದು ಮೂರು ವರ್ಷವಾಗಿದೆ.‌ಇನ್ನೂ ಮೇಕೆದಾಟು ಯೋಜನೆಗೆ ಪರಿಸರ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ ಪಡೆದಿಲ್ಲ. ಇವರು ಬೆಂಗಳೂರು ಜನರಿಗೆ ದ್ರೋಹ ಮಾಡಿದ್ದಾರೆ ಎಂದು ಸಿದ್ಧರಾಮಯ್ಯ ಕಿಡಿಕಾರಿದರು.

ನೀವೆಲ್ಲಾ ಹಬ್ಬದ ದಿನದಂದು ಬಂದಿದ್ದೀರಿ. ಹಬ್ಬ ಬಿಟ್ಟು ಬಂದಿದ್ದಕ್ಕೆ ಕಾರ್ಯಕರ್ತರಿಗೆ ನಮೋ ನಮೋ. ಶಿವರಾತ್ರಿ ಹಬ್ಬ ಇದ್ರು ಜನ ನಮ್ಮ ಬೆಂಬಲಕ್ಕೆ ನಿಂತಿದ್ದಾರೆ.  ದಿನೇ ದಿನೇ ಕಾರ್ಯಕರ್ತರಿಗೆ ಉತ್ಸಾಹ ಜಾಸ್ತಿಯಾಗುತ್ತಿದೆ.‌ ಇದು ನಿಜಕ್ಕೂ ನಮಗೆ ಉತ್ತೇಜನ ನೀಡುತ್ತಿದೆ. ನಮ್ಮ ಪಾದಯಾತ್ರೆಗೆ ಅಭೂತಪೂರ್ವ ಬೆಂಬಲ ಸಿಕ್ತಿದೆ. ಜನರು ಸ್ವಯಂ ಪ್ರೇರಿತರಾಗಿ ಬೆಂಬಲ ನೀಡ್ತಿದ್ದಾರೆ. ನಮ್ಮ ಹೋರಾಟ ಯಶಸ್ವಿಯಾಗುತ್ತೆ ಎಂದರು.

ಬಜೆಟ್ ಅಧಿವೇಶನದಲ್ಲಿ ವಿಷಯ ಪ್ರಸ್ತಾಪ ಮಾಡ್ತೀವಿ. ನೂರಕ್ಕೆ ನೂರು ಮುಂದೆ ನಾವು ಅಧಿಕಾರಕ್ಕೆ ಬರ್ತಿವಿ. ಜನರ ಅಶಿರ್ವಾದ ನಮ್ಮ ಮೇಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಮ್ಮ ಸರ್ಕಾರ ಮೇಕೆದಾಟು ಯೋಜನೆಗೆ 2017 ರಲ್ಲಿ ವಿಸ್ತೃತ ಯೋಜನಾ ವರದಿ ತಯಾರಿಸಿ, ಕೇಂದ್ರ ಜಲಮಂಡಳಿಗೆ ನೀಡಿದ್ದೆವು. ಅವರು ಕೆಲವು ಮಾಹಿತಿ ಕೇಳಿ ರಾಜ್ಯಕ್ಕೆ ವಾಪಾಸು ಕಳಿಸಿದ್ದರು, ಆಗ ನಮ್ಮ ಸರ್ಕಾರ ಇರಲಿಲ್ಲ, ಸಮ್ಮಿಶ್ರ ಸರ್ಕಾರ ಇತ್ತು. ಆಗ ಡಿ.ಕೆ ಶಿವಕುಮಾರ್ ಜಲ ಸಂಪನ್ಮೂಲ ಸಚಿವರಾಗಿದ್ದರು, ಅವರು ಕೇಂದ್ರ ಜಲಮಂಡಳಿ ಕೇಳಿದ್ದ ಹೆಚ್ಚಿನ ಮಾಹಿತಿಯನ್ನು ಒದಗಿಸಿದ್ದರು ಮತ್ತು ಪರಿಷ್ಕೃತ ಯೋಜನಾ ವರದಿ ಮಾಡಿ ಕಳಿಸಿದ್ದರು.

ಇನ್ನುಳಿದಿರೋದು ಪರಿಸರ ಅನುಮತಿ ಮಾತ್ರ. 2019 ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂತು, ಯಡಿಯೂರಪ್ಪ ಎರಡು ವರ್ಷ, ಬಸವರಾಜ ಬೊಮ್ಮಾಯಿ ಏಳು ತಿಂಗಳು ಮುಖ್ಯಮಂತ್ರಿ ಆಗಿ ಅಧಿಕಾರ ನಡೆಸಿದ್ದಾರೆ. ಇಷ್ಟು ಸಮಯದಲ್ಲಿ ಒಂದು ಪರಿಸರ ಅನುಮತಿ ಪಡೆಯಲು ಈ ಸರ್ಕಾರದಿಂದ ಸಾಧ್ಯವಾಗಿಲ್ಲ.

ಪಾದಯಾತ್ರೆಗೆ ನಿರೀಕ್ಷೆಗೂ ಮೀರಿ ಜನ ಬೆಂಬಲ ವ್ಯಕ್ತವಾಗಿದೆ. ಇದನ್ನು ಸಹಿಸದೆ ಬಿಜೆಪಿಯವರು ಟೀಕೆ ಮಾಡುತ್ತಿದ್ದಾರೆ. ಎಫ್ ಐ ಆರ್ ಮೂಲಕ ಹೆದರಿಸುತ್ತಿದ್ದಾರೆ. ನಾವು ಯಾವುದಕ್ಕೂ ಹೆದರುವುದಿಲ್ಲ. ಜನಪರ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸಿದ್ಧರಾಮಯ್ಯ ತಿಳಿಸಿದರು.

Key words: CM Bommai-congress padayatra- Siddaramaiah